ನಿನ್ನೆ ಟ್ವೀಟರ್ ನೋಡುತ್ತಿದ್ದೆ, ಒಂದು ಟ್ವೀಟ್ ಬಹಳ
ಇಷ್ಟವಾಯಿತು. ಪ್ರತೇಶ್ ಎಂಬವರ ಆ ಟ್ವೀಟ್ ಹೀಗಿತ್ತು - "The great thing about democracy is that it gives every voter a chance to do
something stupid" ಅಂದರೆ ’ಪ್ರಜಾಪ್ರಭುತ್ವದ ವಿಶಿಷ್ಟತೆ ಏನೆಂದರೆ
ಅದು ಪ್ರತಿಯೊಬ್ಬ ಮತದಾರನಿಗೂ ಒಂದು ಮೂರ್ಖತನದ ಕೆಲಸ ಮಾಡಲು ಅವಕಾಶ ಕೊಡುತ್ತದೆ’. ಎಷ್ಟೊಂದು ಸತ್ಯದ ಮಾತು! ನಾವು ನಮ್ಮ ರಾಜಕಾರಣಿಗಳತ್ತ
ಬೊಟ್ಟು ಮಾಡಿ ಹೇಳುತ್ತಿರುತ್ತೇವೆ - ’ನಮ್ಮನ್ನು ಮೂರ್ಖರನ್ನಾಗಿಸಿದರು, ನಮಗೆ ಮೋಸಮಾಡಿದರು’ ಎಂಬ ಹಾಗೆ. ಆದರೆ ನಿಜವಾಗಿ ನೋಡಿದರೆ ನಾವು ಮತ್ತೆ
ಮತ್ತೆ ಮೂರ್ಖತನದ ಕೆಲಸ ಮಾಡುತ್ತಾ ಬರುತ್ತಿದ್ದೇವೆ. ನಾವು ತಿಳಿದೂ ತಿಳಿದೂ
ಮೋಸಹೋಗುತ್ತಿದ್ದೇವೆ. ಹಾಗಾಗಿಯೇ ನಮ್ಮ ಹಳ್ಳಿಗಳು ಉದ್ಧಾರವಾಗುತ್ತಿಲ್ಲ, ನಗರಗಳೂ ಉದ್ಧಾರವಾಗುತ್ತಿಲ್ಲ!
ಚೆನ್ನೈಯಲ್ಲಿ ಕಳೆದೆರಡು ದಿವಸಗಳಿಂದ ಆಗುತ್ತಿರುವ ಜಲಪ್ರಳಯವನ್ನೇ ನೋಡಿ. ಚೆನ್ನೈ
ಮುಖ್ಯಮಂತ್ರಿ ಜಯಲಲಿತಾ ಹೇಳುತ್ತಾರೆ - "ಭಾರೀ ಮಳೆಯಾದಾಗ ನಷ್ಟಗಳಾಗುವುದು ಸ್ವಾಭಾವಿಕ, ತ್ವರಿತ ಕಾರ್ಯಾಚರಣೆ ಮಾತ್ರವೇ ಸರಕಾರದ ಕಾರ್ಯಕ್ಷಮತೆಯ ಮಾನದಂಡ"
ಎಂದು. ಅಂದರೆ ಇವರು ಈ ಪರಿಸ್ಥಿತಿಗೆ ಯಾವುದೇ ರೀತಿಯ ನೈತಿಕ ಹೊಣೆಗಾರಿಕೆ ಹೊರಲು ತಯಾರಿಲ್ಲ.
ಹೌದು ಚೆನ್ನೈಯಲ್ಲಿ ವಿಪರೀತ ಮಳೆಯಾಗಿದೆ, ಮಳೆ ಬೀಳುತ್ತಲೇ ಇದೆ.
