Tuesday, November 17, 2015

ಫ್ರಾನ್ಸ್‌ನಲ್ಲಿ ಹೀಗೊಂದು ಊಟ

ನನಗೆ ಫ್ರಾನ್ಸ್‌ಗೆ ಹೋದಾಗಲೆಲ್ಲಾ ಒಂದಿಲ್ಲ ಒಂದು ಫಜೀತಿ ಆಗಿಯೇ ಆಗುತ್ತದೆ ಎಂದು ಕಾಣುತ್ತದೆ. ಹೋದ ಮೂರು-ನಾಲ್ಕು ಬಾರಿಯೂ ಏನಾದರೊಂದು ಕೆಟ್ಟ ಅನುಭವ!
ಅದರಲ್ಲೂ ಈ ಪ್ರಯಾಣದ ಅನುಭವ ಆದ ಮೇಲೆ ನಾನು ಪ್ಯಾರಿಸ್‌ಗೆ ಹೋಗುವ ಸಂದರ್ಭಗಳನ್ನು ತಪ್ಪಿಸಿಕೊಳ್ಳಲು ಪ್ರಾರಂಭಿಸಿದ್ದೇನೆ!

ಒಂದು ವಾರದ ಕಾರ್ಯಾಗಾರಕ್ಕಾಗಿ ಪ್ಯಾರಿಸ್‌ಗೆ ಹೊರಟಿದ್ದೆ. ಹಿಂದಿನ ಪ್ರವಾಸದ ಅನುಭವಗಳಿಂದ ಫ್ರೆಂಚರು ಒರಟರು, ಇಂಗ್ಲಿಷ್‌ನಲ್ಲಿ ಪ್ರಶ್ನೆಕೇಳಿದರೆ ಮುಖತಿರುಗಿಸುತ್ತಾರೆ, ಒಟ್ಟಾರೆಯಾಗಿ ಅಲ್ಲಿನ ಬೀದಿಗಳಲ್ಲಿ ನಡೆದಾಡುವಾಗ ಸೇಫ್ ಅನ್ನಿಸುವುದಿಲ್ಲ ಎಂಬುದು ಮನಸ್ಸಿನಲ್ಲಿ ಕುಳಿತಿತ್ತು. ಹೋಗುವುದು ಅನಿವಾರ್ಯವಾದ ಕಾರಣ ಹೊರಟಿದ್ದೆ.

ಅದು ಫೆಬ್ರವರಿ ತಿಂಗಳು, ವಿಪರೀತ ಚಳಿ, ಹಿಮ ಬೀಳುತ್ತಿರುವ ಕಾಲ. ಕೈಯಲ್ಲಿದ್ದ ಕ್ಯಾಬಿನ್ ಲಗೇಜಿನಲ್ಲಿ ಚಳಿಗೆ ಬೇಕಾದ ಬಟ್ಟೆಗಳೇ ತುಂಬಿದ್ದವು. ಇನ್ನೊಂದು ಸೂಟ್‌ಕೇಸಿನಲ್ಲಿ ಬೇಕಾದ ಬಟ್ಟೆಬರೆ ಮತ್ತು ದಕ್ಷಿಣ ಭಾರತೀಯ ಸಸ್ಯಾಹಾರಿ ಪ್ರಯಾಣಿಕರ ಆಪತ್ಭಾಂದವ MTR redy to eat ನ ನಾಲ್ಕೈದು ಪ್ಯಾಕೆತುಗಳು ತುಂಬಿ ವಿಮಾನ ಸಿಬ್ಬಂದಿಯ ಕೈಗೊಪ್ಪಿಸಿ ಹೊರಟದ್ದಾಯಿತು. ಜನಾಂಗೀಯ ತಾರತಮ್ಯ ಏರ್ ಫ್ರಾನ್ಸ್ ವಿಮಾನ ಹೊರಡುತ್ತಲೇ ಕಾಣಲು ಪ್ರಾರಂಭವಾಯಿತು. (ಏರ್ ಫ್ರಾನ್ಸ್ ವಿಮಾನದಲ್ಲಿ ಹಲವು ಸಲ ಜನಾಂಗೀಯ ತಾರತಮ್ಯ ಗಮನಿದ್ದೇನೆ). ಯಾರೋ ಪ್ರಾಯವಾದವರು ಸಸ್ಯಾಹಾರ ಕೇಳಿದರೆ ತುಂಬಾ ಗರಂ ಆಗಿ ’ಟಿಕೆಟ್ ತೆಗೆದುಕೊಳ್ಳುವಾಗಲೇ ಕಾಯ್ದಿರಿಸಬೇಕಿತ್ತು’ ಎಂದು ಬಡಬಡಿಸಿ ನಡೆದ ಪರಿಚಾರಿಕೆ ಅವನ್ಯಾರೋ ಬಿಳಿಯ ಕೇಳಿದ್ದು ಇಲ್ಲ ಎಂದಾದಾಗ ನಡು ಬಗ್ಗಿಸಿ sorry ಹೇಳುವುದಕ್ಕೆ ಸಾಧ್ಯವಾಯಿತು.

