Tuesday, November 17, 2015

ಪ್ರಶಸ್ತಿ ಹಿಂತಿರುಗಿಸುತ್ತಿರುವ ಸಾಹಿತಿಗಳೇ...

ನಯನತಾರಾ ಸೆಹೆಗಲ್‌ರಿಂದ ಪ್ರಾರಂಭವಾದ ಪ್ರಶಸ್ತಿ ಹಿಂತಿರುಗಿಸುವ ಕಾರ್ಯಕ್ರಮ ಇವತ್ತು ದೊಡ್ಡ ಅಭಿಯಾನವಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಧಕ್ಕೆ ಆಗುತ್ತಿದೆ, ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತಿದೆ, ಸರಕಾರ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಕಾರಣಗಳನ್ನೊಡ್ಡಿ ಪ್ರಶಸ್ತಿ ಹಿಂತಿರುಗಿಸುತ್ತಿರುವ ಸಾಹಿತಿಗಳಿಗೆ ಕೆಲವೊಂದು ಪ್ರಶ್ನೆಗಳು.

ಭಾರತ ಸ್ವಾತಂತ್ರ್ಯವಾದಾಗಿನಿಂದಲೂ ವಿಶ್ವವಿದ್ಯಾಲಯಗಳು, ಶಿಕ್ಷಣ ಇಲಾಖೆ, ಸರಕಾರಿ ಸ್ವಾಮ್ಯದ ಸಂಸ್ಥೆಗಳು, ಪತ್ರಿಕಾ ಮಾಧ್ಯಮ ಹೀಗೆ ಸಾರ್ವಜನಿಕರಿಗೆ ಜ್ಞಾನದ ಮತ್ತು ಮಾಹಿತಿಯ ಮೂಲಗಳು ಯಾವುದೆಲ್ಲಾ ಇದ್ದವೋ ಅವನ್ನೆಲ್ಲಾ ತಮ್ಮ ಸ್ವಹಿತಾಸಕ್ತಿಗಾಗಿ ರಾಜಕೀಯ ಪ್ರಭಾವ ಬಳಸಿ ತಮ್ಮ ಹಿಡಿತದಲ್ಲಿಟ್ಟುಕೊಂಡಿರಿ. ನಮ್ಮ ದೇಶದ ವಿಶ್ವವಿದ್ಯಾಲಯಗಳು ಎಡಪಂಥೀಯ ಧೋರಣೆಗಳನ್ನು ಪ್ರಚಾರ ಮಾಡುವ ಕೇಂದ್ರಗಳಾಗಿವೆ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ. ಯಾವಾಗ ಮಾಹಿತಿ ತಂತ್ರಜ್ಞಾನದ ಮೂಲಕ ಮಾಹಿತಿ ಸ್ಫೋಟ ಆಯಿತೋ ಅಲ್ಲಿಯವರೆಗೆ ನಿಮ್ಮ ಧೋರಣೆಗಳು, ನಿಲುವುಗಳು ಮಾತ್ರ ಪ್ರಕಟವಾಗುತ್ತಿದ್ದವು. ನಿಮ್ಮ ಧೋರಣೆಗಳಿಗೆ ವಿರುದ್ಧವಾಗಿ ಧ್ವನಿ ಎತ್ತಿದವರನ್ನೆಲ್ಲಾ ನಿಮ್ಮ ರಾಜಕೀಯ ಶಕ್ತಿಯನ್ನು ಬಳಸಿಕೊಂಡು ಬಗ್ಗುಬಡಿದಿರಿ. ಹೀಗೆ ಮಾಡುವ ಮೂಲಕ ನೀವು ಹಲವು ದಶಕಗಳ ಕಾಲ ನಿಮ್ಮ ಧೋರಣೆಗಳನ್ನು ಒಪ್ಪದವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹರಣ ಮಾಡಲಿಲ್ಲವೇ? ನಿಮ್ಮ ಅಭಿಪ್ರಾಯಕ್ಕೆ ವಿರುದ್ಧವಾದ ಅಭಿಪ್ರಾಯವನ್ನು ವ್ಯಕ್ತಪಡಿಸಿದಾಗ ನಿಮಗ್ಯಾಕೆ ಪರಕಿಕೊಳ್ಳುವಂತಾಗುತ್ತದೆ? ಅಭಿವ್ಯಕ್ತಿ ಸ್ವಾತಂತ್ರ್ಯ ನಿಮ್ಮ ಧೋರಣೆಗಳಲ್ಲಿ ನಂಬಿಕೆ ಇದ್ದವರಿಗೆ ಮಾತ್ರವೇ?