ಹವಾಮಾನ ವರದಿಯ ಪ್ರಕಾರ ಇನ್ನೂ ಎಪ್ಪತೆರಡು ಗಂಟೆ ಮಳೆ ಬೀಳುತ್ತಲೇ ಇರುತ್ತದೆ. ಆದರೆ ಬಿದ್ದ
ನೀರು ಎಲ್ಲೂ ಹರಿದು ಹೋಗುವುದಿಲ್ಲ. ನೀರಿನ ಮಟ್ಟ ಏರುತ್ತಲೇ ಹೋಗುತ್ತದೆ. ಯಾಕೆ ಹೀಗೆ?
ನಾನು ಚೆನ್ನೈಗೆ ಬಹಳಷ್ಟು ಸಲ ಹೋಗಿದ್ದೇನೆ. ಸುಮಾರು ಐದು ವರ್ಷಗಳ ಕಾಲ ತಿಂಗಳಲ್ಲಿ
ನಾಲ್ಕೈದು ದಿನ ಚೆನ್ನೈಯಲ್ಲೇ ಕಳೆಯುತ್ತಿದ್ದೆ. ಒಂದು ಸಣ್ಣ ಮಳೆ ಬಂದರೆ ಸಾಕು ರಸ್ತೆಯ
ತುಂಬೆಲ್ಲಾ ನೀರು, ಟ್ರಾಫಿಕ್ ಜಾಮ್. ದೊಡ್ಡ ಮಳೆ
ಬಂದರೆ ಒಂದಷ್ಟು ಪ್ರದೇಶಗಳು ಜಲಾವ್ರತ. ಚೆನ್ನೈಯಲ್ಲಿ ಹಲವು ವರ್ಷಗಳಿಂದ ವಾಸವಿರುವ ಮಿತ್ರನೊಬ್ಬ
ಹೇಳುತ್ತಿರುತ್ತಾನೆ - "ಒಂದು ಅರ್ಧ ಗಂಟೆ ಮಳೆ ಬಂದರೆ ಅಪಾರ್ಟ್‌ಮೆಂಟ್ ಎದುರು
ಸೊಂಟದವರೆಗೆ ನೀರು ತುಂಬುತ್ತದೆ. ಕೆರೆಯಲ್ಲಿ ನಡೆದಂತೆ ಆ ಕೊಳಚೆ ನೀರಿನಲ್ಲಿ ನಡೆದುಕೊಂಡೇ ಮನೆ
ಸೇರಬೇಕು. ಮನೆ ಸೇರಿದರೆ ಮನೆಯೊಳಗೆ ಕರೆಂಟು, ನೀರು ಎರಡೂ
ಇರುವುದಿಲ್ಲ. ಮನೆಯೆಲ್ಲಾ ಜಲಾವ್ರತ ಕುಡಿಯುವುದಕ್ಕೆ ಒಂದು ಹನಿ ನೀರಿಲ್ಲ. ಸಂಸಾರ ಸಮೇತ ಇದ್ದರೆ
ಮನೆಯವರಾದರೂ ಸ್ವಲ್ಪ ನೀರು ಎತ್ತಿಡುತ್ತಾರೆ, ಬ್ಯಾಚುಲರ್ ಹುಡುಗರಿಗೆ
ನೀರು ಕರೆಂಟ್ ಇಲ್ಲದ ರಾತ್ರಿಯೇ ಖಾತ್ರಿ" ಎಂಬಹಾಗೆ. ಇದು ಅರ್ಧ - ಒಂದು ಗಂಟೆಯ ಮಳೆಯ
ಕಥೆ. ಇನ್ನು ಇಪ್ಪತ್ತನಾಲ್ಕು ಗಂಟೆ ಮಳೆ ಬಂದರೆ ಏನಾದೀತು ಎಂಬ ಪ್ರಶ್ನೆಗೆ ಈಗ ಉತ್ತರ
ಸಿಕ್ಕಿದೆ.
ಕೊಂಚವೂ ನಿಯಂತ್ರಣ ಇಲ್ಲದೆ ಹಿಗ್ಗಾಮುಗ್ಗಾ ಕಾಂಕ್ರೀಟೀಕರಣ ಮಾಡಿರುವುದರ ಪ್ರಭಾವ ಇದು.
