Wednesday, September 16, 2015

ಕೋಡಂಗಿ ಕುಣಿತಕ್ಕೆ ಬದಲಾವಣೆ ತಂದರೆಂತು?



ಮಿತ್ರ ರಂಗನಾಥ ರಾಯರು ಯೂಟ್ಯೂಬ್‍ನಲ್ಲಿ ವೃತ್ತಿಮೇಳವೊಂದರ ಶ್ರೀ ದೇವಿ ಮಹಾತ್ಮೆ ಯಕ್ಷಗಾನದ ವೀಡಿಯೋ ಹಂಚಿಕೊಂಡರು. ಅದರಲ್ಲಿ ಪ್ರಸ್ತುತಪಡಿಸಿದ ಕೋಡಂಗಿ ಕುಣಿತವನ್ನು ನೋಡಿದಾಗ ಮನಸ್ಸಿಗೆ ಬಂದ ಒಂದಷ್ಟು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದೇನೆ.

ಕೋಡಂಗಿ ಕುಣಿತ ಪ್ರಸ್ತುತಪಡಿಸಿದ ಕಲಾವಿದರು ತಾಳ ಲಯ ಬಿಟ್ಟು ಕೋಡಗಗಳಂತೆಯೇ ಕುಣಿದಿದ್ದಾರೆ. ಸೂಕ್ಷ್ಮವಾಗಿ ಗಮನಿಸಿದಾಗ ಇವರು ತಾಳ ಲಯದ ಜ್ಞಾನವಿದ್ದ ನಾಟ್ಯ ಕಲಿತಿದ್ದ ಕಲಾವಿದರು ಎಂಬುದು ಸ್ಪಷ್ಟ. ತಪ್ಪಾಗಿ ಕುಣಿಯುವುದಕ್ಕೆ ಸ್ವಲ್ಪ ಕಷ್ಟಪಟ್ಟಂತೆಯೂ ಕಂಡುಬಂತು. ಉದಾಹರಣೆಗೆ ಘಾತಪೆಟ್ಟಿಗೆ ಸಹಜವಾಗಿಯೇ ಅವರ ಕಾಲು ಸ್ಪಂದಿಸುತ್ತಿತ್ತು. ನನ್ನಲ್ಲಿ ಮೂಡಿದ ಪ್ರಶ್ನೆ - ಯಾಕೆ ಹೀಗೆ ಕೆಟ್ಟದ್ದಾಗಿ ಕುಣಿಯಬೇಕು?
ಆ ನಾಟ್ಯವನ್ನು ’ಕೋಡಂಗಿ ಕುಣಿತ’ ಎಂದು ಕರೆಯುವ ಕಾರಣದಿಂದಲೇ? ಹಾಗಿದ್ದರೆ ಆ ಹೆಸರು ಯಾಕೆ ಬಂತೆಂದು ವಿಮರ್ಶೆ ಮಾಡಬೇಕಾಗುತ್ತದೆ. ನನ್ನ ದೃಷ್ಟಿಯಲ್ಲಿ ಹಿಂದಿನ  ಕಾಲದಲ್ಲಿ ಯಕ್ಷಗಾನ ಕೇಂದ್ರಗಳು ಇಲ್ಲದ ಸಂದರ್ಭಗಳಲ್ಲಿ ಮೇಳಕ್ಕೆ ಸೇರಿಕೊಂಡು ಅಲ್ಲೇ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಹಿರಿಯರಿಂದ ನಾಟ್ಯಾಭ್ಯಾಸ ಮಾಡುವ ಪರಿಪಾಠ ಇದ್ದಿರಬಹುದು. ಹೀಗೆ ಕಲಿಯುವ ವಿದ್ಯಾರ್ಥಿಗಳಿಂದ, ಅಭ್ಯಾಸದ ಸಲುವಾಗಿ ಪ್ರಾರಂಭದ ಪೂರ್ವರಂಗದ ಹಾಡುಗಳಿಗೆ ನಾಟ್ಯ ಮಾಡಿಸುತ್ತಿದ್ದಿರಬಹುದು. ಇನ್ನೂ ನಾಟ್ಯಶಿಕ್ಷಣ ಪೂರ್ತಿಯಾಗದ, ಸರಿಯಾಗಿ ನಾಟ್ಯ ಬಾರದ ಹುಡುಗರು ಹಾಕುವ ಹೆಜ್ಜೆಗಳು ಎಷ್ಟೋ ಬಾರಿ ತಪ್ಪಾಗಿರುತ್ತಿದ್ದ ಕಾರಣ ಪೂರ್ವರಂಗದ ಪೂರ್ವಭಾಗಕ್ಕೆ ಕೋಡಂಗಿ ಕುಣಿತ ಎಂಬ ಹೆಸರು ಬಂದಿರಬೇಕು. ಅಲ್ಲಿ ಹಾಡುವ ಪದ್ಯಗಳೆಲ್ಲವೂ ದೇವರ ಸ್ತುತಿ ಹಾಗೂ ಆರಾಧನಾ ಕೃತಿಗಳಾಗಿರುವಾಗ ’ಕೋಡಂಗಿ ಕುಣಿತ’ ಎಂಬ ಹೆಸರು ಬರಲು ಬೇರೆ ಕಾರಣ ತೋಚುವುದಿಲ್ಲ. ಹಿಂದೆ ನಾಟ್ಯ ಬಾರದವರು ಕೋಡಗನ ಹಾಗೆ ಕುಣಿಯುತ್ತಿದ್ದರು ಎಂಬ ಕಾರಣಕ್ಕೆ ನಾಟ್ಯ ಬರುವವರೂ ತಪ್ಪು ತಪ್ಪಾಗಿ ಕುಣಿಯುವುದು ಸರಿಯೆಂದು ನನಗನ್ನಿಸುವುದಿಲ್ಲ.
ಕೋಡಂಗಿ ಕುಣಿತ ನಿಜಾರ್ಥದಲ್ಲಿ ಕೋಡಗನ ಕುಣಿತವೇ ಆಗಬೇಕು ಅದನ್ನು ಸರಿಯಾಗಿ ಕುಣಿಯಬಾರದು ಎಂಬ ವಾದವಿದ್ದರೆ ಸಂಗೀತಗಾರ ಕೂಡಾ ತಪ್ಪು ತಪ್ಪಾಗಿ ಪದ್ಯ ಹೇಳಬೇಕು ಹಾಗೂ ಒತ್ತು ಮದ್ದಳೆಗಾರ ತಾಳಕ್ಕೆ ಸರಿಯಾಗಿ ಮದ್ದಳೆ ನುಡಿಸಬಾರದು ಎಂದು ವಾದಿಸಬಹುದು. ಇದು ಮೊಂಡು ವಾದವಾಗುತ್ತದೆಯೇ ಹೊರತು ಏನನ್ನೂ ಸಾಧಿಸಿದಂತಾಗುವುದಿಲ್ಲ.

ಇನ್ನು ಅವರ ಮುಖವರ್ಣಿಕೆಯೂ ಅಭ್ಯಾಸದ ಮೊದಲ ದಿನಗಳ ಮುಖವರ್ಣಿಕೆಯಾಗಿದ್ದುದರಿಂದ ಕೊಂಚ ಹೊಲಸಾಗಿ ಇರುತ್ತಿದ್ದಿರಬಹುದು. ಹಿಂದೆ ಹಾಗೆ ಇತ್ತು ಎಂದು ಇವತ್ತು ಮುಖವರ್ಣಿಕೆ ಗೊತ್ತಿದ್ದವರೂ ಯಾಕೆ ಹೊಲಸು ಮುಖವರ್ಣಿಕೆ ಮಾಡಬೇಕು?

ಇವತ್ತು ಪರಂಪರೆಯನ್ನು ಉಳಿಸುವ ಧಾವಂತದಲ್ಲಿ ಪೂರ್ವರಂಗದ ಪ್ರಯೋಗಗಳು ಪ್ರಾತ್ಯಕ್ಷಿಕೆಗಳು ಎಲ್ಲೆಲ್ಲೂ ನಡೆಯುತ್ತಿವೆ. ಹಿಂದೆ ಪೂರ್ವರಂಗ ಒಂದು ಸ್ವರೂಪದಲ್ಲಿತ್ತು ಮತ್ತು ಅದಕ್ಕೆ ಅದರದ್ದೇ ಆದ ಕಾರಣಗಳಿತ್ತು. ಹೊಸದಾಗಿ ನಾಟ್ಯ ಕಲಿಯುವುದಕ್ಕೋಸ್ಕರ ಮೇಳಕ್ಕೆ ಸೇರಿದವರು ಕೋಡಂಗಿ ಕುಣಿತ ಮಾಡಿದರೆ ಅವರಿಗಿಂತ ಕೊಂಚ ಹೆಚ್ಚು ಅಭ್ಯಾಸ ಆದವರು ಬಾಲಗೋಪಾಲ ನಾಟ್ಯ ಮಾಡುತ್ತಾ ನಾಟ್ಯ ಹಾಗೂ ಅಭಿನಯವನ್ನು ಜೊತೆಯಾಗಿ ಮಾಡುವ ಅಭ್ಯಾಸ ಮಾಡುತ್ತಿದ್ದರು. ಹೀಗೆ ಹಂತ ಹಂತವಾಗಿ ಕಲಾವಿದ ಬೆಳೆದುಕೊಂಡು ಹೋಗುತ್ತಿದ್ದ ಪರಂಪರೆ ಇತ್ತು.

ಹಿಂದಿನ ಕಾಲದಲ್ಲಿದ್ದ ಪೂರ್ವರಂಗಕ್ಕಿದ್ದ ಅಗತ್ಯತೆಗಳು ಹಾಗೂ ಅದರ ಪ್ರತಿಫಲಗಳು ಇಂದಿಗೂ ಪ್ರಸ್ತುತವಲ್ಲ. ಬದಲಾದ ಸನ್ನಿವೇಶದಲ್ಲಿ, ಪೂರ್ವರಂಗವನ್ನು ಹೇಗೆ ಉಪಯುಕ್ತವಾಗಿ ಬಳಸಿಕೊಳ್ಳಬಹುದು ಎಂದು ನಾವು ಯೋಚಿಸಬೇಕು.
ಈ ದೃಷ್ಟಿಯಿಂದ ಕೋಡಂಗಿ ಕುಣಿತವನ್ನು ಯಾಕೆ ತಾಳಬದ್ಧವಾಗಿ ಲಯಬದ್ಧವಾಗಿ ಪ್ರಸ್ತುತಪಡಿಸಬಾರದು? ಅಲ್ಲಿರುವ ಪದ್ಯಗಳೆಲ್ಲವೂ ಏಕತಾಳದಲ್ಲಿದೆ. ’ಧೀಂಕಿಟ ಕಿಟತಕ’ ದಿಂದ ಪ್ರಾರಂಭಿಸಿ ಏಕತಾಳದಲ್ಲಿರುವ ಹಲವಾರು ಹೆಜ್ಜೆಗಳನ್ನು ಒಂದೊಂದಾಗಿ (ಕಲಸು ಮೇಲೊಗರ ಮಾಡದೆ) ಪ್ರಸ್ತುತಪಡಿಸಿದರೆ ಯಕ್ಷಗಾನ ಕಲಿಯುತ್ತಿರುವ ಹೊಸಬರು ತಾಳಬದ್ಧವಾದ ಹೆಜ್ಜೆಗಾರಿಕೆಯ ಪ್ರಯೋಗವನ್ನು (ಪದ್ಯಕ್ಕೆ ಕುಣಿಯುವುದನ್ನು) ನೋಡಿ ಕಲಿಯಬಹುದು. ಇನ್ನು ಬಾಲಗೋಪಾಲ ನೃತ್ಯವನ್ನು ಪ್ರಸ್ತುತಪಡಿಸುವವರು ನೃತ್ಯದ ಜೊತೆಗೆ ಹಸ್ತಾಭಿನಯ, ನಾಟ್ಯದಲ್ಲಿ ವೈವಿಧ್ಯತೆಯ ಸಾಧ್ಯತೆಗಳನ್ನು ತೋರಿಸಬಹುದು.

ಈ ರೀತಿಯ ಬದಲಾವಣೆಯಿಂದ ಕೋಡಂಗಿ ಕುಣಿತಕ್ಕೆ ಒಂದು ಪ್ರಯೋಜನವಾದರೂ ಬರುತ್ತದೆ. ಕೇವಲ ಆರಾಧನೆಯ ದೃಷ್ಟಿಯಿಂದ ನೋಡಿದರೂ ಚಂದದಿಂದ ಆರಾಧನೆ ಮಾಡಿದ ಸಮಾಧಾನ ಸಿಗುತ್ತದೆ. ಪರಂಪರೆಯಲ್ಲಿರುವ ಒಳಿತನ್ನು ಉಳಿಸಬೇಕು; ಹಾಗೆಂದು ಮಂಗಗಳೇ ಬುದ್ಧಿವಂತಿಕೆ ತೋರಿಸುತ್ತಿರುವ ಈ ಕಾಲದಲ್ಲಿ, ಪರಂಪರೆಯ ಹೆಸರಿನಲ್ಲಿ ಅಸಹ್ಯವಾಗಿ ಕಾಣುವ ಮಂಗನ ಕುಣಿತ ಮಾಡುವುದರಿಂದ ಸಮಯ ವ್ಯರ್ಥವಲ್ಲದೆ ಬೇರೇನಾದರೂ ಸಾಧನೆಯಿದೆಯೇ?

ಸಮೀರ ದಾಮ್ಲೆ
ಬ್ಯಾಂಕಾಕ್

Thursday, August 20, 2015

ಥೈಲ್ಯಾಂಡ್ ಪ್ರವಾಸೋದ್ಯಮದ ಮೇಲೆ ಪ್ರಹಾರವೇ?

ಆಗೊಸ್ಟ್ 17ರ ಸಂಜೆ ಬ್ಯಾಂಕಾಕಿನ ಎರವಾನ್ ದೇವಾಲಯಲ್ಲಿ ನಡೆದ ಬಾಂಬ್ ಸ್ಫೋಟ ಬ್ಯಾಂಕಾಕ್ ಜನತೆಯನ್ನು ಬೆಚ್ಚಿ ಬೀಳಿಸಿದೆ. ಬ್ಯಾಂಕಾಕಿನಲ್ಲಿ ಇಂತಹ ಘಟನೆ ಈ ಮೊದಲು ಸಂಭವಿಸಿರಲಿಲ್ಲ. ಹಿಂದೆ ಬಾಂಬ್ ಸ್ಫೋಟಗಳು ನಡೆದಾಗ ಅವು ಒಂದು ನಿರ್ದಿಷ್ಟ ಗುಂಪನ್ನು ಗುರಿಯಾಗಿಸಿಕೊಂಡು ನಡೆದಿತ್ತು. ಅಷ್ಟೇ ಅಲ್ಲ ಈ ತೀವ್ರತೆಯಲ್ಲಿ ಇಷ್ಟೊಂದು ಜನರನ್ನು ಬಲಿ ತೆಗೆದುಕೊಂಡ ದೊಡ್ಡ ಮಟ್ಟಿನ ಸ್ಫೋಟ ನಡೆದಿರಲಿಲ್ಲ.

ಸಾಮಾನ್ಯವಾಗಿ ದಕ್ಷಿಣ ಏಷ್ಯಾ ದೇಶಗಳ ಪೈಕಿ ಥೈಲ್ಯಾಂಡ್ ಒಂದು ಸುರಕ್ಷಿತ ರಾಷ್ಟ್ರವೆಂದು ಪರಿಗಣಿಸಲ್ಪಡುತ್ತದೆ. ದಕ್ಷಿಣದ ಗಡಿಪ್ರದೇಶವನ್ನು ಹೊರತುಪಡಿಸಿದರೆ ಬಹುತೇಕ ಎಲ್ಲಾ ಪ್ರಾಂತ್ಯಗಳಲ್ಲೂ ಶಾಂತಿ ಇದೆ. ಸುರಕ್ಷತೆ, ನೈಸರ್ಗಿಕ ಸೌಂದರ್ಯ, ಎಲ್ಲಾ ಆರ್ಥಿಕ ವರ್ಗದ ಜನರಿಗೂ ಕೈಗೆಟಕುವ ಸವಲತ್ತುಗಳು, ಸುಲಭ ಜೀವನ, ಸುಲಭವಾಗಿ ಸಿಗುವ ವೀಸಾ ಮುಂತಾದುವುಗಳಿಂದ ಥೈಲ್ಯಾಂಡ್ ಆಕರ್ಷಣೀಯವಾಗುತ್ತದೆ. ಸಾಮಾನ್ಯವಾಗಿ ಪ್ರವಾಸಿಗರ ಸ್ವರ್ಗ ಎಂದು ಪ್ರಸಿದ್ಧವಾಗಿದ್ದರೂ ಉದ್ಯೋಗಕ್ಕಾಗಿ, ಉದ್ಯಮಕ್ಕಾಗಿ ಇಲ್ಲಿ ಬಂದು ನೆಲೆಸಿದವರು ಬಹಳಷ್ಟು ಜನರಿದ್ದಾರೆ. ಹೆಚ್ಚೇಕೆ ನಿವೃತ್ತ ಜೀವನ ಮಾಡುವುದಕ್ಕಾಗಿ ಥೈಲ್ಯಾಂಡಿಗೆ ಬಂದು ನೆಲೆಸುವವರೂ ಇದ್ದಾರೆ; ಅದಕ್ಕಾಗಿಯೇ ನಿವೃತ್ತಿ ವೀಸಾ ಕೂಡಾ ಲಭ್ಯವಿದೆ. ಇಲ್ಲಿ ಬಂದು ನೆಲೆಸಿದವನ್ನು ಕಾರಣ ಕೇಳಿದರೆ ಸಾಮಾನ್ಯವಾಗಿ ಸಿಗುವ ಉತ್ತರ - ಇಲ್ಲಿ ಜೀವನ ಸುಲಭ, ಆರಾಮದಾಯಕ, ಸುರಕ್ಷಿತ ಹಾಗೂ ಥಾಯ್ ಜನರು ನಿರುಪದ್ರವಿಗಳು ಎಂಬ ಉತ್ತರ. ಇದು ಕೇವಲ ಭಾರತದಿಂದ ಬಂದು ನೆಲೆಸಿದವರ ಅಭಿಪ್ರಾಯವಲ್ಲ ಯುರೋಪ್ ಅಮೆರಿಕಾ ಮುಂತಾದ ಮುಂದುವರಿದ ದೇಶಗಳಿಂದ ಇಲ್ಲಿಗೆ ಜನ ಬಂದು ನೆಲೆಸುವುದೂ ಇದೇ ಕಾರಣಕ್ಕೆ.

