Wednesday, November 26, 2014

ಹೊರನಾಡಿನಲ್ಲಿರುವ ಹುರುಪು ಉತ್ಸಾಹ ನಾಡಿನೊಳಗಿರದು!


ಈ ಬರಹವನ್ನು ಪ್ರಕಟಿಸಿದ ಪ್ರಜಾವಾಣಿಗೆ (೦೩.೧೧.೨೦೧೪) ಧನ್ಯವಾದಗಳು. 
=======================================================

ಹೌದು, ಮತ್ತೆ ರಾಜ್ಯೋತ್ಸವ ಬಂದಿದೆ. ಸರಕಾರದಿಂದ ಹಲವು ಸ್ತರಗಳಲ್ಲಿ ರಾಜ್ಯೋತ್ಸವದ ಆಚರಣೆಗೆ ಹಣ ಬಿಡುಗಡೆ ಆಗುತ್ತದೆ. ಗ್ರಾಮ, ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟಗಳಲ್ಲಿ ಹಬ್ಬ ನಡೆಯುತ್ತದೆ, ಕನ್ನಡದ ಬಗ್ಗೆ ಭೀಷಣ ಭಾಷಣಗಳು ನಡೆಯುತ್ತವೆ (ಅಲ್ಲೂ ತಪ್ಪು ತಪ್ಪಾಗಿ ಕನ್ನಡದಲ್ಲಿ ಭಾಷಣ ಮಾಡುವವರಿದ್ದಾರೆ). ಆದರೆ ಅಲ್ಲಿ ಕನ್ನಡದ ಬಗ್ಗೆ ನಿಜವಾದ ಕಾಳಜಿ ಎಷ್ಟಿದೆ ಎಂಬುದು ಪ್ರಶ್ನೆಯಾಗಿಯೇ ಉಳಿಯುತ್ತದೆ. ಇಂತಹ ಆಚರಣೆಗಳು ರಾಜಕೀಯ ನಾಯಕರಿಗೆ ಪ್ರಚಾರದ ವಸ್ತು. ಇನ್ನು ರಾಜಕೀಯದ ಹೊಸಮುಖಗಳಿಗೆ ಇಂತಹ ಕಾರ್ಯಕ್ರಮ ತಮ್ಮ ಸಂಘಟನಾ ಸಾಮರ್ಥ್ಯ ತೋರಿಸುವ, ರಾಜಕೀಯ ಗುರುಗಳ ಪ್ರೀತಿ ಸಂಪಾದಿಸುವ ಹಾಗೂ ತನಗೆ ಸಮಾಜದಲ್ಲಿ ಒಂದು ಗುರುತು (ಐಡೆಂಟಿಟಿ) ತರಿಸಿಕೊಳ್ಳುವ ಸಾಧನ. ಇನ್ನು ಬೆಂಗಳೂರಿನ ಕೆಲ ಸಂಸ್ಥೆಗಳು ಇರುವುದೇ ಚಂದಾ ಎತ್ತಿ ವರ್ಷಕ್ಕೊಂದು ’ಕನ್ಡರಾಜ್ಯೋಸ್ತವ’ ಆಚರಿಸುವುದಕ್ಕೆ (ಅವರಿಗೆ ರಾಜ್ಯೋತ್ಸವ ಅಂತ ಹೇಳುವುದಕ್ಕೂ ಬರುವುದಿಲ್ಲ). ಬೆಂಗಳೂರಿನ ಹೊರಗೆ ಸಾಮಾಜಿಕ ವ್ಯವಹಾರಗಳಲ್ಲಿ ಕನ್ನಡದ ಬಳಕೆ ಕೇಳಿಬರುತ್ತದಾದರೂ ಕನ್ನಡದ ಬಗೆಗಿನ ಕಳಕಳಿ ದಿನೇ ದಿನೇ ಕಡಿಮೆಯಾಗುತ್ತಿದೆ ಎಂಬುದು ಸತ್ಯ. ಕೆಲವೇ ಮಂದಿ, ಎಣಿಸಬಹುದಾದಷ್ಟು ಸಂಸ್ಥೆಗಳು ನಿಜಾರ್ಥದಲ್ಲಿ ಕನ್ನಡದ ಉತ್ಸವ ಮಾಡುತ್ತಾರೆ; ಮತ್ತು ಅವರು ಅದನ್ನು ಪ್ರತಿದಿನವೂ ಮಾಡುತ್ತಾರೆ. ಅವರಿಗೆ ರಾಜ್ಯೋತ್ಸವದ ನೆಪ ಬೇಕಾಗಿಲ್ಲ. ಒಟ್ಟಾರೆಯಾಗಿ ಕನ್ನಡ ನಾಡಿನಲ್ಲಿ ಕನ್ನಡ ರಾಜ್ಯೋತ್ಸವ, ಕನ್ನಡದ ಕಾಳಜಿ, ಕನ್ನಡದ ಬಳಕೆ ಎಲ್ಲಾ ನವಂಬರ್ ೧ ಎಂಬೊಂದು ದಿನಕ್ಕೆ ಸೀಮಿತವಾಗುತ್ತಿದೆ ಮತ್ತು ಇದು ತೋರಿಕೆಯ ವಿಷಯವಾಗಿಬಿಟ್ಟಿದೆ.

ಆದರೆ ಹೊರನಾಡಿನಲ್ಲಿ ಪರಿಸ್ಥಿತಿ ತುಂಬಾ ವಿಭಿನ್ನ! ದೇಶ ಬಿಟ್ಟವರು ಎಂದರೆ ಎಲ್ಲಾ ಬಿಟ್ಟವರು ಎಂಬ ಅಭಿಪ್ರಾಯ ಹಲವಾರು ಜನರಲ್ಲಿರಬಹುದು. ಆದರೆ ಯಾವತ್ತೂ ಏನನ್ನಾದರೂ ಕಳೆದುಕೊಂಡರೇ ಬೆಲೆ ತಿಳಿಯುವುದು ಎನ್ನುತ್ತಾರಲ್ಲ; ಹಾಗೆಯೇ ದೇಶ ಬಿಟ್ಟಾಗ ಏನನ್ನೋ ಕಳೆದುಕೊಳ್ಳುತ್ತಿದ್ದೇವೆ ಎಂಬ ಸಣ್ಣ ಆತಂಕ ಪ್ರಾರಂಭ ಆಗುತ್ತದೆ. ತನ್ನ ನೆಲದ ಮೇಲೆ ಭಾಷೆಯ ಮೇಲೆ ಅಭಿಮಾನ ಹೆಚ್ಚಲು ಪ್ರಾರಂಭವಾಗುತ್ತದೆ. ಕನ್ನಡದ ನೆಲದ ಸುದ್ದಿ, ಆಗುಹೋಗುಗಳ ಕುರಿತು ತಿಳಿದುಕೊಳ್ಳುವ ತುಡಿತ ಹೆಚ್ಚಾಗುತ್ತದೆ. ಇಂದಿನ ತಂತ್ರಜ್ಞಾನ ಯುಗದಲ್ಲಿ ಇದೇನೂ ಕಷ್ಟವಲ್ಲ. ತಂತ್ರಜ್ಞಾನದ ಸಹಾಯದಿಂದ ಬಹುಷಃ ಹೊರನಾಡ ಕನ್ನಡಿಗರು ನಾಡಿನೊಳಗಿರುವ ಕನ್ನಡಿಗರಿಗಿಂತ ಹೆಚ್ಚೇ ಕನ್ನಡಕ್ಕೆ ಹತ್ತಿರವಾಗುತ್ತಿದ್ದಾರೆ. ಪ್ರತಿನಿತ್ಯ ಬೆಳಗ್ಗೆ ಎದ್ದು ನಾನು ನೋಡುವ ಮೊಬೈಲ್ ತಂತ್ರಾಂಶ ಪ್ರಮುಖ ಕನ್ನಡ ದಿನಪತ್ರಿಕೆಗಳನ್ನು ಮೊಬೈಲಿನಲ್ಲಿ ಒದಗಿಸುವಂತಹದ್ದು. ಕನ್ನಡಿಗ ಮಿತ್ರರ ಜೊತೆಗಿನ ಮಾತುಕತೆಗಳಲ್ಲಿ ಚರ್ಚಿಗೆ ಬರುವ ವಿಷಯಗಳೂ ಕನ್ನಡದ್ದೇ. ಲೇಖನಗಳು, ಕನ್ನಡಿಗರ ಬ್ಲಾಗುಗಳು, ಬೆಂಗಳೂರು, ಮಂಗಳೂರು, ಮೈಸೂರಿನ ಸುದ್ದಿಗಳು!

