Thursday, May 15, 2014

ಕನ್ನಡದಲ್ಲಿ ಕಲಿಯಿರಿ, ಇಂಗ್ಲಿಷನ್ನೂ ಕಲಿಯಿರಿ



ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಬೇಕೇ ಬೇಡವೇ ಎಂಬುದು ಇಂದು ನಿನ್ನೆಯ ಚರ್ಚೆಯಲ್ಲ. ಕೆಲವು ವರ್ಷಗಳಿಂದ ಹೊಗೆಯಾಡುತ್ತಲೇ ಇತ್ತು. ಮೇ ೫ ರಂದು ಬಂದ ಸುಪ್ರೀಂ ಕೋರ್ಟಿನ ತೀರ್ಪಿನ ಪರಿಣಾಮ ಈ ಚರ್ಚೆಗೆ ಬೆಂಕಿ ಹತ್ತಿತು. ’ಬ್ರಿಟಿಷ್ ಕಾಲದಿಂದ ಇಂದಿನವರೆಗೆ ಶಿಕ್ಷಣ ಹಾಗೂ ಶಿಕ್ಷಣ ಮಾಧ್ಯಮ ಹೇಗೆ ಬಂಡವಾಳಶಾಹಿಗಳ ಅಗತ್ಯತೆಗೆ ಅನುಕೂಲವಾಗುವ ಸ್ವತ್ತಾಯಿತು’ ಹಾಗೂ ’ಸರಕಾರಿ ಕನ್ನಡ ಮಾಧ್ಯಮ ಶಾಲೆಗಳನ್ನು ಹೇಗೆ ಬಲಪಡಿಸಬಹುದು’ ಈ ಎರಡೂ ವಿಷಯಗಳು ಮೇ ೧೩ ಪ್ರಜಾವಾಣಿಯಲ್ಲಿ ಎರಡು ಪ್ರತ್ಯೇಕ ಲೇಖನಗಳಲ್ಲಿ ಚರ್ಚೆಯಾಗಿವೆ. ಆದರೆ ಇಂಗ್ಲಿಷ್ ಮಾಧ್ಯಮದ ಪ್ರತಿಪಾದನೆಯ ಮುಖ್ಯಕಾರಣ ಚರ್ಚೆಯಾದದ್ದು ಕಡಿಮೆ. ಬಹುತೇಕ ಸಮರ್ಥಕರು ಕೊಡುವ ಕಾರಣಗಳೆಂದರೆ - ಹೆಚ್ಚಿನ ಅವಕಾಶಗಳು, ಕೀಳರಿಮೆ ಹಾಗೂ ಅನುವಾದದ ಸಮಸ್ಯೆಯಿಂದ ಕನ್ನಡದಲ್ಲಿ ಮಾಹಿತಿ ಲಭ್ಯವಿಲ್ಲದಿರುವುದು.
ಅವಕಾಶಗಳು: ಹೆಚ್ಚಿನ ಪೋಷಕರು ಕೊಡುವ ಮುಖ್ಯ ಕಾರಣ ಹೆಚ್ಚಿನ ಅವಕಾಶಗಳು, ಗ್ಲೋಬಲ್ ಒಪರ್ಚುನಿಟಿ. ಸತ್ಯ, ನಿಮ್ಮ ಜ್ನಾನ ಹೆಚ್ಚಿದ್ದಷ್ಟು, ಹೆಚ್ಚು ಭಾಷೆ ಬಂದಷ್ಟು, ನಿಮ್ಮ ಸಂವಹನ ಸಾಮರ್ಥ್ಯ (ಕಮ್ಯುನಿಕೇಶನ್ ಸ್ಕಿಲ್) ಹೆಚ್ಚಾದಷ್ಟು ನಿಮ್ಮನ್ನು ನೀವು ಚೆನ್ನಾಗಿ ಮಾರ್ಕೆಟ್ ಮಾಡಿಕೊಳ್ಳಬಹುದು; ಹಾಗಾಗಿ ನಿಮ್ಮ ಅವಕಾಶಗಳು ಹೆಚ್ಚುತ್ತವೆ. ಜರ್ಮನಿಯಲ್ಲಿ ಕಲಿಯಬೇಕಾದರೆ ಅಥವಾ ಕೆಲಸ ಸಿಗಬೇಕಾದರೆ ಜರ್ಮನ್ ಗೊತ್ತಿರಬೇಕು, ಜಪಾನಿನಲ್ಲಿ ಬದುಕಲು ಜಪಾನಿ ಭಾಷೆ ಕಲಿಯುವುದು ಅನಿವಾರ್ಯ, ಥಾಯ್ ಲ್ಯಾಂಡ್ ನಲ್ಲಿ ವ್ಯವಹಾರ ಮಾಡಲು ಥಾಯ್ ಭಾಷೆ ಅನುಕೂಲಕಾರಿ, ಕೊರಿಯಾದಲ್ಲಿ ಕೊರಿಯನ್, ಫ್ರಾನ್ಸ್ ನಲ್ಲಿ ಫ್ರೆಂಚ್ ಹೀಗೆ ನಿಮಗೆಷ್ಟು ಹೆಚ್ಚು ಭಾಷೆ ಗೊತ್ತೋ ಅಷ್ಟು ಅವಕಾಶಗಳು ಜಾಸ್ತಿ. ಅದೆಷ್ಟೋ ಮಲ್ಟಿನ್ಯಾಷನಲ್ ಕಂಪನಿಗಳಲ್ಲಿ ಭಾಷಾನುವಾದಕರು ಎಂಜಿನಿಯರ್ ಗಳಿಗಿಂತ ಹೆಚ್ಚು ಸಂಬಳ ಪಡೆಯುತ್ತಾರೆ. ಪರಿಣಿತ ಭಾಷಾನುವಾದಕರಿಗೆ ’ಶಬ್ದವೊಂದಕ್ಕಿಷ್ಟು’ ಎಂಬಂತೆ ಸಂಭಾವನೆ ಕೊಡಬೇಕಾಗುತ್ತದೆ! ಹಾಗಾದರೆ ಜರ್ಮನ್ ಅಥವಾ ಜಪಾನೀ ಮಾಧ್ಯಮದ ಶಾಲೆ ತೆರೆಯೋಣವೇ? ಪರಿಹಾರ ಅದಲ್ಲ, ಕನಿಷ್ಠ ಒಂದು ವಿದೇಶಿ ಭಾಷೆಯನ್ನು (ಭಾಷೆಯಲ್ಲಿ ಅಲ್ಲ) ಸರಿಯಾಗಿ ಕಲಿಯೋಣ! ಅದು ಇಂಗ್ಲಿಷೇ ಇರಬಹುದು, ಅದನ್ನು ಸರಿಯಾಗಿ ಕಲಿಯೋಣ.
ಇಂಗ್ಲಿಷ್ ಬರುತ್ತಿಲ್ಲವೆಂಬ ಕೀಳರಿಮೆ: ಅದೆಷ್ಟೋ ಹೆತ್ತವರು ಇಂಗ್ಲಿಷ್ ಮಾಧ್ಯಮಕ್ಕೆ ಸೇರಿಸುವುದಕ್ಕೆ ಕೊಡುವ ಕಾರಣ ’ನನಗೆ ಸರಿಯಾಗಿ ಇಂಗ್ಲಿಷ್ ಬರುತ್ತಿಲ್ಲ, ಹಾಗಾಗಿ ಅವಕಾಶಗಳನ್ನು ಕಳಕೊಂಡೆ’, ’ಇಂಗ್ಲಿಷ್ ಬರದ ಕಾರಣ ನನಗೆ ಮುಜುಗರವಾಗುತ್ತದೆ’, ’ಇಂಜಿನಿಯರಿಂಗ್, ಮೆಡಿಕಲ್ ಸೇರಿದಾಗ ಮೊದಲ ಸೆಮೆಸ್ಟರ್ ಅಥವಾ ವರ್ಷ ತುಂಬಾ ಕಷ್ಟವಾಯಿತು’ ಇತ್ಯಾದಿ. ಒಂದಷ್ಟು ಜನ ಈ ಅನುಭವಗಳಿಂದ ಕೀಳರಿಮೆ ಬೆಳೆಸಿಕೊಂಡಿರುತ್ತಾರೆ, ಇನ್ನು ಕೆಲವರು ಸ್ವಪ್ರಯತ್ನದಿಂದ ತಮ್ಮ ಇಂಗ್ಲಿಷ್ ಸಾಮರ್ಥ್ಯ ಬೆಳೆಸಿಕೊಂಡು ಇಂತಹ ಕೀಳರಿಮೆಯಿಂದ ಹೊರಬಂದಿರುತ್ತಾರೆ. (ಪ್ರಜಾವಾಣಿಯಲ್ಲಿ ಕೆಲ ತಿಂಗಳ ಹಿಂದೆ ಬಂದ ’ಮಗನೇ ಕ್ಷಮಿಸು’ ಎಂಬ ಲೇಖನದಲ್ಲಿ ಕೀಳರಿಮೆ ತುಂಬಿ ತುಳುಕುತ್ತಿತ್ತು). ಈ ಸಮಸ್ಯೆಗೆ ಕಾರಣ ಇಂಗ್ಲಿಷ್ ಅನ್ನು ಒಂದು ಭಾಷೆಯಾಗಿ ಕಲಿಸುವ ಸಾಮರ್ಥ್ಯ ಇರುವ ಶಿಕ್ಷಕರ ಕೊರತೆ. ಸ್ವಾಮೀ, ಇಂಗ್ಲಿಷ್ ಅನ್ನು ಒಂದು ಭಾಷೆಯಾಗಿ ಕಲಿಸುವವರು ಇಲ್ಲದಿರುವ ಸಮಸ್ಯೆ ನೀಗಿಸಲು ಭೌತಶಾಸ್ತ್ರ, ರಸಾಯನಶಾಸ್ತ್ರ, ಸಮಾಜಶಾಸ್ತ್ರ ಎಲ್ಲವನ್ನೂ ಇಂಗ್ಲಿಷ್ ನಲ್ಲಿ ಕಲಿಸುವುದು ಹೇಗೆ ಪರಿಹಾರವಾಗುತ್ತದೆ? ನೀವು ಲಕ್ಷ ತೆತ್ತು ಕಳಿಸುವ ಅದೆಷ್ಟೋ ಇಂಗ್ಲಿಷ್ ಶಾಲೆಗಳೂ ಈ ಸಮಸ್ಯೆಯಿಂದ ಮುಕ್ತವಾಗಿಲ್ಲ. ಹಾಗಾಗಿ ಇಂದಿನ ಅವಶ್ಯಕತೆ ಸಮರ್ಪಕವಾಗಿ (ವ್ಯಾಕರಣವನ್ನೂ ಹಾಗೂ ಸಂವಹನವನ್ನೂ) ಇಂಗ್ಲಿಷ್ ಕಲಿಸಬಲ್ಲ ಶಿಕ್ಷಕರು.

