Tuesday, November 17, 2015

ಜರ್ಮನಿಯೇ ಯಾಕೆ ಬೇಕು? ಜರ್ಮನಿಯನ್ನು ಬೀಳಿಸುವ ಹುನ್ನಾರವೇ?

ಜರ್ಮನಿಯತ್ತ ಹೊರಟಿರುವ ಜನರನ್ನು ಗಮನಿಸಿ - ಇದರಲ್ಲಿ ಮಕ್ಕಳನ್ನು ಹೊತ್ತುಕೊಂಡ ಮಹಿಳೆಯರು, ವೃದ್ಧರೂ ಇದ್ದಾರೆ. ಆದರೆ ಬಹು ಸಂಖ್ಯೆಯಲ್ಲಿ ಯುವಕರೇ ಇದ್ದಾರೆ.

ಒಂದೆರಡಲ್ಲ... ನೂರಾರಲ್ಲ... ಸಾವಿರವೂ ಅಲ್ಲ... ಲಕ್ಷ ಲಕ್ಷ ಜನ ಹೋಗುತ್ತಿದ್ದಾರೆ!
’ಎಲ್ಲಿಗೆ ಹೋಗುತ್ತಿದ್ದೀರಿ?’ ಎಂದು ಕೇಳಿದರೆ ಎಲ್ಲರಲ್ಲೂ ಒಂದೇ ಉತ್ತರೆ - ’ಜರ್ಮನಿ’!
’ಯಾಕೆ?’ ಈ ಪ್ರಶ್ನೆಗೆ ಖಚಿತವಾದ ಉತ್ತರವಿಲ್ಲ! ’ಜರ್ಮನಿ ತುಂಬಾ ಸುರಕ್ಷಿತ(safe)’, ’ಜರ್ಮನಿಯಲ್ಲಿ ಅವಕಾಶಗಳಿವೆ’, ’ಮಕ್ಕಳಿಗೆ ಉತ್ತಮ ಶಿಕ್ಷಣ ಬೇಕು’, ’ಕೆಲಸ ಬೇಕು’... ಹೀಗೆ ಬೇರೆ ಬೇರೆ ಉತ್ತರಗಳು. ಆದರೆ ಇದ್ಯಾವುದೂ ಜರ್ಮನಿಯೇ ಯಾಕೆ ಎಂಬ ಪ್ರಶ್ನೆಗೆ ಖಚಿತವಾದ ಉತ್ತರವಾಗುವುದಿಲ್ಲ. ಫ್ರಾನ್ಸ್ ಯಾಕಾಗಬಾರದು? ಇಟಲಿ ಯಾಕೆ ಬೇಡ? ಸ್ವೀಡನ್‍ಗೆ ಏನಾಗಿದೆ? ಆಸ್ಟ್ರಿಯಾ? ಪೋಲಂಡ್? ಇಂಗ್ಲಂಡ್? ಅಮೇರಿಕಾ? ಯಾಕಾಗಬಾರದು?