ಹಿಂದೂ ದೇವತೆಗಳ ಅವಹೇಳನ, ಹಿಂದೂ ಸಂಸ್ಕೃತಿಯ ಅವಮಾನ, ಹಿಂದೂ ಸಂಪ್ರದಾಯದ ಬಗ್ಗೆ ನೀವಾಡುವ ತುಚ್ಚವಾದ ಮಾತುಗಳಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂದು ನಿಮಗನಿಸುವುದಿಲ್ಲವೇ?

ಯಾವತ್ತೂ ಪ್ರಗತಿಪರ ಚಿಂತಕ, ಪ್ರಗತಿಪರ ಕೃಷಿಕ, ಪ್ರಗತಿಪರ ಹೋರಾಟಗಾರ ಎಂಬ ಶಬ್ದಗಳೊಂದಿಗೆ ಆಟವಾಡುತ್ತೀರಲ್ಲಾ, ಈ ’ಪ್ರಗತಿಪರ’ ಎಂಬುದರ ಅರ್ಥ ಏನು? ಸೋಷಲಿಸ್ಟಿಕ್ ಧೋರಣೆಗಳಿರುವುದೇ, ನಾಸ್ತಿಕವಾದ ಪ್ರತಿಪಾದಿಸುವುದೇ ಅಥವಾ ವೈಜ್ಞಾನಿಕ ಬೆಳವಣಿಗೆಗಳನ್ನು ಜನತೆಯ ದೇಶದ ಪ್ರಗತಿಗೆ ಅಳವಡಿಸಿಕೊಳ್ಳುವುದೇ?

ವೈಜ್ಞಾನಿಕ ಬೆಳವಣಿಗೆಗಳ ಅಳವಡಿಕೆಯೇ ಆದರೆ ಈ ದಿಸೆಯಲ್ಲಿ ಸರಕಾರ ನಡೆಸುವ ಕಾರ್ಯಕ್ರಮಗಳ ಕುರಿತು (ಉದಾ: ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾ) ನೀವ್ಯಾಕೆ ಚಕಾರ ಎತ್ತುವುದಿಲ್ಲ? ಇದೆಲ್ಲಾ ಬೇಡ ಇಸ್ರೋ ವಿಜ್ಞಾನಿಗಳು ಮಂಗಳಯಾನ ನೌಕೆಯ ಉಡಾವಣೆಗೆ ಮೊದಲು ಮಾಡಿದ ಪೂಜೆಯ ಬಗ್ಗೆ ಅಷ್ಟೆಲ್ಲಾ ವಿಡಂಬನೆ ಮಾಡಿದ ನೀವು ಆ ನೌಕೆ ಯಶಸ್ವಿಯಾದಾಗ ಒಂದು ಒಳ್ಳೆಯ ಮಾತನ್ನಾಡಲಿಲ್ಲವಲ್ಲಾ? ಇದೇ ನೀವು ವೈಜ್ಞಾನಿಕ ಪ್ರಗತಿಗೆ ಕೊಡುವ ಬೆಂಬಲವೇ?

ನಾಸ್ತಿಕವಾದವೇ ನಿಮ್ಮ ಪ್ರಕಾರ ಪ್ರಗತಿಯ ಸಂಕೇತವಾದರೆ ಕೇವಲ ಹಿಂದೂಗಳ ಧಾರ್ಮಿಕ ನಂಬಿಕೆಗಳನ್ನೇಕೆ ಪ್ರಶ್ನಿಸುತ್ತೀರಿ. ಇತರೇ ಧರ್ಮದವರ ನಂಬಿಕೆಗಳು ನಿಮ್ಮ ನಾಸ್ತಿಕವಾದದೊಳಗೆ ಸರಿಹೊಂದುತ್ತದೆಯೇ?

