ಚುನಾವಣೆಗೆ ಕೆಲವೇ ದಿನಗಳು ಬಾಕಿ ಇವೆ, ಪ್ರಚಾರದ ಭರಾಟೆ ತಾರಕಕ್ಕೇರಿದೆ. ಆದರೆ ಪ್ರಚಾರ ಭಾಷಣಗಳನ್ನು ಕೇಳಿದರೆ ನಾವು ಹಾಗೂ ನಮ್ಮ ನಾಯಕರು ಕಳೆದುಹೋದ ದಿನಗಳ ಚಿಂತೆಯಿಂದ
ಹೊರಗೆ ಬರಲೇ ಇಲ್ಲವೇನೋ ಎಂದೆನಿಸುತ್ತದೆ. ಎಲ್ಲಿಯವರೆಗೆ ಅಂದರೆ ನಮ್ಮ ಚುನಾವಣಾ ಪ್ರಚಾರಗಳಲ್ಲಿ
ಇನ್ನೂ ೧೯೪೮ರ ಗಾಂಧಿ ಹತ್ಯೆಯ ಚರ್ಚೆ ನಡೆಯುತ್ತಿದೆ. ಕೋರ್ಟಿನಿಂದ ಕ್ಲೀನ್ ಚಿಟ್ ಪಡೆದರೂ ಆರ್
ಎಸ್ ಎಸ್ ಕಾಂಗ್ರೆಸ್ ನ ಆರೋಪಗಳಿಂದ ಮುಕ್ತಾಗಿಲ್ಲ. ವಿಪರ್ಯಾಸವೆಂದರೆ ಗಾಂಧೀಜಿಯವರ ಯಾವ
ತತ್ವಗಳನ್ನೂ ಪಾಲಿಸದ ಈ ಲಜ್ಜೆಗೇಡಿ ನಾಯಕರಿಗೆ ಚುನಾವಣಾ ಸಮಯ ಬಂದಾಗ ಗಾಂಧೀಜಿ ನೆನಪಾಗುತ್ತಾರೆ.
ಇತ್ತ ಇವರು ಆರ್ ಎಸ್ ಎಸ್ ಮೇಲೆ ಅವ್ಯಾಹತ ಆರೋಪಗಳನ್ನು ಮಾಡುತ್ತಿದ್ದಾರೆ; ಆದರೆ ಅತ್ತ
ಗಾಂಧೀಜಿಯವರ ದಿವ್ಯಾತ್ಮ ನಾಥೂರಾಮ ಗೋಡ್ಸೆಯನ್ನೇ ಕ್ಷಮಿಸಿ ಅದೆಷ್ಟು ವರ್ಷಗಳಾಯಿತೇನೋ!
ಚುನಾವಣಾ ಪ್ರಚಾರಗಳನ್ನು ಗಮನಿಸಿದರೆ ಕೆಲವೇ ಕೆಲವು ನಾಯಕರು ಪ್ರಸಕ್ತ ವಿದ್ಯಮಾನಗಳ ಬಗ್ಗೆ
ಮಾತನಾಡುತ್ತಿದ್ದಾರೆ. ಉಳಿದವರೆಲ್ಲಾ ವೈಯಕ್ತಿಕ ದೋಷಾರೋಪಗಳಲ್ಲಿ ಮುಳುಗಿಹೋಗಿದ್ದಾರೆ.
ವೈಯಕ್ತಿಕ ಕೆಸರೆರಚಾಟ ಬಿಟ್ಟರೆ ಇವರಿಗೆಲ್ಲಾ ಸುಲಭವಾಗಿ ಸಿಗುವ ಡೈಲ್ಲಾಗ್ ’ಗಾಂಧೀಜಿಯವರ
ಕನಸನ್ನು ನನಸು ಮಾಡುತ್ತೇವೆ’! ಇವರ ಮಾತುಗಳನ್ನು ಕೇಳಿದಾಗ ಮೂಡುವ ಸರಳ ಪ್ರಶ್ನೆಗಳು: “ಸ್ವಾಮೀ
ನಿಮಗೆ ನಿಮ್ಮದೇ ಕನಸುಗಳೇ ಇಲ್ಲವೇ? ಹೋಗಲಿ ಬಿಡಿ, ಗಾಂಧೀಜಿ ಏನು ಕನಸು ಕಂಡಿದ್ದರು ಎಂದಾದರೂ ಗೊತ್ತಿದೆಯಾ?
