Thursday, May 15, 2014

ಕನ್ನಡದಲ್ಲಿ ಕಲಿಯಿರಿ, ಇಂಗ್ಲಿಷನ್ನೂ ಕಲಿಯಿರಿ



ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಬೇಕೇ ಬೇಡವೇ ಎಂಬುದು ಇಂದು ನಿನ್ನೆಯ ಚರ್ಚೆಯಲ್ಲ. ಕೆಲವು ವರ್ಷಗಳಿಂದ ಹೊಗೆಯಾಡುತ್ತಲೇ ಇತ್ತು. ಮೇ ೫ ರಂದು ಬಂದ ಸುಪ್ರೀಂ ಕೋರ್ಟಿನ ತೀರ್ಪಿನ ಪರಿಣಾಮ ಈ ಚರ್ಚೆಗೆ ಬೆಂಕಿ ಹತ್ತಿತು. ’ಬ್ರಿಟಿಷ್ ಕಾಲದಿಂದ ಇಂದಿನವರೆಗೆ ಶಿಕ್ಷಣ ಹಾಗೂ ಶಿಕ್ಷಣ ಮಾಧ್ಯಮ ಹೇಗೆ ಬಂಡವಾಳಶಾಹಿಗಳ ಅಗತ್ಯತೆಗೆ ಅನುಕೂಲವಾಗುವ ಸ್ವತ್ತಾಯಿತು’ ಹಾಗೂ ’ಸರಕಾರಿ ಕನ್ನಡ ಮಾಧ್ಯಮ ಶಾಲೆಗಳನ್ನು ಹೇಗೆ ಬಲಪಡಿಸಬಹುದು’ ಈ ಎರಡೂ ವಿಷಯಗಳು ಮೇ ೧೩ ಪ್ರಜಾವಾಣಿಯಲ್ಲಿ ಎರಡು ಪ್ರತ್ಯೇಕ ಲೇಖನಗಳಲ್ಲಿ ಚರ್ಚೆಯಾಗಿವೆ. ಆದರೆ ಇಂಗ್ಲಿಷ್ ಮಾಧ್ಯಮದ ಪ್ರತಿಪಾದನೆಯ ಮುಖ್ಯಕಾರಣ ಚರ್ಚೆಯಾದದ್ದು ಕಡಿಮೆ. ಬಹುತೇಕ ಸಮರ್ಥಕರು ಕೊಡುವ ಕಾರಣಗಳೆಂದರೆ - ಹೆಚ್ಚಿನ ಅವಕಾಶಗಳು, ಕೀಳರಿಮೆ ಹಾಗೂ ಅನುವಾದದ ಸಮಸ್ಯೆಯಿಂದ ಕನ್ನಡದಲ್ಲಿ ಮಾಹಿತಿ ಲಭ್ಯವಿಲ್ಲದಿರುವುದು.
ಅವಕಾಶಗಳು: ಹೆಚ್ಚಿನ ಪೋಷಕರು ಕೊಡುವ ಮುಖ್ಯ ಕಾರಣ ಹೆಚ್ಚಿನ ಅವಕಾಶಗಳು, ಗ್ಲೋಬಲ್ ಒಪರ್ಚುನಿಟಿ. ಸತ್ಯ, ನಿಮ್ಮ ಜ್ನಾನ ಹೆಚ್ಚಿದ್ದಷ್ಟು, ಹೆಚ್ಚು ಭಾಷೆ ಬಂದಷ್ಟು, ನಿಮ್ಮ ಸಂವಹನ ಸಾಮರ್ಥ್ಯ (ಕಮ್ಯುನಿಕೇಶನ್ ಸ್ಕಿಲ್) ಹೆಚ್ಚಾದಷ್ಟು ನಿಮ್ಮನ್ನು ನೀವು ಚೆನ್ನಾಗಿ ಮಾರ್ಕೆಟ್ ಮಾಡಿಕೊಳ್ಳಬಹುದು; ಹಾಗಾಗಿ ನಿಮ್ಮ ಅವಕಾಶಗಳು ಹೆಚ್ಚುತ್ತವೆ. ಜರ್ಮನಿಯಲ್ಲಿ ಕಲಿಯಬೇಕಾದರೆ ಅಥವಾ ಕೆಲಸ ಸಿಗಬೇಕಾದರೆ ಜರ್ಮನ್ ಗೊತ್ತಿರಬೇಕು, ಜಪಾನಿನಲ್ಲಿ ಬದುಕಲು ಜಪಾನಿ ಭಾಷೆ ಕಲಿಯುವುದು ಅನಿವಾರ್ಯ, ಥಾಯ್ ಲ್ಯಾಂಡ್ ನಲ್ಲಿ ವ್ಯವಹಾರ ಮಾಡಲು ಥಾಯ್ ಭಾಷೆ ಅನುಕೂಲಕಾರಿ, ಕೊರಿಯಾದಲ್ಲಿ ಕೊರಿಯನ್, ಫ್ರಾನ್ಸ್ ನಲ್ಲಿ ಫ್ರೆಂಚ್ ಹೀಗೆ ನಿಮಗೆಷ್ಟು ಹೆಚ್ಚು ಭಾಷೆ ಗೊತ್ತೋ ಅಷ್ಟು ಅವಕಾಶಗಳು ಜಾಸ್ತಿ. ಅದೆಷ್ಟೋ ಮಲ್ಟಿನ್ಯಾಷನಲ್ ಕಂಪನಿಗಳಲ್ಲಿ ಭಾಷಾನುವಾದಕರು ಎಂಜಿನಿಯರ್ ಗಳಿಗಿಂತ ಹೆಚ್ಚು ಸಂಬಳ ಪಡೆಯುತ್ತಾರೆ. ಪರಿಣಿತ ಭಾಷಾನುವಾದಕರಿಗೆ ’ಶಬ್ದವೊಂದಕ್ಕಿಷ್ಟು’ ಎಂಬಂತೆ ಸಂಭಾವನೆ ಕೊಡಬೇಕಾಗುತ್ತದೆ! ಹಾಗಾದರೆ ಜರ್ಮನ್ ಅಥವಾ ಜಪಾನೀ ಮಾಧ್ಯಮದ ಶಾಲೆ ತೆರೆಯೋಣವೇ? ಪರಿಹಾರ ಅದಲ್ಲ, ಕನಿಷ್ಠ ಒಂದು ವಿದೇಶಿ ಭಾಷೆಯನ್ನು (ಭಾಷೆಯಲ್ಲಿ ಅಲ್ಲ) ಸರಿಯಾಗಿ ಕಲಿಯೋಣ! ಅದು ಇಂಗ್ಲಿಷೇ ಇರಬಹುದು, ಅದನ್ನು ಸರಿಯಾಗಿ ಕಲಿಯೋಣ.
ಇಂಗ್ಲಿಷ್ ಬರುತ್ತಿಲ್ಲವೆಂಬ ಕೀಳರಿಮೆ: ಅದೆಷ್ಟೋ ಹೆತ್ತವರು ಇಂಗ್ಲಿಷ್ ಮಾಧ್ಯಮಕ್ಕೆ ಸೇರಿಸುವುದಕ್ಕೆ ಕೊಡುವ ಕಾರಣ ’ನನಗೆ ಸರಿಯಾಗಿ ಇಂಗ್ಲಿಷ್ ಬರುತ್ತಿಲ್ಲ, ಹಾಗಾಗಿ ಅವಕಾಶಗಳನ್ನು ಕಳಕೊಂಡೆ’, ’ಇಂಗ್ಲಿಷ್ ಬರದ ಕಾರಣ ನನಗೆ ಮುಜುಗರವಾಗುತ್ತದೆ’, ’ಇಂಜಿನಿಯರಿಂಗ್, ಮೆಡಿಕಲ್ ಸೇರಿದಾಗ ಮೊದಲ ಸೆಮೆಸ್ಟರ್ ಅಥವಾ ವರ್ಷ ತುಂಬಾ ಕಷ್ಟವಾಯಿತು’ ಇತ್ಯಾದಿ. ಒಂದಷ್ಟು ಜನ ಈ ಅನುಭವಗಳಿಂದ ಕೀಳರಿಮೆ ಬೆಳೆಸಿಕೊಂಡಿರುತ್ತಾರೆ, ಇನ್ನು ಕೆಲವರು ಸ್ವಪ್ರಯತ್ನದಿಂದ ತಮ್ಮ ಇಂಗ್ಲಿಷ್ ಸಾಮರ್ಥ್ಯ ಬೆಳೆಸಿಕೊಂಡು ಇಂತಹ ಕೀಳರಿಮೆಯಿಂದ ಹೊರಬಂದಿರುತ್ತಾರೆ. (ಪ್ರಜಾವಾಣಿಯಲ್ಲಿ ಕೆಲ ತಿಂಗಳ ಹಿಂದೆ ಬಂದ ’ಮಗನೇ ಕ್ಷಮಿಸು’ ಎಂಬ ಲೇಖನದಲ್ಲಿ ಕೀಳರಿಮೆ ತುಂಬಿ ತುಳುಕುತ್ತಿತ್ತು). ಈ ಸಮಸ್ಯೆಗೆ ಕಾರಣ ಇಂಗ್ಲಿಷ್ ಅನ್ನು ಒಂದು ಭಾಷೆಯಾಗಿ ಕಲಿಸುವ ಸಾಮರ್ಥ್ಯ ಇರುವ ಶಿಕ್ಷಕರ ಕೊರತೆ. ಸ್ವಾಮೀ, ಇಂಗ್ಲಿಷ್ ಅನ್ನು ಒಂದು ಭಾಷೆಯಾಗಿ ಕಲಿಸುವವರು ಇಲ್ಲದಿರುವ ಸಮಸ್ಯೆ ನೀಗಿಸಲು ಭೌತಶಾಸ್ತ್ರ, ರಸಾಯನಶಾಸ್ತ್ರ, ಸಮಾಜಶಾಸ್ತ್ರ ಎಲ್ಲವನ್ನೂ ಇಂಗ್ಲಿಷ್ ನಲ್ಲಿ ಕಲಿಸುವುದು ಹೇಗೆ ಪರಿಹಾರವಾಗುತ್ತದೆ? ನೀವು ಲಕ್ಷ ತೆತ್ತು ಕಳಿಸುವ ಅದೆಷ್ಟೋ ಇಂಗ್ಲಿಷ್ ಶಾಲೆಗಳೂ ಈ ಸಮಸ್ಯೆಯಿಂದ ಮುಕ್ತವಾಗಿಲ್ಲ. ಹಾಗಾಗಿ ಇಂದಿನ ಅವಶ್ಯಕತೆ ಸಮರ್ಪಕವಾಗಿ (ವ್ಯಾಕರಣವನ್ನೂ ಹಾಗೂ ಸಂವಹನವನ್ನೂ) ಇಂಗ್ಲಿಷ್ ಕಲಿಸಬಲ್ಲ ಶಿಕ್ಷಕರು.

ಕನ್ನಡ-ಇಂಗ್ಲಿಷ್ ಅನುವಾದ: ಮೂರುವರೆ ವರ್ಷದ ನನ್ನ ಮಗಳಿಗೆ ಭೂಮಿಯ ಸುತ್ತುವಿಕೆಯ ಬಗ್ಗೆ ವಿವರಿಸುವಾಗ ವಿಡಿಯೋ ತೋರಿಸೋಣವೆಂದು ಯೂಟ್ಯೂಬ್ ಹುಡುಕಿದೆ. ಒಂದೇ ಒಂದು ಕನ್ನಡ ವಿಡಿಯೋ ಇತ್ತು, ಅದೂ ಚೆನ್ನಾಗಿರಲಿಲ್ಲ. ಮಗಳು ಕನ್ನಡದಲ್ಲಿ ತೋರಿಸೆಂದರೂ ಲಭ್ಯವಿಲ್ಲ. ನಮ್ಮಲ್ಲಿ ಇಂತಹ ಜ್ನಾನವನ್ನು ಕನ್ನಡಕ್ಕೆ ’ಡಬ್ಬಿಂಗ್’ ಮಾಡುವುದಕ್ಕೆ ದೊಡ್ಡ ವಿರೋಧವಿದೆ; ಇನ್ನೊಂದೆಡೆ ಕನ್ನಡ ಸಾಯುತ್ತದೆಂಬ ಕೂಗಿದೆ. ಕನ್ನಡದ ಉಳಿವಿಗೆ ಬೇರೆ ಬೇರೆ ಭಾಷೆಗಳಲ್ಲಿರುವು ಉಪಯುಕ್ತ ಮಾಹಿತಿಯನ್ನು ಕನ್ನಡಕ್ಕೆ ತರ್ಜುಮೆ ಮಾಡುವ ಅಗತ್ಯತೆಯಿದೆ.