ಯಾವುದೋ ಭಾಷೆ, ಸಂಸ್ಕೃತಿಯ ಮಧ್ಯೆ ಬದುಕುವ ಹೊರನಾಡ ಕನ್ನಡಿಗರಿಗೆ ಎಲ್ಲಾದರೂ ಕನ್ನಡ ಶಬ್ದಗಳು ಕೇಳಿದರೆ ಕಿವಿ ನೆಟ್ಟಗಾಗುತ್ತದೆ, ಮಾತು - ಪರಿಚಯವಾಗುತ್ತದೆ. ಇಲ್ಲಿ ಉತ್ತರ ದಕ್ಷಿಣ ಕರ್ನಾಟಕಗಳೆಂಬ ಭೇದವಿಲ್ಲ; ಜಾತಿ-ಮತ-ಪಂಥಗಳ ಪ್ರಶ್ನೆಯಿಲ್ಲ; ಕನ್ನಡಿಗರೆಂಬುದಷ್ಟೇ ಮುಖ್ಯ! ಇಂತಹ ಪರಿಚಯಗಳು ಕನ್ನಡ ಕೂಟಗಳ, ಸಂಘಗಳ ಹುಟ್ಟಿಗೆ ನಾಂದಿಯಾಗುತ್ತವೆ.  ಇಂತಹ ಕನ್ನಡ ಸಂಘಗಳು ನಮ್ಮ ನಡುವಿನ ಬೆಸುಗೆಯನ್ನು ಗಟ್ಟಿಮಾಡುತ್ತವೆ. ಕನ್ನಡ ಭಾಷೆಯ - ಸಂಸ್ಕೃತಿಯ ಪ್ರೀತಿಯನ್ನು ಹೆಚ್ಚುಮಾಡುತ್ತವೆ. ಹೊರನಾಡ ಕನ್ನಡಿಗರನ್ನು ಒಟ್ಟುಮಾಡುತ್ತವೆ. ಎಲ್ಲಾ ಕನ್ನಡಿಗರೂ ಜೊತೆಸೇರಬೇಕೆಂದು ಒಂದಿಲ್ಲೊಂದು ಕಾರಣ ಹುಡುಕಿ ಇಂತಹ ಸಂಘಗಳು ನಡೆಸುವ ಕಾರ್ಯಕ್ರಮಗಳು ನಿಜಾರ್ಥದಲ್ಲಿ ಕನ್ನಡದ ಉತ್ಸವಗಳಾಗಿರುತ್ತವೆ!

ನಮ್ಮ ಬ್ಯಾಂಕಾಕಿನಲ್ಲೂ ಒಂದು ಕನ್ನಡಿಗರ ಕೂಟವಿದೆ - ಥಾಯ್ ಕನ್ನಡ ಬಳಗ. ವರ್ಷಕ್ಕೆ ಮೂರು ನಾಲ್ಕು ಬಾರಿಯಾದರೂ ಸೇರುತ್ತೇವೆ. ರಾಜೋತ್ಸವ, ಯುಗಾದಿ, ಆಟೋಟ ಸ್ಪರ್ಧೆಗಳು, ಪ್ರವಾಸ ಹೀಗೆ ಯಾವುದಾದರೂ ಕಾರಣ ಸಿಗುತ್ತದೆ ಒಟ್ಟಾಗುವುದಕ್ಕೆ. ಕಾರಣ ಏನೇ ಆಗಿದ್ದರೂ ಪ್ರತೀ ಸಲ ಸೇರಿದಾಗ ಕನ್ನಡದ ಹಬ್ಬವಂತೂ ಆಗುತ್ತದೆ. ಕನ್ನಡ ನಾಡಿನ ಬಗ್ಗೆ ರಸಪ್ರಶ್ನೆ, ಕನ್ನಡ ಹಾಡುಗಳ ಅಂತ್ಯಾಕ್ಷರಿ, ಕರ್ನಾಟಕದ ನೃತ್ಯ-ನಾಟ್ಯ ವೈವಿಧ್ಯಗಳು, ಅಡುಗೆ ಸ್ಪರ್ಧೆ, ಖಾದ್ಯ ವೈವಿಧ್ಯಗಳು ಹೀಗೆ ಕನ್ನಡದ ಡಿಂಡಿಮ ಮೊಳಗುತ್ತದೆ. ಇದು ನವಂಬರ್ ೧ಕ್ಕೆ ಸೀಮಿತವಾದ ಚಟುವಟಿಕೆಗಳಲ್ಲ. ಪ್ರತೀ ಕೂಟವೂ ಕನ್ನಡದ ಹಬ್ಬವೇ. ಬ್ಯಾಂಕಾಕಿನಿಂದ ಇನ್ನೂರು ಮುನ್ನೂರು ಕಿಲೋಮೀಟರ್ ದೂರದೂರಲ್ಲಿ ನೆಲೆಸಿರುವ ಕುಟುಂಬಗಳೂ ಬಿಡುವು ಮಾಡಿಕೊಂಡು ಬರುತ್ತಾರೆ.