ಕನ್ನಡ-ಇಂಗ್ಲಿಷ್ ಅನುವಾದ: ಮೂರುವರೆ ವರ್ಷದ ನನ್ನ ಮಗಳಿಗೆ ಭೂಮಿಯ ಸುತ್ತುವಿಕೆಯ ಬಗ್ಗೆ ವಿವರಿಸುವಾಗ ವಿಡಿಯೋ ತೋರಿಸೋಣವೆಂದು ಯೂಟ್ಯೂಬ್ ಹುಡುಕಿದೆ. ಒಂದೇ ಒಂದು ಕನ್ನಡ ವಿಡಿಯೋ ಇತ್ತು, ಅದೂ ಚೆನ್ನಾಗಿರಲಿಲ್ಲ. ಮಗಳು ಕನ್ನಡದಲ್ಲಿ ತೋರಿಸೆಂದರೂ ಲಭ್ಯವಿಲ್ಲ. ನಮ್ಮಲ್ಲಿ ಇಂತಹ ಜ್ನಾನವನ್ನು ಕನ್ನಡಕ್ಕೆ ’ಡಬ್ಬಿಂಗ್’ ಮಾಡುವುದಕ್ಕೆ ದೊಡ್ಡ ವಿರೋಧವಿದೆ; ಇನ್ನೊಂದೆಡೆ ಕನ್ನಡ ಸಾಯುತ್ತದೆಂಬ ಕೂಗಿದೆ. ಕನ್ನಡದ ಉಳಿವಿಗೆ ಬೇರೆ ಬೇರೆ ಭಾಷೆಗಳಲ್ಲಿರುವು ಉಪಯುಕ್ತ ಮಾಹಿತಿಯನ್ನು ಕನ್ನಡಕ್ಕೆ ತರ್ಜುಮೆ ಮಾಡುವ ಅಗತ್ಯತೆಯಿದೆ.
ಮೊನ್ನೆ ಗೆಳೆಯರೊಬ್ಬರು ಕನ್ನಡ ಪಠ್ಯಗಳಲ್ಲಿರುವ ಅನುವಾದದ ಇನ್ನೊಂದು ಸಮಸ್ಯೆ ಹೇಳಿದರು. ’ರಬ್ಬರ್ ತಯಾರಿಯ ವಿಧಾನ’ವನ್ನು ಹೈಸ್ಕೂಲಿನಲ್ಲಿ ವಲ್ಕನೀಕರಣ ಅಂತ ಕಲಿತಿದ್ದೆ, ಮುಂದೆ ಆ ಶಬ್ದ ಉಪಯೋಗಕ್ಕೇ ಬರಲಿಲ್ಲ ಹಾಗೂ ಅದನ್ನು ನೆನಪಿಡುವುದೂ ಒಂದು ಸಮಸ್ಯೆ ಅಂತ. ಇಂತಹ ಹಲವು ಉದಾಹರಣೆಗಳು ಕನ್ನಡ ಮಾಧ್ಯಮದ ಪಠ್ಯಗಳಲ್ಲಿ ಕಾಣಸಿಕ್ಕುತ್ತದೆ. ಈ ಸಮಸ್ಯೆ ಬರುವುದು ನಾವು ಪ್ರತಿಯೊಂದು ಹೊಸ ಅನ್ವೇಷಣೆಗೂ ಹೊಸ ವಿಷಯಕ್ಕೂ ಒಂದೊಂದು ಕನ್ನಡ ಶಬ್ದ ತಯಾರಿಸ ಹೊರಟಾಗ. ಉದಾಹರಣೆಗೆ ಕಂಪ್ಯೂಟರ್ ಅನ್ನು ಗಣಕಯಂತ್ರ ಅಂತ ಕರೆಯುವುದಕ್ಕಿಂತ ಕಂಪ್ಯೂಟರ್ ಅನ್ನುವುದೇ ಸೂಕ್ತ. ಮೊಬೈಲ್ ಶಬ್ದಕ್ಕೆ ಒಂದು ಕನ್ನಡ ಶಬ್ದ ಹುಡುಕಬೇಕಾದ ಅವಶ್ಯಕತೆಯಿಲ್ಲ. ಹೀಗೆ ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಶಬ್ದಗಳನ್ನು ಎರವಲು ಪಡೆಯುವ ಪರಿಪಾಠವೂ ಇದೆ, ಇದರಲ್ಲಿ ಸಮಸ್ಯೆಯೇನೂ ಕಾಣುವುದಿಲ್ಲ.