ಮೊನ್ನೆ ಗೆಳೆಯರೊಬ್ಬರು ಕನ್ನಡ ಪಠ್ಯಗಳಲ್ಲಿರುವ ಅನುವಾದದ ಇನ್ನೊಂದು ಸಮಸ್ಯೆ ಹೇಳಿದರು. ’ರಬ್ಬರ್ ತಯಾರಿಯ ವಿಧಾನ’ವನ್ನು ಹೈಸ್ಕೂಲಿನಲ್ಲಿ ವಲ್ಕನೀಕರಣ ಅಂತ ಕಲಿತಿದ್ದೆ, ಮುಂದೆ ಆ ಶಬ್ದ ಉಪಯೋಗಕ್ಕೇ ಬರಲಿಲ್ಲ ಹಾಗೂ ಅದನ್ನು ನೆನಪಿಡುವುದೂ ಒಂದು ಸಮಸ್ಯೆ ಅಂತ. ಇಂತಹ ಹಲವು ಉದಾಹರಣೆಗಳು ಕನ್ನಡ ಮಾಧ್ಯಮದ ಪಠ್ಯಗಳಲ್ಲಿ ಕಾಣಸಿಕ್ಕುತ್ತದೆ. ಈ ಸಮಸ್ಯೆ ಬರುವುದು ನಾವು ಪ್ರತಿಯೊಂದು ಹೊಸ ಅನ್ವೇಷಣೆಗೂ ಹೊಸ ವಿಷಯಕ್ಕೂ ಒಂದೊಂದು ಕನ್ನಡ ಶಬ್ದ ತಯಾರಿಸ ಹೊರಟಾಗ. ಉದಾಹರಣೆಗೆ ಕಂಪ್ಯೂಟರ್ ಅನ್ನು ಗಣಕಯಂತ್ರ ಅಂತ ಕರೆಯುವುದಕ್ಕಿಂತ ಕಂಪ್ಯೂಟರ್ ಅನ್ನುವುದೇ ಸೂಕ್ತ. ಮೊಬೈಲ್ ಶಬ್ದಕ್ಕೆ ಒಂದು ಕನ್ನಡ ಶಬ್ದ ಹುಡುಕಬೇಕಾದ ಅವಶ್ಯಕತೆಯಿಲ್ಲ. ಹೀಗೆ ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಶಬ್ದಗಳನ್ನು ಎರವಲು ಪಡೆಯುವ ಪರಿಪಾಠವೂ ಇದೆ, ಇದರಲ್ಲಿ ಸಮಸ್ಯೆಯೇನೂ ಕಾಣುವುದಿಲ್ಲ.