ಅದೆಲ್ಲಾ ಇರಲಿ, ಈಗ ಪ್ಯಾರಿಸ್‌ನಲ್ಲಿ ಇಳಿಯೋಣ. ಅಲ್ಲಿಂದ ಪ್ರಾರಂಭವಾಗುತ್ತದೆ ನನ್ನ ನಿಜ ಫಜೀತಿ.
ನಾನು ಸಾರ್ವಜನಿಕ ಸಾರಿಗೆ ವ್ಯವಸ್ಥೆಯಿದ್ದರೆ ಟ್ಯಾಕ್ಸಿ ಹಿಡಿಯುವ ಕ್ರಮ ಇಲ್ಲ. ಮೊದಲೇ ಮೊಟ್ರೋ ವ್ಯವಸ್ಥೆಯ ಬಗ್ಗೆ ಮಾಹಿತಿ ನೋಡಿ ಇಟ್ಟಿದ್ದೆ ಎರಡು ಬಾರಿ ಮೆಟ್ರೋ ಬದಲಿಸಬೇಕಿತ್ತು. ಆದರೂ ಒಮ್ಮೊ ವಿಚಾರಿಸೋಣ ಅಂತ ಎರಡೂ ಸೂಟ್‌ಕೇಸ್ ಹಿಡಿದುಕೊಂಡು information counter ಗೆ ಹೋಗಿ ನನ್ನ ಹೋಟೆಲ್ ವಿಳಾಸ ತೋರಿಸಿ ರೈಲಿನ ಕುರಿತು ವಿಚಾರಿಸಿದೆ. ಅಲ್ಲಿ ’ಇದು ಪ್ಯಾರಿಸ್‌ನ ಇನ್ನೊಂದು ಮೂಲೆಯಲ್ಲಿದೆ. ಎರಡು ಬಾರಿ ಮೆಟ್ರೋ ಬದಲಿಸಬೇಕು. ಆದರೆ ಇವತ್ತು ಮೊಟ್ರೋ ಮುಷ್ಕರ ಇದೆ. ಕೆಲ ಲೈನುಗಳು ಮಾತ್ರ ಕೆಲಸ ಮಾಡುತ್ತಿವೆ. ನೀವು ಹೋಗಬೇಕಿರುವ ಲೈನುಗಳು ಸದ್ಯ ಚಾಲನೆಯಲ್ಲಿವೆ. ಬೇಗ ಹೋಗಿ ಎಂದ’.
ಬೇಗ ಬೇಗ ಹೋಗಿ ರೈಲು ಹತ್ತಿದೆ. ಸಿಗಬೇಕಿದ್ದ ಮೊದಲ ಮೆಟ್ರೋ ಲೈನು ಸಿಕ್ಕಿತು. ಅಲ್ಲಿ ಇಳಿದರೆ ಮುಂದಿನ ಲೈನು ಮುಷ್ಕರ ಘೋಷಣೆಯಿಂದ ನಿಂತಿದೆ ಎಂಬ ಮಾಹಿತಿ ಬಂತು. ಆ ಸ್ಟೇಷನ್ ನಲ್ಲಿದ್ದ ಅಧಿಕಾರಿಣಿ ಬಸ್ಸಿನಲ್ಲಿ ಹೋಗುವಂತೆ ತಿಳಿಸಿದಳು.
ಸ್ಟೇಷನ್‌ನಿಂದ ಹೊರಬಂದರೆ ಹಿಮ ಬೀಳುತ್ತಿದೆ. -5 ಉಷ್ಣಾಂಶ ಇರಬಹುದು. ಬಸ್ ನಿಲ್ದಾಣ ಸುಮಾರು ಅರ್ಧ ಮುಕ್ಕಾಲು ಕಿಲೋಮೀಟರ್ ದೂರದಲ್ಲಿದೆ ಅಂತ ತಿಳಿಯಿತು. ನಿರಂತರವಾಗಿ ಬೀಳುತ್ತಿರುವ ಹಿಮ, ನಡೆದುಕೊಂಡು ಬಸ್ ನಿಲ್ದಾಣ ತಲುಪಿದರೆ ಈಗಷ್ಟೇ ಬಸ್ ಕೂಡಾ ಮುಷ್ಕರಕ್ಕೆ ಕರೆ ನೀಡಿದ್ದಾರೆ ಅಂತ ತಿಳಿಸಿದರು. ಒಬ್ಬ ಪುಣ್ಯಾತ್ಮ ಅವನ ಕರುಣೆ ತೋರಿ ಅಷ್ಟು ಹೇಳದಿದ್ದರೆ ನಾನು ಇನ್ನೂ ಮುಕ್ಕಾಲು ಗಂಟೆ ಅಲ್ಲೇ ಕಾಯುತ್ತಿದ್ದೆ. ಯಾಕೆಂದರೆ ವೇಳಾಪಟ್ಟಿಯ ಪ್ರಕಾರ ಮುಂದಿನ ಬಸ್ಸು ಬರುವುದಕ್ಕೆ ಇನ್ನೂ ಮುಕ್ಕಾಲು ಗಂಟೆ ಇತ್ತು, ಭಾನುವಾರ ಬಸ್ಸುಗಳು ಕಡಿಮೆ! ಆತ ಟ್ಯಾಕ್ಸಿ ಹಿಡಿ ಅಂದ. ಟ್ಯಾಕ್ಸಿ ಸ್ಟಾಂಡಿಗೆ ಮತ್ತೆ ಸುಮಾರು ಮುಕ್ಕಾಲು-ಒಂದು ಕಿಲೋಮೀಟರ್ ನಡುಗೆ. ಎರಡು ಸೂಟ್‌ಕೇಸ್ ಹಿಡಿದುಕೊಂಡು ನಡೆಯುವಾಗ ಆ ಚಳಿಯಲ್ಲೂ ಬೆವರು ಬಿಚ್ಚಿತ್ತು.