ಮಾತೃಭಾಷೆಯ ಕಲಿಕೆ: ನನ್ನ ದೃಷ್ಟಿಯಲ್ಲಿ ಮಾತೃಭಾಷೆ ಅನ್ನುವುದಕ್ಕಿಂತ ಪರಿಸರದ ಭಾಷೆ ಅನ್ನುವುದು ಸೂಕ್ತ. ನಮ್ಮ ಮನೆಯಲ್ಲಿ, ನಮ್ಮ ಪರಿಸರದಲ್ಲಿ ನಿತ್ಯ ಬಳಕೆಯಲ್ಲಿರುವ ಭಾಷೆಯಲ್ಲಿ ಯಾವುದೇ ವಿಷಯವನ್ನು ಗ್ರಹಿಸುವುದು ಹಾಗೂ ಮನನ ಮಾಡುವುದು ಸುಲಭ ಅಷ್ಟೇ ಅಲ್ಲ ಗ್ರಹಿಕೆ ಸಂಪೂರ್ಣವಾಗುತ್ತದೆ. ಹಾಗೆಯೇ ನಮ್ಮ ಮನಸ್ಸಿನಲ್ಲಿ ನಡೆಯುವ ಆಲೋಚನೆಗಳು ವಿಮರ್ಷೆಗಳು ನಮ್ಮ ಪರಿಸರದ ಭಾಷೆಯಲ್ಲೇ ನಡೆಯುತ್ತದೆ. ಹಾಗಾಗಿ ಪ್ರಾಥಮಿಕ ಹಂತದ ಕಲಿಕೆಗೆ ಪರಿಸರದ ಭಾಷೆಯ ಅವಶ್ಯಕತೆಯಿದೆ.
ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಆಗಬೇಕಾದ ಇನ್ನೊಂದು ಬದಲಾವಣೆ - ಇಂಗ್ಲಿಷ್ ಅನ್ನು ಒಂದು ಭಾಷೆಯಾಗಿ ಅಂಗನವಾಡಿ/ಕೆ.ಜಿ ತರಗತಿಯಿಂದ ಕಲಿಸುವ ಅವಶ್ಯಕತೆ. ಇಲ್ಲಿ ಬರೆಯುವುದಕ್ಕಿಂತ ಸಂವಹನಕ್ಕೆ ಪ್ರಾಶಸ್ತ್ಯ ಕೊಡಬೇಕು ಹಾಗೂ ಶಬ್ದಭಂಡಾರ ಹೆಚ್ಚಿಸುವ ಕೆಲಸ ಮಾಡಬೇಕು. ಮನಃಶಾಸ್ತ್ರದ ಸಂಶೋಧನೆಗಳ ಪ್ರಕಾರ ಮೂರರಿಂದ ಆರು ವರುಷದ ಪ್ರಾಯದಲ್ಲಿ ಮಕ್ಕಳು ಅತೀ ಹೆಚ್ಚು ಶಬ್ದಗಳನ್ನು ಕಲಿಯುವ ಸಾಮರ್ಥ್ಯ ಹೊಂದಿರುತ್ತಾರೆ. ಮಕ್ಕಳ ಭಾಷಾಸಾಮರ್ಥ್ಯವನ್ನು ಬಲಪಡಿಸುವ ಕೆಲಸ ಶಿಕ್ಷಣದ ಪ್ರಾರಂಭದೊಂದಿಗೇ ಆರಂಭವಾಗಬೇಕು.
ಇದೆಲ್ಲದರ ಹೊರತಾಗಿ ನಮ್ಮ ಕನ್ನಡ ನಾಡಿನ ಸಂಸ್ಕೃತಿ, ಪರಂಪರೆ ಹಾಗೂ ಚರಿತ್ರೆಯಿಂದ ಕಲಿಯುವುದು ಬಹಳಷ್ಟಿದೆ. ಕನ್ನಡ ಸಂಸೃತಿಯ ಬಗ್ಗೆ, ಚರಿತ್ರೆಯ ಬಗ್ಗೆ ಕನ್ನಡಕ್ಕಿಂತ ಚೆನ್ನಾಗಿ ಯಾವ ಭಾಷೆಯಲ್ಲಿ ಓದಿ ತಿಳಿಯಲು ಸಾಧ್ಯ?
ಹಿರಿಯ ಸಾಹಿತಿಯೊಬ್ಬರು ಹೇಳಿದ ಮಾತೊಂದು ಸಮಂಜಸವೆನಿಸುತ್ತದೆ - ’ಕನ್ನಡದಲ್ಲಿ ಕಲಿಯಿರಿ, ಇಂಗ್ಲಿಷನ್ನೂ ಕಲಿಯಿರಿ’.