ಗೊತ್ತಿದ್ದರೆ ಇಂದಿನ ಬದಲಾದ ಸಾಮಾಜಿಕ, ಆರ್ಥಿಕ ಪರಿಸ್ಥಿತಿಯಲ್ಲಿ ಅವು ಎಷ್ಟು ಸಮಂಜಸ ಹಾಗೂ
ಅವುಗಳನ್ನು ಹೇಗೆ ಅಳವಡಿಸಬೇಕು ಎಂದು ಯೋಚಿಸಿದ್ದೀರಾ?”
ನಿಜ ಹೇಳಬೇಕೆಂದರೆ ಈ ಪ್ರಶ್ನೆಗಳನ್ನು ಕೇಳಬೇಕಾಗಿಲ್ಲ. ಇವರಿಗೆ ವೈಯಕ್ತಿಕ ಸ್ವಾರ್ಥದ
ಕನಸುಗಳ ಹೊರತು ದೇಶದ ಬಗೆಗೆ ಕನಸುಗಳಿಲ್ಲ ಕಾಳಜಿಯಿಲ್ಲ. ಇವರು ಮಾಡುತ್ತಿರುವ ಯೋಜನೆಗಳನ್ನು
ಅವಲೋಕಿಸಿದರೆ ಇದು ಅರ್ಥವಾಗುತ್ತದೆ. ಇವರಿಗೆ ಧರ್ಮದ ಕೊಡುಗೆಗಳನ್ನು (freebies) ಕೊಡುವ ಹೊರತು ಬೇರೇನೂ ತೋಚವುದಿಲ್ಲ. ನಮ್ಮ ಕರ್ನಾಟಕದ
ಹೊಸ ಸರಕಾರದ ಯೋಜನೆಗಳನ್ನೇ ಗಮನಿಸಿ. ’ಭಾಗ್ಯ’ದ ಯೋಜನೆಗಳು ಬಂತೇ ಹೊರತು ಹೆಚ್ಚಿನದು ಬರಲಿಲ್ಲ.
ಇನ್ನು ನಮ್ಮ ನಾಯಕರಿಗೆ ಏನು ಕೆಲಸ ಮಾಡುವುದು ಎಂದು ತೋಚುತ್ತಿಲ್ಲವಾದರೆ ಒಂದು ಪಟ್ಟಿ
ಮಾಡೋಣ. ಒಬ್ಬ ಸಾಮಾನ್ಯ ವ್ಯಕ್ತಿಯ ಒಂದು ದಿನದ (ಬೆಳಗ್ಗಿನಿಂದ ಸಂಜೆಯವರೆಗಿನ) ದಿನಚರಿಯನ್ನೇ
ಆಧಾರವಾಗಿ ತೆಗೆದುಕೊಂಡು ಅದರಲ್ಲಿ ಕಂಡುಬರುವ ಕುಂದು ಕೊರತೆಗಳ ಪಟ್ಟಿ ಮಾಡೋಣ.
1. ಶೌಚಕ್ಕೆ ಸ್ಥಳವಿಲ್ಲ! ನಮ್ಮ ದೇಶದಲ್ಲಿ ಶೇಕಡಾ ೫೦ ಕ್ಕೂ ಹೆಚ್ಚಿನ ಜನರಿಗೆ ಬೆಳಗಿನ
ಶೌಚಕ್ಕೆ ಶೌಚಾಲಯಗಳಿಲ್ಲ (2011 ಗಣತಿಯ ಪ್ರಕಾರ).