ಈ ದೃಷ್ಟಿಯಿಂದ ಸ್ಫೋಟವನ್ನು ಹಲವು ಆಯಾಮಗಳಿಂದ ನೋಡಬೇಕಾಗುತ್ತದೆ. ಥೈಲ್ಯಾಂಡಿನಲ್ಲಿ ಗಮನಾರ್ಹವಾಗಿ ಕಾಣಸಿಗುವ ಸಂಘರ್ಷಗಳು ರಾಜಕೀಯ ಸಂಘರ್ಷಗಳು ಮಾತ್ರ. ಅಷ್ಟೇ ಅಲ್ಲ ಇಲ್ಲಿನ ಸಂಘರ್ಷಗಳಲ್ಲಿ, ದಂಗೆಗಳಲ್ಲಿ ಗುಂಡಿನ ಚಕಮಕಿ ರಕ್ತಕ್ರಾಂತಿ ಆದ ನಿದರ್ಶನಗಳು ತೀರಾ ವಿರಳ.

ಇದಕ್ಕೆ ಕಾರಣ ಅರಿತುಕೊಳ್ಳಲು ನಾವು ಥಾಯ್ ಚರಿತ್ರೆಯನ್ನು ಕೊಂಚ ನೋಡಬೇಕಾಗುತ್ತದೆ. ದಕ್ಷಿಣ ಏಷ್ಯಾ ದೇಶಗಳ ಪೈಕಿ ವಸಾಹತು ಆಡಳಿತಕ್ಕೆ ಒಳಪಡದೆ ಸ್ವತಂತ್ರವಾಗಿ ಉಳಿದ ಏಕೈಕ ದೇಶ ಥೈಲ್ಯಾಂಡ್. ಹೀಗೆ ಥೈಲ್ಯಾಂಡನ್ನು ಯುರೋಪಿಯನ್ ವಸಾಹತುಶಾಹಿಗಳಿಂದ ರಕ್ಷಿಸಿದ ಹಿರಿಮೆ 1851 ರಿಂದ 1910 ರವರೆಗೆ ಆಡಳಿತ ನಡೆಸಿದ ರಾಜ ಮೊಂಕುಟ್ (ರಾಮ ೪) ಮತ್ತು ಆತನ ಮಗ ರಾಜ ಚುಲಾಲೊಂಕಾರ್ನ್ (ರಾಮ ೫) ಇವರಿಗೆ ಸಲ್ಲುತ್ತದೆ. ಇವರೀರ್ವರೂ ಆಧುನಿಕ ವಿಜ್ಞಾನ, ಶಿಕ್ಷಣ ವ್ಯವಸ್ಥೆ, ರಸ್ತೆ, ರೈಲು, ಮುದ್ರಣ ತಂತ್ರಜ್ಞಾನ, ಆಡಳಿತ ಸೇವೆಯ ಮೂಲಕ ಹೊಸ ಆಡಳಿತ ವ್ಯವಸ್ಥೆ ಇವುಗಳನ್ನು ಥೈಲ್ಯಾಂಡಿಗೆ ಪರಿಚಯಿಸಿದರು. ಹಾಗಿದ್ದೂ ಆಡಳಿತಾತ್ಮಕವಾಗಿ ಥೈಲ್ಯಾಂಡ್ ಸಂಪೂರ್ಣ ರಾಜಪ್ರಭುತ್ವದ ಅಡಿಯಲ್ಲೇ ಇತ್ತು. ರಾಜನ ಕುರಿತು ಅಪಾರ ಗೌರವ ಮತ್ತು ರಾಜನನ್ನು ದೇವರಂತೆ ಪೂಜಿಸುವ ಸಂಸ್ಕೃತಿ ಥಾಯ್ ಸಮಾಜದಲ್ಲಿತ್ತು ಎಂಬುದನ್ನು ಇತಿಹಾಸಕಾರರು ದಾಖಲಿಸಿದ್ದಾರೆ. ಹಾಗಾಗಿ ಸ್ವಾತಂತ್ರ್ಯ ಸಂಗ್ರಾಮ, ಪರಕೀಯ ಆಡಳಿತದ ವಿರುದ್ಧ ಹೋರಾಟದಂತಹ ಸಂಘರ್ಷಗಳು ಥಾಯ್ ಚರಿತ್ರೆಯಲ್ಲಿಯೇ ಇಲ್ಲ. 

೧೯೩೨ರಲ್ಲಿ ನಡೆದ ಸೇನೆ ಮತ್ತು ಆಡಳಿತ ಸೇವಾಧಿಕಾರಿಗಳು ನಡೆಸಿದ ದಂಗೆಯಿಂದ ಥೈಲ್ಯಾಂಡ್ ಸಾವಿಂಧಾನಿಕ ರಾಜಪ್ರಭುತ್ವವನ್ನು ಅಳವಡಿಸಿಕೊಂಡು ಪ್ರಜಾತಂತ್ರ ದೇಶವಾಯಿತು. ಈ ದಂಗೆ ಆಧಿನಿಕ ಥೈಲ್ಯಾಂಡ್‍ನ ಸುಮಾರು ೭೦೦ ವರುಷಗಳ ಇತಿಹಾಸದಲ್ಲಿ ದಾಖಲಾಗಿರುವ ಮೊದಲ ಆಂತರಿಕ ಸಂಘರ್ಷ. ಈ ದಂಗೆಯ ಮೂಲಕಾರಣದ ಬಗ್ಗೆ ವಿಭಿನ್ನ ಅಭಿಪ್ರಾಯಗಳಿವೆ. ಪಾಶ್ಚಾತ್ಯ ಸಿದ್ಧಾಂತಗಳು ಹಾಗೂ ತತ್ವಗಳ ಪ್ರಭಾವ, ಚುಲಾಲೊಂಕಾರ್ನ್‍ ಉತ್ತರಾಧಿಕಾರಿಗಳು ಆತನಷ್ಟು ಶಕ್ತರಲ್ಲದೆ ಇದ್ದುದು ಇತ್ಯಾದಿ. ಗಮನಿಸಬೇಕಾದ ಅಂಶವೆಂದರೆ ಪ್ರಜಾತಂತ್ರ ವ್ಯವಸ್ಥೆ ಇದ್ದಾಗ್ಯೂ ರಾಜನ ಕುರಿತಾದ ಗೌರವ ಕುಂದಿಲ್ಲ. ಸಂವಿಧಾನದಲ್ಲಿ ರಾಜನಿಗೆ ಬಹಳ ಗೌರವಯುತವಾದ ಸ್ಥಾನ ಇದೆ ಮತ್ತು ಕೆಲ ವಿಶೇಷ ಅಧಿಕಾರಗಳಿವೆ. ಇನ್ನೊಂದು ಮುಖ್ಯ ಅಂಶ ಈ ದಂಗೆಯೂ ರಕ್ತಕ್ರಾಂತಿಯ ದಂಗೆಯಾಗಿರಲಿಲ್ಲ.

ಪ್ರಸ್ತುತ ರಾಜ ಭೂಮಿಬೋಲ್ ಅದುಲ್ಯತೇಜ (ರಾಮ೯) ದೇಶದ ಪ್ರಗತಿಗೆ ತನ್ನದೇ ಕೊಡುಗೆ ಕೊಟ್ಟು ತನ್ನ ಸ್ಥಾನದ ಗೌರವವನ್ನು ಹೆಚ್ಚಿಸಿರುವ ಕಾರಣದಿಂದ ರಾಜನ ಬಗ್ಗೆ ಜನರಲ್ಲಿ ಇಂದಿಗೂ ಅಪಾರ ಗೌರವವಿದೆ. ಇದರ ದ್ಯೋತಕವಾಗಿಯೇ ಥಾಯ್‍ಲ್ಯಾಂಡಿನ ಪ್ರತಿ ಕಡೆಯೂ ರಾಜನ ಭಾವಚಿತ್ರ ಕಂಗೊಳಿಸುತ್ತಿರುತ್ತದೆ. ರಾಜನನ್ನು ದೇವರೆಂಬಂತೆ ಆರಾಧಿಸುವವರೂ ಬಹಳಷ್ಟು ಮಂದಿ ಇದ್ದಾರೆ. ಶೈಕ್ಷಣಿಕ ಸಂಸ್ಥೆಗಳು, ಸಂಶೋಧನಾ ಕೇಂದ್ರಗಳು, ಮೂಲಸೌಕರ್ಯಗಳ ಅಭಿವೃದ್ಧಿ, ಸಮಾಜಿಕ ಆರೋಗ್ಯ ಹೀಗೆ ಹವಾರು ವಿಷಯಗಳ ಅಭಿವೃದ್ಧಿಗೆ ಸರಕಾರೇತವಾಗಿ ರಾಜನ ವೈಯಕ್ತಿಕ ಯೋಜನೆಗಳು ಚಾಲ್ತಿಯಲ್ಲಿವೆ. ಇದುತನಕ ಥೈಲ್ಯಾಂಡಿನಲ್ಲಿ ನಡೆದ ಹತ್ತಕ್ಕೂ ಅಧಿಕ ಸೇನಾ ದಂಗೆ ಹಾಗೂ ಮಿಲಿಟರಿ ಆಡಳಿತ ಹೇರಿಕೆಯ ಸಂದರ್ಭದಲ್ಲಿ ರಾಜಕೀಯ ಪರಿಸ್ಥಿತಿಯನ್ನು ತಿಳಿಗೊಳಿಸುವಲ್ಲಿ ಮತ್ತು ಸುಸ್ಥಿರಗೊಳಿಸುವಲ್ಲಿ ರಾಜ ಮಹತ್ತರ ಪಾತ್ರವಹಿಸಿದ್ದಾನೆ ಎನ್ನಲಾಗುತ್ತದೆ.

ಥೈಲ್ಯಾಂಡಿನ ಪ್ರಸಕ್ತ ರಾಜಕೀಯ ಬಿಕ್ಕಟ್ಟಿನ ಮೂಲ ಹಿಂದಿನ ಪ್ರಧಾನಿ ತಕ್ಸಿನ್ ಚಿನವಾತ್ರನ ಆಡಳಿತಾವಧಿಯಲ್ಲಿ ಪ್ರಾರಂಭವಾಗುತ್ತದೆ. ೨೦೦೧ರಲ್ಲಿ ದೊಡ್ಡ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ತಕ್ಸಿನ್ ಹಲವಾರು ಜನಪ್ರಿಯ ಯೋಜನೆಗಳಿಂದ ಜನರ ಮೆಚ್ಚುಗೆ ಗಳಿಸುತ್ತಾನೆ. ಥೈಲ್ಯಾಂಡ್ ಚರಿತ್ರೆಯಲ್ಲೇ ಪೂರ್ಣಾವಧಿ ಅಧಿಕಾರದಲ್ಲಿದ್ದ ಮೊದಲ ರಾಜಕಾರಣಿ ಎಂಬ ಹೆಗ್ಗಳಿಕೆ ತಕ್ಸಿನ್‍ನದ್ದು. ತಕ್ಸಿನ್ ಅಧಿಕಾರಾವಧಿಯಲ್ಲಿ ಥಾಯ್ ಆರ್ಥಿಕತೆಯಲ್ಲಿ ತುಂಬಾ ಚೇತರಿಕೆ ಆಗುತ್ತದೆ. ೨೦೦೫ರ ಮರುಚುನಾವಣೆಯಲ್ಲಿ ಥೈಲ್ಯಾಂಡ್ ಚರಿತ್ರೆಯಲ್ಲೇ ಅತೀ ಹೆಚ್ಚು ಜನ ಮತ ಚಲಾಯಿಸಿ ತಕ್ಸಿನ್‍ನನ್ನು ಮತ್ತೆ ಅಧಿಕಾರಕ್ಕೆ ತರುತ್ತಾರೆ. ಆದರೆ ಖ್ಯಾತಿಯ ಜೊತೆಜೊತೆಗೆ ತಕ್ಸಿನ್ ಮೇಲೆ ಭ್ರಷ್ಟಾಚಾರ ಹಾಗೂ ರಾಜನಿಗೆ ಅವಮಾನ ಮಾಡಿದ ಆರೋಪ ಕೂಡಾ ಕೇಳಿಬರುತ್ತದೆ. ತಕ್ಸಿನ್ ವಿರೋಧಿಗಳ ಪ್ರತಿಭಟನೆ ಹೆಚ್ಚಿದಂತೆ ೨೦೦೬ ಸೆಪ್ಟಂಬರ್‌ನಲ್ಲಿ ಸೇನಾ ದಂಗೆಯ ಮೂಲಕ ಮಿಲಿಟರಿ ಆಡಳಿತ ಹೇರಲಾಗುತ್ತದೆ. ಮುಂದಿನ ವರುಷಗಳಲ್ಲಿ ನಡೆದ ಹಲವಾರು ರಾಜಕೀಯ ಬೆಳವಣಿಗೆಗಳ ಮಧ್ಯೆ ತಕ್ಸಿನ್ ಥೈಲ್ಯಾಂಡಿನಿಂದ ಪಲಾಯನಮಾಡುತ್ತಾನೆ. ೨೦೧೧ರ ಚುನಾವಣೆಯಲ್ಲಿ ತಕ್ಸಿನ್ ಬೆಂಬಲವಿದ್ದ ಫಿಯು ಥಾಯ್ ಪಾರ್ಟಿ ಬಹುಮತಗಳಿಸಿ ತಕ್ಸಿನ್ ಸಹೋದರಿ ಇಂಗ್ಲಕ್ ಥೈಲ್ಯಾಂಡಿನ ಮೊದಲ ಮಹಿಳಾ ಪ್ರಧಾನಮಂತ್ರಿಯಾಗುತ್ತಾಳೆ. ದೇಶದ ಹೊರಗಿದ್ದುಕೊಂಡು ತಂಗಿಯನ್ನು ನಿಯಂತ್ರಿಸುತ್ತಾ ಥಾಯ್ ರಾಜಕೀಯವನ್ನು ತಕ್ಸಿನ್ ನಿಯಂತ್ರಿಸುತ್ತಿದ್ದಾನೆ ಎಂಬ ಆರೋಪ ಕೇಳಿಬರುತ್ತದೆ. ೨೦೧೪ ಮೇ ತಿಂಗಳಲ್ಲಿ ಇಂಗ್ಲಕ್‍ಳನ್ನು ಅಧಿಕಾರ ದುರುಪಯೋಗ ಮತ್ತು ಭ್ರಷ್ಟಾಚಾರದ ಆರೋಪದಡಿ ಅಧಿಕಾರದಿಂದಿಳಿಸಿ ಸೇನಾನಾಯಕ ಪ್ರಯುತ್ ಮಿಲಿಟರಿ ಆಡಳಿತ ಹೇರುತ್ತಾನೆ.

ದೇಶದ ಆಡಳಿತ ವ್ಯವಸ್ಥೆಯನ್ನು ಭ್ರಷ್ಟಾಚಾರ ಮುಕ್ತಗೊಳಿಸಿ ಮತ್ತೆ ಚುನಾವಣೆಗೆ ಅನುವು ಮಾಡಿಕೊಡುತ್ತೇನೆ ಎಂಬುದು ಪ್ರಯುತ್‍ನ ವಾಗ್ದಾನ. ಭ್ರಷ್ಟಾಚಾರದ ವಿರೋಧಿ ಕಾನೂನನ್ನು ಬಲಗೊಳಿಸಿದ್ದಲ್ಲದೆ ಹಲವಾರು ಹೊಸ ಸುಧಾರಣಾ ನಿಯಮಗಳನ್ನು ಪ್ರಯುತ್ ಆಡಳಿತ ಅನುಷ್ಠಾನಕ್ಕೆ ತರುತ್ತಿದೆ ಎಂಬುದು ಸಾಮಾನ್ಯ ಜನರಲ್ಲಿ ಬಹುತೇಕರ ಅಭಿಪ್ರಾಯ. ಆಡಳಿತದಲ್ಲಿ ಸುಧಾರಣೆಯಾಗಿದೆ, ಭ್ರಷ್ಟಾಚಾರ ಕಡಿಮೆಯಾಗಿದೆ, ಸರಕಾರಿ ಕಛೇರಿಗಳಲ್ಲಿ ಕೆಲಸ ಸುಗಮವಾಗಿ ಸಾಗುತ್ತಿದೆ ಎಂಬುದು ವ್ಯಾವಹಾರಿಕ ವಲಯದಲ್ಲಿ ಜನರಾಡಿಕೊಳ್ಳುತ್ತಿರುವ ಮಾತುಗಳು. ಈ ದೃಷ್ಟಿಯಿಂದ ಹಲವರಲ್ಲಿ ಪ್ರಯುತ್ ಆಡಳಿತದ ಬಗ್ಗೆ ಸಮಾಧಾನ ಇದೆ. ಆದರೆ ಪ್ರಜಾತಾಂತ್ರಿಕ ವ್ಯವಸ್ಥೆಯನ್ನು ಆದಷ್ಟು ಬೇಗ ಜಾರಿ ಮಾಡಬೇಕು ಎಂಬ ಬೇಡಿಕೆ ಕೂಡಾ ಕೆಲವೆಡೆ ಕೇಳಿ ಬರುತ್ತಿದೆ. ವ್ಯವಸ್ಥೆಯಲ್ಲಿ ತುಂಬಿರುವ ಭ್ರಷ್ಟತೆಯನ್ನು ಹೋಗಲಾಡಿಸಿ ಆಡಳಿತ ವ್ಯವಸ್ಥೆಯನ್ನು ಪೂರ್ಣ ಸುಧಾರಣೆ ಮಾಡಲು ಇನ್ನೂ ಬಹಳ ಕಾಲಾವಕಾಶ ಬೇಕು, ಅಲ್ಲಿಯತನಕ ಕಾಯುವುದೇ ಲೇಸು ಎಂಬುದು ಪ್ರಯುತ್ ಬೆಂಬಲಿಗರ ವಾದ. ಒಬ್ಬ ಸಾಮಾನ್ಯ ಪ್ರಜೆಯ ದೃಷ್ಟಿಯಿಂದ ಹೇಳುವುದಾದರೆ ಮಿಲಿಟರಿ ಆಡಳಿತವಿರುವ ಸೇನಾ ನಿಯಂತ್ರಿತ ಉಸಿರುಗಟ್ಟಿಸುವ ವಾತಾವರಣ ಎಲ್ಲೂ ಕಾಣಿಸುವುದಿಲ್ಲ. ಸಾಮಾನ್ಯರ ಜನಜೀವನದಲ್ಲಿ ಏನೂ ತೊಂದರೆ ಆಗಿಲ್ಲ.