ಜರ್ಮನಿಯೇ ಯಾಕಾಗಬೇಕು?
ಒಪ್ಪೊತ್ತಿನ ಊಟ (Bread & butter): ಎರಡನೆಯ ಮಾಹಾಯುದ್ಧದಲ್ಲಿ ಪೂರ್ತಿ ನೆಲಕ್ಕಚ್ಚಿದ ಜರ್ಮನಿ ಒಂದು ದೊಡ್ಡ ಆರ್ಥಿಕತೆಯಾಗಿ ಬೆಳೆದು ನಿಂತದ್ದು ಪ್ರಜೆಗಳ ಶ್ರಮ, ಬದ್ಧತೆ, ಕಾರ್ಯಕ್ಷಮತೆಗೆ ಜಗತ್ತಿಗೇ ಮಾದರಿಯಾದಂತಹದ್ದು. ಆದರೆ ಆ ಕಾಲದಲ್ಲಿ ಜರ್ಮನಿಯ ಕಾರ್ಖಾನೆಗಳಲ್ಲಿ ಬೆವರು ಸವೆಸಿ ದುಡಿದವರೆಲ್ಲಾ ಇಂದು ವಿಶ್ರಾಂತ ಜೇವನ ನಡೆಸುತ್ತಿದ್ದಾರೆ. ಅವರೆಲ್ಲರ ಶ್ರಮದ ಬದುಕು ಮತ್ತು ಕಾರ್ಯಕ್ಷಮತೆಯ ಫಲವಾಗಿ ಆರ್ಥಿಕತೆ ಬೆಳೆಯಿತು, ಶಿಕ್ಷಣ ವ್ಯವಸ್ಥೆ ಸದೃಢವಾಯಿತು. ಆದರೆ ಅದರ ಇನ್ನೊಂದು ಮಗ್ಗುಲು ಕೌಟುಂಬಿಕ ವ್ಯವಸ್ಥೆಯ ಮೇಲೆ ಆದ ಪರಿಣಾಮ. ನಿಧಾನವಾಗಿ ನಂತರದ ತಲೆಮಾರಿನ ಜನ ಮಕ್ಕಳು ಬೇಡ ಎಂಬ ಮನಸ್ಥಿತಿಗೆ ಬಂದರು. ಎಷ್ಟೋ ಜನರಿಗೆ ಮಕ್ಕಳು ಅವರ ಔದ್ಯೋಗಿಕ ಉನ್ನತಿಗೆ ಅಡ್ಡಿಯಾಗಿ ಕಂಡರು. ಅದರ ಪರಿಣಾಮ ಜರ್ಮನಿ ಎದುರಿಸುತ್ತಿರುವ ಮುಖ್ಯ ಸಮಸ್ಯೆ ಹೆಚ್ಚುತ್ತಿರುವ ಹೆಚ್ಚುತ್ತಿರುವ ಸರಾಸರಿ ವಯಸ್ಸು (aging population). ಜರ್ಮನಿಯಲ್ಲಿ ಸರಾಸರಿ ವಯಸ್ಸು ಸುಮಾರು 46.
ಹೀಗಾಗಿ ಜರ್ಮನಿಗೆ ದುಡಿಯುವ ಕೈಗಳು ಬೇಕು ಎಂಬುದು ಪ್ರಶ್ನಾತೀತ. ಉತ್ತಮ ವೃತ್ತಿ ಕೌಶಲ ಹೊಂದಿದ್ದರೆ ಮತ್ತು ಜರ್ಮನ್ ಭಾಷೆ ಗೊತ್ತಿದ್ದರೆ ಅಲ್ಲಿ ಕೆಲಸ ಸಿಗುವುದೇನೂ ಕಷ್ಟವಲ್ಲ. ಆದರೆ, ಸಿರಿಯಾ ಲಿಬಿಯಾದಿಂದ ಹೋಗುತ್ತಿರುವ ನಿರಾಶ್ರಿತರಿಗೆ ಜರ್ಮನಿಗೆ ಬೇಕಿರುವ ವೃತ್ತಿ ಕೌಶಲವಿದೆಯೇ?
ಜರ್ಮನಿಯಲ್ಲಿನ ಅವಕಾಶಗಳನ್ನು ಬಾಚಿಕೊಳ್ಳಲು ಬೇರೆ ಬೇರೆ ದೇಶಗಳಿಂದ ನುರಿತ ತಂತ್ರಜ್ಞರು ಪೈಪೋಟಿ ನಡೆಸುತ್ತಿದ್ದಾರೆ. ಅವರ ಜೊತೆ ಪೈಪೋಟಿ ಮಾಡುವ ಸಾಮರ್ಥ್ಯ ನಿರಾಶ್ರಿತರಿಗಿದೆಯೇ? ನಿರಾಶ್ರಿತರು ಕೇವಲ ಸಣ್ಣಮಟ್ಟಿನ ಕೆಲಗಳಿಗೆ ಹೋಗಬೇಕಾಗಬಹುದು. ಆದರೆ ಯಂತ್ರೋಪಕರಣಗಳಿಂದ ತುಂಬಿರುವ ಜರ್ಮನಿಯಲ್ಲಿ ಚಿಲ್ಲರೆ ಕೆಲಸಗಳು ಕಡಿಮೆ. ಯಂತ್ರಗಳೇ ಹೆಚ್ಚಿನ ಕೆಲಸ ಮಾಡುತ್ತವೆ. ಇದರಿಂದ ಜರ್ಮನಿಯಲ್ಲೂ ನಿರಾಶ್ರಿತರು ನಿರುದ್ಯೋಗಿಗಳಾಗಿ ಉಳಿದರೆ?
ಶಿಕ್ಷಣ: ಜರ್ಮನಿ ಉತ್ತಮ ಶಿಕ್ಷಣ ವ್ಯವಸ್ಥೆ ಹೊಂದಿದೆ. ಹೆಚ್ಚು ಕಡಿಮೆ ಖರ್ಚಿಲ್ಲದೆಯೇ ಪ್ರಾಥಮಿಕ ಹಂತದ ಶಿಕ್ಷಣ ಲಭ್ಯವಿದೆ. ಇದು ಪ್ರಶ್ನಾತೀತ. ಉನ್ನತ ಶಿಕ್ಷಣವೂ ಕಡಿಮೆ ಖರ್ಚಿನಲ್ಲಿ ಪಡೆಯಬಹುದು. ಆದರೆ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ತುಂಬಾ ಪೈಪೋಟಿ ಇದೆ ಎಂಬುದನ್ನು ಮರೆಯಬಾರದು.