ಅಲ್ಲಿ ತಲುಪಿದರೆ ಟ್ಯಾಕ್ಸಿ ಇಲ್ಲ! ಅಲ್ಲಿ ಒಬ್ಬ ಪೋಲಿಸ್ ಹೇಳಿದ ’ಇಲ್ಲಿ ನಿನಗೆ ಇವತ್ತು ಟ್ಯಾಕ್ಸಿ ಸಿಗುವುದಿಲ್ಲ. ಮೆಟ್ರೋ ಮತ್ತು ಬಸ್ಸು ಮುಷ್ಕರ ಅಂತ ಎಲ್ಲಾ ಟ್ಯಾಕ್ಸಿಗಳು ಬುಕ್ ಆಗಿದ್ದಾವೆ. ಬೇಗ ಮೆಟ್ರೋ ಸ್ಟೇಷನ್‌ಗ್ ಹೋಗು, ಮುಖ್ಯ ಮೆಟ್ರೋ ನಿಲ್ದಾಣಕ್ಕೆ ಒಂದೆರಡು ರೈಲುಗಳು ಹೋಗುತ್ತಿವೆ. ಮುಖ್ಯ ಮೆಟ್ರೋ ನಿಲ್ದಾಣದಲ್ಲಿ ಟ್ಯಾಕ್ಸಿ ಸಿಗಬಹುದು’ ಅಂತ! ಮತ್ತೆ ಅರ್ಧ ಕಿಲೋಮೀಟರ್ ಹಿಮತುಂಬಿದ ಫುಟ್‍ಪಾತಿನಲ್ಲಿ ಸೂಟ್‌ಕೇಸ್ ಎಳಕೊಂಡು ಓಡಿದರೆ ಕೊನೆಯ ರೈಲು ಮುಖ್ಯನಿಲ್ದಾಣಕ್ಕೆ ಹೊರಟು ನಿಂತಿತ್ತು. ಬದುಕಿದೆಯಾ ಬಡಜೀವಿ ಅಂತ ಅದರೊಳಗೆ ಹಾರಿದೆ.