ನನಗೆ ಹೇಗೆ ನನ್ನ ನಂಬಿಕೆಗಳನ್ನು ಅನುಸರಿಸಲು ವ್ಯಕ್ತಿಸ್ವಾತಂತ್ರ್ಯವಿದೆಯೋ ಹಾಗೆಯೇ ಇತರ ಧರ್ಮೀಯರಿಗೂ ಅದೇ ಸ್ವಾತಂತ್ರ್ಯವಿದೆ ಎಂದು ನಂಬಿದವ ನಾನು. ಆದರೆ ನನ್ನಂಥವರು ನಿಮ್ಮ ದೃಷ್ಟಿಯಲ್ಲಿ ಕೋಮುವಾದಿಗಳಾಗುತ್ತೇವೆ ಯಾಕೆಂದರೆ ನನ್ನಂಥವರು ಹಿಂದೂಗಳ ಧಾರ್ಮಿಕ ಸ್ವಾತಂತ್ರ್ಯದ ಮೇಲೆ ಪ್ರಹಾರ ಮಾಡುವುದಿಲ್ಲ. ಹಾಗೆಂದು ನನಗೆ ಸರಿಕಾಣದ ಅವೈಜ್ಞಾನಿಕ ಅನ್ನಿಸಿದ ಸಂಪ್ರದಾಯಗಳನ್ನು ನಾನು ಅನುಸರಿಸುವುದಿಲ್ಲ. ಹಾಗಿದ್ದೂ ಅದು ಹೇಗೆ ನನ್ನಂಥವರು ಕೋಮುವಾದಿಗಳಾಗುತ್ತಾರೆ? ಸ್ವಲ್ಪ ವಿವರಿಸುತ್ತೀರಾ?

ಸೋಷಲಿಸ್ಟಿಕ್ ಧೋರಣೆಗಳೇ ಪ್ರಗತಿಯ ಸಂಕೇತವಾದರೆ ನಿಮ್ಮಲ್ಲಿ ಎಷ್ಟು ಜನ ಸೋಷಲಿಸ್ಟಿಕ್ ಧೋರಣೆಗಳಿಗನುಗುಣವಾಗಿ ನಡೆದುಕೊಂಡಿದ್ದೀರಿ? ಸೋಷಲಿಸಮ್‌ನ ಮೂಲ ಸಿದ್ಧಾಂತಗಳಲ್ಲೊಂದಾದ ’ಹಂಚಿಕೊಳ್ಳುವಿಕೆ’ ಎಷ್ಟರಮಟ್ಟಿಗೆ ಅನುಸರಿಸುತ್ತೀರಿ?

ಇನ್ನು ನಿಮ್ಮ ಹೋರಾಟ ಕೇವಲ ಸಮಾನತೆಗೆ, ಸಮಾಜದ ಹಿತಕ್ಕೆ, ಸಾಮಾಜಿಕ ಸಮಸ್ಯೆಗಳ ವಿರುದ್ಧ ಎಂದಿಟ್ಟುಕೊಳ್ಳೋಣ. ಈ ದಿಸೆಯಲ್ಲಿ ನೀವು ಏನೆಲ್ಲಾ ಮಾಡಿದ್ದೀರಿ?

ಇತ್ತೀಚೆಗೆ ದಾದ್ರಿಯಲ್ಲಿ ಸಾವನ್ನಪ್ಪಿದ ಯುವಕನ ಕುಟುಂಬಕ್ಕೆ ನಲುವತ್ತೈದು ಲಕ್ಷ ಪರಿಹಾರ ಘೋಷಣೆ ಆಯಿತು ಅದೇ ಸಮಯದಲ್ಲಿ ಉಗ್ರರಲ್ಲಿ ಹೋರಾಡುತ್ತಾ ಮಡಿದ ಸೈನ್ಯಾಧಿಕಾರಿಗೆ ಅದರ ಅರ್ಧದಷ್ಟೂ ಪರಿಹಾರ ಸಿಗಲಿಲ್ಲ. ಇವತ್ತು ನಮ್ಮ ದೇಶದಲ್ಲಿ ಪರಿಹಾರದ ಮೊತ್ತ ಜಾತಿಯ ಆಧಾರದಲ್ಲಿ ಕೊಡಲಾಗುತ್ತದೆ ಎಂಬುದನ್ನು ಬಾಯಿ ಬಿಟ್ಟು ಹೇಳಬೇಕಾಗಿಲ್ಲ. ಇದು ಅಸಮಾನತೆ ಅಲ್ಲವೇ? ಇದರ ವಿರುದ್ಧ ಧ್ವನಿ ಎತ್ತುವ ಧೈರ್ಯ ನಿಮ್ಮಲ್ಲಿ ಒಬ್ಬನಾದರೂ ತೋರಿದ್ದಿದೆಯಾ?

