Saturday, May 12, 2018

***ಮತದಾನ ಮಾಡಿ***


ನನಗೆ ಓಟ್ ಇರುವುದು ನನ್ನ ಊರಿನಲ್ಲಿ. ಈ ವರ್ಷ ಬೂತ್ ನಾವೇ ನಡೆಸುತ್ತಿರುವ ಶಾಲೆಯಲ್ಲಿ; ನಮ್ಮ ಮನೆ ಮತ್ತು ಶಾಲೆ ಅಕ್ಕ ಪಕ್ಕ.
ಏಳು ಗಂಟೆಗೇ ಮತ ಹಾಕಲೆಂದು ಹೋದರೆ ಆಗಲೇ ದೊಡ್ಡ ಸರತಿ ಸಾಲು!
ದಿನಕೂಲಿ ಮಾಡುವವರು, ಖಾಸಗಿ ಕಾರ್ಖಾನೆಗಳಲ್ಲಿ ಕೆಲಸ ಮಾಡುವವರು, ಗ್ಯಾರೇಜ್, ವರ್ಕಶಾಪ್ ನಲ್ಲಿ ಕೆಲಸ ಮಾಡುವವರು, ಅಂಗಡಿ ನಡೆಸುವವರು ಮುಂತಾಗಿ ಈ ದಿನ ರಜೆ ಇಲ್ಲದವರು 6.45~7 ಗಂಟೆಗೇ ಬಂದು ಕ್ಯೂ ನಿಂತು ಮತ ಚಲಾವಣೆ ಮಾಡುತ್ತಿದ್ದಾರೆ. ಬೇಗ ಮತದಾನ ಮುಗಿಸಿ ಕೆಲಸಕ್ಕೆ ಹೋಗುವ ಆತುರ ಅವರಿಗೆ.
ಸದ್ಯಕ್ಕಂತೂ ಕಡಿಮೆ ಸಂಖ್ಯೆಯಲ್ಲಿ ಕಾಣುವವರು ಸುಶಿಕ್ಷಿತರು. ಸರಕಾರ ಮತದಾನದ ದಿವಸ ರಜೆ ಘೋಷಿಸುತ್ತದೆ. ಬಹುರಾಷ್ಟ್ರೀಯ (MNC) ಕಂಪನಿಗಳಿಗೆ ರಜೆ ಇರುತ್ತದೆ. ರಜೆ ಇರುವ ಮೇಲ್ವರ್ಗ (upper class) ಮತ್ತು ಮೇಲ್ಮಧ್ಯಮ ವರ್ಗ (upper middle class) ಮತದಾನ ಮಾಡಲು ಉದಾಸೀನ ಮಾಡುವುದೇ ಹೆಚ್ಚು. ಚುನಾವಣಾ ಪ್ರಚಾರದಲ್ಲಿ ರಾಜಕೀಯ ಪಕ್ಷಗಳ ಪ್ರಚಾರ ಬಡ ಹಾಗೂ ಕೆಳ ಮಧ್ಯಮ ವರ್ಗಕ್ಕೆ ಕೇಂದ್ರೀಕೃತವಾಗಿರುವುದೂ ಅದೇ ಕಾರಣಕ್ಕೆ.
ಮೇಲ್ವರ್ಗ ಮತ್ತು ಮೇಲ್ಮಧ್ಯಮ ವರ್ಗದ ಹೆಚ್ಚಿನ ಜನ ಸುಮ್ಮನೇ ಕುಳಿತು ಮಾತನಾಡುತ್ತಾರೆಯೇ ಹೊರತು ಮತದಾನ ಮಾಡುವುದಿಲ್ಲ ಎಂಬುದು ರಾಜಕೀಯ ಪಕ್ಷಗಳಿಗೆ ಚೆನ್ನಾಗಿ ತಿಳಿದಿದೆ.
ನಾನು ಸುಮಾರು ಹದಿನೈದು ದೇಶಗಳನ್ನು ನೋಡಿದ್ದೇನೆ. 1945~50 ರ ಆಸುಪಾಸಿನಲ್ಲಿ ನೆಲಸಮವಾಗಿದ್ದ ದೇಶಗಳು ಇವತ್ತು ಕಂಡಿರುವ ಅಭಿವೃದ್ಧಿಯನ್ನು ನೋಡಿದರೆ ನಾವಿನ್ನೂ ತುಂಬಾ ಹಿಂದಿದ್ದೇವೆ. ದೂರದೃಷ್ಟಿ ಇರುವ ಸರಕಾರಗಳು ಮತ್ತು ಇಚ್ಛಾಶಕ್ತಿ ಇರುವ ನಾಯಕರು ಬರದೇ ಇದ್ದದ್ದೇ ಇದಕ್ಕೆ ಕಾರಣ ಎಂಬುದು ನನ್ನ ಅನಿಸಿಕೆ. ಕೆಳ ವರ್ಗದ ಜನರನ್ನು ಆಮಿಷಕ್ಕೊಳಪಡಿಸಿ ಮತ ತಿರುಗಿಸುತ್ತಾರೆ ಎಂಬುದು ನಗ್ನ ಸತ್ಯ!
ಸುಶಿಕ್ಷಿತ ವರ್ಗ ಜಡ ಬಿಟ್ಟು ಮತದಾನ ಮಾಡದೆಯೇ, ಸರಿಯಾದ ದೂರದೃಷ್ಟಿ ಇರುವ ಅಭ್ಯರ್ಥಿಗಳನ್ನು ಆರಿಸದೆಯೇ ನಮ್ಮ ದೇಶದ ಪ್ರಗತಿ ಕುಂಟುತ್ತಾ ಸಾಗಿರುವುದು.
ಮತ ಹಾಕದೇ complaint ಮಾಡುವ ಜನರಲ್ಲಿ ಮತ ಹಾಕಿ ಎಂಬುದು ನನ್ನ ಕೋರಿಕೆ.
ಮತದಾನ ಮಾಡಿ ದೇಶ ಬದಲಿಸಿ.