2. ಇನ್ನು ಅದೆಷ್ಟೋ ಕಡೆ ಶೌಚಾಲಯಗಳಿದ್ದರೂ ಶೌಚಕ್ಕೆ ನೀರಿಲ್ಲ. ಕುಡಿಯುವ ನೀರಿಗೇ ತತ್ವಾರ
ಇರಬೇಕಾದರೆ ಇನ್ನು ಶೌಚಕ್ಕೆ ಸ್ನಾನಕ್ಕೆ ನೀರೆಲ್ಲಿಂದ ತರೋಣ ಹೇಳಿ. ಸುಮಾರು 32% ಜನರಿಗಷ್ಟೇ ಶುದ್ಧೀಕರಿಸಿದ ನೀರು ಸಿಗುತ್ತಿದೆ (2011
ಗಣತಿ).
3. ಸ್ನಾನಗ್ರಹಗಳ ಕೊರತೆಯಿಂದ ಇಂದಿಗೂ ಕೆರೆದಂಡೆಗಳಲ್ಲಿ, ಹೊಳೆಬದಿಯಲ್ಲಿ ಸ್ನಾನ
ಮಾಡುವವರಿದ್ದಾರೆ.
4. ಇನ್ನು ಪೌಷ್ಠಿಕ ಆಹಾರ - ವರ್ಲ್ಡ್ ಬ್ಯಾಂಕ್ ನ ಸಮೀಕ್ಷೆಯ ಪ್ರಕಾರ ನಮ್ಮ ದೇಶದಲ್ಲಿ
ಶೇಕಡಾ 75% 5 ವರ್ಷದೊಳಗಿನ ಮಕ್ಕಳು
ಹಾಗೂ 51% ಮಹಿಳೆಯರು ಜನರು
ಅನೀಮಿಯ ಹೊಂದಿದ್ದಾರೆ (ದೇಹದಲ್ಲಿ ಕಬ್ಬಿಣದ ಅಂಶದ ಕೊರತೆ). ಎಷ್ಟೋ ಜನರಿಗೆ ಇದೊಂದು ತೀವ್ರ
ಸಮಸ್ಯೆಯಾಗದೇ ಇರಬಹುದು ಹಾಗಾಗಿ ಗಮನಕ್ಕೆ ಬಾದದೇ ಹೋಗಿರಲೂ ಬಹುದು. ಹಾಗೆಂದು ಒಂದು ರೂಪಾಯಿಯ
ಅಕ್ಕಿಯಂಥ ಯೋಜನೆಗಳು ಇದಕ್ಕೆ ಪರಿಹಾರವೇ? ಅಕ್ಕಿಯನ್ನು ಸಂಪಾದಿಸುವ ಮಾರ್ಗ ಒದಗಿಸುವುದು
ಅನಿವಾರ್ಯ ಹಾಗೂ ಗಾಂಧೀಜಿಯವರು ಗ್ರಾಮ ಸ್ವರಾಜ್ಯದ ಕನಸಿನಲ್ಲಿ ಇದನ್ನು ಹೇಳುತ್ತಾರೆ. ಚೈನೀಸ್
ಗಾದೆಯೊಂದು ಇದನ್ನೇ ಹೇಳುತ್ತದೆ - Give a man a fish and you feed him for a day; teach a man to fish
and you feed him for a lifetime.