ಇನ್ನು ಥೈಲ್ಯಾಂಡಿನ ದಕ್ಷಿಣ ಭಾಗದಲ್ಲಿ ಹಲವು ವರುಷಗಳಿಂದ ನಡೆಯುತ್ತಿರುವ ಇನ್ನೊಂದು ಸಂಘರ್ಷ ಮುಸ್ಲಿಮ್ ಪ್ರತ್ಯೇಕವಾದಿಗಳ ಕೂಗು. ಥೈಲ್ಯಾಂಡಿನಲ್ಲಿ ೯೫% ಬೌದ್ಧಮತ ಅನುಯಾಯಿಗಳಿದ್ದಾರೆ. ದಕ್ಷಿಣದ ಮಲೇಷ್ಯಾ ಗಡಿಪ್ರದೇಶದಲ್ಲಿನ ಮೂರು ಪ್ರಾಂತ್ಯಗಳಲ್ಲಿ ಮಾತ್ರ ಮುಸ್ಲಿಮ್ ಜನಸಂಖ್ಯೆ ಹೆಚ್ಚಿದೆ. ಈ ಭಾಗದಲ್ಲಿ ಪ್ರತ್ಯೇಕತೆಯ ಕೂಗು ಹಲವಾರು ವರ್ಷಗಳಿಂದ ಕೇಳಿಬರುತ್ತಿದೆ. ರಾಜಾಡಳಿತವಿದ್ದಾಗ ಈ ಪ್ರಾತ್ಯಂಗಳ ಆಡಳಿತವನ್ನು ಸ್ಥಳೀಯ ಮುಸ್ಲಿಮ್ ನಾಯಕರು ನೋಡಿಕೊಳ್ಳುತ್ತಿದ್ದರು. ಸಾಂವಿಧಾನಿಕ ಆಡಳಿತ ಪ್ರಾರಂಭವಾದ ಮೇಲೆ ಸ್ಥಳೀಯ ಜಾವಿ ಭಾಷೆಯ ಬದಲು ಥಾಯ್ ಭಾಷೆಯನ್ನು ಹೇರಲಾಗುತ್ತಿದೆ, ಸ್ಥಳೀಯ ಸಂಸ್ಕೃತಿಯ ಬದಲು ಬೌದ್ಧ ಸಂಸ್ಕೃತಿಯನ್ನು ಹೇರಲಾಗುತ್ತಿದೆ ಎಂಬ ಕೂಗು ಪ್ರಾರಂಭವಾಯಿತು. ಅಂದಿನಿಂದ ಇಂದಿನವರೆಗೂ ಸ್ವಾಯತ್ತತೆಗಾಗೆ ಬಂಡಾಯ ಪ್ರತಿಭಟನೆಗಳು ನಡೆಯುತ್ತಿವೆ. ನಿರಂತರವಾಗಿ ವರುಷಗಳಿಂದ ನಡೆಯುತ್ತಿರುವ ಈ ಪ್ರತಿಭಟನೆಗಳಲ್ಲಿ ಸಾವಿರಕ್ಕೂ ಹೆಚ್ಚು ಜನ ಪ್ರಾಣ ಕಳಕೊಂಡಿದ್ದಾರೆ. ಆದರೆ ಆ ಪ್ರತಿಭಟನೆಗಳು ದಕ್ಷಿಣ ಪ್ರಾಂತ್ಯಗಳಲ್ಲಿ ನಡೆದಿವೇ ಹೊರತು ಬ್ಯಾಂಕಾಕ್‍ನಲ್ಲಿ ನಡೆದಿಲ್ಲ.

ಇತ್ತೀಚೆಗೆ ಹೊಗೆಯಾಡಿದ ಇನ್ನೊಂದು ಸಮಸ್ಯೆ ಉಯ್ಗುರ್ ನಿರಾಶ್ರಿತರದ್ದು. ಹಲವಾರು ಅಂತಾರಾಷ್ಟ್ರೀಯ ಒತ್ತಡಗಳ ಹೊರತಾಗಿಯೂ ಥಾಯ್ ಸರಕಾರ ಸುಮಾರು ನೂರಕ್ಕೂ ಹೆಚ್ಚು ಉಯ್ಗುರ್ ನಿರಾಶ್ರಿತರನ್ನು ಚೀನಾಕ್ಕೆ ತಿರುಗಿ ಕಳುಹಿಸಿತು. ಥಾಯ್ ಆಡಳಿತ ಚೇನಾ ಹಾಗೂ ಟರ್ಕಿಯ ಜೊತೆ ಮಾತುಕತೆ ನಡೆಸಿರುವುದಾಗಿಯೂ ಆ ಮಾತುಕತೆಗಳ ಹಿನ್ನೆಲೆಯಲ್ಲೇ ಅವರನ್ನು ಚೀನಾಕ್ಕೆ ತಿರುಗಿ ಕಳುಹಿಸಿದ್ದೆಂದು ತನ್ನ ನಿಲುವನ್ನು ಸಮರ್ಥಿಸಿಕೊಂಡಿದೆ. ಆದರೆ ಇದನ್ನು ಟರ್ಕಿಯಲ್ಲಿನ ಉಯ್ಗುರ್ ಹೋರಾಟಗಾರರು ಹಾಗೂ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಗಳು ಖಂಡಿಸಿವೆ. ಇತ್ತೀಚೆಗೆ ಇಸ್ತಾಂಬುಲ್‍ನಲ್ಲಿ ಥಾಯ್ ರಾಯಭಾರಿ ಕಛೇರಿಯ ಮೇಲೆ ಇದೇ ವಿಷಯದಲ್ಲಿ ಧಾಳಿಯೂ ನಡೆಯಿತು. ಉಯ್ಗುರ್ ನಿರಾಶ್ರಿತರ ವಿಷಯದಲ್ಲಿ ಥಾಯ್ ಆಡಳಿತ ನಡಕೊಂಡ ರೀತಿಯ ಕುರಿತು ಹೊರದೇಶಗಳಲ್ಲಿ ಅಸಮಧಾನದ ಹೊಗೆಯಾಡಿತು.

ಪ್ರಸಿದ್ಧ ಪ್ರವಾಸಿ ಸ್ಥಳದಲ್ಲಿ ನಡೆದ ಬಾಂಬ್ ಧಾಳಿಯನ್ನು ಥಾಯ್ ಆಡಳಿತ ಆರ್ಥಿಕತೆಗೆ ಮತ್ತು ಪ್ರವಾಸೋದ್ಯಮಕ್ಕೆ ಧಕ್ಕೆ ತರಲು ಮಾಡಿದ ಹೀನ ಕೃತ್ಯ ಎಂದು ಹೇಳಿದೆ. ಥಾಯ್ ಜಿಡಿಪಿಯಲ್ಲಿ ಪ್ರವಾಸೋದ್ಯಮದ ದೊಡ್ಡ ಕೊಡುಗೆಯಿದೆ. ಪ್ರವಾಸೋದ್ಯಮ ನೇರವಾಗಿ ೯% ಮತ್ತು ಒಟ್ಟಾರೆಯಾಗಿ ಸುಮಾರು ೨೦% ಜಿಡಿಪಿಗೆ ಕೊಡುಗೆ ನೀಡುತ್ತದೆ. ಬಾಂಬ್ ಧಾಳಿಯ ಹಿನ್ನೆಲೆಯಲ್ಲಿ ಹಲವಾರು ದೇಶಗಳು ತಮ್ಮ ಪ್ರಜೆಗಳಿಗೆ ಥೈಲ್ಯಾಂಡ್ ಪ್ರವಾಸದ ಬಗ್ಗೆ ಎಚ್ಚರಿಕೆಯಿಂದಿರುವಂತೆ ಕರೆ ನೀಡಿದೆ. ಪ್ರವಾಸಿಗರನ್ನು ಗುರಿಯಾಗಿಸಿ ಸ್ಫೋಟ ನಡೆಸಿದ್ದನ್ನು ಗಮನಿಸಿದರೆ ಪ್ರವಾಸೋದ್ಯಮ ತನ್ಮೂಲಕ ಥೈಲ್ಯಾಂಡ್ ಆರ್ಥಿಕತೆಯೇ ಈ ಧಾಳಿಯ ನೇರ ಗುರಿ ಎಂಬಂತೆ ತೋರುತ್ತದೆ.

ಮೆಚ್ಚಬೇಕಾದ ಅಂಶವೆಂದರೆ ಸ್ಫೋಟದ ನಂತರ ಸ್ಥಳದಲ್ಲಿ ಸ್ವಯಂಸೇವಕರು ತುಂಬಿದರು. ಕೆಲ ಟ್ಯಾಕ್ಸಿಗಳು ಘಟನಾ ಸ್ಥಳದಿಂದ ತೆರಳುವವರಿಗೆ ಉಚಿತ ಸೇವೆ ಒದಗಿಸಿದವು. ರಕ್ತದಾನ ಮಾಡಲು ದಾನಿಗಳು ಸರತಿ ಸಾಲು ನಿಂತರು. ಒಂದೇ ದಿನದಲ್ಲಿ ಘಟನಾ ಸ್ಥಳವನ್ನು ಸ್ವಚ್ಚವಾಗಿಸಿದರು. ಸಾರ್ವಜನಿಕ ಹಾಗೂ ಪ್ರವಾಸಿ ಸ್ಥಳಗಳಲ್ಲಿ ಭದ್ರತೆ ಹೆಚ್ಚಿದೆ. ಎರವಾನ್ ದೇವಾಲಯ ಪ್ರವಾಸಿಗರಿಗೆ ಮತ್ತೆ ತೆರೆದುಕೊಂಡಿದೆ!

Thanks to Prajavani for publishing this article on 20th Aug 2015

Tuesday, August 18, 2015

ಲೇಖನಿಗೆ ಮಸಿ ತುಂಬುವ ಪಾಠ ಮಾಡುತ್ತಾ...



ಮಾಧ್ಯಮದ ಲೇಖನಿಗೆ ಮಸಿ ಕೊರತೆ ಬಿದ್ದಿದೆಯೇ?’ ಎಂಬ ಲೇಖನದಲ್ಲಿ (ಪ್ರಜಾವಾಣಿ ೧೬ ಆಗೋಸ್ಟ್) ಪದ್ಮರಾಜ ದಂಡಾವತಿಯವರು ಮಾಧ್ಯಮ ಶಿಕ್ಷಣದಲ್ಲಿರುವ ಕೊರತೆಗಳನ್ನು ಎತ್ತಿ ತೋರಿಸಿದ್ದಾರೆ. ಈ ಸಮಸ್ಯೆ ಕೇವಲ ಮಾಧ್ಯಮ ಶಿಕ್ಷಣಕ್ಕೆ ಮಾತ್ರ ಸೀಮಿತವಾಗಿಲ್ಲ ಎಂಬುದನ್ನು ನಾವು ಗಮನಿಸಬೇಕು. ಇದು ನಮ್ಮ ಸಂಪೂರ್ಣ ಶಿಕ್ಷಣ ವ್ಯವಸ್ಥೆಯ ಸಮಸ್ಯೆಯಾಗಿದೆ. ಉನ್ನತ ಶಿಕ್ಷಣಕ್ಕೆ ಮಾತ್ರ ಸೀಮಿತವಾಗಿಲ್ಲ. ವೃತ್ತಿ ಶಿಕ್ಷಣ, ಮಾಧ್ಯಮಿಕ ಶಿಕ್ಷಣ ಹಾಗೂ ಪ್ರಾಥಮಿಕ ಶಿಕ್ಷಣಕ್ಕೂ ಇದೇ ಕ್ಯಾನ್ಸರ್ ಹರಡಿದೆ.

ನಮ್ಮಲ್ಲಿರುವ ಮೊದಲ ಸಮಸ್ಯೆ - ನಮ್ಮ ಶಿಕ್ಷಣ ವ್ಯವಸ್ಥೆ ಇನ್ನೂ ಲೇಖನಿಗೆ ಮಸಿ ತುಂಬುವುದನ್ನೇ ಹೇಳಿ ಕೊಡುತ್ತಿದೆ! ಲೇಖನಿಗೆ ಮಸಿ ತುಂಬುವ ಕಾಲ ಹೋಗಿ ಅದೆಷ್ಟೋ ವರ್ಷಗಳಾಯಿತು. ಹೆಚ್ಚೇಕೆ ಮಾರುಕಟ್ಟೆಯಲ್ಲಿ ಮಸಿ ತುಂಬಬಹುದಾದ ಲೇಖನಿ ಹಾಗೂ ತುಂಬಲು ಮಸಿ ಎರಡೂ ಸಿಗುವುದೇ ಇಲ್ಲ. ಅವುಗಳ ತಯಾರಿ ನಿಂತು ದಶಕವೇ ಕಳೆಯಿತು. ಮಾರುಕಟ್ಟೆ ತುಂಬಾ ಹೊಸ ನಮೂನೆಯ, ಹೊಸ ಮಾದರಿಯ ಹೊಸ ತಂತ್ರಜ್ಞಾನದ ಲೇಖನಿಗಳು ತುಂಬಿವೆ. ಆದರೆ ನಮ್ಮ ಪಠ್ಯಕ್ರಮ ಇನ್ನೂ ಮಸಿ ತುಂಬುವುದನ್ನು ಹೇಳಿಕೊಡುತ್ತಿದೆ! ಇಂದಿನ ಮಾಹಿತಿ ಕ್ರಾಂತಿಯ ಯುಗದಲ್ಲಿ ಈ ಮಸಿಯ ಬಗ್ಗೆ ತಲೆಯೆಲ್ಲಾ ಮಸಿಮಾಡಿಕೊಳ್ಳುವುದು ಅನಗತ್ಯ ಎಂದು ಪ್ರಾಥಮಿಕ ಶಾಲೆಯ ಮಕ್ಕಳಿಗೂ ಗೊತ್ತು. ಆದರೂ ನಮ್ಮ ಪಠ್ಯಕ್ರಮ ಅದನ್ನೇ ಹೇಳಿಕೊಡುತ್ತಿದೆ. ಶಿಕ್ಷಕರಿಗೆ ಸುಲಭವಾಯಿತು - ಹೊಸ ನೋಟ್ಸ್ ಮಾಡಬೇಕೆಂದಿಲ್ಲ! ನಮ್ಮ ಪಠ್ಯಕ್ರಮದಲ್ಲಿ ಹೊಸ ಲೇಖನಿಗಳ ಬಗೆಗೆ ಪಾಠ ತಯಾರಾಗುವಾಗ ಪುಸ್ತಕ ಹಾಗೂ ಲೇಖನಿಯನ್ನು ಉಪಯೋಗಿಸಿ ಬರೆಯುವ ಪರಿಪಾಠವೇ ಮುಗಿದು ಸ್ಮಾರ್ಟ್ ಸಾಧನಗಳಲ್ಲಿ ಬರೆಯುವ ಕಾಲ ಬಂದಿರುತ್ತದೆ. ಇಂತಹ ಕಾರಣದಿಂದಲೇ ನಮ್ಮ ವಿದ್ಯಾರ್ಥಿಗಳು ವಿದೇಶದ ವಿದ್ಯಾಲಯಗಳತ್ತ ಮುಖ ಮಾಡುತ್ತಿರುವುದು.


ನಮ್ಮಲ್ಲಿ ಅತಿ ಬೇಡಿಕೆಯಲ್ಲಿರುವ ತಾಂತ್ರಿಕ ಶಿಕ್ಷಣವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳೋಣ. ತಾಂತ್ರಿಕ ಶಿಕ್ಷಣ ಮುಗಿಸಿದ ನಮ್ಮ ಇಂಜಿನಿಯರ್‌ಗಳಲ್ಲಿ ಕೇವಲ ೧೮% ಪದವೀಧರರು ಉದ್ಯೋಗಾರ್ಹರು ಎಂದು ಈ ವಿಷಯದಲ್ಲಿ ಕಳೆದ ಕೆಲ ವರ್ಷಗಳಿಂದ ಸಮೀಕ್ಷೆ ನಡೆಸುತ್ತಿರುವ Aspiring Minds (http://www.aspiringminds.com) ಸಂಸ್ಥೆಯ ವರದಿಗಳು ಹೇಳುತ್ತವೆ.  ಇನ್ನು ನಾಲ್ಕು ವರ್ಷಗಳ ತಾಂತ್ರಿಕ ಪದವಿ ಮುಗಿಸಿಕೊಂಡು ಬಂದವರು ಕೆಲಸ ಸಿಗುವುದಕ್ಕೋಸ್ಕರ ಆರು ತಿಂಗಳು - ಒಂದು ವರ್ಷದ ಕೋರ್ಸ್‍ಗಳನ್ನು ಮಾಡುವುದು ಸರ್ವೇಸಾಮಾನ್ಯವಾಗಿದೆ.

