Wednesday, September 16, 2015

ಕೋಡಂಗಿ ಕುಣಿತಕ್ಕೆ ಬದಲಾವಣೆ ತಂದರೆಂತು?



ಮಿತ್ರ ರಂಗನಾಥ ರಾಯರು ಯೂಟ್ಯೂಬ್‍ನಲ್ಲಿ ವೃತ್ತಿಮೇಳವೊಂದರ ಶ್ರೀ ದೇವಿ ಮಹಾತ್ಮೆ ಯಕ್ಷಗಾನದ ವೀಡಿಯೋ ಹಂಚಿಕೊಂಡರು. ಅದರಲ್ಲಿ ಪ್ರಸ್ತುತಪಡಿಸಿದ ಕೋಡಂಗಿ ಕುಣಿತವನ್ನು ನೋಡಿದಾಗ ಮನಸ್ಸಿಗೆ ಬಂದ ಒಂದಷ್ಟು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದೇನೆ.

ಕೋಡಂಗಿ ಕುಣಿತ ಪ್ರಸ್ತುತಪಡಿಸಿದ ಕಲಾವಿದರು ತಾಳ ಲಯ ಬಿಟ್ಟು ಕೋಡಗಗಳಂತೆಯೇ ಕುಣಿದಿದ್ದಾರೆ. ಸೂಕ್ಷ್ಮವಾಗಿ ಗಮನಿಸಿದಾಗ ಇವರು ತಾಳ ಲಯದ ಜ್ಞಾನವಿದ್ದ ನಾಟ್ಯ ಕಲಿತಿದ್ದ ಕಲಾವಿದರು ಎಂಬುದು ಸ್ಪಷ್ಟ. ತಪ್ಪಾಗಿ ಕುಣಿಯುವುದಕ್ಕೆ ಸ್ವಲ್ಪ ಕಷ್ಟಪಟ್ಟಂತೆಯೂ ಕಂಡುಬಂತು. ಉದಾಹರಣೆಗೆ ಘಾತಪೆಟ್ಟಿಗೆ ಸಹಜವಾಗಿಯೇ ಅವರ ಕಾಲು ಸ್ಪಂದಿಸುತ್ತಿತ್ತು. ನನ್ನಲ್ಲಿ ಮೂಡಿದ ಪ್ರಶ್ನೆ - ಯಾಕೆ ಹೀಗೆ ಕೆಟ್ಟದ್ದಾಗಿ ಕುಣಿಯಬೇಕು?
ಆ ನಾಟ್ಯವನ್ನು ’ಕೋಡಂಗಿ ಕುಣಿತ’ ಎಂದು ಕರೆಯುವ ಕಾರಣದಿಂದಲೇ? ಹಾಗಿದ್ದರೆ ಆ ಹೆಸರು ಯಾಕೆ ಬಂತೆಂದು ವಿಮರ್ಶೆ ಮಾಡಬೇಕಾಗುತ್ತದೆ. ನನ್ನ ದೃಷ್ಟಿಯಲ್ಲಿ ಹಿಂದಿನ  ಕಾಲದಲ್ಲಿ ಯಕ್ಷಗಾನ ಕೇಂದ್ರಗಳು ಇಲ್ಲದ ಸಂದರ್ಭಗಳಲ್ಲಿ ಮೇಳಕ್ಕೆ ಸೇರಿಕೊಂಡು ಅಲ್ಲೇ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಹಿರಿಯರಿಂದ ನಾಟ್ಯಾಭ್ಯಾಸ ಮಾಡುವ ಪರಿಪಾಠ ಇದ್ದಿರಬಹುದು. ಹೀಗೆ ಕಲಿಯುವ ವಿದ್ಯಾರ್ಥಿಗಳಿಂದ, ಅಭ್ಯಾಸದ ಸಲುವಾಗಿ ಪ್ರಾರಂಭದ ಪೂರ್ವರಂಗದ ಹಾಡುಗಳಿಗೆ ನಾಟ್ಯ ಮಾಡಿಸುತ್ತಿದ್ದಿರಬಹುದು. ಇನ್ನೂ ನಾಟ್ಯಶಿಕ್ಷಣ ಪೂರ್ತಿಯಾಗದ, ಸರಿಯಾಗಿ ನಾಟ್ಯ ಬಾರದ ಹುಡುಗರು ಹಾಕುವ ಹೆಜ್ಜೆಗಳು ಎಷ್ಟೋ ಬಾರಿ ತಪ್ಪಾಗಿರುತ್ತಿದ್ದ ಕಾರಣ ಪೂರ್ವರಂಗದ ಪೂರ್ವಭಾಗಕ್ಕೆ ಕೋಡಂಗಿ ಕುಣಿತ ಎಂಬ ಹೆಸರು ಬಂದಿರಬೇಕು. ಅಲ್ಲಿ ಹಾಡುವ ಪದ್ಯಗಳೆಲ್ಲವೂ ದೇವರ ಸ್ತುತಿ ಹಾಗೂ ಆರಾಧನಾ ಕೃತಿಗಳಾಗಿರುವಾಗ ’ಕೋಡಂಗಿ ಕುಣಿತ’ ಎಂಬ ಹೆಸರು ಬರಲು ಬೇರೆ ಕಾರಣ ತೋಚುವುದಿಲ್ಲ. ಹಿಂದೆ ನಾಟ್ಯ ಬಾರದವರು ಕೋಡಗನ ಹಾಗೆ ಕುಣಿಯುತ್ತಿದ್ದರು ಎಂಬ ಕಾರಣಕ್ಕೆ ನಾಟ್ಯ ಬರುವವರೂ ತಪ್ಪು ತಪ್ಪಾಗಿ ಕುಣಿಯುವುದು ಸರಿಯೆಂದು ನನಗನ್ನಿಸುವುದಿಲ್ಲ.
ಕೋಡಂಗಿ ಕುಣಿತ ನಿಜಾರ್ಥದಲ್ಲಿ ಕೋಡಗನ ಕುಣಿತವೇ ಆಗಬೇಕು ಅದನ್ನು ಸರಿಯಾಗಿ ಕುಣಿಯಬಾರದು ಎಂಬ ವಾದವಿದ್ದರೆ ಸಂಗೀತಗಾರ ಕೂಡಾ ತಪ್ಪು ತಪ್ಪಾಗಿ ಪದ್ಯ ಹೇಳಬೇಕು ಹಾಗೂ ಒತ್ತು ಮದ್ದಳೆಗಾರ ತಾಳಕ್ಕೆ ಸರಿಯಾಗಿ ಮದ್ದಳೆ ನುಡಿಸಬಾರದು ಎಂದು ವಾದಿಸಬಹುದು. ಇದು ಮೊಂಡು ವಾದವಾಗುತ್ತದೆಯೇ ಹೊರತು ಏನನ್ನೂ ಸಾಧಿಸಿದಂತಾಗುವುದಿಲ್ಲ.