5. ಇನ್ನು ನಿತ್ಯ ಕರ್ಮಗಳನ್ನು ಮುಗಿಸಿ ಮುಂದೆ ಹೋಗೋಣ. ಉದ್ಯೋಗ - ಈ ವಿಷಯದಲ್ಲಿ 2013 ರ
ಸಮೀಕ್ಷೆಯ ಪ್ರಕಾರ ನಮ್ಮ ಆರ್ಥಿಕ ಪ್ರಗತಿ 5% ಗೆ ಕುಸಿಯಿತು(ದಶಕದಲ್ಲೇ ಕನಿಷ್ಠ) ಹಾಗೂ ನಿರುದ್ಯೋಗಿಗಳ ಸಂಖ್ಯೆ 2% ಹೆಚ್ಚಾಯಿತು. ಕಾರಣ ಉದ್ಯೋಗಾಕಾಂಕ್ಷಿಗಳ ಸಂಖ್ಯೆಗೆ
ಸರಿಯಾಗಿ ಉದ್ಯೋಗಾವಕಾಶಗಳು ತಯಾರಾಗಲಿಲ್ಲ; ಅಂದ ಹಾಗೆ ವಾಸಕ್ಕೆ ಸೂರೇ ಇಲ್ಲದವರನ್ನು ಈ
ಗಣತಿಯಲ್ಲಿ ಪರಿಗಣಿಸಿಲ್ಲ. ಇಂದು ನಮ್ಮಲ್ಲಿ ಸುಮಾರು 8% ನಿರದ್ಯೋಗಿಗಳಿದ್ದಾರೆ. ಇದು ಇತರೇ ಅಭಿವೃದ್ಧಿ ಹೊಂದಿದ
ದೇಶಗಳಿಗೆ ಹೋಲಿಸಿದರೆ ಕಡಿಮೆಯೇ ಇದೆ. ಹಾಗೆಂದು ಭಾರತ ಸರ್ಕಾರ ಪ್ರಕಟಿಸಿರುವ ಮಾಹಿತಿಯ
ಆಧಾರದಂತೆ ನಮ್ಮ ದೇಶದ ಸರಾಸರಿ ಆದಾಯ (per capita income) ಇತರ ಅಭಿವೃದ್ಧಿ ಹೊಂದಿದ ಹಾಗೂ ಅಭಿವೃದ್ಧಿ
ಹೊಂದುತ್ತಿರುವ (ಡೆವಲಪ್ಡ್ ಹಾಗೂ ಡೆವಲಪಿಂಗ್) ದೇಶಗಳಿಗಿಂತ ಕಡಿಮೆ ಇದೆ. ಬರೇ ಕೆಲಸಕ್ಕೆ ಹೋದರೆ
ಸಾಲದು, ಉದ್ಯೋಗದಿಂದ ಬರುವ ಸಂಪಾದನೆ ಒಳ್ಳೆಯ ಜೀವನ ನಡೆಸಲು ಸಾಕಾಗಬೇಕು. ಹಾಗಾಗಿ ಕೇವಲ
ನಿರುದ್ಯೋಗಿಗಳ ಸಂಖ್ಯೆಯ ಗಣತಿಯಿಂದ ನಾವು ಸುಧಾರಣೆಯ ಹಾದಿಯಲ್ಲಿದ್ದೇವೆಂದು ಹೇಳುವದಕ್ಕಾಗುವುದಿಲ್ಲ.
ಸರಾಸರಿ ಆದಾಯ (average income), ಕನಿಷ್ಠ ಆದಾಯ, ಖರೀದಿ ಸಾಮರ್ಥ್ಯ (purchasing power)
ಇವುಗಳನ್ನು ಗಣನೆಗೆ ತೆಗೆದುಕೊಳ್ಳಬೇಕು.
6. ಉದ್ಯೋಗ ಹಾಗೂ ಆದಾಯ ಈ ವಿಷಯದಲ್ಲಿ ಇನ್ನೂ ಆಳವಾಗಿ ಅಧ್ಯಯನ ಮಾಡಿದರೆ, ಕೃಷಿ
ಕ್ಷೇತ್ರದಲ್ಲಿ ರೈತರಿಗೆ ಸಿಗುತ್ತಿರುವ ಬೆಲೆ ಹಾಗೂ ಮಾರುಕಟ್ಟೆಯ ಬೆಲೆಗಳಲ್ಲಿರುವ ವ್ಯತ್ಯಾಸ,
ದಲ್ಲಾಳಿಗಳಿಂದಾಗುವ ಸಮಸ್ಯೆ, ದಲ್ಲಾಳಿಗಳ ಸಮಸ್ಯೆ, ಮುಕ್ತ ಮಾರುಕಟ್ಟೆಗಳ ಪ್ರವೇಶಕ್ಕಿರುವ
ಅಡೆತಡೆಗಳು, ರೈತರಿಗೆ ಸಬ್ಸಿಡಿ ಕೊಟ್ಟು ಹಣ ಮಾಡುತ್ತಿರುವ ಅಧಿಕಾರಿಗಳ ಸಮಸ್ಯೆ ಹೀಗೆ ಇನ್ನೊಂದು
ಪಟ್ಟಿ ಹುಟ್ಟಿಕೊಳ್ಳುತ್ತದೆ.