ವಿಪರ್ಯಾಸವೆಂದರೆ ಹಲವಾರು ಬಾರಿ ಇಂತಹ ಕಾರ್ಯಕ್ರಮಗಳಿಗೆ ನಾವು ಕರ್ನಾಟಕದಿಂದ ಆಹ್ವಾನಿಸಿದ ತಂಡದ ಸದಸ್ಯರುಗಳಿಗೇ ಸರಿಯಾಗಿ ಕನ್ನಡ ಮಾತನಾಡಲು ಬರುವುದಿಲ್ಲ! ಮೊದಲೇ ಹೇಳಿದೆನಲ್ಲಾ - ದೇಶ ಬಿಟ್ಟವರು ಎಲ್ಲಾ ಬಿಟ್ಟವರು ಎಂಬುದು ಮನಸ್ಸಿನಲ್ಲಿರುತ್ತದೆಯೇನೋ. ಹಾಗಾಗಿ ಕಳಪೆ ಸದಸ್ಯರಿದ್ದರೂ ಪರವಾಗಿಲ್ಲ ಎಂದು ಭಾವಿಸುತ್ತಾರೇನೋ! ಹೊರನಾಡಿನವರೆಂದರೆ ಅವರಿಗೆ ಕನ್ನಡದ ಬಗ್ಗೆ ಏನೂ ತಿಳಿದಿಲ್ಲ ಅಂದುಕೊಂಡು ಬರುವವರೇ ಹೆಚ್ಚು. ಇತ್ತೀಚೆಗೆ ಅಮೆರಿಕಾದ ಅಕ್ಕ ಸಮ್ಮೇಳನಕ್ಕೆ ಹೋಗುವುದಕ್ಕೆ ಸರಕಾರದ ಯಾವುದೋ ಇಲಾಖೆಯಿಂದ ಒಂದಷ್ಟು ಹಣ ಬಿಡುಗಡೆ ಮಾಡಿಸಿಕೊಂಡು ಹೊರಟಿದ್ದ ಒಂದು ತಂಡ ಬ್ಯಾಂಕಾಕ್ ಮೂಲಕ ಹೋಗುತ್ತಿತ್ತು. ವಾರದ ಮಧ್ಯವಾದರೂ ಊರಿನಿಂದ ಬರುತ್ತಿದ್ದಾರೆ ಎಂದು ಕಾರ್ಯಕ್ರಮ ಆಯೋಜಿಸಿದರೆ ಮೊದಲಾಗಿ ಸಮಯಕ್ಕೆ ಸರಿಯಾಗಿ ಬರಲಿಲ್ಲ. ತಡವಾಗಿ ಬಂದರೂ ಅವರಿಗೆ ಸಮಯದ ಚಿಂತೆ ಇರಲಿಲ್ಲ. ಇನ್ನು ಅದರಲ್ಲಿ ಅರ್ಧ ಮಂದಿಗೆ ಸರಿಯಾಗಿ ಕನ್ನಡ ಉಚ್ಛಾರ ಬರುತ್ತಿರಲಿಲ್ಲ. ಇನ್ನು ಒಬ್ಬರಂತೂ ಯಾರೋ ಬರೆದ ಬರಹವನ್ನು ತಪ್ಪುತಪ್ಪಾಗಿ ಓದಿ ನಮಗೆ ಕನ್ನಡ ಪಾಠ ಮಾಡಿದರು. ಸಂತಸವೆಂದರೆ ಒಂದಿಬ್ಬರು ಸುಂದರ ಚುಟುಕುಗಳನ್ನು ರಚಿಸಿ ನಗಿಸಿದರು. ಇನ್ನಿಬ್ಬರು ಕನ್ನಡ ಹಾಡುಗಳನ್ನು ಹಾಡಿ ನಮ್ಮನ್ನು ಕುಣಿಸಿದರು.

ಈ ವಾರ ರಾಜ್ಯೋತ್ಸವ ವಾರಾಂತ್ಯಕ್ಕೆ ಬಂದದ್ದರಿಂದ ನಮ್ಮಲ್ಲಿ ಎರಡೂ ದಿನ ಆಚರಣೆ, ಸಂಭ್ರಮ, ಕನ್ನಡದ ಹಬ್ಬ. ಇನ್ನು ನಾಲ್ಕು ತಿಂಗಳಲ್ಲಿ ಮತ್ತೊಮ್ಮೆ ನಮ್ಮಲ್ಲಿ ಕನ್ನಡದ ಹಬ್ಬ ಬರುತ್ತದೆ. ಕನ್ನಡ ನಾಡಿನೊಳಗೆ ಕಾದಂತೆ ಇನ್ನೊಂದು ನವಂಬರ್ ೧ರ ವರೆಗೆ ನಾವು ಕಾಯುವುದಿಲ್ಲ. ಸರಕಾರದ ಅನುದಾನಗಳ ಹಂಗಿಲ್ಲದೆ ನಮಗೋಸ್ಕರ ನಾವು ಮಾಡುವ ನಮ್ಮ ಕನ್ನಡದ ಹಬ್ಬದ ಸಂಭ್ರಮ ನಾಡಿನೊಳಗಿರದು!

ಸಮೀರ ಸಿ ದಾಮ್ಲೆ
ಬ್ಯಾಂಕಾಕ್


No comments:

Post a Comment