Saturday, April 5, 2014

ಇಚ್ಛಾಶಕ್ತಿಯುಳ್ಳ ನಾಯಕರು ಬೇಕಾಗಿದ್ದಾರೆ!



ಚುನಾವಣೆಗೆ ಕೆಲವೇ ದಿನಗಳು ಬಾಕಿ ಇವೆ, ಪ್ರಚಾರದ ಭರಾಟೆ ತಾರಕಕ್ಕೇರಿದೆ. ಆದರೆ ಪ್ರಚಾರ ಭಾಷಣಗಳನ್ನು ಕೇಳಿದರೆ ನಾವು ಹಾಗೂ ನಮ್ಮ ನಾಯಕರು ಕಳೆದುಹೋದ ದಿನಗಳ ಚಿಂತೆಯಿಂದ ಹೊರಗೆ ಬರಲೇ ಇಲ್ಲವೇನೋ ಎಂದೆನಿಸುತ್ತದೆ. ಎಲ್ಲಿಯವರೆಗೆ ಅಂದರೆ ನಮ್ಮ ಚುನಾವಣಾ ಪ್ರಚಾರಗಳಲ್ಲಿ ಇನ್ನೂ ೧೯೪೮ರ ಗಾಂಧಿ ಹತ್ಯೆಯ ಚರ್ಚೆ ನಡೆಯುತ್ತಿದೆ. ಕೋರ್ಟಿನಿಂದ ಕ್ಲೀನ್ ಚಿಟ್ ಪಡೆದರೂ ಆರ್ ಎಸ್ ಎಸ್ ಕಾಂಗ್ರೆಸ್ ನ ಆರೋಪಗಳಿಂದ ಮುಕ್ತಾಗಿಲ್ಲ. ವಿಪರ್ಯಾಸವೆಂದರೆ ಗಾಂಧೀಜಿಯವರ ಯಾವ ತತ್ವಗಳನ್ನೂ ಪಾಲಿಸದ ಈ ಲಜ್ಜೆಗೇಡಿ ನಾಯಕರಿಗೆ ಚುನಾವಣಾ ಸಮಯ ಬಂದಾಗ ಗಾಂಧೀಜಿ ನೆನಪಾಗುತ್ತಾರೆ. ಇತ್ತ ಇವರು ಆರ್ ಎಸ್ ಎಸ್ ಮೇಲೆ ಅವ್ಯಾಹತ ಆರೋಪಗಳನ್ನು ಮಾಡುತ್ತಿದ್ದಾರೆ; ಆದರೆ ಅತ್ತ ಗಾಂಧೀಜಿಯವರ ದಿವ್ಯಾತ್ಮ ನಾಥೂರಾಮ ಗೋಡ್ಸೆಯನ್ನೇ ಕ್ಷಮಿಸಿ ಅದೆಷ್ಟು ವರ್ಷಗಳಾಯಿತೇನೋ!
ಚುನಾವಣಾ ಪ್ರಚಾರಗಳನ್ನು ಗಮನಿಸಿದರೆ ಕೆಲವೇ ಕೆಲವು ನಾಯಕರು ಪ್ರಸಕ್ತ ವಿದ್ಯಮಾನಗಳ ಬಗ್ಗೆ ಮಾತನಾಡುತ್ತಿದ್ದಾರೆ. ಉಳಿದವರೆಲ್ಲಾ ವೈಯಕ್ತಿಕ ದೋಷಾರೋಪಗಳಲ್ಲಿ ಮುಳುಗಿಹೋಗಿದ್ದಾರೆ. ವೈಯಕ್ತಿಕ ಕೆಸರೆರಚಾಟ ಬಿಟ್ಟರೆ ಇವರಿಗೆಲ್ಲಾ ಸುಲಭವಾಗಿ ಸಿಗುವ ಡೈಲ್ಲಾಗ್ ’ಗಾಂಧೀಜಿಯವರ ಕನಸನ್ನು ನನಸು ಮಾಡುತ್ತೇವೆ’! ಇವರ ಮಾತುಗಳನ್ನು ಕೇಳಿದಾಗ ಮೂಡುವ ಸರಳ ಪ್ರಶ್ನೆಗಳು: “ಸ್ವಾಮೀ ನಿಮಗೆ ನಿಮ್ಮದೇ ಕನಸುಗಳೇ ಇಲ್ಲವೇ? ಹೋಗಲಿ ಬಿಡಿ, ಗಾಂಧೀಜಿ ಏನು ಕನಸು ಕಂಡಿದ್ದರು ಎಂದಾದರೂ ಗೊತ್ತಿದೆಯಾ? ಗೊತ್ತಿದ್ದರೆ ಇಂದಿನ ಬದಲಾದ ಸಾಮಾಜಿಕ, ಆರ್ಥಿಕ ಪರಿಸ್ಥಿತಿಯಲ್ಲಿ ಅವು ಎಷ್ಟು ಸಮಂಜಸ ಹಾಗೂ ಅವುಗಳನ್ನು ಹೇಗೆ ಅಳವಡಿಸಬೇಕು ಎಂದು ಯೋಚಿಸಿದ್ದೀರಾ?”
ನಿಜ ಹೇಳಬೇಕೆಂದರೆ ಈ ಪ್ರಶ್ನೆಗಳನ್ನು ಕೇಳಬೇಕಾಗಿಲ್ಲ. ಇವರಿಗೆ ವೈಯಕ್ತಿಕ ಸ್ವಾರ್ಥದ ಕನಸುಗಳ ಹೊರತು ದೇಶದ ಬಗೆಗೆ ಕನಸುಗಳಿಲ್ಲ ಕಾಳಜಿಯಿಲ್ಲ. ಇವರು ಮಾಡುತ್ತಿರುವ ಯೋಜನೆಗಳನ್ನು ಅವಲೋಕಿಸಿದರೆ ಇದು ಅರ್ಥವಾಗುತ್ತದೆ. ಇವರಿಗೆ ಧರ್ಮದ ಕೊಡುಗೆಗಳನ್ನು (freebies) ಕೊಡುವ ಹೊರತು ಬೇರೇನೂ ತೋಚವುದಿಲ್ಲ. ನಮ್ಮ ಕರ್ನಾಟಕದ ಹೊಸ ಸರಕಾರದ ಯೋಜನೆಗಳನ್ನೇ ಗಮನಿಸಿ. ’ಭಾಗ್ಯ’ದ ಯೋಜನೆಗಳು ಬಂತೇ ಹೊರತು ಹೆಚ್ಚಿನದು ಬರಲಿಲ್ಲ.
ಇನ್ನು ನಮ್ಮ ನಾಯಕರಿಗೆ ಏನು ಕೆಲಸ ಮಾಡುವುದು ಎಂದು ತೋಚುತ್ತಿಲ್ಲವಾದರೆ ಒಂದು ಪಟ್ಟಿ ಮಾಡೋಣ. ಒಬ್ಬ ಸಾಮಾನ್ಯ ವ್ಯಕ್ತಿಯ ಒಂದು ದಿನದ (ಬೆಳಗ್ಗಿನಿಂದ ಸಂಜೆಯವರೆಗಿನ) ದಿನಚರಿಯನ್ನೇ ಆಧಾರವಾಗಿ ತೆಗೆದುಕೊಂಡು ಅದರಲ್ಲಿ ಕಂಡುಬರುವ ಕುಂದು ಕೊರತೆಗಳ ಪಟ್ಟಿ ಮಾಡೋಣ.