7. ಇನ್ನು ಉದ್ಯಮ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗಿರುವ
ಅಡೆತಡೆಗಳು, ಜಟಿಲ/ಸಂಕೀರ್ಣವಾದ ನೀತಿ-ನಿಯಮಗಳು (ಈ ನೀತಿ ನಿಯಮಗಳಿಂದ ಕಾರ್ಮಿಕರಿಗಾಗುವ ಲಾಭ
ಅಷ್ಟೇ ಇದೆ, ಇವು ಅಧಿಕಾರಿಗಳ ಹಾಗೂ ರಾಜಕಾರಣಿಗಳ ಕಿಸೆ ತುಂಬಿಸಲಷ್ಟೇ ಸಹಕಾರಿ), ಕಾರ್ಮಿಕರ
ಸಮಸ್ಯೆ, ಹೀಗೆ ಒಂದೇ ಎರಡೇ...
8. ರಸ್ತೆ ಹಾಗೂ ಸಾರಿಗೆಯ ಸಮಸ್ಯೆ - ಗ್ರಾಮೀಣ
ಪ್ರದೇಶಗಳಲ್ಲಿ ರಸ್ತೆ ಹಾಗೂ ಸಾರ್ವಜನಿಕ ಸಾರಿಗೆಯ ಕೊರತೆ, ಮಹಾನಗರಗಳಲ್ಲಿ ರಸ್ತೆಯ ಮೇಲೆ ಜಾಗದ
ಕೊರತೆ. ಯಥೇಚ್ಚವಾಗಿರುವಂತಹದ್ದು ರಸ್ತೆಗಳಲ್ಲಿ ಗುಂಡಿಗಳು ಮಾತ್ರ.
9. ವೈದ್ಯಕೀಯ ಸೌಕರ್ಯ - ವೈದ್ಯಕೀಯ ಮೂಲಸೌಕರ್ಯಗಳಿಲ್ಲದ
ಹಳ್ಳಿಗಳು ಒಂದೆಡೆಯಾದರೆ ಲಂಗು ಲಗಾಮಿಲ್ಲದೆ ಸುಲಿಗೆ ಮಾಡುತ್ತಿರುವ ಖಾಸಗಿ ಆಸ್ಪತ್ರೆಗಳು
ಇನ್ನೊಂದೆಡೆ. ನಮ್ಮ ದೇಶದಲ್ಲಿ ಸ್ಲಮ್ ಗಳಲ್ಲಿ ಹುಟ್ಟುವ ಹತ್ತರಲ್ಲಿ ಒಂದು ಮಗು (1/10th of slum children) ತನ್ನ 5ನೆಯ ಹುಟ್ಟುಹಬ್ಬ ಆಚರಿಸುವತನಕ ಬದುಕುವುದಿಲ್ಲ!
10. ಶಿಕ್ಷಣ: Indian Labour Journal ನ 2013ರ ಆಗೋಷ್ಟ್ ಆವೃತ್ತಿಯ ಪ್ರಕಾರ ನಮ್ಮ ದೇಶದಲ್ಲಿ 47% ಪದವೀಧರರು ಉದ್ಯೋಗಕ್ಕೆ ಅರ್ಹರಲ್ಲ (Unemployable)! ಅದೆಷ್ಟೋ ಹಳ್ಳಿಗಳಲ್ಲಿ ಶಾಲೆಗಳಿಲ್ಲ,
ಶಾಲೆಗಳಿದ್ದರೆ ಮೂಲಭೂತ ಸೌಕರ್ಯಗಳಿಲ್ಲ, ಕೊಠಡಿಗಳಿಲ್ಲ, ಅದೂ ಅಕಸ್ಮಾತಾಗಿ ಇದ್ದರೆ
ಶಿಕ್ಷಕರಿಲ್ಲ ಇನ್ನು ಎಷ್ಟೋ ಕಡೆ ಶಿಕ್ಷಕರಿಗೆ ವಿಷಯಜ್ನಾನವಿರುವುದಿಲ್ಲ. ಹಿಂದಿನ ಕರ್ನಾಟಕ
ಸರಕಾರ ಶಾಲೆಗಳನ್ನು ಮುಚ್ಚಲು ಹೊರಟದ್ದುನ್ನೂ ಮರೆಯುವಂತಿಲ್ಲ. ಇನ್ನೊಂದೆಡೆ ಯುನೆಸ್ಕೋ ಹೇಳುತ್ತೆ
ಭಾರತದ ಪಠ್ಯಕ್ರಮ ಅತಿ ಮಹತ್ವಾಕಾಂಕ್ಷೆಯಿಂದ ಕೂಡಿದೆ (Indian curriculum too ambitious)!