ನಾನು ಧರ್ಮದ - ಜಾತಿಯ ಹೆಸರಿನಲ್ಲಿ ಜಗಳವಾಡುವುದನ್ನು, ಕೊಲ್ಲುವುದನ್ನು ಬೆಂಬಲಿಸುತ್ತಿಲ್ಲ. ಆದರೆ ಪರಿಹಾರ ಎಲ್ಲರಿಗೂ ಸಮನಾಗಿರಬೇಕು ಅಲ್ಲವೇ?

ಅಷ್ಟಕ್ಕೂ, ಸ್ವಾತಂತ್ರ್ಯ ಬಂದು ಆರು ದಶಕಗಳೇ ಕಳೆದರೂ, ಮತ್ತು ಆ ಆರು ದಶಕಗಳಲ್ಲಿ ಹೆಚ್ಚಿನ ಕಾಲ ನೀವು ಬೆಂಬಲಿಸುವ ಸರಕಾರಗಳಿದ್ದೂ, ನೀವೆಲ್ಲಾ ದಿನೇ ದಿನೇ ಜಾತಿ ಜಾತಿ ಎಂದು ಕೂಗಿಕೊಳ್ಳುತ್ತಿದ್ದೂ ಜಾತಿ ವ್ಯವಸ್ಥೆ ಇನ್ನೂ ಉಳಿದಿದೆ, ಮತೀಯ ಗಲಭೆಗಳು ಮುಗಿಯುತ್ತಲೇ ಇಲ್ಲ ಎಂದರೆ ಅದು ಆ ಸರಕಾರಗಳ ಮತ್ತು ನಿಮ್ಮ ವೈಫಲ್ಯ ಎಂದು ನಿಮಗನಿಸುವುದಿಲ್ಲವೇ?

ನಿಜ ಹೇಳಬೇಕೆಂದರೆ ನಿಮಗ್ಯಾರಿಗೂ ಜಾತಿ ವ್ಯವಸ್ಥೆ ಸಾಯುವುದು ಬೇಕಿರಲಿಲ್ಲ. ಅದಕ್ಕಾಗಿಯೇ ನೀವು ದಿನನಿತ್ಯವೂ ಜಾತಿಯ ಜಪ ಮಾಡಿದಿರಿ. ಅದು ಹೊಗೆಯಾಡುತ್ತಿದ್ದರಷ್ಟೇ ನಿಮಗೆ ನಿಮ್ಮ ಬೇಳೆ ಬೇಯಿಸಿಕೊಳ್ಳುವುದಕ್ಕೆ ಸಾಧ್ಯ ತಾನೇ?

ಜಾತಿ ವ್ಯವಸ್ಥೆಯನ್ನು ನಿರ್ಮೂಲನ ಮಾಡಲು ಜಾತಿಯಾಧಾರಿತ ನಿಯಮಗಳನ್ನು ಮಾಡುವುದು ಹೇಗೆ ಸಹಕಾರಿಯಾಗುತ್ತದೆ ಸ್ವಲ್ಪ ವಿವರಿಸಬಹುದೇ?

ಇನ್ನು ಸಾಮಾಜಿಕ ಸಮಸ್ಯೆಗಳತ್ತ ಬರೋಣ.