ಇನ್ನು ಅವರ ಮುಖವರ್ಣಿಕೆಯೂ ಅಭ್ಯಾಸದ ಮೊದಲ ದಿನಗಳ ಮುಖವರ್ಣಿಕೆಯಾಗಿದ್ದುದರಿಂದ ಕೊಂಚ ಹೊಲಸಾಗಿ ಇರುತ್ತಿದ್ದಿರಬಹುದು. ಹಿಂದೆ ಹಾಗೆ ಇತ್ತು ಎಂದು ಇವತ್ತು ಮುಖವರ್ಣಿಕೆ ಗೊತ್ತಿದ್ದವರೂ ಯಾಕೆ ಹೊಲಸು ಮುಖವರ್ಣಿಕೆ ಮಾಡಬೇಕು?

ಇವತ್ತು ಪರಂಪರೆಯನ್ನು ಉಳಿಸುವ ಧಾವಂತದಲ್ಲಿ ಪೂರ್ವರಂಗದ ಪ್ರಯೋಗಗಳು ಪ್ರಾತ್ಯಕ್ಷಿಕೆಗಳು ಎಲ್ಲೆಲ್ಲೂ ನಡೆಯುತ್ತಿವೆ. ಹಿಂದೆ ಪೂರ್ವರಂಗ ಒಂದು ಸ್ವರೂಪದಲ್ಲಿತ್ತು ಮತ್ತು ಅದಕ್ಕೆ ಅದರದ್ದೇ ಆದ ಕಾರಣಗಳಿತ್ತು. ಹೊಸದಾಗಿ ನಾಟ್ಯ ಕಲಿಯುವುದಕ್ಕೋಸ್ಕರ ಮೇಳಕ್ಕೆ ಸೇರಿದವರು ಕೋಡಂಗಿ ಕುಣಿತ ಮಾಡಿದರೆ ಅವರಿಗಿಂತ ಕೊಂಚ ಹೆಚ್ಚು ಅಭ್ಯಾಸ ಆದವರು ಬಾಲಗೋಪಾಲ ನಾಟ್ಯ ಮಾಡುತ್ತಾ ನಾಟ್ಯ ಹಾಗೂ ಅಭಿನಯವನ್ನು ಜೊತೆಯಾಗಿ ಮಾಡುವ ಅಭ್ಯಾಸ ಮಾಡುತ್ತಿದ್ದರು. ಹೀಗೆ ಹಂತ ಹಂತವಾಗಿ ಕಲಾವಿದ ಬೆಳೆದುಕೊಂಡು ಹೋಗುತ್ತಿದ್ದ ಪರಂಪರೆ ಇತ್ತು.