ಮುಖ್ಯ ನಿಲ್ದಾಣಕ್ಕೆ ಬಂದು ಇನ್ನೂ ಮೂರ್ನಾಲ್ಕು ಟ್ಯಾಕ್ಸಿಯವರಲ್ಲಿ ’ಈ ವಿಳಾಸಕ್ಕೆ ಬರುವುದಿಲ್ಲ’ ಅಂತ ಹೇಳಿಸಿಕೊಂಡು, ಕೊನೆಗೂ ಒಂದು ಟ್ಯಾಕ್ಸಿ ಹಿಡಿದು ಹೋಟೆಲ್ ತಲುಪುವಾಗ ನಾನು ಅರ್ಧ ಜೀವವಾಗಿದ್ದೆ. ಬೆಳಗ್ಗೆ ಸುಮಾರು ಏಳು ಗಂಟೆಗೆ ಪ್ಯಾರಿಸ್ ವಿಮಾನ ನಿಲ್ದಾಣದಲ್ಲಿ ಇಳಿದವ ಸಾರ್ವಜನಿಕ ಸಾರಿಗೆ ಹಿಡಿಯುವ ಸಾಹಸದಲ್ಲಿ ಹೋಟೆಲ್ ತಲುಪುವಾಗ ಗಂಟೆ ಮಧ್ಯಾಹ್ನ ಹನ್ನೆರಡು ಕಳೆದಿತ್ತು. ಒಂದು MTR ಪ್ಯಾಕೆಟುಗಳನ್ನು ಹೊಟ್ಟೆಗಿಳಿಸಿ ಮಲಗಿದೆ.

ಸಂಜೆ ಏಳುವಾಗ ಹೊಟ್ಟೆ ತಾಳ ಹಾಕುತ್ತಿತ್ತು, ರಾತ್ರಿ ಭೋಜನ ಕೂಟಕ್ಕೆ ಆಮಂತ್ರಣ ಇತ್ತು. ಹೇಗೂ ಊಟ ಇದೆಯಲ್ಲ MTR ಪ್ಯಾಕೆಟ್ ಇನ್ನೊಂದು ದಿನಕ್ಕೆ ಆಗುತ್ತದೆ ಅಂತ ಸುಮ್ಮನಾದೆ.
ಆವತ್ತಿನ ರಾತ್ರಿಯ ಭೋಜನ ಒಂದು ಸಾಂಪ್ರದಾಯಿಕ ಫ್ರಾನ್ಸ್ ರೆಸ್ಟೋರೆಂಟಿನಲ್ಲಿ ಆಯೋಜಿಸಲ್ಪಟ್ಟಿತ್ತು. ಅಲ್ಲೆಲ್ಲಾ ಭೋಜನಕೂಟ ಅಂದರೆ ನಮ್ಮ ದೇಶದ ಹಾಗೆ ಖಾರ ಸಿಹಿ ಇನ್ನೊಂದು ಮತ್ತೊಂದು ಅಂತ ಹತ್ತು ಐಟಂಗಳಿರುವುದಿಲ್ಲ. ಎಲ್ಲರೂ ಅವರವರಿಗೆ ಬೇಕಾದ ಒಂದು - ಎರಡು ವಿಷಯಗಳನ್ನು ಆರ್ಡರ್ ಮಾಡಿ ತಿನ್ನುವುದು. ಮತ್ತೆ ಅವ ತರಿಸಿದನ್ನು ಇವ ಸ್ವಲ್ಪ ರುಚಿ ನೋಡುವುದು, ಹಂಚಿಕೊಳ್ಳುವುದು ಇದೆಲ್ಲಾ ಇಲ್ಲ.