ವಿಜ್ಞಾನ ಕ್ಷೇತ್ರದಲ್ಲಿ ಬಹು ಬೇಗ ಬದಲಾವಣೆಗಳು ಆಗುತ್ತವೆ ಮತ್ತು ಅವೆಲ್ಲವನ್ನೂ ಶಿಕ್ಷಣದಲ್ಲಿ ಅಳವಡಿಸುವುದು ಸಾಧ್ಯವಾಗದು; ಈಗಿರುವ ನಮ್ಮ ಶಿಕ್ಷಣಪದ್ಧತಿಯಲ್ಲಿ ಅಳವಡಿಸಿಕೊಳ್ಳುವುದು ಇನ್ನೂ ಕಷ್ಟ ಎಂಬುದು ಸ್ಪಷ್ಟ. ಹಾಗೆಂದು ಲೇಖನಿಗೆ ಮಸಿ ತುಂಬುವುದನ್ನೇ ಹೇಳಿಕೊಡುವುದಕ್ಕಾಗುತ್ತದೆಯೇ? ನಮ್ಮ ಶಿಕ್ಷಣ ಪದ್ಧತಿಯಲ್ಲಿ ಬದಲಾವಣೆ ತರಬೇಕು. ಉದ್ಯಮ ಮತ್ತು ಶಿಕ್ಷಣ ಕ್ಷೇತ್ರಗಳ ನಡುವೆ ಒಂದು ಸದೃಢ ಸೇತುವೆಯ ನಿರ್ಮಾಣವಾಗಬೇಕು. ಕೆಲವೊಂದು ಖಾಸಗೀ ಶಿಕ್ಷಣ ಸಂಸ್ಥೆಗಳು ಈ ದಿಸೆಯಲ್ಲಿ ಕೆಲಸ ಮಾಡುತ್ತಿವೆ ಮತ್ತು ಅದರ ನೇರ ಪರಿಣಾಮ ವಿದ್ಯಾರ್ಥಿಗಳ ಗುಣಮಟ್ಟದಲ್ಲಿ ಕಂಡುಬರುತ್ತದೆ.

ಎರಡನೆಯ ಸಮಸ್ಯೆ - ಶಿಕ್ಷಣದಲ್ಲಿ ಪ್ರಯೋಗಾತ್ಮಕ ಅಂಶಗಳು ಕಡಿಮೆಯಿರುವುದು. ನಮ್ಮ ಪಠ್ಯಗಳಲ್ಲಿ ಸಿದ್ಧಾಂತಗಳೇ ತುಂಬಿವೆ. ಶಿಕ್ಷಣ ಹೆಚ್ಚು ಪ್ರಾಯೋಗಿಕವಾಗಬೇಕು. ಪ್ರತಿ ಸಿದ್ಧಾಂತದ ಜೊತೆಗೂ ಅದರ ಪ್ರಯೋಗಾತ್ಮಕ ಅನ್ವಯಿಸುವಿಕೆಯನ್ನು ತಿಳಿಸಬೇಕು. ಆಗಲೇ ಅದು ಅರ್ಥ ಆಗುವುದು ಹಾಗೂ ಅದರ ಬೆಲೆ ತಿಳಿಯುವುದು. ಇದರಿಂದ ಶಿಕ್ಷಣ ಆಕರ್ಷಣೀಯವೂ ಆಗುತ್ತದೆ. ಅಂತರಾಷ್ಟ್ರೀಯ ಶಿಕ್ಷಣಸಂಸ್ಥೆಯೊಂದರಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿರುವ ಮಿತ್ರರೊಬ್ಬರು ಭಾರತೀಯ ಶಿಕ್ಷಣಕ್ಕೂ ಹೊರದೇಶದ ಶಿಕ್ಷಣಕ್ಕೂ ಇರುವ ವ್ಯತ್ಯಾಸವನ್ನು ವಿವರಿಸುತ್ತಾ "ನಮ್ಮ ದೇಶದಲ್ಲಿ ಅರ್ಥಶಾಸ್ತ್ರದಲ್ಲಿ ಉನ್ನತ ಶಿಕ್ಷಣದಲ್ಲೂ ಸಿದ್ಧಾಂತಗಳ ಪ್ರಾಯೋಗಿಕ ಉಪಯೋಗ ಕಲಿಸುವುದಿಲ್ಲ. ಹಾಗಾಗಿ ಅದೆಷ್ಟೋ ಪದವೀಧರರಿಗೆ ಅವುಗಳ ಉಪಯೋಗವೇ ತಿಳಿದಿರುವುದಿಲ್ಲ. ಹಾಗಾಗಿಯೇ ಅವರು ಅರ್ಥಶಾಸ್ತ್ರದ ಶಿಕ್ಷಕರಾಗುತ್ತಾರೆಯೇ ಹೊರತು ಅರ್ಥಶಾಸ್ತ್ರಜ್ಞರಾಗುವುದಿಲ್ಲ. ವಿದೇಶದಲ್ಲಿ ಪಾಠಮಾಡಲು ಬಂದಾಗ ನಾನು ಅನುಭವಿಸಿದ ಮೊದಲ ಸಮಸ್ಯೆಯೇ ಪ್ರಾಯೋಗಿಕತೆಯನ್ನು ಅರ್ಥಮಾಡಿಕೊಂಡು ಪಾಠಮಾಡುವುದು ಮತ್ತು ಪ್ರಾಯೋಗಿಕ ಉಪಯೋಗಗಳನ್ನು ತಿಳಿಹೇಳುವುದು" ಎನ್ನುತ್ತಾರೆ.

ಒಂದು ದೇಶದ ಉತ್ಪಾದನಾ ಸಾಮರ್ಥ್ಯ ದೇಶದ ಆರ್ಥಿಕತೆಯನ್ನು ನಿರ್ಧರಿಸುತ್ತದೆ. ಇಲ್ಲಿ ಉತ್ಪಾದನೆ ಅಂದರೆ ಕೇವಲ ಸರಕುಗಳ ಉತ್ಪಾದನೆಯಲ್ಲ; ಅದು ಭೌತಿಕ ಉತ್ಪನ್ನಗಳಿರಬಹುದು, ತಂತ್ರಾಂಶಗಳ ಉತ್ಪಾದನೆ ಇರಬಹುದು, ಜ್ಞಾನದ ಉತ್ಪಾದನೆ ಇರಬಹುದು, ವಿಜ್ಞಾನದ ಆವಿಷ್ಕಾರಗಳಿರಬಹುದು ಅಥವಾ ವೈದ್ಯಕೀಯ ಸಂಶೋಧನೆ ಇರಬಹುದು, ಸಮಾಜವಿಜ್ಞಾನ ಕ್ಷೇತ್ರದಲ್ಲಿ ಕೊಡುಗೆಯಿರಬಹುದು. ಉತ್ಪಾದನೆಯ ಮೌಲ್ಯ ವೃಧಿಯಾದಂತೆ ಆರ್ಥಿಕತೆ ಬಲವಾಗುತ್ತದೆ. ಆರ್ಥಿಕತೆ ಬಲವಾದಂತೆ ಜೀವನಮಟ್ಟ ಸುಧಾರಣೆಯಾಗುತ್ತದೆ, ಜನರ ಕೊಳ್ಳುವ ಸಾಮರ್ಥ್ಯ ಹೆಚ್ಚುತ್ತದೆ, ಹೆಚ್ಚು ಹಣವನ್ನು ಒಳ್ಳೆಯ ಶಿಕ್ಷಣಕ್ಕೋಸ್ಕರ ಮೀಸಲಿಡಬಹುದು. ಒಳ್ಳೆಯ ಶಿಕ್ಷಣದಿಂದ ಉತ್ಪಾದನಾ ಮೌಲ್ಯ ಹೆಚ್ಚಿಸಬಹುದು. ಇದು ಒಂದು ವರ್ತುಲ. ನಮ್ಮಲ್ಲಿ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆಯೆಂಬ ಕೂಗು ಎಲ್ಲಾ ಕ್ಷೇತ್ರಗಳಲ್ಲೂ ಕೇಳಿಬರುತ್ತಿದೆ. ಇದು ನಮ್ಮ ಉತ್ಪಾದನಾ ಸಾಮರ್ಥ್ಯವನ್ನು ಕಡಿಮೆಮಾಡುತ್ತದೆ, ಆರ್ಥಿಕತೆ ದುರ್ಬಲವಾಗುತ್ತದೆ. ಶಿಕ್ಷಣವನ್ನು ದುರ್ಬಲಗೊಳಿಸುವುದು ಆರ್ಥಿಕತೆಯನ್ನು ದುರ್ಬಲಗೊಳಿಸುವ ಮೊದಲ ಹೆಜ್ಜೆ ಎಂಬುದನ್ನು ನಮ್ಮ ಸರಕಾರ, ಶಿಕ್ಷಣ ಇಲಾಖೆ ಅರ್ಥಮಾಡಿಕೊಂಡಂತಿಲ್ಲ.

ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣ ಖಾಸಗೀ ಕ್ಷೇತ್ರವನ್ನಾಗಿಸಿ ಮಾನ್ಯತೆ ಕೊಡುವ ಅಧಿಕಾರವನ್ನು ಮಾತ್ರ ತನ್ನ ಕೈಯಲ್ಲಿ ಉಳಿಸಿಕೊಂಡು ಗುಣಮಟ್ಟದ ಬಗ್ಗೆ ಚಿಂತಿಸದೆ ಮಾನ್ಯತೆಯ ಹೆಸರಿನಲ್ಲಿ ಹಣ ಮಾಡುವ ಹುನ್ನಾರದಲ್ಲಿರುವಂತೆ ತೋರುತ್ತದೆ. ಪ್ರಾಥಮಿಕ ಹಂತದಿಂದ ವಿಶ್ವವಿದ್ಯಾಲಯಗಳವರೆಗೆ ಸರಿಯಾದ ನೇಮಕಾತಿ ಮಾಡದೆ ಸರಕಾರಿ ಶಿಕ್ಷಣ ಸಂಸ್ಥೆಗಳು ತನ್ನಿಂತಾನೆ ಸಾಯುವಂತೆ ಮಾಡುವ ಯೋಜನೆಯೂ ಇದ್ದಂತಿದೆ. ಒಳ್ಳೆಯ ಸಂಭಾವನೆಯಿಲ್ಲದೆ ಶಿಕ್ಷಕ ವೃತ್ತಿಯೇ ಆಕರ್ಷಕವಾಗಿಲ್ಲದ ಮೇಲೆ ಪ್ರತಿಭಾವಂತರು ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವುದಾದರೂ ಹೇಗೆ. ಬೇರೆಲ್ಲೂ ಸಲ್ಲದವರು ಶಿಕ್ಷಕರಾದರೆ ಉದ್ಯೋಗಕ್ಕೆ ಯೋಗ್ಯ ಪದವೀಧರರು ಬರುವುದೆಂತು? ಉತ್ಪಾದನೆ ಬೆಳೆಯುವುದೆಂತು? ಆರ್ಥಿಕತೆ ಸದೃಢವಾಗುವುದೆಂತು?

ಸಮೀರ ದಾಮ್ಲೆ

Thanks to Prajavani for publishing this article on 18.8.2015
 

Saturday, March 28, 2015

ಎಲ್ ಕೆ ವೈ - ಸಿಂಗಪುರದ ಮಹಾನಾಯಕನಿಗೊಂದು ನುಡಿನಮನ

"This was a small fishing village under Malaysia. He made this a FIRST WORLD country" ಎಂದು ಹೇಳುವಾಗ ಆ ಟ್ಯಾಕ್ಸಿ ಡ್ರೈವರ್ ನ ಮಾತಿನಲ್ಲಿ ಲೀ ಕ್ಯುನ್ ಯೂ (Lee Kuan Yew - LKY) ಕುರಿತಾಗಿದ್ದ ಅಪಾರ ಗೌರವ ಹಾಗೂ ಪ್ರೀತಿ ಎದ್ದು ಕಾಣುತ್ತಿತ್ತು. “He is a man of action, he believed in - action speaks louder than words” ಎನ್ನುತ್ತಿದ್ದ ನಾನು ಭೇಟಿಮಾಡಿದ ಕಂಪನಿಯ ಮ್ಯಾನೇಜರ್. ಒಂದು ದಿನದ ಸಿಂಗಪುರ ಭೇಟಿಯಲ್ಲಿ ನಾನು ಮಾತನಾಡಿಸಿದ, ಭೇಟಿಯಾದ ಪ್ರತಿಯೊಬ್ಬನೂ ಎಲ್.ಕೆ.ವೈ ಯ ಕುರಿತು ಪ್ರಸ್ತಾಪ ಮಾಡಿದ್ದರು, ಅವರೆಲ್ಲರಲ್ಲೂ ಆತನ ಕುರಿತಾದ ಗೌರವ ಆದರ ಕಾಣಿಸುತ್ತಿತ್ತು. ಈ ಗೌರವಾದರಗಳು ಮಾತಿಗಷ್ಟೇ ಸೀಮಿತವಾಗಿರಲಿಲ್ಲ. ಮೊನ್ನೆ ಬುಧವಾರದ ಹೊತ್ತಿಗೆ ಸುಮಾರು 60 ಸಾವಿರ ಜನ ಸಾಲಿನಲ್ಲಿ ನಿಂತು ಕಾದು ಎಲ್.ಕೆ.ವೈ.ಗೆ ಗೌರವ ಸಲ್ಲಿಸಲು ಹೋಗಿದ್ದಾರೆ. ಸಿಂಗಪುರದ ಪಾರ್ಲಿಮೆಂಟ್ ಹೌಸಿನಿಂದ ಹೊರಕ್ಕೆ ಕೆಲ ಕಿಲೋಮೀಟರ್ ಉದ್ದಕ್ಕೆ ಜನರ ಸಾಲು ಬೆಳೆದಿತ್ತು. ಜನ ಹಗಲು ರಾತ್ರಿಯೆನ್ನದೆ ಸುಮಾರು ಎಂಟು ಗಂಟೆಗಳಿಗೂ ಮಿಕ್ಕಿ ಸಾಲಲ್ಲಿ ನಿಂತು ತಮ್ಮ ಅಂತಿಮ ನಮನ ಸಲ್ಲಿಸಿದರು. ಆದರೆ ಎಲ್ಲೂ ನೂಕುನುಗ್ಗಲು ಕಾಣಿಸಲಿಲ್ಲ. ಲೀ ಕಲಿಸಿದ ಸ್ವಚ್ಚತೆ ಶಿಸ್ತು ನಿಯಮಬದ್ಧತೆಯನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದರು!
ಲೀ ಹುಟ್ಟಿದಾಗ ಸಿಂಗಪುರ ಬ್ರಿಟಿಷ್ ಆಡಳಿತದಲ್ಲಿತ್ತು. ನಂತರ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಮೂರು ವರುಷಗಳ ಕಾಲ ಜಪಾನಿನ ಹಿಡೀತಕ್ಕೆ ಬಂತು. ಸಿಂಗಪುರ ಜಪಾನಿನ ಹಿಡಿತದಲ್ಲಿದ್ದಾಗ ಒಬ್ಬ ಜಪಾನಿ ಸೈನಿಕನಿಗೆ ತಲೆಬಗ್ಗಿಸಿ ಗೌರವಿಸದ ಕಾರಣ ಕಪಾಳಮೋಕ್ಷ ಮಾಡಿಸಿಕೊಂಡಿದ್ದ ಲೀ ಆಗಲೇ ನಿರ್ಧರಿಸಿದ್ದರಂತೆ – ಸಿಂಗಪರವನ್ನು ಬ್ರಿಟಿಷರಾಗಲೀ ಜಪಾನಿಯರಾಗಲೀ ಆಳಬಾರದು. ಸಿಂಗಪುರ ಸ್ವತಂತ್ರ ರಾಷ್ಟ್ರವಾಗಬೇಕು ಎಂಬ ಹಾಗೆ. 1949ರಲ್ಲಿ ಕಾನೂನು ಶಿಕ್ಷಣವನ್ನು ಇಂಗ್ಲೆಂಡಿನಲ್ಲಿ ಪೂರೈಸಿ ಸ್ವದೇಶಕ್ಕೆ ಮರಳಿದ ಲೀ 1954 ರಲ್ಲಿ ಕೆಲ ಮಧ್ಯಮವರ್ಗದ ಸಮಾನಮನಸ್ಕ ಶಿಕ್ಷಿತ ಗೆಳೆಯರೊಂದಿಗೆ ’ಪೀಪಲ್ಸ್ ಆಕ್ಷನ್ ಪಾರ್ಟಿ’ ಸ್ಥಾಪಿಸಿದರು. ನಂತರ ಕಮ್ಯೂನಿಷ್ಟ್ ಪರವಾಗಿದ್ದ ವ್ಯಾಪಾರ ಒಕ್ಕೂಟದ ಜೊತೆ ಒಡಂಬಡಿಕೆ ಮಾಡಿಕೊಂಡರು. ಅನುಕೂಲದ ಮದುವೆಯೆಂದು ಲೀ ಕರೆದ ಈ ಒಡಂಬಡಿಕೆಯಿಂದ ಅವರಿಗೆ ಬಲುದೊಡ್ಡ ಬೆಂಬಲ ಸಿಕ್ಕಿತು. ಮುಂದೆ ಬ್ರಿಟಿಷ್ ವಸಾಹತಿನಿಂದ ಸ್ವಾತಂತ್ಯಕ್ಕೋಸ್ಕರ ಮಲೇಷ್ಯಾದ ಜೊತೆ ಸೇರಿಕೊಂಡು ಸ್ವಾತಂತ್ರ್ಯಾನಂತರ ಸ್ವತಂತ್ರ ಸಿಂಗಪುರಕ್ಕೆ ಹೋರಾಡಿ ಸಿಂಗಪುರವನ್ನು ಸ್ವತಂತ್ರ ದೇಶವನ್ನಾಗಿಸಿದ ಹೆಗ್ಗಳಿಕೆ ಲೀ ಗೆ ಸೇರುತ್ತದೆ.
ತದನಂತರ 25 ವರ್ಷ ಪ್ರಧಾನ ಮಂತ್ರಿಯಾಗಿ ಹಾಗೂ ಮುಂದೆ ರಾಜಕೀಯ ಸಲಹೆಗಾರನಾಗಿ ಸಿಂಗಪುರವನ್ನು ಮುಂದುವರಿದ ದೇಶವನ್ನಾಗಿಸಿದ ಹಿರಿಮೆಯೂ ಲೀ ಗೆ ಸೇರುತ್ತದೆ. ಯಾವುದೇ ನೈಸರ್ಗಿಕ ಸಂಪತ್ತಿಲ್ಲದ, ಒಂದು ಕಾಲದಲ್ಲಿ ಕುಡಿಯುವ ನೀರಿಗೂ ಮಲೇಷ್ಯಾವನ್ನು ಅವಲಂಬಿಸಿದ್ದ, ಗಾತ್ರದಲ್ಲಿ ಕೇವಲ ನಮ್ಮ ಬೆಂಗಳೂರಿನಷ್ಟಿರುವ ಸಿಂಗಪುರ ಇಂದು ಭ್ರಷ್ಟಾಚಾರ ರಹಿತವಾಗಿದ್ದು, ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ, ಹೊಸಮಾದರಿಯ ಕೃಷಿ, ವೈದ್ಯಕೀಯ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಏಷ್ಯಾದ ಇತರೆ ದೇಶಗಳಗಿಂತ ಬಲು ಮುಂದಿದೆ. ಈ ಯಶಸ್ಸಿನ ಹಿಂದೆ ಲೀ ಯ ದೂರದೃಷ್ಟಿ ಇಚ್ಚಾಶಕ್ತಿ ಕ್ರಿಯಾಶೀಲತೆ ಕೊಡುಗೆ ಇದೆ.
ಆದರೆ ಇಷ್ಟೆಲ್ಲಾ ಹೆಗ್ಗಳಿಕೆಯ ಜೊತೆಗೆ ಹಲವು ಅಪವಾದಗಳೂ ಲೀ ಗೆ ಅಂಟಿಕೊಂಡಿವೆ. ಲೀ ತನ್ನ ರಾಜಕೀಯ ಎದುರಾಳಿಗಳನ್ನು ಸುಮ್ಮನೆ ಬಿಟ್ಟದ್ದಿಲ್ಲ. ಲೀಯನ್ನು ವಿರೋಧಿಸಿದವರಲ್ಲಿ ಹಲವರು ದಿವಾಳಿಎದ್ದು ಹೋಗಿದ್ದಾರೆ. ಮಾನನಷ್ಟ ಮೊಕದ್ದಮೆಗಳಲ್ಲಿ ದೊಡ್ಡ ಮೊತ್ತ ತೆತ್ತಿದ್ದಾರೆ! ಇಸ್ಲಾಂ ಧರ್ಮದ ಕುರಿತಾಗಿ ಲೀ ಹೇಳಿದರೆನ್ನಲಾದ ಹೇಳಿಕೆಗಳೂ ವಿವಾದವೆಬ್ಬಿಸಿದ್ದವು.