ಕಾಂಕ್ರೀಟೀಕರಣ ಹೇಗೆ ನಡೆದಿದೆ ಎಂದರೆ ನೀರಿಗೆ ಇಂಗುವುದಕ್ಕೆ ಜಾಗವೇ ಇಲ್ಲ. ಇನ್ನು ಒಳಚರಂಡಿಯ
ವ್ಯವಸ್ಥೆಗಳಂತೂ ಇಲ್ಲವೇ ಇಲ್ಲ! ಇದು ಚೆನ್ನೈ ಮಹಾನಗರವೊಂದರ ಕಥೆಯಲ್ಲ! ನಮ್ಮ ಬೆಂಗಳೂರಿನಲ್ಲೂ
ಇದೇ ಕಥೆ. ಮುಂಬೈ, ದೆಹಲಿ ಮುಂತಾದ ಮಹಾನಗರಗಳಲ್ಲೂ ಇದೇ
ಕಥೆ. ನಮ್ಮ ಹಳ್ಳಿಗಳಲ್ಲಿ ಹತ್ತು ಸೆಂಟಿಮೀಟರ್ ಮಳೆಯಾದರೆ ’ಹಾ’ ಎನಿಸುತ್ತದೆ. ಅದೇ ಒಂದು
ಮಹಾನಗರಲ್ಲಿ ಹತ್ತು ಸೆಂಟಿಮೀಟರ್ ಮಳೆ ಬಂದರೆ ’ಹಾಯ್ ಹಾಯ್’ ಎಂದು ಭಯದ ವಾತಾವರಣ
ಸೃಷ್ಟಿಯಾಗುತ್ತದೆ.
ನಮ್ಮ ದೇಶದಲ್ಲಿ ನಗರಾಭಿವೃದ್ಧಿ ಸಚಿವರ ಖಾತೆ ಸಿಗುವುದು ಅದೃಷ್ಟದ ವಿಷಯವಾಗಿದೆ. ಒಂದಷ್ಟು
ಕೆರೆಗಳನ್ನು ಮುಚ್ಚಿ, ಒಂದಷ್ಟು ಸರಕಾರೀ ಜಮೀನನ್ನು
ಒತ್ತುವರಿ ಮಾಡಿ, ಒಂದಷ್ಟು ಹೊಲಗಳನ್ನು ಒತ್ತುವರಿ ಮಾಡಿ ಲೇಔಟ್‌ಗಳನ್ನಾಗಿ
ಪರಿವರ್ತಿಸುವುದು. ಹೀಗೆ ಲೇಔಟ್ ಮಾಡುವ ಮೊದಲೇ ಸುತ್ತಮುತ್ತಲಿನ ಒಂದಷ್ಟು ಎಕರೆ ತಮ್ಮ ಹೆಸರಿಗೆ
ಮಾಡಿಕೊಳ್ಳುವುದು. ನೋಟಿಫೈ, ಡೀನೋಟಿಫೈ ಇತ್ಯಾದಿ ಆಟಗಳಾಡಿ ಕೋಟಿ ಕೋಟಿ
ಎಣಿಸುವುದು. ಒಬ್ಬ ನಗರಾಭಿವೃದ್ಧಿ ಸಚಿವನಿಗೂ ನಗರೀಕರಣದ ಕಲ್ಪನೆಯೇ ಇರುವಂತಿಲ್ಲ.