ನಾನು ಸಸ್ಯಾಹಾರಿ ಅಂದಾಗ ಆರ್ಡರ್ ತೆಗೆದುಕೊಳ್ಳುತ್ತಿದ್ದ ವೈಟರ್ ತಲೆಬಿಸಿ ಮಾಡಿಕೊಂಡ. ನಮ್ಮಲ್ಲಿ ಸಸ್ಯಾಹಾರ ಏನೂ ಇಲ್ಲವಲ್ಲಾ.. ’ಮೀನು ನಡೆಯುತ್ತದಾ?’ ಅಂದ. ’ಇಲ್ಲ ಗುರುವೇ’ ಅಂದೆ...
ಆಗಲೇ ಅಂದುಕೊಂಡೆ ಇವತ್ತು ನನ್ನ ಸಮಾರಾಧನೆ ನಡೆದದ್ದೇ ಅಂತ. ಮೊದಲೇ ಹೊಟ್ಟೆ ತಾಳ ಹಾಕುತ್ತಿತ್ತು. ಹೋಗಲಿ ಫ್ರ್ಂಚ್ ಫ್ರೈ (French Fry) ಆದರೂ ಕೊಡು ಅಂದರೆ ಅಲ್ಲಿ ಫ್ರೆಂಚ್ ಫ್ರೈ ಕೂಡಾ ಇಲ್ಲವಂತೆ. ಅದು ಸಾಂಪ್ರದಾಯಿಕ ಫ್ರೆಂಚ್ ಖಾದ್ಯವಲ್ಲವಂತೆ! ಕೊನೆಗೆ ಷೆಪ್ (ಬಾಣಸಿಗ) ನನ್ನೇ ಕೇಳುತ್ತೇನೆ ಅಂತ ಹೋದವ ವಾಪಾಸ್ ಬಂದಾಗ ಅವನ ಮುಖ ಅರಳಿತ್ತು. ಅದನ್ನು ನೋಡಿ ನನ್ನ ಹೊಟ್ಟೆ ಇನ್ನೂ ಜೋರಾಗಿ ತಾಳ ಹಾಕಲಾರಂಭಿಸಿತು.
ಆತ ’ಒಂದು ಐಟಂ ಇದೆ’ ಅಂದ. ’ಅದೇನಾದರೂ ಸರಿ ತೆಗೆದುಕೊಂಡು ಬಾ’ ಅಂದೆ. ಒಬ್ಬೊಬ್ಬರದ್ದೂ ಆಹಾರ ಬಂತು. ಕಾದು ಕಾದು ಕೊನೆಗೆ ನನ್ನ ಸಸ್ಯಾಹಾರ ಬಂತು!
ನೋಡಿದರೆ ಒಂದು ದೊಡ್ಡ ಹಸಿರು ಎಲೆಯ ಮೇಲೆ ಬೇಯಿಸಿದ ಒಂದು ದೊಡ್ಡ ಬೀಟ್‌ರೂಟ್. ಅದರ ಮೇಲೆ (ಬಹುಷಃ ಚಂದಕ್ಕೆ) ಒಂದು ತುಂಡು ಚೀಸ್! ಉಪ್ಪು ಖಾರ ಏನೂ ಇಲ್ಲದ ಬೀಟ್‌ರೂಟಿನ ನಿಜರುಚಿಯನ್ನು ನಾನು ಸವಿದದ್ದು ಅಲ್ಲೇ! ಪ್ರಯಾಣದ ಸುಸ್ತು, ಇಡೀ ದಿನದ ನಡಿಗೆ ಮತ್ತು ಮಧ್ಯಾಹ್ನ ತಿಂದ ಸ್ವಲ್ಪವೇ ಆಹಾರ ಇದರಿಂದ ಎಷ್ಟು ಹಸಿವಾಗಿತ್ತೆಂದರೆ ಇನ್ನೊಂದು ಪ್ಲೇಟ್ ಆರ್ಡರ್ ಮಾಡಿ ಬೀಟ್‌ರೂಟ್ ತಿಂದೆ!


http://kannadaforum.net/thread/4596-%E0%B2%AB%E0%B3%8D%E0%B2%B0%E0%B2%BE%E0%B2%A8%E0%B3%8D%E0%B2%B8%E0%B3%8D%E2%80%8C%E0%B2%A8%E0%B2%B2%E0%B3%8D%E0%B2%B2%E0%B2%BF-%E0%B2%B9%E0%B3%80%E0%B2%97%E0%B3%8A%E0%B2%82%E0%B2%A6%E0%B3%81-%E0%B2%8A%E0%B2%9F/

No comments:

Post a Comment