ಮಾತೃಭಾಷೆಯ ಕಲಿಕೆ: ನನ್ನ ದೃಷ್ಟಿಯಲ್ಲಿ ಮಾತೃಭಾಷೆ ಅನ್ನುವುದಕ್ಕಿಂತ ಪರಿಸರದ ಭಾಷೆ ಅನ್ನುವುದು ಸೂಕ್ತ. ನಮ್ಮ ಮನೆಯಲ್ಲಿ, ನಮ್ಮ ಪರಿಸರದಲ್ಲಿ ನಿತ್ಯ ಬಳಕೆಯಲ್ಲಿರುವ ಭಾಷೆಯಲ್ಲಿ ಯಾವುದೇ ವಿಷಯವನ್ನು ಗ್ರಹಿಸುವುದು ಹಾಗೂ ಮನನ ಮಾಡುವುದು ಸುಲಭ ಅಷ್ಟೇ ಅಲ್ಲ ಗ್ರಹಿಕೆ ಸಂಪೂರ್ಣವಾಗುತ್ತದೆ. ಹಾಗೆಯೇ ನಮ್ಮ ಮನಸ್ಸಿನಲ್ಲಿ ನಡೆಯುವ ಆಲೋಚನೆಗಳು ವಿಮರ್ಷೆಗಳು ನಮ್ಮ ಪರಿಸರದ ಭಾಷೆಯಲ್ಲೇ ನಡೆಯುತ್ತದೆ. ಹಾಗಾಗಿ ಪ್ರಾಥಮಿಕ ಹಂತದ ಕಲಿಕೆಗೆ ಪರಿಸರದ ಭಾಷೆಯ ಅವಶ್ಯಕತೆಯಿದೆ.
ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಆಗಬೇಕಾದ ಇನ್ನೊಂದು ಬದಲಾವಣೆ - ಇಂಗ್ಲಿಷ್ ಅನ್ನು ಒಂದು ಭಾಷೆಯಾಗಿ ಅಂಗನವಾಡಿ/ಕೆ.ಜಿ ತರಗತಿಯಿಂದ ಕಲಿಸುವ ಅವಶ್ಯಕತೆ. ಇಲ್ಲಿ ಬರೆಯುವುದಕ್ಕಿಂತ ಸಂವಹನಕ್ಕೆ ಪ್ರಾಶಸ್ತ್ಯ ಕೊಡಬೇಕು ಹಾಗೂ ಶಬ್ದಭಂಡಾರ ಹೆಚ್ಚಿಸುವ ಕೆಲಸ ಮಾಡಬೇಕು. ಮನಃಶಾಸ್ತ್ರದ ಸಂಶೋಧನೆಗಳ ಪ್ರಕಾರ ಮೂರರಿಂದ ಆರು ವರುಷದ ಪ್ರಾಯದಲ್ಲಿ ಮಕ್ಕಳು ಅತೀ ಹೆಚ್ಚು ಶಬ್ದಗಳನ್ನು ಕಲಿಯುವ ಸಾಮರ್ಥ್ಯ ಹೊಂದಿರುತ್ತಾರೆ. ಮಕ್ಕಳ ಭಾಷಾಸಾಮರ್ಥ್ಯವನ್ನು ಬಲಪಡಿಸುವ ಕೆಲಸ ಶಿಕ್ಷಣದ ಪ್ರಾರಂಭದೊಂದಿಗೇ ಆರಂಭವಾಗಬೇಕು.
ಇದೆಲ್ಲದರ ಹೊರತಾಗಿ ನಮ್ಮ ಕನ್ನಡ ನಾಡಿನ ಸಂಸ್ಕೃತಿ, ಪರಂಪರೆ ಹಾಗೂ ಚರಿತ್ರೆಯಿಂದ ಕಲಿಯುವುದು ಬಹಳಷ್ಟಿದೆ. ಕನ್ನಡ ಸಂಸೃತಿಯ ಬಗ್ಗೆ, ಚರಿತ್ರೆಯ ಬಗ್ಗೆ ಕನ್ನಡಕ್ಕಿಂತ ಚೆನ್ನಾಗಿ ಯಾವ ಭಾಷೆಯಲ್ಲಿ ಓದಿ ತಿಳಿಯಲು ಸಾಧ್ಯ?
ಹಿರಿಯ ಸಾಹಿತಿಯೊಬ್ಬರು ಹೇಳಿದ ಮಾತೊಂದು ಸಮಂಜಸವೆನಿಸುತ್ತದೆ - ’ಕನ್ನಡದಲ್ಲಿ ಕಲಿಯಿರಿ, ಇಂಗ್ಲಿಷನ್ನೂ ಕಲಿಯಿರಿ’.