ನಗರಾಭಿವೃದ್ಧಿ ಅಂದರೆ ಲೇಔಟ್ ಮಾಡುವದು, ಅಪಾರ್ಟ್‌ಮೆಂಟ್ ಕಟ್ಟುವುದು
ಎಂದಷ್ಟೇ ತಲೆಯಲ್ಲಿದ್ದಂತಿದೆ. ಇಂತಹ ಸಚಿವರಿದ್ದರೆ ಭ್ರಷ್ಟ ಅಧಿಕಾರಿಗಳಿಗೆ ಹಬ್ಬ. ನಿಯತ್ತಿನ
ಅಧಿಕಾರಿಗಳು ಮಾತನಾಡಿದರೆ ವರ್ಗಾವಣೆ ಆಗುತ್ತದೆ. ಅದಾಗಬಾರದೆಂದರೆ ಸುಮ್ಮನಿರಬೇಕು.
ಇನ್ನು ಮಹಾನಗರಗಳಲ್ಲಿ ವಾಸವಿರುವವರಲ್ಲಿ ಸುಮಾರು ೫೦% ಜನರು ವಲಸಿಗರು. ಅದ್ಯಾವುದೋ
ದೂರದೂರಿನಿಂದ ಇನ್ನೊಂದು ರಾಜ್ಯದಿಂದ ಹೊಟ್ಟೆಪಾಡಿಗಾಗಿ ಬಂದು ನೆಲೆಸಿದವರು. ಅವರಲ್ಲಿ
ಹೆಚ್ಚಿನವರಿಗೆ ಆ ಊರಿನ ಬಗ್ಗೆ, ಅಲ್ಲಿಯ ಭಾಷೆಯ ಬಗ್ಗೆ, ಅಲ್ಲಿನ ಸಂಸ್ಕೃತಿಯ ಬಗ್ಗೆ, ಸ್ಥಳೀಯ ರಾಜಕೀಯದ ಬಗ್ಗೆ ಆಸಕ್ತಿಯಾಗಲೀ ಗೌರವವಾಗಲೀ
ಇರುವುದಿಲ್ಲ. ಅವರು ಏನಿದ್ದರೂ ಫೇಸ್‌ಬುಕ್ಕಿನಲ್ಲಿ, ಟ್ವೀಟರ್‌ನಲ್ಲಿ
ಅವರಿಗೆ ನೆಲೆಕೊಟ್ಟ ಊರನ್ನು ಹಳಿಯುವು ಬಿಟ್ಟು ಬೇರೇನೂ ಮಾಡುವುದಿಲ್ಲ. ಕನಿಷ್ಟಪಕ್ಷ ಮತಚಲಾವಣೆ
ಕೂಡಾ ಮಾಡುವುದಿಲ್ಲ. ಇನ್ನು ನಗರಗಳ ಅಭಿವೃದ್ಧಿ ಸರಿಯಾಗಿ ಆದರೇನು, ಆಗದಿದ್ದರೇನು?
ಹೀಗಾಗಿಯೇ ತಮಗೆ ಸಿಕ್ಕ ನಾಲ್ಕೈದು ವರ್ಷದ ಅವಧಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು
ಹಣ ಮಾಡಿದರಾಯಿತು ಎಂಬ ಹಾಗೆ ರಾಜಕಾರಣಿಗಳು, ಅಧಿಕಾರಿಗಳು
ನಡೆದುಕೊಳ್ಳುತ್ತಾರೆ. ಚೆನ್ನೈಯಲ್ಲಿ ಆದಂತಹ ದುರದೃಷ್ಟಕರ ಘಟನೆ ನಡೆದಾಗ ತಮ್ಮದೇನೂ ತಪ್ಪಿಲ್ಲ
ಎಂಬ ಹೇಳಿಕೆ ಕೊಡುತ್ತಾರೆ. ಆಗ ನಾವು ’ನಮ್ಮನ್ನು ಮೂರ್ಖರನ್ನಾಗಿಸಿದರು’ ಎಂಬ ಹೇಳಿಕೆ
ಕೊಡುತ್ತೇವೆ. ಇಂದು ಚೆನ್ನೈ, ನಾಳೆ ಇತರೇ ಮಹಾನಗರಗಳೂ ಹೀಗೇ
ಮುಳುಗುವುದಿದೆ!
No comments:
Post a Comment