1. ಶೌಚಕ್ಕೆ ಸ್ಥಳವಿಲ್ಲ! ನಮ್ಮ ದೇಶದಲ್ಲಿ ಶೇಕಡಾ ೫೦ ಕ್ಕೂ ಹೆಚ್ಚಿನ ಜನರಿಗೆ ಬೆಳಗಿನ ಶೌಚಕ್ಕೆ ಶೌಚಾಲಯಗಳಿಲ್ಲ (2011 ಗಣತಿಯ ಪ್ರಕಾರ).
2. ಇನ್ನು ಅದೆಷ್ಟೋ ಕಡೆ ಶೌಚಾಲಯಗಳಿದ್ದರೂ ಶೌಚಕ್ಕೆ ನೀರಿಲ್ಲ. ಕುಡಿಯುವ ನೀರಿಗೇ ತತ್ವಾರ ಇರಬೇಕಾದರೆ ಇನ್ನು ಶೌಚಕ್ಕೆ ಸ್ನಾನಕ್ಕೆ ನೀರೆಲ್ಲಿಂದ ತರೋಣ ಹೇಳಿ. ಸುಮಾರು 32% ಜನರಿಗಷ್ಟೇ ಶುದ್ಧೀಕರಿಸಿದ ನೀರು ಸಿಗುತ್ತಿದೆ (2011 ಗಣತಿ).
3. ಸ್ನಾನಗ್ರಹಗಳ ಕೊರತೆಯಿಂದ ಇಂದಿಗೂ ಕೆರೆದಂಡೆಗಳಲ್ಲಿ, ಹೊಳೆಬದಿಯಲ್ಲಿ ಸ್ನಾನ ಮಾಡುವವರಿದ್ದಾರೆ.
4. ಇನ್ನು ಪೌಷ್ಠಿಕ ಆಹಾರ - ವರ್ಲ್ಡ್ ಬ್ಯಾಂಕ್ ನ ಸಮೀಕ್ಷೆಯ ಪ್ರಕಾರ ನಮ್ಮ ದೇಶದಲ್ಲಿ ಶೇಕಡಾ 75% 5 ವರ್ಷದೊಳಗಿನ ಮಕ್ಕಳು ಹಾಗೂ 51% ಮಹಿಳೆಯರು ಜನರು ಅನೀಮಿಯ ಹೊಂದಿದ್ದಾರೆ (ದೇಹದಲ್ಲಿ ಕಬ್ಬಿಣದ ಅಂಶದ ಕೊರತೆ). ಎಷ್ಟೋ ಜನರಿಗೆ ಇದೊಂದು ತೀವ್ರ ಸಮಸ್ಯೆಯಾಗದೇ ಇರಬಹುದು ಹಾಗಾಗಿ ಗಮನಕ್ಕೆ ಬಾದದೇ ಹೋಗಿರಲೂ ಬಹುದು. ಹಾಗೆಂದು ಒಂದು ರೂಪಾಯಿಯ ಅಕ್ಕಿಯಂಥ ಯೋಜನೆಗಳು ಇದಕ್ಕೆ ಪರಿಹಾರವೇ? ಅಕ್ಕಿಯನ್ನು ಸಂಪಾದಿಸುವ ಮಾರ್ಗ ಒದಗಿಸುವುದು ಅನಿವಾರ್ಯ ಹಾಗೂ ಗಾಂಧೀಜಿಯವರು ಗ್ರಾಮ ಸ್ವರಾಜ್ಯದ ಕನಸಿನಲ್ಲಿ ಇದನ್ನು ಹೇಳುತ್ತಾರೆ. ಚೈನೀಸ್ ಗಾದೆಯೊಂದು ಇದನ್ನೇ ಹೇಳುತ್ತದೆ - Give a man a fish and you feed him for a day; teach a man to fish and you feed him for a lifetime.  
5. ಇನ್ನು ನಿತ್ಯ ಕರ್ಮಗಳನ್ನು ಮುಗಿಸಿ ಮುಂದೆ ಹೋಗೋಣ. ಉದ್ಯೋಗ - ಈ ವಿಷಯದಲ್ಲಿ 2013 ರ ಸಮೀಕ್ಷೆಯ ಪ್ರಕಾರ ನಮ್ಮ ಆರ್ಥಿಕ ಪ್ರಗತಿ 5% ಗೆ ಕುಸಿಯಿತು(ದಶಕದಲ್ಲೇ ಕನಿಷ್ಠ) ಹಾಗೂ ನಿರುದ್ಯೋಗಿಗಳ ಸಂಖ್ಯೆ 2% ಹೆಚ್ಚಾಯಿತು. ಕಾರಣ ಉದ್ಯೋಗಾಕಾಂಕ್ಷಿಗಳ ಸಂಖ್ಯೆಗೆ ಸರಿಯಾಗಿ ಉದ್ಯೋಗಾವಕಾಶಗಳು ತಯಾರಾಗಲಿಲ್ಲ; ಅಂದ ಹಾಗೆ ವಾಸಕ್ಕೆ ಸೂರೇ ಇಲ್ಲದವರನ್ನು ಈ ಗಣತಿಯಲ್ಲಿ ಪರಿಗಣಿಸಿಲ್ಲ. ಇಂದು ನಮ್ಮಲ್ಲಿ ಸುಮಾರು 8% ನಿರದ್ಯೋಗಿಗಳಿದ್ದಾರೆ. ಇದು ಇತರೇ ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದರೆ ಕಡಿಮೆಯೇ ಇದೆ. ಹಾಗೆಂದು ಭಾರತ ಸರ್ಕಾರ ಪ್ರಕಟಿಸಿರುವ ಮಾಹಿತಿಯ ಆಧಾರದಂತೆ ನಮ್ಮ ದೇಶದ ಸರಾಸರಿ ಆದಾಯ (per capita income)  ಇತರ ಅಭಿವೃದ್ಧಿ ಹೊಂದಿದ ಹಾಗೂ ಅಭಿವೃದ್ಧಿ ಹೊಂದುತ್ತಿರುವ (ಡೆವಲಪ್ಡ್ ಹಾಗೂ ಡೆವಲಪಿಂಗ್) ದೇಶಗಳಿಗಿಂತ ಕಡಿಮೆ ಇದೆ. ಬರೇ ಕೆಲಸಕ್ಕೆ ಹೋದರೆ ಸಾಲದು, ಉದ್ಯೋಗದಿಂದ ಬರುವ ಸಂಪಾದನೆ ಒಳ್ಳೆಯ ಜೀವನ ನಡೆಸಲು ಸಾಕಾಗಬೇಕು. ಹಾಗಾಗಿ ಕೇವಲ ನಿರುದ್ಯೋಗಿಗಳ ಸಂಖ್ಯೆಯ ಗಣತಿಯಿಂದ ನಾವು ಸುಧಾರಣೆಯ ಹಾದಿಯಲ್ಲಿದ್ದೇವೆಂದು ಹೇಳುವದಕ್ಕಾಗುವುದಿಲ್ಲ. ಸರಾಸರಿ ಆದಾಯ (average income), ಕನಿಷ್ಠ ಆದಾಯ, ಖರೀದಿ ಸಾಮರ್ಥ್ಯ (purchasing power) ಇವುಗಳನ್ನು ಗಣನೆಗೆ ತೆಗೆದುಕೊಳ್ಳಬೇಕು.