ಆದರೆ ಹೆಚ್ಚುತ್ತಿರುವ ಸರಾಸರಿ ವಯಸ್ಸು (aging population) ಕೇವಲ ಜರ್ಮನಿಯ ತೊಂದರೆಯಲ್ಲ. ಇದು ಯುರೋಪಿನ ಹೆಚ್ಚಿನ ದೇಶಗಳು ಎದುರಿಸುತ್ತಿರುವ ಸಮಸ್ಯೆ! ಹೆಚ್ಚಿನ ಮಾಹಿತಿಗೆ ಈ link ನೋಡಿ: world.bymap.org/MedianAge.htm. ಶಿಕ್ಷಣವೂ ಅಷ್ಟೇ ಬಹುತೇಕ ಯುರೋಪಿಯನ್ ದೇಶಗಳಲ್ಲಿ ಪ್ರಾಥಮಿಕ ಶಿಕ್ಷಣ ಸುಲಭವಾಗಿ ಖರ್ಚಿಲ್ಲದೇ ದೊರೆಯುತ್ತದೆ. ಹಾಗಿರುವಾಗ ಬೇರೆ ಯುರೋಪಿಯನ್ ದೇಶ ಯಾಕಾಗಬಾರದು?

ಇತರೇ ಯುರೋಪಿಯನ್ ದೇಶಗಳಿಗಿಂತ ಜರ್ಮನಿ ಭಿನ್ನವಾಗುವುದು ತನ್ನ ಆರ್ಥಿಕ ಸದೃಢತೆಯಲ್ಲಿ. ಯುರೋಪಿಯನ್ ಒಕ್ಕೂಟದ ಬಹುತೇಕ ದೇಶಗಳು ಆರ್ಥಿಕವಾಗಿ ದುರ್ಬಲವಾಗಿದೆ. ಯುರೋಪಿಯನ್ ಒಕ್ಕೂಟದ ಆರ್ಥಿಕತೆಯ ಆಧಾರ ಸ್ಥಂಬವೇ ಜರ್ಮನಿ, ಬಿಟ್ಟರೆ ಫ್ರಾನ್ಸ್.
ಇದನ್ನು ಎರಡು ರೀತಿಯಲ್ಲಿ ನೋಡಬಹುದು. ಆರ್ಥಿಕವಾಗಿ ಸದೃಢ ದೇಶದ ಆಶ್ರಯ ಪಡೆಯುವುದು ಯಾವುದೇ ನಿರಾಶ್ರಿತನ ಬಯಕೆಯಾಗಿರುತ್ತದೆ. ಯಾಕೆಂದರೆ ಆತ ಗಂಟುಮೂಟೆ ಕಟ್ಟಿಕೊಂಡು ಮತ್ತೆ ನಿರಾಶ್ರಿತನಾಗಿ ಹೋಗಬಯಸುವುದಿಲ್ಲ. ಒಮ್ಮೆ ಆಶ್ರಯ ಪಡೆದರೆ ಅದು ಶಾಶ್ವಾತವಾಗಿರಬೇಕು ಎಂಬುದು ಸಹಜವಾದ ಬಯಕೆ. ಆದರೆ ಆರ್ಥಿಕವಾಗಿ ಸದೃಢ ದೇಶಗಳು ಸಿರಿಯಾಕ್ಕೆ ಇನ್ನೂ ಹತ್ತಿರದಲ್ಲೇ ಇವೆಯಲ್ಲ. ಸೌದಿ ಅರೇಬಿಯಾ, ದುಬಾಯ್ ಮುಂತಾದ ಶ್ರೀಮಂತ ದೇಶಗಳಲ್ಲಿ ಹಲವಾರು ಹೊಸ ಹೊಸ ಅಭಿವೃದ್ಧಿ ಕಾರ್ಯಗಳು, ಹೊಸ ಯೋಜನೆಗಳು ನಡೆಯುತ್ತಲೇ ಇರುತ್ತವೆ. ಅಲ್ಲೇಕೆ ಆಶ್ರಯ ಪಡೆಯಬಾರದು.
