Tuesday, November 17, 2015

ಟಿಪ್ಪು ಜಯಂತಿ - ಸರಕಾರಕ್ಕೆ ಸಹಿಷ್ಣುತೆ ಇಲ್ಲವೇ?

ಸುಮಾರು ಏಳೆಂಟು ವರ್ಷಗಳ ಹಿಂದೆ ಕೇರಳದ ಒಬ್ಬ ಸಹೋದ್ಯೋಗಿ ಕೇಳಿದ ಪ್ರಶ್ನೆ - 'ನೀವೆಲ್ಲಾ ಯಾಕೆ ಟಿಪ್ಪುವನ್ನು ಮೈಸೂರು ಹುಲಿ ಎಂದು ಹಾಡಿ ಹೊಗಳುತ್ತೀರಿ? ನಮ್ಮಲ್ಲಿ ಟಿಪ್ಪುವಿಗೆ ಮೂರು ಕಾಸಿನ ಬೆಲೆಯಿಲ್ಲ. ಅವನೊಬ್ಬ ದ್ರೋಹಿ, ನೀಚ, ಕೊಲೆಗಾರ ಅಂತಲೇ ಪ್ರಸಿದ್ಧಿ'. ಹಾಗೆಯೇ ಅವನೆಷ್ಟು ಕ್ರೂರಿ ಅಂತ ವಿವರಿಸಲು ಟಿಪ್ಪುವಿನ ಕುರಿತು ಪ್ರಚಲಿತವಾಗಿದ್ದ ಕೆಲ ಕಥೆಗಳನ್ನು ಹೇಳಿದ.

ಅವನ ಪ್ರಶ್ನೆ ಮತ್ತು ಕಥೆಗಳು ನನ್ನನ್ನು ತಬ್ಬಿಬ್ಬು ಮಾಡಿತು. ನಾನು ಮಾತ್ರವಲ್ಲ ನನ್ನ ಹಾಗೆ ಕರ್ನಾಟಕದಲ್ಲಿ ಓದಿದ ಇತರೇ ಸಹೋದ್ಯೋಗಿಗಳು ಕೂಡಾ! ಯಾಕೆಂದರೆ ಅದುತನಕ ನಾವ್ಯಾರು ಟಿಪ್ಪುವಿನ ಕುರಿತು ಅಷ್ಟೊಂದು ಕೆಟ್ಟ ಕಥೆಗಳನ್ನು ಕೇಳಿರಲಿಲ್ಲ. ಮೈಸೂರು ಹುಲಿ ಪಾಠ ಓದಿದ್ದ ನಮ್ಮ ಮಟ್ಟಿಗೆ ಬ್ರಿಟಿಷರ ವಿರುದ್ಧ ಹೋರಾಡಿದ ಆತ ಗಾಂಧಿ, ಬೋಸ್ ಸಾಲಿನಲ್ಲಿಯೇ ಸ್ಥಾನ ಪಡೆದಿದ್ದ!.

ಆ ಸಹೋದ್ಯೋಗಿ ಹೇಳಿದ ಕಥೆಗಳನ್ನು ಕೇಳಿದ ಮೇಲೆ ಟಿಪ್ಪುವಿನ 'ಸಾಧನೆಗಳ' ಕುರಿತು ಮಾಹಿತಿ ಹುಡುಕಿದೆ. ಅವಾಗ ಅವನೆಂಥ ಅಧ್ವಾನಗಳನ್ನು ಮಾಡಿದ್ದ ಎಂಬುವುದು ತಿಳಿಯಿತು. ಅಷ್ಟೇ ಅಲ್ಲ ಓಟು, ಓಲೈಕೆ ರಾಜಕಾರಣದಲ್ಲಿ ನಮ್ಮ ಸರಕಾರಗಳು ಮತ್ತು ಎಡಪಂಥೀಯ ಬುದ್ಧಿಜೀವಿಗಳು ಅವನನ್ನು ಹೀರೋ ಮಾಡಿರುವ ಅಧ್ವಾನ ಎಂತಹದ್ದು ಎಂದು ತಿಳಿಯಿತು. ಚರಿತ್ರೆಯನ್ನು ತಿರುಚಿರುವ ಪರಿಣಾಮ ಅದೆಷ್ಟೋ ಜನರ ಮನಸ್ಸಿನಲ್ಲಿ ಟಿಪ್ಪು ಇನ್ನೂ ಹಿರೋ ಆಗಿಯೇ ಇದ್ದಾನೆ.

ಇದೆಲ್ಲಾ ಸಾಲದು ಎಂಬಂತೆ ಈಗ ಸರಕಾರ ಟಿಪ್ಪು ಜಯಂತಿ ಎಂಬ ಕಲ್ಲು ಹೊಡೆದು ಮತ್ತೆ ಕೆಸರೆರಚಾಟ ಪ್ರಾರಂಭಿಸಿದೆ.ಟಿಪ್ಪುವಿನ ಕುರಿತು ಅಷ್ಟೊಂದು controversy ಇದ್ದಾಗ್ಯೂ ಟಿಪ್ಪು ಜಯಂತಿ ಆಚರಣೆಯ ಹಟ ಏತಕ್ಕೆ?.ಇದು ಜಾತಿಯ ಆಧಾರದಲ್ಲಿ ಸಮಾಜವನ್ನು ಒಡೆಯುವ ಕೆಲಸ ತಾನೆ?.ಇದೇ controversy ಒಬ್ಬ ಹಿಂದೂ ರಾಜನ ಮೇಲಿದ್ದರೆ ನೀವು ಈ ಆಚರಣೆಯನ್ನು ನಿಲ್ಲಿಸುತ್ತಿರಲಿಲ್ಲವೇ?. ಇಷ್ಟೊಂದು ಪ್ರತಿಭಟನೆ ನಂತರವೂ ಟಿಪ್ಪು ಜಯಂತಿ ಮಾಡಿಯೇ ಸಿದ್ಧ ಅನ್ನುತ್ತೀರಲ್ಲ ಜನರ ಭಾವನೆಗಳ ಕುರಿತು ನಿಮಗೆ ಸಹಿಷ್ಣುತೆಯೇ ಇಲ್ಲವೇ?


http://kannadaforum.net/thread/4609-%E0%B2%9F%E0%B2%BF%E0%B2%AA%E0%B3%8D%E0%B2%AA%E0%B3%81-%E0%B2%9C%E0%B2%AF%E0%B2%82%E0%B2%A4%E0%B2%BF-%E0%B2%B8%E0%B2%B0%E0%B2%95%E0%B2%BE%E0%B2%B0%E0%B2%95%E0%B3%8D%E0%B2%95%E0%B3%86-%E0%B2%B8%E0%B2%B9%E0%B2%BF%E0%B2%B7%E0%B3%8D%E0%B2%A3%E0%B3%81%E0%B2%A4%E0%B3%86-%E0%B2%87%E0%B2%B2%E0%B3%8D%E0%B2%B2%E0%B2%B5%E0%B3%87/

No comments:

Post a Comment