ಕಳೆದ ಎರಡು ಮೂರು ವರ್ಷಗಳಲ್ಲಿ ಮಹಿಳೆಯರ ಮೇಲೆ ಮತ್ತು ಮಕ್ಕಳ ಮೇಲೆ ಅತ್ಯಾಚಾರಗಳು ಬಲುದೊಡ್ಡ ಸಮಸ್ಯೆಯಾಯಿತು. ದೆಹಲಿಯಲ್ಲಿ ಚಲಿಸುವ ಬಸ್ಸಿನಲ್ಲಿ ನಡೆದ ಅಮಾನವೀಯ ಅತ್ಯಾಚಾರ (ನಿರ್ಭಯಾ ಪ್ರಕರಣ) ಸಂದರ್ಭದಲ್ಲಿ ಆಗಿನ ದೆಹಲಿ ಮುಖ್ಯಮಂತ್ರಿ ಬೇಜವಾಬ್ದಾರಿ ಹೇಳಿಕೆ ನೀಡಿದಾಗ ಎಷ್ಟು ಜನ ಮಹಿಳಾ ಸಂವೇದಿ ಬರಹಗಾರರು ಪ್ರಶಸ್ತಿ ಹಿಂತಿರುಗಿಸಿದಿರಿ? ಪುಟ್ಟ ಮಗುವೊಂದರ ಮೇಲೆ ಬೆಂಗಳೂರಿನ ಶಾಲಾ ಸಿಬ್ಬಂದಿಯೊಬ್ಬ ಅತ್ಯಾಚಾರ ನಡೆಸಿದ. ಆ ವಿಷಯ ಸದನದಲ್ಲಿ ಚರ್ಚೆಯಾಗುತ್ತಿರುವಾಗ ಮುಖ್ಯಮಂತ್ರಿ ನಿದ್ದೆ ಮಾಡುತ್ತಿದ್ದರು, ನಂತರ ‘ನಾವೇನು ಮಾಡುವುದಕ್ಕಾಗುತ್ತದೆ?’ ಎಂದು ಕೇಳಿದರು. ನಂತರವೂ ಒಂದಷ್ಟು ಅಂತಹ ಪ್ರಕರಣಗಳು ಬೆಳಕಿಗೆ ಬಂತು. ಎಲ್ಲವೂ ಸರಕಾರೀ ಹಿಡಿತದಲ್ಲೇ ಕಾರ್ಯನಿರ್ವಹಿಸಬೇಕೆನ್ನುವ ಸೋಷಲಿಸ್ಟ್ ಮಹಾಶಯರೇ, ಪ್ರಗತಿಪರ ಲೇಖಕರೇ ನಿಮ್ಮಲ್ಲಿ ಒಬ್ಬರಾದರೂ ಪುಟ್ಟ ಕಂದಮ್ಮಗಳ ಮೇಲೆ ಆಗುತ್ತಿರುವ ಅನಾಚಾರಕ್ಕೆ ಪ್ರತಿರೋಧವಾಗಿ ಪ್ರಶಸ್ತಿ ಹಿಂತಿರುಗಿಸಿದ್ದೀರಾ? ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದೀರಾ?

ಈ ಸಮಸ್ಯೆಯ ಮೂಲ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿದೆ ಎಂದು ನಿಮ್ಮ ಬುದ್ಧಿಗೆ ಅನ್ನಿಸುವುದಿಲ್ಲವೇ? ನೀವುಗಳೇ ತುಂಬಿಕೊಂಡಿರುವ ಪಠ್ಯಪುಸ್ತಕ ಸಮಿತಿಗಳು ಮತ್ತವು ರೂಪಿಸುತ್ತಿರುವ ಪಠ್ಯವ್ಯವಸ್ಥೆಯಲ್ಲಿದೆ ಅನ್ನಿಸುವುದಿಲ್ಲವೇ?