ಏನೇ ಆದರೂ ಲೀ ಅಸಾಮಾನ್ಯವಾದುದನ್ನು ಮಾಡಿ ತೋರಿದವರು. Third world ದೇಶವೊಂದನ್ನು First world ದೇಶವನ್ನಾಗಿಸಿದವರು. ವ್ಯವಹಾರದ ಮಾತುಕತೆಯ ಕೊನೆಗೆ ಲೀ ಯ ವಿಷಯ ಪ್ರಸ್ತಾಪಿಸಿದ ಮ್ಯಾನೇಜರ್ ’ಲೀ ಅವರು ಸಿಂಗಪುರಕ್ಕೆ ತಂದೆಯಂತಿದ್ದರು’ ಎಂದಾಗ ಅವಳ ಕಣ್ಣಾಲಿಗಳು ತುಂಬಿದ್ದವು. 

Wednesday, November 26, 2014

ಆ ಎರಡು ನಿಮಿಷದಲ್ಲಿ ಏನೆಲ್ಲಾ ಮಾಡಬಹುದು!


ಈ ಬರಹವನ್ನು ಪ್ರಕಟಿಸಿದ ಪ್ರಜಾವಾಣಿ ಬಳಗಕ್ಕೆ ಧನ್ಯವಾದಗಳು. ಪ್ರಕಟಣೆ: ೨೬.೧೧.೨೦೧೪
=======================================================

ಆ ಎರಡು ನಿಮಿಷದಲ್ಲಿ ಏನೆಲ್ಲಾ ಮಾಡಬಹುದು!


ಪೂರ್ತಿಯಾಗಿ ಹಾಡಿದರೆ ಸುಮಾರು ಮೂರೂವರೆ ನಿಮಿಷ ಬೇಕು; ಎಷ್ಟೊಂದು ಸಮಯ ವ್ಯರ್ಥ! ಸರಿಯಾಗಿ ಒಂದು ನಿಮಿಷ ಇಪ್ಪತ್ತಾರು ಸೆಕೆಂಡಿನಲ್ಲಿ ಹಾಡಿ ಮುಗಿಸಿದರೆ ಸುಮಾರು ಎರಡು ನಿಮಿಷ ನಾಲ್ಕು ಸೆಕೆಂಡು ಉಳಿಯುತ್ತದೆ. ಇವತ್ತಿನ ಕಾಲದಲ್ಲಿ ಸಮಯ ಅಂದರೆ ಹಣ (time is money)! ಕರ್ನಾಟಕದ ಪ್ರತಿ ನಾಗರಿಕನೂ ಉಳಿಸುವ ಸಮಯ ಲೆಕ್ಕ ಹಾಕಿದರೆ ಸುಮಾರು ಹದಿಮೂರು ಕೋಟಿ ನಿಮಿಷಗಳು ಅಂದರೆ ಸುಮಾರು ಇಪ್ಪತ್ತೊಂದು ಲಕ್ಷ ಗಂಟೆಗಳು ಅಂದರೆ ಸುಮಾರು ತೊಂಬತ್ತು ಸಾವಿರ ದಿವಸಗಳು ಅಂದರೆ ಸುಮಾರು ಇನ್ನೂರ ನಲವತ್ತೇಳು ವರ್ಷಗಳು! ಕನ್ನಡ ಎನೆ ಕುಣಿದಾಡುವ ಗೇಹಗಳು ವರುಷವೊಂದರಲ್ಲಿ ಅದೆಷ್ಟು ಬಾರಿ ನಾಡಗೀತೆ ಹಾಡುತ್ತೇವೆ ಮತ್ತು ಎಷ್ಟು ಸಮಯ ಉಳಿಸಬಹುದು ನೀವೇ ಲೆಕ್ಕ ಹಾಕಿಕೊಳ್ಳಿ!
ಹೀಗೆ ಉಳಿಸುವ ಸಮಯದಲ್ಲಿ ಕರ್ನಾಟಕಕ್ಕೋಸ್ಕರ ಎಷ್ಟೆಲ್ಲಾ ಕೆಲಸ ಮಾಡಬಹುದು! ನಾಡಗೀತೆಯ ಮೇಲಿನ ಕತ್ತರಿ ಪ್ರಯೋಗದಿಂದ ಕರ್ನಾಟಕಕ್ಕೆ ಎಂತಹ ಅದ್ಭುತ ಉಳಿತಾಯ! ರಸಋಷಿ ಇದನ್ನೆಲ್ಲಾ ಆಲೋಚಿಸದೇ ಉದ್ದ ಮಾಡಿಬಿಟ್ಟರು ತಮ್ಮ ಕವಿತೆಯನ್ನು!

ಕವಿಗೆ ಈ ಸಮಯ ಉಳಿತಾಯ, ಆ ಮೂಲಕ ಆಗುವ ದುಡ್ಡಿನ ಉಳಿತಾಯ, ಜಾತಿ ರಾಜಕೀಯ, ಸೆಕ್ಯುಲರಿಸಂ, ಓಲೈಕೆ ರಾಜಕಾರಣ, ಒಡೆದು ಆಳುವ ನೀತಿ ಇವೆಲ್ಲದರ ಬಗ್ಗೆ ಗಮನವೇ ಇದ್ದಂತಿಲ್ಲ! ಯಾವುದೇ ಮುಲಾಜಿಲ್ಲದೆ ಕರ್ನಾಟಕದ ಸೌಂದರ್ಯವನ್ನು, ವೈಶಿಷ್ಟ್ಯಗಳನ್ನು, ನದಿಗಳನ್ನು, ಗಿರಿಗಳನ್ನು, ಕರ್ನಾಟಕ ಕಂಡ ಪ್ರಮುಖ ಅರಸು ಮನೆತನಗಳನ್ನು, ಮಹಾ ಕವಿಗಳನ್ನು, ತತ್ತ್ವಜ್ಞಾನಿಗಳನ್ನು ಹೀಗೆ ಎಲ್ಲರನ್ನೂ ಸೇರಿಸಿ ಕರ್ನಾಟಕವನ್ನು ವರ್ಣಿಸಿಬಿಟ್ಟಿದ್ದಾರೆ. ಕವಿಗೇನೋ ಕಾವ್ಯಸೃಷ್ಟಿ ಒಂದು ತಪಸ್ಸು. ಅಂತಹ ತಪಸ್ಸಿನ ಫಲವೇ ನಮ್ಮ ಸುಂದರ ನಾಡಗೀತೆ. ಆದರೆ ನಮಗೆ ಅದನ್ನು ನೆನಪಿಟ್ಟುಕೊಂಡು ಹಾಡಲು ಪುರುಸೊತ್ತೆಲ್ಲಿದೆ!

ನಮಗೆ ಮಾಡಲು ಬಹಳಷ್ಟು ಕೆಲಸಗಳಿವೆ! ನಾಡಗೀತೆಯ ಕತ್ತರಿ ಪ್ರಯೋಗದಿಂದ ಉಳಿಸುವ ಸಮಯದಲ್ಲಿ ಖಂಡಿತಾ ಕರ್ನಾಟಕವನ್ನು ಅಭಿವೃದ್ಧಿ ಮಾಡಬಹುದು. ಕನಿಷ್ಠ ಕನ್ನಡದ ಅಭಿವೃದ್ಧಿ ಕೆಲಸವನ್ನಂತೂ ಮಾಡಬಹುದು.

ಕನ್ನಡದ ಅಭಿವೃದ್ಧಿ ಅಂದರೇನು? ನಮ್ಮ ಸರಕಾರಕ್ಕಾಗಲೀ ಕನ್ನಡ ಅಭಿವೃದ್ಧಿ ಇಲಾಖೆಗಾಗಲಿ ಈ ಬಗ್ಗೆ ಖಚಿತ ಕಲ್ಪನೆ ಇದ್ದಂತಿಲ್ಲ. ಕನ್ನಡ ಅಭಿವೃದ್ಧಿ ಎಂದಾಕ್ಷಣ ಒಂದಷ್ಟು ಕಾರ್ಯಕ್ರಮಗಳಾಗುತ್ತವೆ. ಅದಕ್ಕೆ ಒಂದಷ್ಟು ಹಣ ಬಿಡುಗಡೆಯಾಗುತ್ತದೆ. ಇಲಾಖೆಯ ಅಧಿಕಾರಿಗಳನ್ನೊ, ಗುಮಾಸ್ತರನ್ನೊ ’ಸರಿಯಾಗಿ ಹಿಡಿದವರಿಗೆ’ ಕಾರ್ಯಕ್ರಮ ಮಾಡುವ ಅವಕಾಶ ಸಿಗುತ್ತದೆ! ಇನ್ನು ಕಾರ್ಯಕ್ರಮ ಆಯೋಜಕರನ್ನು ಸರಿಯಾಗಿ ಹಿಡಿದವರಿಗೆ ಕಾರ್ಯಕ್ರಮದಲ್ಲಿ ಒಂದು ನೃತ್ಯಕ್ಕೋ, ಕವನ ವಾಚನಕ್ಕೋ, ಭಾಷಣಕ್ಕೋ ಅವಕಾಶ ಸಿಗುತ್ತದೆ. ಆಯೋಜಕರ ಹಾಗೂ ಕಾರ್ಯಕ್ರಮದಲ್ಲಿ ಏನಾದರೂ ಪ್ರದರ್ಶನ ನೀಡುತ್ತಿರುವವರ ಆಪ್ತರು ಪ್ರೇಕ್ಷಕರು!

ಇನ್ನೊಂದು ದೊಡ್ಡ ಕಾರ್ಯಕ್ರಮ ಸಾಹಿತ್ಯ ಸಮ್ಮೇಳನ! ಇವೂ ದೊಡ್ಡದ್ದೇನನ್ನೂ ಸಾಧಿಸುತ್ತಿಲ್ಲ. ತಡವಾಗಿ ಪ್ರಾರಂಭವಾಗುವ ಉದ್ಘಾಟನಾ ಕಾರ್ಯಕ್ರಮ, ಊಟಕ್ಕಾಗಿ ನೂಕಾಟ, ತಡವಾಗಿ ಮುಗಿಯುವ ಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಮಧ್ಯರಾತ್ರಿಯವರೆಗೆ ಕಾದು ಕುಳಿತುಕೊಳ್ಳುವ ಪುಟ್ಟ ಮಕ್ಕಳು, ಕೊನೆಯ ದಿನ ಮಂಡನೆಯಾಗುವ ಸಮ್ಮೇಳನದ ನಿರ್ಣಯಗಳು; ಎಲ್ಲಾ ಒಂದೇ ರೀತಿ! ಅಲ್ಲಿ ಮಂಡನೆಯಾಗುವ ನಿರ್ಣಯಗಳನ್ನು ಕಾರ್ಯಗತಗೊಳಿಸುವವರು ಯಾರೆಂಬುದು ಮಾತ್ರ ಚರ್ಚೆಯಾಗುವುದಿಲ್ಲ. ನಮ್ಮ ಸಮ್ಮೇಳನಗಳ ಸ್ವರೂಪದಲ್ಲಿ ಒಂದಷ್ಟೂ ಬದಲಾವಣೆಯಾಗಲಿಲ್ಲ!

ನಮ್ಮ ಸಮ್ಮೇಳನಗಳ ಸ್ವರೂಪ ಬದಲಾಗಬೇಕಿದೆ! ಅವು ಕೇವಲ ಸೃಜನಶೀಲ ಸಾಹಿತ್ಯದ ಜಾತ್ರೆಯಾಗಬಾರದು. ಅದು ಕನ್ನಡದ ಹಬ್ಬವಾಗಬೇಕು. ಕನ್ನಡ ನಾಡಿನಲ್ಲಿರುವ ವೈವಿಧ್ಯತೆಗಳನ್ನು, ಸಂಸ್ಕೃತಿಯ ಸೊಗಡನ್ನು ಪ್ರದರ್ಶಿಸುವ ಹಬ್ಬವಾಗಬೇಕು. ಜನಸಾಮಾನ್ಯರು ಸಮ್ಮೇಳನಕ್ಕೆ ಬರುವಂತೆ ಆಗಬೇಕು.  ಜನಸಾಮಾನ್ಯರು ಯಾವಾಗ ಬರುತ್ತಾರೆ ಹೇಳಿ? ಒಂದು ಕುತೂಹಲ ಇರಬೇಕು ಇನ್ನೊಂದು ತನ್ನ ನಿತ್ಯ ಜೀವನಕ್ಕೆ ಉಪಯೋಗ/ಲಾಭ ಆಗುವಂತಹ ಏನಾದರೂ ಆಕರ್ಷಣೆ ಇರಬೇಕು. ಗಮನಿಸಿ, ಸಮ್ಮೇಳನದ ಸಭೆಗಿಂತ ಹೆಚ್ಚು ಜನ ಪುಸ್ತಕ ಮಾರಾಟ ಮಳಿಗೆಯಲ್ಲಿರುತ್ತಾರೆ! ಇಂತಹ ಮಳಿಗೆಗಳು ಪುಸ್ತಕ ಹಾಗೂ ಸಿ.ಡಿ.ಗಳಿಗೆ ಸೀಮಿತವಾಗದೇ ಕರ್ನಾಟಕದ ಹಲವಾರು ಸೃಜನಶೀಲ ಉತ್ಪನ್ನಗಳ, ಗುಡಿಕೈಗಾರಿಕೆಗಳ ಹಾಗೂ ಕನ್ನಡ ತಂತ್ರಾಂಶಗಳ ಪ್ರದರ್ಶನ ಮತ್ತು ಮಾರಾಟದ ಕೇಂದ್ರವಾಗಲಿ. ಸಾಂಸ್ಕೃತಿಕ ಕಾರ್ಯಕ್ರಮಗಳು ಕೊನೆಯ ಕಾರ್ಯಕ್ರಮಗಳಾಗಿರದೆ ಅವುಗಳಿಗೂ ಪ್ರಾಮುಖ್ಯತೆ ಸಿಗಲಿ. ಸಮ್ಮೇಳನಗಳಲ್ಲಿ ಆಗಬೇಕಾದ ಬದಲಾವಣೆಗಳಿಗೆ ಮೂಡಬಿದಿರೆಯ ಆಳ್ವಾಸ್ ನುಡಿಸಿರಿಯನ್ನೇ ಒಂದು ಮಾದರಿಯನ್ನಾಗಿ ತೆಗೆದುಕೊಳ್ಳಬಹುದು.  