ಅದರಲ್ಲೂ ನಿರಾಶ್ರಿತರನ್ನು ಸ್ವೀಕರಿಸದೆ ’ಜರ್ಮನಿಗೆ ಮಸೀದಿ ನಿರ್ಮಿಸಲು ಸಹಾಯ ಮಾಡುತ್ತೇವೆ’ ಎಂಬ ಹೇಳಿಕೆ ನೀಡುವುದು ನೋಡಿದರೆ ಇದರ ಹಿಂದೆ ಇನ್ನೇನೋ ಹುನ್ನಾರ ಇರುವ ಶಂಕೆ ಮೂಡುತದೆ. ಬೇಕೆಂದೇ ನಿರಾಶ್ರಿತರನ್ನು ಐಸಿಸ್ ಜರ್ಮನಿಯತ್ತ ಅಟ್ಟುತ್ತಿದೆಯೇ? ನಿರಾಶ್ರಿತರ ಹೆಸರಿನಲ್ಲಿ ಜಿಹಾದಿ ಉಗ್ರರು ಜರ್ಮನಿ ತಲುಪುತ್ತಿರಬಹುದೇ? ಇದು ಜರ್ಮನಿಯನ್ನು (ತನ್ಮೂಲಕ ಯುರೋಪಿಯನ್ ಒಕ್ಕೂಟವನ್ನು) ಆರ್ಥಿಕವಾಗಿ ಅಲುಗಾಡಿಸುವ ಮತ್ತು ಯುರೋಪಿನಾದ್ಯಂತ ಇಸ್ಲಾಂ‍ಅನ್ನು ಹರಡುವ ಮತ್ತು ಬಲಗೊಳಿಸುವ ತಂತ್ರವೇ ಎಂಬ ಪ್ರಶ್ನೆಗಳೂ ಮೂಡುತ್ತವೆ!

ಸಮೀರ ದಾಮ್ಲೆ

References:
Median Age / Countries of the World
Amid Muslim Refugee Crisis, Saudi Arabia Vows To Build 200 Mosques In Germany


http://kannadaforum.net/thread/4265-%E0%B2%9C%E0%B2%B0%E0%B3%8D%E0%B2%AE%E0%B2%A8%E0%B2%BF%E0%B2%AF%E0%B3%87-%E0%B2%AF%E0%B2%BE%E0%B2%95%E0%B3%86-%E0%B2%AC%E0%B3%87%E0%B2%95%E0%B3%81-%E0%B2%9C%E0%B2%B0%E0%B3%8D%E0%B2%AE%E0%B2%A8%E0%B2%BF%E0%B2%AF%E0%B2%A8%E0%B3%8D%E0%B2%A8%E0%B3%81-%E0%B2%AC%E0%B3%80%E0%B2%B3%E0%B2%BF%E0%B2%B8%E0%B3%81%E0%B2%B5-%E0%B2%B9%E0%B3%81%E0%B2%A8%E0%B3%8D%E0%B2%A8%E0%B2%BE%E0%B2%B0%E0%B2%B5%E0%B3%87/

No comments:

Post a Comment