ಹೀಗೆ ಒಬ್ಬ ವ್ಯಕ್ತಿಯ ಒಂದು ದಿನದ ದಿನಚರಿಯನ್ನು ಅವಲೋಕಿಸುತ್ತಾ ಹೋದರೆ ಒಂದರ ಹಿಂದೊಂದು
ಸಮಸ್ಯೆಗಳು ಬಿಚ್ಚಿಕ್ಕೊಳ್ಳುತ್ತಾ ಹೋಗುತ್ತದೆ. ಒಂದಕ್ಕೊಂದು ಕೊಂಡಿಯಾಗಿ ಬೆಳೆದು
ವಿಷವರ್ತುಲವಾಗುತ್ತದೆ.
ಇವೆಲ್ಲದರ ನಡುವೆ ಸರಕಾರಿ ಸ್ಕೀಮುಗಳಿಗಿಂತ ಹೆಚ್ಚಾಗಿ ಹೊರಬರುತ್ತಿರುವ ಹಗರಣಗಳು ಹಾಗೂ
ನಡುನಡುವೆ ರಾಜಕಾರಣದಲ್ಲಿ ಮೂಗು ತೂರಿಸುವ ಸ್ವಯಂಘೋಷಿತ ಬುದ್ಧಿಜೀವಿಗಳ ಶಿಫಾರಸುಗಳು (ನಾಟಕ / ಯಕ್ಷಗಾನದಲ್ಲಿ
ವಿದೂಷಕರು ಬಂದಂತೆ) ಕಳವಳ ಹುಟ್ಟಿಸುತ್ತದೆ.
ದುರಂತವೆಂದರೆ ಇಂತಹ ಜ್ವಲಂತ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸುವ ರಾಜಕೀಯ ನಾಯಕರು ಬಹಳ ಕಡಿಮೆಯಾಗಿದ್ದಾರೆ.
ಜಾತಿ, ಧರ್ಮ ಹಾಗೂ ಧರ್ಮದೂಟದ (freebies) ಬಗ್ಗೆ ಮಾತನಾಡುವವರೇ ಹೆಚ್ಚಾಗಿದ್ದಾರೆ. ಎಷ್ಟು ಸಮಯ ತೆರಿಗೆಯ ಹಣದಲ್ಲಿ ಧರ್ಮದೂಟ, ಟಿವಿ
ಅಥವಾ ಇನ್ನೇನೋ freebies ಕೊಟ್ಟು ಆಲಸಿಗಳ ಸಂಖ್ಯೆ ಹೆಚ್ಚಿಸುತ್ತೀರಿ? ಎಷ್ಟು ಸಮಯ ತೆರಿಗೆಯ ಹಣದಲ್ಲಿ ಮದುವೆ
ಮಾಡಿಸುತ್ತೀರಿ? ಎಷ್ಟು ಸಮಯ ಜಾತಿಯ ಹೆಸರಿನಲ್ಲಿ ಮನಸ್ಸುಗಳನ್ನು ಒಡೆಯುತೀರಿ?