ಭಾಷೆ ನಶಿಸಿ ಹೋಗುವುದು ದಿನನಿತ್ಯದ ವ್ಯವಹಾರಗಳಲ್ಲಿ ಅದರ ಬಳಕೆ ಸಾಧ್ಯವಿಲ್ಲ ಹಾಗೂ ಅಗತ್ಯವಿಲ್ಲ ಎಂದಾದಾಗ. ಭಾಷೆಯ ಬಳಕೆ ಸಾಧ್ಯವಿಲ್ಲದ ಹಂತ ಬಂದಾಗ ಪರ್ಯಾಯ ಭಾಷೆ ಹುಟ್ಟುತ್ತದೆ ಅಥವಾ ಬೇರೊಂದು ಭಾಷೆ ಬಳಕೆಗೆ ಬರುತ್ತದೆ. ಹೊಸ ಭಾಷೆಯ ಬಳಕೆ ರೂಢಿಯಾಗುತ್ತಿದ್ದಂತೆ ಹಳೆ ಭಾಷೆ ’ಅಗತ್ಯವಿಲ್ಲ’ ಎಂಬ ಸ್ಥಿತಿಗೆ ಬರುತ್ತದೆ.  ಕನ್ನಡ ಈ ಸ್ಥಿತಿಯ ಹತ್ತಿರ ತಲುಪುವ ಸಾಧ್ಯತೆಗಳೇ ಹೆಚ್ಚಾಗಿವೆ. ಮೊದಲನೆಯದಾಗಿ ತಂತ್ರಜ್ಞಾನ ಅಪಾರವಾದ ಬಳಕೆಯ ಈ ಕಾಲದಲಿ, ಕನ್ನಡದಲ್ಲಿ ಅದರ ಬಳಕೆ ಸಾಧ್ಯವಿಲ್ಲದ ಸ್ಥಿತಿಯಲ್ಲಿ ಹೊಸತನ್ನು ಕಲಿಯುವ ಅನಿವಾರ್ಯತೆ ಬರುತ್ತದೆ. ಉದಾಹರಣೆಗೆ ಮೊಬೈಲ್ ತೆಗೆದುಕೊಳ್ಳಿ. ಇವತ್ತು ಮೊಬೈಲ್ ಇಲ್ಲದ ವ್ಯಕ್ತಿಯೇ ಇಲ್ಲವೆನ್ನಬಹುದು. ಮೊಬೈಲ್ ಬಳಸಬೇಕಾದರೆ ಇಂಗ್ಲಿಷ್ ಕೊಂಚ ಗೊತ್ತಿರಬೇಕು. ಅನಕ್ಷರಸ್ಥನಾದರೂ ಮೊಬೈಲ್ ಬಳಕೆಗಾಗಿ ಒಂದಷ್ಟು ಇಂಗ್ಲಿಷ್ ಕಲಿತೇ ಕಲಿಯುತ್ತಾನೆ. ಅಲ್ಲಿಗೆ ಕನ್ನಡ ಕಲಿಯುವುದು ಅನಿವಾರ್ಯವಲ್ಲದಿದ್ದರೂ ನಾಲ್ಕಕ್ಷರ ಎ ಬಿ ಸಿ ಡಿ ಕಲಿಯುವುದು ಅನಿವಾರ್ಯವಾಯಿತು! ವ್ಯಾಪಾರಿಯೊಬ್ಬ ಅಂಗಡಿಯಲ್ಲಿ ಲೆಕ್ಕಾಚಾರ ಸಲುವಾಗಿ ಕಂಪ್ಯೂಟರ್ ಅಳವಡಿಸಿಕೊಂಡರೂ ಅದೇ ಕಥೆಯಾಗುತ್ತದೆ. ಮುಂದೆ ತನ್ನ ಮಕ್ಕಳಿಗೆ ಸಹಜವಾಗಿಯೇ ’ಇಂಗ್ಲಿಷ್ ಸರಿಯಾಗಿ ಕಲಿ’ ಎಂಬ ಸಲಹೆ ಮನೆಯಲ್ಲೇ ಪ್ರಾರಂಭ ಮಾಡುತ್ತಾನೆ. ಈಗಾಗಲೇ ಸಾಮಾನ್ಯ ಜನರ ಮಾತುಕತೆಗಳಲ್ಲಿ ಅರ್ಧದಷ್ಟು ಇಂಗ್ಲಿಷ್‍ ಶಬ್ದಗಳು ಬಳಕೆಯಲ್ಲಿವೆ. ಕನ್ನಡ ಕಲಿಯುವ ಅನಿವಾರ್ಯತೆ ಕಡಿಮೆಯಾಗುತ್ತಾ ಹೋಗುತ್ತಿದೆ!

ಕನ್ನಡ ಸಾಹಿತ್ಯ ಲೋಕ ಕನ್ನಡದಲ್ಲಿ ವಿಷಯ ಸಾಹಿತ್ಯ ಹಾಗೂ ತಂತ್ರಾಂಶಗಳ ಅಭಿವೃದ್ಧಿಯ ಕಡೆಗೆ ಅಸಡ್ಡೆ ತೋರುತ್ತಾ ಬಂದಿದೆ. ಕನ್ನಡ ತಂತ್ರಾಂಶದ ಪಿತಾಮಹ ಕೆ ಪಿ ರಾವ್ ಅವರು ಅಧ್ಯಕ್ಷರಾಗಿದ್ದ ಸಮ್ಮೇಳನದಲ್ಲೂ ಆಯೋಜಕರು ಕನ್ನಡದಲ್ಲಿ ವಿಷಯ ಸಾಹಿತ್ಯದ ಕುರಿತು ಅಥವಾ ತಂತ್ರಜ್ಞಾನದಲ್ಲಿ ಕನ್ನಡದ ಕುರಿತು ಒಂದು ಚರ್ಚೆಯನ್ನೂ ಆಯೋಜಿಸಿರಲಿಲ್ಲ! ಅವರ ಜೊತೆ ನಡೆದ ಸಂವಾದದಲ್ಲೂ ತಂತ್ರಾಂಶ ಅಭಿವೃದ್ಧಿಯ ಅವರ ಅನುಭವಗಳ ಕುರಿತು ಒಂದೆರಡು ಪ್ರಶ್ನೆಗಳು ಇತ್ತಾದರೂ ತಾಂತ್ರಿಕತೆಯ ಕುರಿತಾಗಿ ವಿಸ್ತೃತ ಚರ್ಚೆಯಾಗಲಿಲ್ಲ!

ಭಾಷೆ ಚರಿತ್ರೆಯನ್ನು ಭವಿಷ್ಯದ ಜೊತೆ ಬೆಸೆಯುವ ಸಾಧನ, ಅದು ಸಂಸ್ಕೃತಿಯನ್ನು ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ತಲುಪಿಸುವ ವಾಹನ. ಆದರೆ ಭವಿಷ್ಯವನ್ನು ಕಟ್ಟಿಕೊಳ್ಳುವುದಕ್ಕೆ ನನ್ನ ನಾಣ್ಣುಡಿಯನ್ನು ಕಲಿಯುವ ಅಗತ್ಯವಿಲ್ಲ ಹೊಸತೊಂದು ಭಾಷೆಯ ಅಗತ್ಯವಿದೆ ಎಂಬ ಪರಿಸ್ಥಿತಿಯಿದ್ದರೆ? ಇವತ್ತು ಕಂಪ್ಯೂಟರಿನಲ್ಲಿ, ಮೊಬೈಲ್‍ಗಳಲ್ಲಿ ಕನ್ನಡವನ್ನು ಬಳಸುತ್ತಿರುವವರಲ್ಲಿ ಹೆಚ್ಚಿನವರು ಭಾಷಾಭಿಮಾನದಿಂದ ಬಳಸುತ್ತಿದ್ದಾರೆಯೇ ಹೊರತು ’ಅನಿವಾರ್ಯತೆ’ಯಿಂದಲ್ಲ ಎಂಬುದು ನನ್ನ ಅಭಿಪ್ರಾಯ! ಅದು ಅನಿವಾರ್ಯವೇ ಆಗಿದ್ದರೆ ಸುಮಾರು ನಾಲ್ಕು ಕೋಟಿಗೂ ಅಧಿಕ ಸ್ಮಾರ್ಟ್‍ಫೋನಿಗಳು ಬಳಕೆಯಲ್ಲಿರುವ ಕರ್ನಾಟಕದಲ್ಲಿ ಕನ್ನಡ ತಂತ್ರಾಂಶಗಳ ಇಳಿಕೆಗಳ (download) ಸಂಖ್ಯೆ ಕೇವಲ ಒಂದೆರಡು ಲಕ್ಷಗಳಷ್ಟೇ ಇರುತ್ತಿರಲಿಲ್ಲ!

ಭವಿಷ್ಯಕ್ಕೆ ವಿಷಯ ಸಾಹಿತ್ಯ ಬೇಕು; ಚರಿತ್ರೆಯ, ಸಂಸ್ಕೃತಿಯ ಬೆಸುಗೆಗೆ ಸೃಜನಶೀಲ ಸಾಹಿತ್ಯ ಬೇಕು. ನಮ್ಮ ನಾಡಗೀತೆ ಹಾಗೂ ಅಂತಹ ಇನ್ನೂ ಅನೇಕ ಕೃತಿಗಳು ಕನ್ನಡ ನಾಡಿನ ಬಗ್ಗೆ, ಭಾಷೆಯ ಬಗ್ಗೆ ಅಭಿಮಾನ ಬೆಳೆಸುವ ಸಾಧಗಳಾಗಬೇಕು.
ಶಾಲೆಗಳಲ್ಲಿ ಪ್ರಾರ್ಥನೆಯ ಹೊತ್ತಿಗೆ, ಕನ್ನಡ ರಾಜ್ಯೋತ್ಸವದ ಆಚರಣೆಗಳಿಗೆ ಹಾಗೂ ಕನ್ನಡ ಸಾಹಿತ್ಯ ಸಮ್ಮೇಳನದಂತಹ ಕೆಲವೇ ಸಮಾರಂಭಗಳಿಗೆ ಸೀಮಿತವಾದ ನಾಡಗೀತೆಯನ್ನು ಪೂರ್ತಿಯಾಗಿ ಹಾಡಿದರೆ ಆಗುವ ನಷ್ಟವೇನೆಂದು ಅರ್ಥವಾಗುವುದಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ಸಮಾರಂಭಗಳಿಗೆ ತಡವಾಗಿ ಬರುವ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಹಾಗೂ ಅತಿಥಿಮಹಾಶಯರಿಗೆ ಕಾಯುವ ಹೊತ್ತಿನಲ್ಲಿ ನಾಡಗೀತೆಯನ್ನು ಪೂರ್ತಿಯಾಗಿ ಹಾಡಬಹುದು. ಹಾಗೂ ಆ ಸಮಯದಲ್ಲಿ ಕನ್ನಡತನವನ್ನು ಉಳಿಸುವ ಬೆಳೆಸುವ ಕೆಲಸ ಮಾಡಬಹುದು!

ಸಮೀರ ಸಿ ದಾಮ್ಲೆ

ಬ್ಯಾಂಕಾಕ್

ಹೊರನಾಡಿನಲ್ಲಿರುವ ಹುರುಪು ಉತ್ಸಾಹ ನಾಡಿನೊಳಗಿರದು!


ಈ ಬರಹವನ್ನು ಪ್ರಕಟಿಸಿದ ಪ್ರಜಾವಾಣಿಗೆ (೦೩.೧೧.೨೦೧೪) ಧನ್ಯವಾದಗಳು. 
=======================================================

ಹೌದು, ಮತ್ತೆ ರಾಜ್ಯೋತ್ಸವ ಬಂದಿದೆ. ಸರಕಾರದಿಂದ ಹಲವು ಸ್ತರಗಳಲ್ಲಿ ರಾಜ್ಯೋತ್ಸವದ ಆಚರಣೆಗೆ ಹಣ ಬಿಡುಗಡೆ ಆಗುತ್ತದೆ. ಗ್ರಾಮ, ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟಗಳಲ್ಲಿ ಹಬ್ಬ ನಡೆಯುತ್ತದೆ, ಕನ್ನಡದ ಬಗ್ಗೆ ಭೀಷಣ ಭಾಷಣಗಳು ನಡೆಯುತ್ತವೆ (ಅಲ್ಲೂ ತಪ್ಪು ತಪ್ಪಾಗಿ ಕನ್ನಡದಲ್ಲಿ ಭಾಷಣ ಮಾಡುವವರಿದ್ದಾರೆ). ಆದರೆ ಅಲ್ಲಿ ಕನ್ನಡದ ಬಗ್ಗೆ ನಿಜವಾದ ಕಾಳಜಿ ಎಷ್ಟಿದೆ ಎಂಬುದು ಪ್ರಶ್ನೆಯಾಗಿಯೇ ಉಳಿಯುತ್ತದೆ. ಇಂತಹ ಆಚರಣೆಗಳು ರಾಜಕೀಯ ನಾಯಕರಿಗೆ ಪ್ರಚಾರದ ವಸ್ತು. ಇನ್ನು ರಾಜಕೀಯದ ಹೊಸಮುಖಗಳಿಗೆ ಇಂತಹ ಕಾರ್ಯಕ್ರಮ ತಮ್ಮ ಸಂಘಟನಾ ಸಾಮರ್ಥ್ಯ ತೋರಿಸುವ, ರಾಜಕೀಯ ಗುರುಗಳ ಪ್ರೀತಿ ಸಂಪಾದಿಸುವ ಹಾಗೂ ತನಗೆ ಸಮಾಜದಲ್ಲಿ ಒಂದು ಗುರುತು (ಐಡೆಂಟಿಟಿ) ತರಿಸಿಕೊಳ್ಳುವ ಸಾಧನ. ಇನ್ನು ಬೆಂಗಳೂರಿನ ಕೆಲ ಸಂಸ್ಥೆಗಳು ಇರುವುದೇ ಚಂದಾ ಎತ್ತಿ ವರ್ಷಕ್ಕೊಂದು ’ಕನ್ಡರಾಜ್ಯೋಸ್ತವ’ ಆಚರಿಸುವುದಕ್ಕೆ (ಅವರಿಗೆ ರಾಜ್ಯೋತ್ಸವ ಅಂತ ಹೇಳುವುದಕ್ಕೂ ಬರುವುದಿಲ್ಲ). ಬೆಂಗಳೂರಿನ ಹೊರಗೆ ಸಾಮಾಜಿಕ ವ್ಯವಹಾರಗಳಲ್ಲಿ ಕನ್ನಡದ ಬಳಕೆ ಕೇಳಿಬರುತ್ತದಾದರೂ ಕನ್ನಡದ ಬಗೆಗಿನ ಕಳಕಳಿ ದಿನೇ ದಿನೇ ಕಡಿಮೆಯಾಗುತ್ತಿದೆ ಎಂಬುದು ಸತ್ಯ. ಕೆಲವೇ ಮಂದಿ, ಎಣಿಸಬಹುದಾದಷ್ಟು ಸಂಸ್ಥೆಗಳು ನಿಜಾರ್ಥದಲ್ಲಿ ಕನ್ನಡದ ಉತ್ಸವ ಮಾಡುತ್ತಾರೆ; ಮತ್ತು ಅವರು ಅದನ್ನು ಪ್ರತಿದಿನವೂ ಮಾಡುತ್ತಾರೆ. ಅವರಿಗೆ ರಾಜ್ಯೋತ್ಸವದ ನೆಪ ಬೇಕಾಗಿಲ್ಲ. ಒಟ್ಟಾರೆಯಾಗಿ ಕನ್ನಡ ನಾಡಿನಲ್ಲಿ ಕನ್ನಡ ರಾಜ್ಯೋತ್ಸವ, ಕನ್ನಡದ ಕಾಳಜಿ, ಕನ್ನಡದ ಬಳಕೆ ಎಲ್ಲಾ ನವಂಬರ್ ೧ ಎಂಬೊಂದು ದಿನಕ್ಕೆ ಸೀಮಿತವಾಗುತ್ತಿದೆ ಮತ್ತು ಇದು ತೋರಿಕೆಯ ವಿಷಯವಾಗಿಬಿಟ್ಟಿದೆ.