6. ಉದ್ಯೋಗ ಹಾಗೂ ಆದಾಯ ಈ ವಿಷಯದಲ್ಲಿ ಇನ್ನೂ ಆಳವಾಗಿ ಅಧ್ಯಯನ ಮಾಡಿದರೆ, ಕೃಷಿ ಕ್ಷೇತ್ರದಲ್ಲಿ ರೈತರಿಗೆ ಸಿಗುತ್ತಿರುವ ಬೆಲೆ ಹಾಗೂ ಮಾರುಕಟ್ಟೆಯ ಬೆಲೆಗಳಲ್ಲಿರುವ ವ್ಯತ್ಯಾಸ, ದಲ್ಲಾಳಿಗಳಿಂದಾಗುವ ಸಮಸ್ಯೆ, ದಲ್ಲಾಳಿಗಳ ಸಮಸ್ಯೆ, ಮುಕ್ತ ಮಾರುಕಟ್ಟೆಗಳ ಪ್ರವೇಶಕ್ಕಿರುವ ಅಡೆತಡೆಗಳು, ರೈತರಿಗೆ ಸಬ್ಸಿಡಿ ಕೊಟ್ಟು ಹಣ ಮಾಡುತ್ತಿರುವ ಅಧಿಕಾರಿಗಳ ಸಮಸ್ಯೆ ಹೀಗೆ ಇನ್ನೊಂದು ಪಟ್ಟಿ ಹುಟ್ಟಿಕೊಳ್ಳುತ್ತದೆ.
7. ಇನ್ನು ಉದ್ಯಮ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗಿರುವ ಅಡೆತಡೆಗಳು, ಜಟಿಲ/ಸಂಕೀರ್ಣವಾದ ನೀತಿ-ನಿಯಮಗಳು (ಈ ನೀತಿ ನಿಯಮಗಳಿಂದ ಕಾರ್ಮಿಕರಿಗಾಗುವ ಲಾಭ ಅಷ್ಟೇ ಇದೆ, ಇವು ಅಧಿಕಾರಿಗಳ ಹಾಗೂ ರಾಜಕಾರಣಿಗಳ ಕಿಸೆ ತುಂಬಿಸಲಷ್ಟೇ ಸಹಕಾರಿ), ಕಾರ್ಮಿಕರ ಸಮಸ್ಯೆ, ಹೀಗೆ ಒಂದೇ ಎರಡೇ...
8. ರಸ್ತೆ ಹಾಗೂ ಸಾರಿಗೆಯ ಸಮಸ್ಯೆ - ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ ಹಾಗೂ ಸಾರ್ವಜನಿಕ ಸಾರಿಗೆಯ ಕೊರತೆ, ಮಹಾನಗರಗಳಲ್ಲಿ ರಸ್ತೆಯ ಮೇಲೆ ಜಾಗದ ಕೊರತೆ. ಯಥೇಚ್ಚವಾಗಿರುವಂತಹದ್ದು ರಸ್ತೆಗಳಲ್ಲಿ ಗುಂಡಿಗಳು ಮಾತ್ರ.
9. ವೈದ್ಯಕೀಯ ಸೌಕರ್ಯ - ವೈದ್ಯಕೀಯ ಮೂಲಸೌಕರ್ಯಗಳಿಲ್ಲದ ಹಳ್ಳಿಗಳು ಒಂದೆಡೆಯಾದರೆ ಲಂಗು ಲಗಾಮಿಲ್ಲದೆ ಸುಲಿಗೆ ಮಾಡುತ್ತಿರುವ ಖಾಸಗಿ ಆಸ್ಪತ್ರೆಗಳು ಇನ್ನೊಂದೆಡೆ. ನಮ್ಮ ದೇಶದಲ್ಲಿ ಸ್ಲಮ್ ಗಳಲ್ಲಿ ಹುಟ್ಟುವ ಹತ್ತರಲ್ಲಿ ಒಂದು ಮಗು (1/10th of slum children) ತನ್ನ 5ನೆಯ ಹುಟ್ಟುಹಬ್ಬ ಆಚರಿಸುವತನಕ ಬದುಕುವುದಿಲ್ಲ!
10. ಶಿಕ್ಷಣ: Indian Labour Journal 2013ರ ಆಗೋಷ್ಟ್ ಆವೃತ್ತಿಯ ಪ್ರಕಾರ ನಮ್ಮ ದೇಶದಲ್ಲಿ 47% ಪದವೀಧರರು ಉದ್ಯೋಗಕ್ಕೆ ಅರ್ಹರಲ್ಲ (Unemployable)! ಅದೆಷ್ಟೋ ಹಳ್ಳಿಗಳಲ್ಲಿ ಶಾಲೆಗಳಿಲ್ಲ, ಶಾಲೆಗಳಿದ್ದರೆ ಮೂಲಭೂತ ಸೌಕರ್ಯಗಳಿಲ್ಲ, ಕೊಠಡಿಗಳಿಲ್ಲ, ಅದೂ ಅಕಸ್ಮಾತಾಗಿ ಇದ್ದರೆ ಶಿಕ್ಷಕರಿಲ್ಲ ಇನ್ನು ಎಷ್ಟೋ ಕಡೆ ಶಿಕ್ಷಕರಿಗೆ ವಿಷಯಜ್ನಾನವಿರುವುದಿಲ್ಲ. ಹಿಂದಿನ ಕರ್ನಾಟಕ ಸರಕಾರ ಶಾಲೆಗಳನ್ನು ಮುಚ್ಚಲು ಹೊರಟದ್ದುನ್ನೂ ಮರೆಯುವಂತಿಲ್ಲ. ಇನ್ನೊಂದೆಡೆ ಯುನೆಸ್ಕೋ ಹೇಳುತ್ತೆ ಭಾರತದ ಪಠ್ಯಕ್ರಮ ಅತಿ ಮಹತ್ವಾಕಾಂಕ್ಷೆಯಿಂದ ಕೂಡಿದೆ (Indian curriculum too ambitious)!