ಇನ್ನು ಶಿಕ್ಷಣ ವ್ಯವಸ್ಥೆಗೆ ಬರೋಣ. ಸೋಷಲಿಸ್ಟ್ ಸಿದ್ಧಾಂತವನ್ನು ಪ್ರತಿಪಾದಿಸುವ ನೀವುಗಳು ನಮ್ಮ ರಾಜ್ಯ ಸರಕಾರ ಶಿಕ್ಷಣ ವ್ಯವಸ್ಥೆಯ ಬಗ್ಗೆ ತೋರುತ್ತಿರುವ ನಿರ್ಲಕ್ಷ್ಯವನ್ನು ಯಾಕೆ ಖಂಡಿಸುವುದಿಲ್ಲ. ಈ ನಿರ್ಲಕ್ಷ್ಯದಿಂದ ನಮ್ಮ ಸರಕಾರಿ ಶಾಲೆಗಳು ಸೊರಗಿ ಮುಚ್ಚಿಹೋಗುತ್ತಿವೆ. ಸರಕಾರ ಶಿಕ್ಷಕರ ನೇಮಕಾತಿ ಮಾಡುತ್ತಿಲ್ಲ. ಬೇಕೆಂದೇ ಸರಕಾರಿ ಶಾಲೆಗಳನ್ನು ಸೊರಗಿಸಿ ಖಾಸಗಿ ಶಾಲೆಗಳನ್ನು ಬಲಗೊಳಿಸುವ ಕೆಲಸ ಮಾಡುತ್ತಿದೆಯಲ್ಲಾ ಇದರ ಬಗ್ಗೆ ಯಾಕೆ ನೀವು ಚಕಾರ ಎತ್ತುವುದಿಲ್ಲ. ಕನ್ನಡ ಶಾಲೆಗಳು ಉಳಿಯಬೇಕು ಬೆಳೆಯಬೇಕು ಅನ್ನುತ್ತೀರಲ್ಲ ಒಂದು ಕನ್ನಡ ಶಾಲೆ ಕಟ್ಟುವ ಪ್ರಯತ್ನ ಮಾಡಿದ್ದೀರಾ? ದೇವನೂರ ಮಹಾದೇವ ಅವರು ಕಳೆದ ವರ್ಷ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನವನ್ನು ತಿರಸ್ಕರಿಸಿದ್ದರ ಹೊರತು ಬೇರೆ ಒಬ್ಬರೂ ಒಂದು ಪೈಸೆ ಪ್ರತಿಭಟನೆಯ ರೂಪದಲ್ಲಿ ಹಿಂತಿರುಗಿಸಿಲ್ಲ. ಯಾಕೆ ಹೀಗೆ?

ಒಂದೈದು ವರ್ಷ ಸಾಹಿತ್ಯ ಸಮ್ಮೇಳನಗಳನ್ನು ನಿಲ್ಲಿಸಿ ಅಲ್ಲಿ ಪೋಲಾಗುತ್ತಿರುವ ಹಣದಿಂದ ಸರಕಾರಿ ಶಾಲೆಗಳನ್ನು ಬಲಗೊಳಿಸಿ ಎಂದು ಒಕ್ಕೊರಲಿನಿಂದ ಸರಕಾರಕ್ಕೆ ಹೇಳಿ ನೋಡೋಣ...

ಬಿಡಿ, ಸರಕಾರದ ಕಾರ್ಯವೈಖರಿಯೇ ನಿಮ್ಮ ಮುಖ್ಯ ಗುರಿ ಎಂದಾದರೆ ಕಳೆದ ಹತ್ತು ವರ್ಷಗಳಲ್ಲಿ ನಮ್ಮ ದೇಶದಲ್ಲಿ ಅದೆಷ್ಟು ಹಗರಣಗಳಾದವು. ಕಲ್ಲಿದ್ದಲು, 2ಜಿ ಒಂದೇ ಎರಡೇ? ಇದ್ಯಾವುದೂ ದೇಶಕ್ಕೆ ನಷ್ಟ ಎಂದು ನಿಮಗೆ ಅನ್ನಿಸಲೇ ಇಲ್ಲವೇ? ದೇಶದ ಹಣ ಪೋಲಾಗುತ್ತಿದ್ದರೂ ಒಂದು ಶಬ್ದ ಸಾಹಿತ್ಯಿಕ ವಲಯದಿಂದ ಕೇಳಿ ಬರಲಿಲ್ಲ ಅಲ್ಲವೇ? ಆಗ ಮೂಕರಂತೆ ಕುಳಿತವರು ಈಗ್ಯಾಗೆ ಬಡಬಡಿಸಿಕೊಳ್ಳುತ್ತಿದ್ದೀರಿ?