ನಮ್ಮ ದೇಶಕ್ಕಿಂತ ನೈಸರ್ಗಿಕ ಸಂಪತ್ತಿನಲ್ಲಿ, ಬೌದ್ಧಿಕ ಸಂಪತ್ತಿನಲ್ಲಿ ಕಡಿಮೆಯಿರುವ
ಅದೆಷ್ಟು ದೇಶಗಳು ನಮಗಿಂತ ಉತ್ತಮ ಮೂಲಭೂತ ಸೌಲಭ್ಯಗಳನ್ನು, ಸಾಮಾಜಿಕ ಭದ್ರತೆಯನ್ನು
ಒದಗಿಸುತ್ತವೆ. ನಮ್ಮ ದೇಶಕ್ಕೆ ಬಹು ಹತ್ತಿರದ ಹೋಲಿಕೆಯಿರುವ ಹಾಗೂ ನಮ್ಮಂತೆ ಕೃಷಿ
ಆಧಾರಿತವಾಗಿರುವ ಪಕ್ಕದ ಥೈಲ್ಯಾಂಡನ್ನೇ ಉದಾಹರಣೆಯನ್ನಾಗಿ ತೆಗಿದುಕೊಳ್ಳಿ. ಕೃಷಿಯಲ್ಲಿ
ಕೈಗಾರಿಕೆಯ ಬಳಕೆ, ಶಿಕ್ಷಣಕ್ಕೆ ಉತ್ತೇಜನ, ಗ್ರಾಮೀಣ ರಸ್ತೆಗಳ ಅಭಿವೃದ್ಧಿ, ಗ್ರಾಮೀಣ ಪ್ರದೇಶಗಳಲ್ಲಿ
ಮೂಲಭೂತ ಸೌಲಭ್ಯಗಳ ಒದಗಿಸುವಿಕೆ ಒಂದೆಡೆ ಹಾಗೆಯೇ ಸಣ್ಣ ಹಾಗೂ ಭಾರೀ ಉದ್ಯಮಗಳಿಗೆ ಉತ್ತೇಜನ,
ಸ್ವ-ಉದ್ಯೋಗಕ್ಕೆ ಉತ್ತೇಜನ, ವಿದೇಶಿ ಬಂಡವಾಳ ಹೂಡಿಕೆಗೆ ಬೆಂಬಲ ಗಳಿಂದ ಇಂದು ಥೈಲ್ಯಾಂಡ್
ಜಗತ್ತಿನಲ್ಲೇ ಅತಿ ಕಡಿಮೆ ನಿರುದ್ಯೋಗಿಗಳಿರುವ ದೇಶಗಳಲ್ಲೊಂದು (0.56% unemployment rate).
ಹಾಗೆಯೇ ಥೈಲ್ಯಾಂಡ್ ನ ಪರ್ ಕ್ಯಾಪಿಟ ಇನ್ ಕಮ್ ಭಾರತದ ಮೂರರಷ್ಟು ಹೆಚ್ಚಿದೆ.
http://www.ritholtz.com/ ವೆಬ್ ಸೈಟ್ ನ ಮಾಹಿತಿಯ
ಪ್ರಕಾರ (ಬುದ್ಧಿಜೀವಿಗಳ ಗಮನಕ್ಕೆ - ಇದು ಯಾವುದೇ ಹಿಂದೂ ಸಂಘಟನೆಯ ವೆಬ್ ಸೈಟ್ ಅಲ್ಲ, ವಿಶ್ವದ 15
ಅತಿ ಪ್ರಮುಖ ಅರ್ಥಶಾಸ್ತ್ರದ ಪತ್ರಕರ್ತ ನೆಂದು ಗುರಿತಿಸಿಕೊಂಡಿರುವ ಬಾರಿ ರಿಥೋಲ್ಜ಼್ (Barry Ritholtz) ಎಂಬಾತನ ವೆಬ್ ಸೈಟ್) 1ನೆಯ ಶತಮಾನದಿಂದ 10ನೆಯ
ಶತಮಾನದವರೆಗೆ ವಿಶ್ವ ಜಿ ಡಿ ಪಿ (GDP) ಗೆ ಭಾರತದ ಕೊಡುಗೆ ಸುಮಾರು 50% ಇತ್ತು. 18ನೆಯ ಶತಮಾನದ
ವೇಳೆಗೆ ಇದು ಸುಮಾರು 20% ಕ್ಕೆ ಕುಸಿಯಿತು. 1ನೆಯ ಶತಮಾನದಿಂದಲೂ ಚೀನಾ ಭಾರತಕ್ಕೆ ಹತ್ತಿರದ
ಸ್ಪರ್ಧಿ. ಕಳೆದೆರಡು ಶತಮಾನದಲ್ಲಿ (ಕೈಗಾರಿಕಾ
ಕ್ರಾಂತಿಯಲ್ಲಿ ಭಾಗಿಯಾಗದ) ನಮ್ಮ ಹಾಗೂ ಚೀನಾದ ಪಾಲು ಕುಸಿಯುತ್ತಾ ಹೋಯಿತು. 1990ರಲ್ಲಿ (ಭಾರತ
ಹಾಗೂ ಚೀನಾ ಉದಾರೀಕರಣದ ದಾರಿ ಹಿಡಿದ ಸಮಯದಲ್ಲಿ) ಭಾರತ ಹಾಗೂ ಚೀನಾದ ಪಾಲು ಸುಮಾರು 4%. ಇಂದು
ಚೀನಾ 18% ಪಾಲು ಹೊಂದಿದ್ದರೆ ನಾವು 7% ದಲ್ಲಿದ್ದೇವೆ.