ಹೀಗೆ ಒಬ್ಬ ವ್ಯಕ್ತಿಯ ಒಂದು ದಿನದ ದಿನಚರಿಯನ್ನು ಅವಲೋಕಿಸುತ್ತಾ ಹೋದರೆ ಒಂದರ ಹಿಂದೊಂದು ಸಮಸ್ಯೆಗಳು ಬಿಚ್ಚಿಕ್ಕೊಳ್ಳುತ್ತಾ ಹೋಗುತ್ತದೆ. ಒಂದಕ್ಕೊಂದು ಕೊಂಡಿಯಾಗಿ ಬೆಳೆದು ವಿಷವರ್ತುಲವಾಗುತ್ತದೆ.  

ಇವೆಲ್ಲದರ ನಡುವೆ ಸರಕಾರಿ ಸ್ಕೀಮುಗಳಿಗಿಂತ ಹೆಚ್ಚಾಗಿ ಹೊರಬರುತ್ತಿರುವ ಹಗರಣಗಳು ಹಾಗೂ ನಡುನಡುವೆ ರಾಜಕಾರಣದಲ್ಲಿ ಮೂಗು ತೂರಿಸುವ ಸ್ವಯಂಘೋಷಿತ ಬುದ್ಧಿಜೀವಿಗಳ ಶಿಫಾರಸುಗಳು (ನಾಟಕ / ಯಕ್ಷಗಾನದಲ್ಲಿ ವಿದೂಷಕರು ಬಂದಂತೆ) ಕಳವಳ ಹುಟ್ಟಿಸುತ್ತದೆ.

ದುರಂತವೆಂದರೆ ಇಂತಹ ಜ್ವಲಂತ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸುವ ರಾಜಕೀಯ ನಾಯಕರು ಬಹಳ ಕಡಿಮೆಯಾಗಿದ್ದಾರೆ. ಜಾತಿ, ಧರ್ಮ ಹಾಗೂ ಧರ್ಮದೂಟದ (freebies) ಬಗ್ಗೆ ಮಾತನಾಡುವವರೇ ಹೆಚ್ಚಾಗಿದ್ದಾರೆ. ಎಷ್ಟು ಸಮಯ ತೆರಿಗೆಯ ಹಣದಲ್ಲಿ ಧರ್ಮದೂಟ, ಟಿವಿ ಅಥವಾ ಇನ್ನೇನೋ freebies ಕೊಟ್ಟು ಆಲಸಿಗಳ ಸಂಖ್ಯೆ ಹೆಚ್ಚಿಸುತ್ತೀರಿ? ಎಷ್ಟು ಸಮಯ ತೆರಿಗೆಯ ಹಣದಲ್ಲಿ ಮದುವೆ ಮಾಡಿಸುತ್ತೀರಿ? ಎಷ್ಟು ಸಮಯ ಜಾತಿಯ ಹೆಸರಿನಲ್ಲಿ ಮನಸ್ಸುಗಳನ್ನು ಒಡೆಯುತೀರಿ?

ನಮ್ಮ ದೇಶಕ್ಕಿಂತ ನೈಸರ್ಗಿಕ ಸಂಪತ್ತಿನಲ್ಲಿ, ಬೌದ್ಧಿಕ ಸಂಪತ್ತಿನಲ್ಲಿ ಕಡಿಮೆಯಿರುವ ಅದೆಷ್ಟು ದೇಶಗಳು ನಮಗಿಂತ ಉತ್ತಮ ಮೂಲಭೂತ ಸೌಲಭ್ಯಗಳನ್ನು, ಸಾಮಾಜಿಕ ಭದ್ರತೆಯನ್ನು ಒದಗಿಸುತ್ತವೆ. ನಮ್ಮ ದೇಶಕ್ಕೆ ಬಹು ಹತ್ತಿರದ ಹೋಲಿಕೆಯಿರುವ ಹಾಗೂ ನಮ್ಮಂತೆ ಕೃಷಿ ಆಧಾರಿತವಾಗಿರುವ ಪಕ್ಕದ ಥೈಲ್ಯಾಂಡನ್ನೇ ಉದಾಹರಣೆಯನ್ನಾಗಿ ತೆಗಿದುಕೊಳ್ಳಿ. ಕೃಷಿಯಲ್ಲಿ ಕೈಗಾರಿಕೆಯ ಬಳಕೆ, ಶಿಕ್ಷಣಕ್ಕೆ ಉತ್ತೇಜನ, ಗ್ರಾಮೀಣ ರಸ್ತೆಗಳ ಅಭಿವೃದ್ಧಿ, ಗ್ರಾಮೀಣ ಪ್ರದೇಶಗಳಲ್ಲಿ ಮೂಲಭೂತ ಸೌಲಭ್ಯಗಳ ಒದಗಿಸುವಿಕೆ ಒಂದೆಡೆ ಹಾಗೆಯೇ ಸಣ್ಣ ಹಾಗೂ ಭಾರೀ ಉದ್ಯಮಗಳಿಗೆ ಉತ್ತೇಜನ, ಸ್ವ-ಉದ್ಯೋಗಕ್ಕೆ ಉತ್ತೇಜನ, ವಿದೇಶಿ ಬಂಡವಾಳ ಹೂಡಿಕೆಗೆ ಬೆಂಬಲ ಗಳಿಂದ ಇಂದು ಥೈಲ್ಯಾಂಡ್ ಜಗತ್ತಿನಲ್ಲೇ ಅತಿ ಕಡಿಮೆ ನಿರುದ್ಯೋಗಿಗಳಿರುವ ದೇಶಗಳಲ್ಲೊಂದು (0.56% unemployment rate). ಹಾಗೆಯೇ ಥೈಲ್ಯಾಂಡ್ ನ ಪರ್ ಕ್ಯಾಪಿಟ ಇನ್ ಕಮ್ ಭಾರತದ ಮೂರರಷ್ಟು ಹೆಚ್ಚಿದೆ.