ಹಿಂದಿನ ಕಾಲದಲ್ಲಿದ್ದ ಪೂರ್ವರಂಗಕ್ಕಿದ್ದ ಅಗತ್ಯತೆಗಳು ಹಾಗೂ ಅದರ ಪ್ರತಿಫಲಗಳು ಇಂದಿಗೂ ಪ್ರಸ್ತುತವಲ್ಲ. ಬದಲಾದ ಸನ್ನಿವೇಶದಲ್ಲಿ, ಪೂರ್ವರಂಗವನ್ನು ಹೇಗೆ ಉಪಯುಕ್ತವಾಗಿ ಬಳಸಿಕೊಳ್ಳಬಹುದು ಎಂದು ನಾವು ಯೋಚಿಸಬೇಕು.
ಈ ದೃಷ್ಟಿಯಿಂದ ಕೋಡಂಗಿ ಕುಣಿತವನ್ನು ಯಾಕೆ ತಾಳಬದ್ಧವಾಗಿ ಲಯಬದ್ಧವಾಗಿ ಪ್ರಸ್ತುತಪಡಿಸಬಾರದು? ಅಲ್ಲಿರುವ ಪದ್ಯಗಳೆಲ್ಲವೂ ಏಕತಾಳದಲ್ಲಿದೆ. ’ಧೀಂಕಿಟ ಕಿಟತಕ’ ದಿಂದ ಪ್ರಾರಂಭಿಸಿ ಏಕತಾಳದಲ್ಲಿರುವ ಹಲವಾರು ಹೆಜ್ಜೆಗಳನ್ನು ಒಂದೊಂದಾಗಿ (ಕಲಸು ಮೇಲೊಗರ ಮಾಡದೆ) ಪ್ರಸ್ತುತಪಡಿಸಿದರೆ ಯಕ್ಷಗಾನ ಕಲಿಯುತ್ತಿರುವ ಹೊಸಬರು ತಾಳಬದ್ಧವಾದ ಹೆಜ್ಜೆಗಾರಿಕೆಯ ಪ್ರಯೋಗವನ್ನು (ಪದ್ಯಕ್ಕೆ ಕುಣಿಯುವುದನ್ನು) ನೋಡಿ ಕಲಿಯಬಹುದು. ಇನ್ನು ಬಾಲಗೋಪಾಲ ನೃತ್ಯವನ್ನು ಪ್ರಸ್ತುತಪಡಿಸುವವರು ನೃತ್ಯದ ಜೊತೆಗೆ ಹಸ್ತಾಭಿನಯ, ನಾಟ್ಯದಲ್ಲಿ ವೈವಿಧ್ಯತೆಯ ಸಾಧ್ಯತೆಗಳನ್ನು ತೋರಿಸಬಹುದು.

ಈ ರೀತಿಯ ಬದಲಾವಣೆಯಿಂದ ಕೋಡಂಗಿ ಕುಣಿತಕ್ಕೆ ಒಂದು ಪ್ರಯೋಜನವಾದರೂ ಬರುತ್ತದೆ. ಕೇವಲ ಆರಾಧನೆಯ ದೃಷ್ಟಿಯಿಂದ ನೋಡಿದರೂ ಚಂದದಿಂದ ಆರಾಧನೆ ಮಾಡಿದ ಸಮಾಧಾನ ಸಿಗುತ್ತದೆ. ಪರಂಪರೆಯಲ್ಲಿರುವ ಒಳಿತನ್ನು ಉಳಿಸಬೇಕು; ಹಾಗೆಂದು ಮಂಗಗಳೇ ಬುದ್ಧಿವಂತಿಕೆ ತೋರಿಸುತ್ತಿರುವ ಈ ಕಾಲದಲ್ಲಿ, ಪರಂಪರೆಯ ಹೆಸರಿನಲ್ಲಿ ಅಸಹ್ಯವಾಗಿ ಕಾಣುವ ಮಂಗನ ಕುಣಿತ ಮಾಡುವುದರಿಂದ ಸಮಯ ವ್ಯರ್ಥವಲ್ಲದೆ ಬೇರೇನಾದರೂ ಸಾಧನೆಯಿದೆಯೇ?

ಸಮೀರ ದಾಮ್ಲೆ
ಬ್ಯಾಂಕಾಕ್

No comments:

Post a Comment