ಕಳೆದ ಹತ್ತು ವರ್ಷಗಳಲ್ಲಿ ನಮ್ಮ ಪ್ರಗತಿ ವಿಪರೀತವಾಗಿ ಕುಂಟುತ್ತಿದೆ. ಅವ್ಯಾಹತವಾಗಿ
ನಡೆಯುತ್ತಿರುವ ಹಗರಣಗಳು, ಪ್ರತಿಭಟನೆಗಳಿಂದಲೇ ದೇಶವನ್ನು ಉದ್ಧಾರ ಮಾಡಲು ಹೊರಟಿರುವವರು,
ಇಚ್ಛಾಶಕ್ತಿ ಇಲ್ಲದ ಸರಕಾರ, ವಿದೇಶ ಪ್ರವಾಸ ಮಾಡಿ ’ಹಸು ಮೇಯುವುದನ್ನು ನೋಡಿದ’ ವರದಿ ಮಾಡುವ
ಬೌಧಿಕ ಮಟ್ಟದ ಜನಪ್ರತಿನಿಧಿಗಳು, ಬೇಜವಾಬ್ದಾರಿ ಹೇಳಿಕೆ ಕೊಡುವ ಮಂತ್ರಿಗಳು ಹಾಗೂ ಮೌನವ್ರತಧಾರಿ
ಪ್ರಧಾನಮಂತ್ರಿಗಳಿಂದ ಮುಕ್ತಿ ಬೇಕಿದೆ.
ನಮಗೆ ಬೇಕಿರುವುದು ದೇಶದ ಪ್ರಗತಿಯ ಕುರಿತು ಕನಸುಗಳನ್ನು ಹೊಂದಿದ ನಾಯಕರು; ಹಾಗೂ ಆ
ಕನಸುಗಳನ್ನು ಸಾಕಾರಗೊಳಿಸಲು ಯೋಜನೆಗಳನ್ನು ರೂಪಿಸುವ ಚಾಕಚಕ್ಯತೆಯುಳ್ಳವರು ಮತ್ತು ಯೋಜನೆಗಳನ್ನು
ಕಾರ್ಯಗತಗೊಳಿಸಲು ಇಚ್ಛಾಶಕ್ತಿಯುಳ್ಳ ನಾಯಕರು. ಹಾಗೂ ದೇಶದ ಆರ್ಥಿಕತೆಯನ್ನು ಸದೃಢಗೊಳಿಸಬಲ್ಲ
ಹಾಗೂ ದೇಶವನ್ನು ಸುರಕ್ಷಿತವಾಗಿಸಬಲ್ಲ ಯೋಜನೆಗಳು ಹಾಗೂ ಆಡಳಿತ.
ಸಮೀರ ದಾಮ್ಲೆ
ಬ್ಯಾಂಕಾಕ್
References:
1.
Census
India 2011
2.
Indian
Labour Journal
3.
Global
Employment Trends 2014 – International Labour Organization
This comment has been removed by the author.
ReplyDeleteNice blog... :) background reminds me of ur bookshelf!
ReplyDelete