http://www.ritholtz.com/ ವೆಬ್ ಸೈಟ್ ನ ಮಾಹಿತಿಯ ಪ್ರಕಾರ (ಬುದ್ಧಿಜೀವಿಗಳ ಗಮನಕ್ಕೆ - ಇದು ಯಾವುದೇ ಹಿಂದೂ ಸಂಘಟನೆಯ ವೆಬ್ ಸೈಟ್ ಅಲ್ಲ, ವಿಶ್ವದ 15 ಅತಿ ಪ್ರಮುಖ ಅರ್ಥಶಾಸ್ತ್ರದ ಪತ್ರಕರ್ತ ನೆಂದು ಗುರಿತಿಸಿಕೊಂಡಿರುವ ಬಾರಿ ರಿಥೋಲ್ಜ಼್ (Barry Ritholtz) ಎಂಬಾತನ ವೆಬ್ ಸೈಟ್) 1ನೆಯ ಶತಮಾನದಿಂದ 10ನೆಯ ಶತಮಾನದವರೆಗೆ ವಿಶ್ವ ಜಿ ಡಿ ಪಿ (GDP) ಗೆ ಭಾರತದ ಕೊಡುಗೆ ಸುಮಾರು 50% ಇತ್ತು. 18ನೆಯ ಶತಮಾನದ ವೇಳೆಗೆ ಇದು ಸುಮಾರು 20% ಕ್ಕೆ ಕುಸಿಯಿತು. 1ನೆಯ ಶತಮಾನದಿಂದಲೂ ಚೀನಾ ಭಾರತಕ್ಕೆ ಹತ್ತಿರದ ಸ್ಪರ್ಧಿ.  ಕಳೆದೆರಡು ಶತಮಾನದಲ್ಲಿ (ಕೈಗಾರಿಕಾ ಕ್ರಾಂತಿಯಲ್ಲಿ ಭಾಗಿಯಾಗದ) ನಮ್ಮ ಹಾಗೂ ಚೀನಾದ ಪಾಲು ಕುಸಿಯುತ್ತಾ ಹೋಯಿತು. 1990ರಲ್ಲಿ (ಭಾರತ ಹಾಗೂ ಚೀನಾ ಉದಾರೀಕರಣದ ದಾರಿ ಹಿಡಿದ ಸಮಯದಲ್ಲಿ) ಭಾರತ ಹಾಗೂ ಚೀನಾದ ಪಾಲು ಸುಮಾರು 4%. ಇಂದು ಚೀನಾ 18% ಪಾಲು ಹೊಂದಿದ್ದರೆ ನಾವು 7% ದಲ್ಲಿದ್ದೇವೆ.
ಕಳೆದ ಹತ್ತು ವರ್ಷಗಳಲ್ಲಿ ನಮ್ಮ ಪ್ರಗತಿ ವಿಪರೀತವಾಗಿ ಕುಂಟುತ್ತಿದೆ. ಅವ್ಯಾಹತವಾಗಿ ನಡೆಯುತ್ತಿರುವ ಹಗರಣಗಳು, ಪ್ರತಿಭಟನೆಗಳಿಂದಲೇ ದೇಶವನ್ನು ಉದ್ಧಾರ ಮಾಡಲು ಹೊರಟಿರುವವರು, ಇಚ್ಛಾಶಕ್ತಿ ಇಲ್ಲದ ಸರಕಾರ, ವಿದೇಶ ಪ್ರವಾಸ ಮಾಡಿ ’ಹಸು ಮೇಯುವುದನ್ನು ನೋಡಿದ’ ವರದಿ ಮಾಡುವ ಬೌಧಿಕ ಮಟ್ಟದ ಜನಪ್ರತಿನಿಧಿಗಳು, ಬೇಜವಾಬ್ದಾರಿ ಹೇಳಿಕೆ ಕೊಡುವ ಮಂತ್ರಿಗಳು ಹಾಗೂ ಮೌನವ್ರತಧಾರಿ ಪ್ರಧಾನಮಂತ್ರಿಗಳಿಂದ ಮುಕ್ತಿ ಬೇಕಿದೆ.
ನಮಗೆ ಬೇಕಿರುವುದು ದೇಶದ ಪ್ರಗತಿಯ ಕುರಿತು ಕನಸುಗಳನ್ನು ಹೊಂದಿದ ನಾಯಕರು; ಹಾಗೂ ಆ ಕನಸುಗಳನ್ನು ಸಾಕಾರಗೊಳಿಸಲು ಯೋಜನೆಗಳನ್ನು ರೂಪಿಸುವ ಚಾಕಚಕ್ಯತೆಯುಳ್ಳವರು ಮತ್ತು ಯೋಜನೆಗಳನ್ನು ಕಾರ್ಯಗತಗೊಳಿಸಲು ಇಚ್ಛಾಶಕ್ತಿಯುಳ್ಳ ನಾಯಕರು. ಹಾಗೂ ದೇಶದ ಆರ್ಥಿಕತೆಯನ್ನು ಸದೃಢಗೊಳಿಸಬಲ್ಲ ಹಾಗೂ ದೇಶವನ್ನು ಸುರಕ್ಷಿತವಾಗಿಸಬಲ್ಲ ಯೋಜನೆಗಳು ಹಾಗೂ ಆಡಳಿತ.

ಸಮೀರ ದಾಮ್ಲೆ
ಬ್ಯಾಂಕಾಕ್



References:

1.    Census India 2011
2.    Indian Labour Journal
3.    Global Employment Trends 2014 – International Labour Organization