ಆದರೆ ಹೊರನಾಡಿನಲ್ಲಿ ಪರಿಸ್ಥಿತಿ ತುಂಬಾ ವಿಭಿನ್ನ! ದೇಶ ಬಿಟ್ಟವರು ಎಂದರೆ ಎಲ್ಲಾ ಬಿಟ್ಟವರು ಎಂಬ ಅಭಿಪ್ರಾಯ ಹಲವಾರು ಜನರಲ್ಲಿರಬಹುದು. ಆದರೆ ಯಾವತ್ತೂ ಏನನ್ನಾದರೂ ಕಳೆದುಕೊಂಡರೇ ಬೆಲೆ ತಿಳಿಯುವುದು ಎನ್ನುತ್ತಾರಲ್ಲ; ಹಾಗೆಯೇ ದೇಶ ಬಿಟ್ಟಾಗ ಏನನ್ನೋ ಕಳೆದುಕೊಳ್ಳುತ್ತಿದ್ದೇವೆ ಎಂಬ ಸಣ್ಣ ಆತಂಕ ಪ್ರಾರಂಭ ಆಗುತ್ತದೆ. ತನ್ನ ನೆಲದ ಮೇಲೆ ಭಾಷೆಯ ಮೇಲೆ ಅಭಿಮಾನ ಹೆಚ್ಚಲು ಪ್ರಾರಂಭವಾಗುತ್ತದೆ. ಕನ್ನಡದ ನೆಲದ ಸುದ್ದಿ, ಆಗುಹೋಗುಗಳ ಕುರಿತು ತಿಳಿದುಕೊಳ್ಳುವ ತುಡಿತ ಹೆಚ್ಚಾಗುತ್ತದೆ. ಇಂದಿನ ತಂತ್ರಜ್ಞಾನ ಯುಗದಲ್ಲಿ ಇದೇನೂ ಕಷ್ಟವಲ್ಲ. ತಂತ್ರಜ್ಞಾನದ ಸಹಾಯದಿಂದ ಬಹುಷಃ ಹೊರನಾಡ ಕನ್ನಡಿಗರು ನಾಡಿನೊಳಗಿರುವ ಕನ್ನಡಿಗರಿಗಿಂತ ಹೆಚ್ಚೇ ಕನ್ನಡಕ್ಕೆ ಹತ್ತಿರವಾಗುತ್ತಿದ್ದಾರೆ. ಪ್ರತಿನಿತ್ಯ ಬೆಳಗ್ಗೆ ಎದ್ದು ನಾನು ನೋಡುವ ಮೊಬೈಲ್ ತಂತ್ರಾಂಶ ಪ್ರಮುಖ ಕನ್ನಡ ದಿನಪತ್ರಿಕೆಗಳನ್ನು ಮೊಬೈಲಿನಲ್ಲಿ ಒದಗಿಸುವಂತಹದ್ದು. ಕನ್ನಡಿಗ ಮಿತ್ರರ ಜೊತೆಗಿನ ಮಾತುಕತೆಗಳಲ್ಲಿ ಚರ್ಚಿಗೆ ಬರುವ ವಿಷಯಗಳೂ ಕನ್ನಡದ್ದೇ. ಲೇಖನಗಳು, ಕನ್ನಡಿಗರ ಬ್ಲಾಗುಗಳು, ಬೆಂಗಳೂರು, ಮಂಗಳೂರು, ಮೈಸೂರಿನ ಸುದ್ದಿಗಳು!

ಯಾವುದೋ ಭಾಷೆ, ಸಂಸ್ಕೃತಿಯ ಮಧ್ಯೆ ಬದುಕುವ ಹೊರನಾಡ ಕನ್ನಡಿಗರಿಗೆ ಎಲ್ಲಾದರೂ ಕನ್ನಡ ಶಬ್ದಗಳು ಕೇಳಿದರೆ ಕಿವಿ ನೆಟ್ಟಗಾಗುತ್ತದೆ, ಮಾತು - ಪರಿಚಯವಾಗುತ್ತದೆ. ಇಲ್ಲಿ ಉತ್ತರ ದಕ್ಷಿಣ ಕರ್ನಾಟಕಗಳೆಂಬ ಭೇದವಿಲ್ಲ; ಜಾತಿ-ಮತ-ಪಂಥಗಳ ಪ್ರಶ್ನೆಯಿಲ್ಲ; ಕನ್ನಡಿಗರೆಂಬುದಷ್ಟೇ ಮುಖ್ಯ! ಇಂತಹ ಪರಿಚಯಗಳು ಕನ್ನಡ ಕೂಟಗಳ, ಸಂಘಗಳ ಹುಟ್ಟಿಗೆ ನಾಂದಿಯಾಗುತ್ತವೆ.  ಇಂತಹ ಕನ್ನಡ ಸಂಘಗಳು ನಮ್ಮ ನಡುವಿನ ಬೆಸುಗೆಯನ್ನು ಗಟ್ಟಿಮಾಡುತ್ತವೆ. ಕನ್ನಡ ಭಾಷೆಯ - ಸಂಸ್ಕೃತಿಯ ಪ್ರೀತಿಯನ್ನು ಹೆಚ್ಚುಮಾಡುತ್ತವೆ. ಹೊರನಾಡ ಕನ್ನಡಿಗರನ್ನು ಒಟ್ಟುಮಾಡುತ್ತವೆ. ಎಲ್ಲಾ ಕನ್ನಡಿಗರೂ ಜೊತೆಸೇರಬೇಕೆಂದು ಒಂದಿಲ್ಲೊಂದು ಕಾರಣ ಹುಡುಕಿ ಇಂತಹ ಸಂಘಗಳು ನಡೆಸುವ ಕಾರ್ಯಕ್ರಮಗಳು ನಿಜಾರ್ಥದಲ್ಲಿ ಕನ್ನಡದ ಉತ್ಸವಗಳಾಗಿರುತ್ತವೆ!

ನಮ್ಮ ಬ್ಯಾಂಕಾಕಿನಲ್ಲೂ ಒಂದು ಕನ್ನಡಿಗರ ಕೂಟವಿದೆ - ಥಾಯ್ ಕನ್ನಡ ಬಳಗ. ವರ್ಷಕ್ಕೆ ಮೂರು ನಾಲ್ಕು ಬಾರಿಯಾದರೂ ಸೇರುತ್ತೇವೆ. ರಾಜೋತ್ಸವ, ಯುಗಾದಿ, ಆಟೋಟ ಸ್ಪರ್ಧೆಗಳು, ಪ್ರವಾಸ ಹೀಗೆ ಯಾವುದಾದರೂ ಕಾರಣ ಸಿಗುತ್ತದೆ ಒಟ್ಟಾಗುವುದಕ್ಕೆ. ಕಾರಣ ಏನೇ ಆಗಿದ್ದರೂ ಪ್ರತೀ ಸಲ ಸೇರಿದಾಗ ಕನ್ನಡದ ಹಬ್ಬವಂತೂ ಆಗುತ್ತದೆ. ಕನ್ನಡ ನಾಡಿನ ಬಗ್ಗೆ ರಸಪ್ರಶ್ನೆ, ಕನ್ನಡ ಹಾಡುಗಳ ಅಂತ್ಯಾಕ್ಷರಿ, ಕರ್ನಾಟಕದ ನೃತ್ಯ-ನಾಟ್ಯ ವೈವಿಧ್ಯಗಳು, ಅಡುಗೆ ಸ್ಪರ್ಧೆ, ಖಾದ್ಯ ವೈವಿಧ್ಯಗಳು ಹೀಗೆ ಕನ್ನಡದ ಡಿಂಡಿಮ ಮೊಳಗುತ್ತದೆ. ಇದು ನವಂಬರ್ ೧ಕ್ಕೆ ಸೀಮಿತವಾದ ಚಟುವಟಿಕೆಗಳಲ್ಲ. ಪ್ರತೀ ಕೂಟವೂ ಕನ್ನಡದ ಹಬ್ಬವೇ. ಬ್ಯಾಂಕಾಕಿನಿಂದ ಇನ್ನೂರು ಮುನ್ನೂರು ಕಿಲೋಮೀಟರ್ ದೂರದೂರಲ್ಲಿ ನೆಲೆಸಿರುವ ಕುಟುಂಬಗಳೂ ಬಿಡುವು ಮಾಡಿಕೊಂಡು ಬರುತ್ತಾರೆ.

ವಿಪರ್ಯಾಸವೆಂದರೆ ಹಲವಾರು ಬಾರಿ ಇಂತಹ ಕಾರ್ಯಕ್ರಮಗಳಿಗೆ ನಾವು ಕರ್ನಾಟಕದಿಂದ ಆಹ್ವಾನಿಸಿದ ತಂಡದ ಸದಸ್ಯರುಗಳಿಗೇ ಸರಿಯಾಗಿ ಕನ್ನಡ ಮಾತನಾಡಲು ಬರುವುದಿಲ್ಲ! ಮೊದಲೇ ಹೇಳಿದೆನಲ್ಲಾ - ದೇಶ ಬಿಟ್ಟವರು ಎಲ್ಲಾ ಬಿಟ್ಟವರು ಎಂಬುದು ಮನಸ್ಸಿನಲ್ಲಿರುತ್ತದೆಯೇನೋ. ಹಾಗಾಗಿ ಕಳಪೆ ಸದಸ್ಯರಿದ್ದರೂ ಪರವಾಗಿಲ್ಲ ಎಂದು ಭಾವಿಸುತ್ತಾರೇನೋ! ಹೊರನಾಡಿನವರೆಂದರೆ ಅವರಿಗೆ ಕನ್ನಡದ ಬಗ್ಗೆ ಏನೂ ತಿಳಿದಿಲ್ಲ ಅಂದುಕೊಂಡು ಬರುವವರೇ ಹೆಚ್ಚು. ಇತ್ತೀಚೆಗೆ ಅಮೆರಿಕಾದ ಅಕ್ಕ ಸಮ್ಮೇಳನಕ್ಕೆ ಹೋಗುವುದಕ್ಕೆ ಸರಕಾರದ ಯಾವುದೋ ಇಲಾಖೆಯಿಂದ ಒಂದಷ್ಟು ಹಣ ಬಿಡುಗಡೆ ಮಾಡಿಸಿಕೊಂಡು ಹೊರಟಿದ್ದ ಒಂದು ತಂಡ ಬ್ಯಾಂಕಾಕ್ ಮೂಲಕ ಹೋಗುತ್ತಿತ್ತು. ವಾರದ ಮಧ್ಯವಾದರೂ ಊರಿನಿಂದ ಬರುತ್ತಿದ್ದಾರೆ ಎಂದು ಕಾರ್ಯಕ್ರಮ ಆಯೋಜಿಸಿದರೆ ಮೊದಲಾಗಿ ಸಮಯಕ್ಕೆ ಸರಿಯಾಗಿ ಬರಲಿಲ್ಲ. ತಡವಾಗಿ ಬಂದರೂ ಅವರಿಗೆ ಸಮಯದ ಚಿಂತೆ ಇರಲಿಲ್ಲ. ಇನ್ನು ಅದರಲ್ಲಿ ಅರ್ಧ ಮಂದಿಗೆ ಸರಿಯಾಗಿ ಕನ್ನಡ ಉಚ್ಛಾರ ಬರುತ್ತಿರಲಿಲ್ಲ. ಇನ್ನು ಒಬ್ಬರಂತೂ ಯಾರೋ ಬರೆದ ಬರಹವನ್ನು ತಪ್ಪುತಪ್ಪಾಗಿ ಓದಿ ನಮಗೆ ಕನ್ನಡ ಪಾಠ ಮಾಡಿದರು. ಸಂತಸವೆಂದರೆ ಒಂದಿಬ್ಬರು ಸುಂದರ ಚುಟುಕುಗಳನ್ನು ರಚಿಸಿ ನಗಿಸಿದರು. ಇನ್ನಿಬ್ಬರು ಕನ್ನಡ ಹಾಡುಗಳನ್ನು ಹಾಡಿ ನಮ್ಮನ್ನು ಕುಣಿಸಿದರು.

ಈ ವಾರ ರಾಜ್ಯೋತ್ಸವ ವಾರಾಂತ್ಯಕ್ಕೆ ಬಂದದ್ದರಿಂದ ನಮ್ಮಲ್ಲಿ ಎರಡೂ ದಿನ ಆಚರಣೆ, ಸಂಭ್ರಮ, ಕನ್ನಡದ ಹಬ್ಬ. ಇನ್ನು ನಾಲ್ಕು ತಿಂಗಳಲ್ಲಿ ಮತ್ತೊಮ್ಮೆ ನಮ್ಮಲ್ಲಿ ಕನ್ನಡದ ಹಬ್ಬ ಬರುತ್ತದೆ. ಕನ್ನಡ ನಾಡಿನೊಳಗೆ ಕಾದಂತೆ ಇನ್ನೊಂದು ನವಂಬರ್ ೧ರ ವರೆಗೆ ನಾವು ಕಾಯುವುದಿಲ್ಲ. ಸರಕಾರದ ಅನುದಾನಗಳ ಹಂಗಿಲ್ಲದೆ ನಮಗೋಸ್ಕರ ನಾವು ಮಾಡುವ ನಮ್ಮ ಕನ್ನಡದ ಹಬ್ಬದ ಸಂಭ್ರಮ ನಾಡಿನೊಳಗಿರದು!

ಸಮೀರ ಸಿ ದಾಮ್ಲೆ
ಬ್ಯಾಂಕಾಕ್


Thursday, July 24, 2014

ನಿದ್ದೆಯಿಂದ ಎಚ್ಚೆತ್ತು ಕೆಲಸ ಮಾಡಬೇಕು!



"ಅತ್ಯಾಚಾರಿಗಳ ರಕ್ಷಣೆಗೆ ಸರಕಾರ ನಿಂತಿಲ್ಲ, ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತಿದೆ. ಮೊಕದ್ದಮೆ ದಾಖಲಿಸುವಲ್ಲಿ ಲೋಪ ಎಸಗಿದ ಪೋಲಿಸ್ ಇನ್‍ಸ್ಪೆಕ್ಟರ್ ಅವರನ್ನೂ ಬಂಧಿಸಲಾಗಿದೆ. ರಾಜ್ಯದ ಇತಿಹಾಸದಲ್ಲಿಯೇ ತನಿಖಾಧಿಕಾರಿಯನ್ನು ಬಂಧಿಸಿರುವುದು ಇದೇ ಮೊದಲು. ಇದಕ್ಕಿಂತ ಮತ್ತೇನು ಮಾಡಲು ಸಾಧ್ಯ" ಹೀಗೆ ಹೇಳಿಕೆ ಕೊಟ್ಟದ್ದು ಕಪ್ಪು ಹಣ ಬಟುವಾಡೆ ಮಾಡಿ ಮೊದಲ ಬಾರಿಗೆ ಶಾಸಕನಾದ ಅನನುಭವಿಯಲ್ಲ. ಹೋರಾಟದ ಹಾದಿಯಲ್ಲಿ ಬೆಳೆದುಬಂದ ಸ್ವತಃ ಕಾನೂನನ್ನು ಅರಿತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರು. ಇದಕ್ಕೂ ದೊಡ್ಡ ವಿಪರ್ಯಾಸವೆಂದರೆ ರಾಜ್ಯದಲ್ಲಿ ಆಗುತ್ತಿರುವ ಅತ್ಯಾಚಾರಗಳ ಬಗ್ಗೆ ಸದನದಲ್ಲಿ ಚರ್ಚೆ ನಡೆಯುತ್ತಿದ್ದಾಗ ಇವರು ನಿದ್ದೆಮಾಡುತ್ತಿದ್ದರು. ಮುಖ್ಯಮಂತ್ರಿಯವರ, ಗೃಹಸಚಿವರ ಹೇಳಿಕೆಗಳು ಪಕ್ಕಾ ಪಲಾಯನವಾದದ ಹೇಳಿಕೆಗಳಾಗಿವೆ. ಯಾವುದೇ ಅಧಿಕಾರವಿಲ್ಲದ, ಸ್ಥಾನವಿಲ್ಲದ, ಆರ್ಥಿಕ ಬಲವೂ ಇಲ್ಲದ ಒಬ್ಬ ಸಾಮಾನ್ಯ ಮನುಷ್ಯ ಕೈಚೆಲ್ಲಿ ಕುಳಿತಂತೆ ಸರಕಾರವೂ ನಡೆದುಕೊಳ್ಳುತ್ತಿದೆ! ಅಷ್ಟೇ ಅಲ್ಲ ಇದು ರಾಜ್ಯದಲ್ಲಿ ಅಧಿಕಾರದಲ್ಲಿರುವವರಿಗೆ ಕನಿಷ್ಠ ಜವಾಬ್ದಾರಿ ಹಾಗೂ ದೂರದೃಷ್ಟಿ ಇಲ್ಲವೆಂಬುದನ್ನೂ ಸಾರಿ ಹೇಳಿದಂತಿದೆ!

ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಮಹಿಳೆಯರ ಹಾಗೂ ಮಕ್ಕಳ ಶೋಶಣೆ ಇಂಥ ಕುಕೃತ್ಯಗಳನ್ನು ತಡೆಯಲು ಕಾನೂನನ್ನು ಬಲವರ್ಧಿಸುವುದು ತಕ್ಷಣದ ಪರಿಹಾರವಾದರೂ ಯಾಕೆ ಇಂತಹ ಘಟನೆಗಳ ಸಂಖ್ಯೆ ಹೆಚ್ಚುತ್ತಿದೆ ಇದರ ಮೂಲಕಾರಣ ಏನು, ಸಮಾಜ ಸ್ವಾಸ್ಥ್ಯ ಕೆಡುತ್ತಿರುವುದರ ಹಿಂದಿರುವ ಕಾರಣಗಳೇನು ಎಂಬುದರ ಮೂಲ ಕಾರಣದ ವಿಶ್ಲೇಷಣೆ (ರೂಟ್ ಕಾಸ್ ಅನಾಲಿಸಿಸ್) ಆಗಬೇಕಿದೆ. ಎಲ್ಲಾ ಜವಾಬ್ದಾರಿಯನ್ನು ಪೋಲೀಸ್ ಇಲಾಖೆಯ ಮೇಲೆ ಹಾಕಿ ಕೈಕಟ್ಟಿ ಕುಳಿತರೆ ಆಗುವುದಿಲ್ಲ. ಪೋಲೀಸ್ ಭಯದಿಂದ ಹೊರಗೆ ನಡೆಯುವ ಅತ್ಯಾಚಾರಗಳು ಕೊಂಚ ಹತೋಟಿಗೆ ಬರುವುದು ಸಾಧ್ಯವಿದೆ. ಆದರೆ ಮಹಿಳೆಯರ ಮೇಲಿನ ದೌರ್ಜನ್ಯ ನಾವು ಮಾಧ್ಯಮಗಳಲ್ಲಿ ನೋಡುತ್ತಿರುವ ಪ್ರಕರಣಗಳಿಗೆ ಸೀಮಿತವಾಗಿಲ್ಲ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ (ನ್ಯಾಷನಲ್ ಫ್ಯಾಮಿಲೀ ಹೆಲ್ತ್ ಸರ್ವೇ) ಮಾಹಿತಿಯ ಪ್ರಕಾರ ಭಾರತದಲ್ಲಿ ೩೫% ಮಹಿಳೆಯರು ಇಂಟಿಮೇಟ್ ಪಾರ್ಟ್ನರ್ ವಯಲೆನ್ಸ್’ (Intimate partner violence) ಅನುಭವಿಸಿದ್ದಾರೆ. ಅಂದರೆ ತನ್ನ ಪತಿ ಅಥವಾ ಸಂಗಾತಿಯಿಂದಲೇ ದೌರ್ಜನ್ಯವನ್ನು ಅನುಭವಿಸಿದ್ದಾರೆ. ನಾಲ್ಕು ಗೋಡೆಗಳ ಮಧ್ಯೆ ನಡೆಯುತ್ತಿರುವ ಇಂತಹ ಅದೆಷ್ಟೋ ದೌರ್ಜನ್ಯಗಳು ನಿಲ್ಲಲ್ಲು ಮನಃಸ್ಥಿತಿಯ ಬದಲಾವಣೆಯ ಅಗತ್ಯವಿದೆ. ಅದು ಕೇವಲ ಕಾನೂನಿನ ಭಯದಿಂದಾಗುವ ಬದಲಾವಣೆಯಲ್ಲಜ್ಞಾನದಿಂದ ಹಾಗೂ ಉತ್ತಮ ಸಾಮಾಜಿಕ ವಾತಾವರಣದಿಂದಾಗಬಹುದಾದ ಬದಲಾವಣೆ.

ಇವತ್ತು ಅತ್ಯಾಚಾರದ ಆರೋಪವನ್ನೆದುರಿಸುತ್ತಿರುವವರಲ್ಲಿ ಪುಂಡ ಪೋಕರಿಗಳಿಂದ ಹಿಡಿದು ಶಿಕ್ಷಕರು, ಅಧಿಕಾರಿಗಳು, ಶಾಸಕರು, ವೈದ್ಯರು, ಧರ್ಮಗುರುಗಳು, ಸಂತರು (ಸಂತರೆಂದು ಘೋಷಿಸಿಕೊಂಡವರೆಂದು ಹೇಳುವುದು ಹೆಚ್ಚು ಸಮಂಜಸ) ಹೀಗೆ ಹಲವಾರು ಗೌರವಯುತ ಸ್ಥಾನಗಳನ್ನಲಂಕರಿಸಿದವರೂ, ಉನ್ನತ ಶಿಕ್ಷಣವನ್ನು ಪಡೆದವರೂ ಇದ್ದಾರೆ. ಅಂದರೆ ನಮ್ಮ ಶಿಕ್ಷಣ ನಮ್ಮನ್ನು ಓದು ಬರಹ ಬಲ್ಲವರನ್ನಾಗಿಸಿದೆಯೇ ಹೊರತು ನಿಜಾರ್ಥದಲ್ಲಿ ಮಾನವರನ್ನಾಗಿಸಲಿಲ್ಲ! ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಜೀವನಮೌಲ್ಯಗಳನ್ನು ಅಳವಡಿಸುವತ್ತ ಗಮನ ಇಲ್ಲದಿರುವುದು ಇದಕ್ಕೆ ಒಂದು ಕಾರಣ.
ಇನ್ನು ಲೈಂಗಿಕ ಶಿಕ್ಷಣ ಅವಶ್ಯಕತೆಯೂ ಇದೆ. ಲೈಂಗಿಕ ಶಿಕ್ಷಣ ಅಂದರೆ ಕೇವಲ ಮಾನವ ಜನನಾಂಗಳ ಪಾಠವಲ್ಲ (ಆ ಪಾಠವನ್ನೂ ನೀವೇ ಓದಿಕೊಳ್ಳಿ ಎಂದು ಬಿಟ್ಟುಬಿಡುವ ಶಿಕ್ಷಕರೇ ಹೆಚ್ಚು).
ಲೈಂಗಿಕ ಶಿಕ್ಷಣದ ಪಠ್ಯವನ್ನು ತಯಾರಿಸಬೇಕಾದವರು ಕೇವಲ ಜೀವಶಾಸ್ತ್ರದ ಪ್ರಾಧ್ಯಾಪಕರಷ್ಟೇ ಅಲ್ಲ! ಇದರಲ್ಲಿ ಮನಃಶಾಸ್ತ್ರಜ್ಞರ ಸಕ್ರಿಯ ಪಾಲ್ಗೊಳ್ಳುವಿಕೆ ಅಗತ್ಯ. ಯಾವ ವಯಸ್ಸಿನಲ್ಲಿ ಯಾವ ಮಾಹಿತಿಯನ್ನು ಹೇಗೆ ಹೇಳಬೇಕು ಎಂಬುದನ್ನು ಮನಃಶಾಸ್ತ್ರಜ್ಞರು ನಿರ್ಧರಿಸಬಲ್ಲರು. ಒಂದು ಮಗುವಿಗೆ ಸುಮಾರು ನಾಲ್ಕನೇ ವಯಸ್ಸಿನಿಂದ ಹಂತ ಹಂತವಾಗಿ ಲೈಂಗಿಕ ಶಿಕ್ಷಣ ಕೊಡಬಹುದು ಎಂದು ಮನಃಶಾಸ್ತ್ರಜ್ಞರು ಹೇಳುತ್ತಾರೆ. ಪುರುಷರ ಲೈಂಗಿಕ ಸಂಕೇತಗಳನ್ನು ಸರಳವಾಗಿ ತಿಳಿಹೇಳಬಹುದಾದ ವಿಡಿಯೋಗಳೂ ಲಭ್ಯವಿದೆ. ಇವತ್ತು ಎಷ್ಟೋ ಹೆಣ್ಣುಮಕ್ಕಳಿಗೆ ಈ ಸಂಕೇತಗಳ ಜ್ಞಾನವಿಲ್ಲದಿರುವುದರಿಂದ ಪುರುಷನ ಸಾಮೀಪ್ಯ ಗೆಳೆತನದ್ದೋ ಅಥವಾ ಕೆಟ್ಟ ಆಲೋಚನೆಗಳಿಂದ ಕೂಡಿದ್ದೋ ಎಂದು ಮುಂಚಿತವಾಗಿ ತಿಳಿಯಲು ಸಾಧ್ಯವಾಗುತ್ತಿಲ್ಲ. ಇನ್ನು ಸರಿಯಾದ ರೀತಿಯಲ್ಲಿ ಲೈಂಗಿಕ ಶಿಕ್ಷಣ ನೀಡದಿದ್ದರೆ ಕುತೂಹಲದಿಂದ ಮಕ್ಕಳು ಇಂಟರ್‌ನೆಟ್‍ನ ಮೊರೆ ಹೋಗುತ್ತಾರೆ. ಇದರಿಂದ ವಿಕೃತ ಮನಸ್ಸುಗಳು ತಯಾರಾಗುವ ಸಂಭವವೇ ಹೆಚ್ಚು!

ಮನುಷ್ಯನ ಲೈಂಗಿಕ ವರ್ತನೆಗಳು ಇತರೆ ಪ್ರಾಣಿಗಳಿಗಿಂತ ಬಲು ಭಿನ್ನವಾದದ್ದು. ಖ್ಯಾತ ಮನಃಶಾಸ್ತ್ರಜ್ಞರಾದ ಕ್ಲಿಫೋರ್ಡ್ ಮೋರ್ಗನ್ ಹಾಗೂ ರಿಚರ್ಡ್ ಕಿಂಗ್ ತಮ್ಮ ಇಂಟ್ರೊಡಕ್ಷನ್ ಟು ಸೈಕೋಲಜಿ’ (Introduction to Psychology) ಎಂಬ ಪುಸ್ತಕದಲ್ಲಿ ಮಾನವನ ಲೈಂಗಿಕ ವರ್ತನೆಯ ಬಗ್ಗೆ ವಿವರಿಸುತ್ತಾ ಹೀಗೆ ಬರೆಯುತ್ತಾರೆ - ’ಸ್ತ್ರೀಯರಲ್ಲಿ ದೇಹದ ಈಸ್ಟ್ರೋಜನ್ ಪ್ರಮಾಣ ಮತ್ತು ಲೈಂಗಿಕ ಆಸ್ಕ್ತಿಯ ಬಗೆಗಿನ ಪ್ರಯೋಗಗಳಿಂದ ಹಾರ್ಮೋನುಗಳಿಗೆ ಮತ್ತು ಬೆದೆ ಬರುವುದಕ್ಕೆ ನೇರ ಸಂಬಂಧ ಕಲ್ಪಿಸುವುದು ಸಾಧ್ಯವಾಗಿಲ್ಲ. ಇಲ್ಲಿ ಬಾಹ್ಯ ಸಂಕೇತಗಳು (ಸಿಗ್ನಲ್) ಹೆಚ್ಚು ಕೆಲಸ ಮಾಡುತ್ತವೆ. ಪುರುಷರಲ್ಲಿ ಲೈಂಗಿಕ ಭಾವನೆಗಳು ಹುಟ್ಟಲು ಒಂದು ಪ್ರಮಾಣದ ಟೆಸ್ಟೋಸ್ಟೆರೋನ್ ಬೇಕು. ಆದರೆ ಇದರ ಪ್ರಮಾಣ ಹೆಚ್ಚಾಗುವುದರಿಂದ ಲೈಂಗಿಕ ಆಸಕ್ತಿ ಹೆಚ್ಚಾಗುವುದಿಲ್ಲ! ಪುರುಷನಿಗೆ ಬಾಹ್ಯ ಸಂಕೇತಗಳಿಂದಷ್ಟೇ ಬೆದೆ ಬರುವುದಕ್ಕೆ ಸಾಧ್ಯ! ಈ ಸಂಕೇತಗಳು ಸ್ತ್ರೀಯ ರೂಪ, ಹಾವ-ಭಾವ, ಸ್ವರ, ಉಡುಗೆ ಹಾಗೂ ದೇಹದ ವಾಸನೆಗಳಿಂದ ಹುಟ್ಟಬಹುದು’.

ಇದರ ಹೊರತಾಗಿ ಮನುಷ್ಯನ ಲೈಂಗಿಕ ವರ್ತನೆಯಲ್ಲಿ ಪ್ರಮುಖ ಪಾತ್ರ ವಹಿಸುವ ಹಾಗೂ ಬೆದೆ ಬರಿಸುವ ಸಂಕೇತಗಳನ್ನು ಹುಟ್ಟಿಸುವ ಇನ್ನೊಂದು ಅಂಶ ವ್ಯಕ್ತಿಯ ಬಾಲ್ಯದ ಅನುಭವಗಳು! ಇದು ಮನೆ, ಪರಿಸರ ಹಾಗೂ ಸಮಾಜದಲ್ಲಿ ನೋಡಿದ ವಿಷಯಗಳಿಂದ ಮನಸ್ಸಿನ ಮೇಲಾಗುವ ಪರಿಣಾಮಗಳ ಒಟ್ಟು ಪ್ರಭಾವ. ಈ ಅನುಭವಗಳು ನಾವು ಸಾಮಾಜದಲ್ಲಿ ನಡಕೊಳ್ಳುವ ರೀತಿಯ ಮೇಲೆ ಅಗಾಧ ಪ್ರಭಾವ ಬೀರುತ್ತದೆ. ಇದನ್ನು ಮೋರ್ಗನ್ ಮತ್ತು ಕಿಂಗ್ ಸೋಷಲ್ ಮೋಟಿವ್ (social motive) ಅನ್ನುತ್ತಾರೆ. ಯಾಕಂದೆರೆ ಈ ಅನುಭವಗಳು ನಾವು ನಮ್ಮ ಸಮಾಜದಿಂದ ಕಲಿತದ್ದು. ಈ ಅನುಭವಗಳು ನಮ್ಮ ಸಾಧನೆ, ಪ್ರೀತಿ, ತಿರಸ್ಕಾರ, ಆಕ್ರಮಣಶೀಲತೆ, ಸ್ವಾಯತ್ತತೆ, ಪ್ರತಿಕ್ರಿಯೆ, ರಕ್ಷಣೆ ಹೀಗೆ ಹಲವಾರು ನಡೆಗಳನ್ನು/ವರ್ತನೆಗಳನ್ನು ರೂಪಿಸುತ್ತದೆ. ಇದರಲ್ಲಿ ಆಕ್ರಮಣಶೀಲತೆ ಕೆಟ್ಟ ಸ್ವರೂಪವನ್ನು ಪಡೆದಾಗ ಅದು ಹಿಂಸೆ, ದೌರ್ಜನ್ಯ ಹಾಗೂ ಅತ್ಯಾಚಾರದಂತಹ ಪ್ರಕರಣಗಳಿಗೆ ಕಾರಣವಾಗುತ್ತದೆ. ಇಲ್ಲಿ ಗಮನಿಸಬೇಕಾದ ಅಂಶ ಅಂದರೆ ಈ ಆಕ್ರಮಣಶೀಲತೆಯ ಮಾದರಿ ವ್ಯಕ್ತಿಗೆ ಸಿಕ್ಕಿದ್ದು ನಮ್ಮ ಸಮಾಜದಿಂದಲೇ! ಅದು ಮನೆಯಲ್ಲಿ ನೋಡಿದ ಅಪ್ಪ ಅಮ್ಮನ ಜಗಳದಿಂದಿರಬಹುದು, ಪರಿಸರದಲ್ಲಿ ನೋಡಿದ ಹೊಡೆದಾಟಗಳಿಂದಿರಬಹುದು, ಧಾರಾವಾಹಿ, ಸಿನೆಮಾ ಅಥವಾ ಅಂತರ್ಜಾಲದಲ್ಲಿ ನೋಡಿದ ಹಿಂಸೆಯಿಂದಿರಬಹುದು, ಅನುಭವಿಸಿದ ಅವಮಾನದಿಂದಿರಬಹುದು ಅಥವಾ ಇನ್ನ್ಯಾವುದೇ ಮಾಧ್ಯಮದಿಂದಿರಬಹುದು!

ಹಾಗಾಗಿ ನಮ್ಮ ಸಮಾಜದಲ್ಲಿ ಯಾವ ಬೆಳವಣಿಗೆಗಳು ಈ ರೀತಿಯ ಕೆಟ್ಟ ಅನುಭವಗಳನ್ನು ಸೃಷ್ಟಿಸುತ್ತಿವೆ, ಯಾವ ಮಾಧ್ಯಮದಿಂದ ಮನುಷ್ಯನ ಮನಸ್ಸಿನ ಮೇಲೆ ನಕಾರಾತ್ಮಕ ಅನುಭವಗಳಾಗುತ್ತಿವೆ ಹಾಗೂ ಇದನ್ನು ತಡೆಗಟ್ಟಲು ಯಾವ ರೀತಿಯ ಕ್ರಮ ಕೈಗೊಳ್ಳಬಹುದು ಎಂಬುದರ ಬಗ್ಗೆ ಅಧ್ಯಯನವಾಗಬೇಕು. ಸರಕಾರ ಈ ಕೆಲಸವನ್ನು ಪೋಲೀಸ್ ಇಲಾಖೆಯ ತಲೆಗೆ ಕಟ್ಟುವುದಲ್ಲ. ಅವರಿಗೆ ಸದ್ಯದ ಪರಿಸ್ಥಿತಿಯನ್ನು ಹತೋಟಿಗೆ ತರುವ ತಲೆನೋವು ಈಗಾಗಲೇ ಇದೆ. ಹಾಗೆಂದು ಸಾಹಿತಿಗಳ ಶಿಫಾರಸು ಕೇಳುವುದೂ ಅಲ್ಲ. ಇದರ ಅಧ್ಯಯನಕ್ಕೆ ಸಮಸ್ಯೆಯನ್ನು ಬೇರೆ ಬೇರೆ ದೃಷ್ಟಿಕೋನಗಳಿಂದ ನೋಡಬಲ್ಲ, ವಿಶ್ಲೇಷಿಸಬಲ್ಲ ತಜ್ಞರ ಅಗತ್ಯತೆಯಿದೆ. ಅಪರಾಧಶಾಸ್ತ್ರಜ್ಞರು, ಮನಃಶಾಸ್ತ್ರಜ್ಞರು, ಸಮಾಜಶಾಸ್ತ್ರಜ್ಞರು, ಅರ್ಥಶಾಸ್ತ್ರಜ್ಞರು ಹೀಗೆ ವಿವಿಧ ವಿಷಯ ಪರಿಣಿತರಿಂದ ಜಂಟಿಯಾಗಿ ಅಧ್ಯಯನವಾಗಬೇಕು. ಹಾಗೂ ಸಾಮಾಜಿಕ ಪಿಡುಗಾಗಿ ಬೆಳೆಯುತ್ತಿರುವ ಈ ಸಮಸ್ಯೆಯನ್ನು ಪರಿಹರಿಸಲು ಸರಕಾರ ನಿದ್ದೆಯಿಂದ ಎಚ್ಚೆತ್ತು ಕೆಲಸ ಮಾಡಬೇಕು.

ಸಮೀರ ಸಿ ದಾಮ್ಲೆ
ಬ್ಯಾಂಕಾಕ್

24 ಜುಲೈ 2014, ಪ್ರಜಾವಾಣಿ. ಬರಹವನ್ನು ಪ್ರಕಟಿಸಿದ ಪ್ರಜಾವಾಣಿಗೆ ಧನ್ಯವಾದಗಳು.