ಐಟಿ ಕ್ಷೇತ್ರ ಬೆಳೆದಾಗ ಅದನ್ನು ದೂಷಿಸಿದಿರಿ. ಐಟಿ ಬಿಟಿ ಹುಡುಗ ಹುಡುಗಿಯರಿಗೆ ಸಂವೇದನೆಗಳೇ ಇಲ್ಲ ಅಂತ ಅವರನ್ನು ಒಂದರ್ಥದಲ್ಲಿ ಅಸ್ಪೃಶ್ಯರಂತೆ ನೋಡಿದಿರಿ, ಗೇಲಿ ಮಾಡಿದಿರಿ. ಈಗ ಅದೇ ಐಟಿ ಕ್ಷೇತ್ರದಲ್ಲಿ ಎಷ್ಟು ಸೃಜನಶೀಲ ಬರಹಗಾರರು ಹುಟ್ಟಿಕೊಂಡಿದ್ದಾರೆ. ಆಗಲೂ ನಿಮಗೆ ಕಾಡುತ್ತಿದ್ದುದು ಅಭದ್ರತೆ. ಆರ್ಥಿಕ ಉದಾರೀಕರಣದಿಂದ ಸಮಾಜದ ಮೇಲೆ ನಿಮಗಿದ್ದ ಹಿಡಿತ ಸಡಿಲವಾಗುತ್ತಿದೆ ಎಂಬ ಭಯ. ಹಾಗಾಗಿ ಸರಕಾರದ ಸಖ್ಯದಿಂದ ನಿಮ್ಮ ಬೇಳೆ ಬೇಯಿಸಲು ಪ್ರಾರಂಭಿಸಿದಿರಿ. ಈಗ ಕೇಂದ್ರದಲ್ಲಿ ನಿಮ್ಮನ್ನು ಮೂಸಿಯೂ ನೋಡದ ಸರಕಾರ ಬಂದಿದೆ. ಹಾಗಾಗಿ ನಿಮಗೆ ತಲೆಬಿಸಿ ಪ್ರಾರಂಭವಾಗಿದೆ.

ನಿಜ ಹೇಳಬೇಕೆಂದರೆ ಸಮಾನತೆಯನ್ನು ತಂದದ್ದು ಆರ್ಥಿಕ ಉದಾರೀಕರಣ! ಖಾಸಗಿ ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿ ಕೆಲಸ ಕೊಡಲು ಜಾತಿ ಕೇಳುವುದಿಲ್ಲ. ನೀವುಗಳು ನಮ್ಮನ್ನು ’e-ಕೂಲಿ’ಗಳು ಎಂದು ವ್ಯಂಗವಾಡಬಹುದು. ಆದರೆ ಇವತ್ತು ಭಾರತದಲ್ಲಿ ಬಹಳಷ್ಟು ಸಂಶೋಧನೆ ಆಗುತ್ತಿದೆ. ಭಾರತದಲ್ಲಿ ಹೊಸ ತಂತ್ರಜ್ಞಾನ ಕಂಪನಿಗಳು ಹುಟ್ಟಿಕೊಳ್ಳುತ್ತಲೇ ಇವೆ. ಬೆಂಗಳೂರು ಕೂಡಾ ಒಂದು start-up hub ಆಗಿದೆ. ಇದಕ್ಕೆ ಉತ್ತೇಜನ ಕೊಡಲು ಸರಕಾರಕ್ಕೆ ತಿಳಿಹೇಳಿ. ತನ್ಮೂಲಕ ಆರ್ಥಿಕತೆಯನ್ನು ಬಲಗೊಳಿಸಲು ಸಹಕರಿಸಿ!

ಖಾಸಗಿ ವಲಯದಲ್ಲಿ ರಾಜಕೀಯವೇ ನಡೆಯುವುದಿಲ್ಲ ಎಂದು ನಾನು ಹೇಳುತ್ತಿಲ್ಲ. ರಾಜಕೀಯ ಇಲ್ಲದ ಕ್ಷೇತ್ರ ಯಾವುದಿದೆ ಹೇಳಿ? ಆದರೆ ಹಿಂದಿನ ವ್ಯವಸ್ಥೆಯಲ್ಲಿ ನಿಮ್ಮ ರಾಜಕೀಯದ ನಡುವೆ ಅವಕಾಶ ವಂಚಿತರು ತೆಪ್ಪಗೆ ಕೂರಬೇಕಿತ್ತು. ಇವತ್ತು ಹಾಗಿಲ್ಲ; ಪ್ರತಿಭೆ ಇದ್ದರೆ ಅವಕಾಶಗಳಿಗೆ ಕಡಿಮೆಯಿಲ್ಲ. ನಿಮ್ಮ ಧೋರಣೆಗಳಿಗೇ ತಲೆ ಅಲ್ಲಾಡಿಸುತ್ತಾ ಕೂರಬೇಕಾದ ಸಂದಿಗ್ಧತೆ ಇಂದಿಲ್ಲ.

No comments:

Post a Comment