Wednesday, June 18, 2014

ಥೈಲ್ಯಾಂಡ್ ಬಿಕ್ಕಟ್ಟು - ಒಂದು ಒಳನೋಟ

http://www.prajavani.net/article/%E0%B2%A5%E0%B2%BE%E0%B2%AF%E0%B3%8D%E0%B2%B2%E0%B3%86%E0%B2%82%E0%B2%A1%E0%B3%8D%E2%80%8C-%E0%B2%AC%E0%B2%BF%E0%B2%95%E0%B3%8D%E0%B2%95%E0%B2%9F%E0%B3%8D%E0%B2%9F%E0%B3%81-%E0%B2%92%E0%B2%B3%E0%B2%97%E0%B2%BF%E0%B2%A8%E0%B2%B5%E0%B2%B0%E0%B3%8A%E0%B2%AC%E0%B3%8D%E0%B2%AC%E0%B2%B0-%E0%B2%A8%E0%B3%8B%E0%B2%9F

ಥೈಲ್ಯಾಂಡ್ ಬಿಕ್ಕಟ್ಟಿನ ಕುರಿತಾಗಿ ಬರೆದ ಲೇಖನವನ್ನು ಪ್ರಕಟಿಸಿದ ಪ್ರಜಾವಾಣಿಗೆ ಕೃತಜ್ನತೆಗಳು. 
ನನ್ನ ಬರಹದ ಮೂಲ ಪ್ರತಿಯನ್ನು ಇಲ್ಲಿ ಪ್ರಕಟಿಸುತ್ತಿದ್ದೇನೆ. 


ಕಳೆದ ತಿಂಗಳು, ಮೇ ೨೨. ನಾನು ಪ್ಯಾರಿಸ್ ನಲ್ಲಿ ಕಾರ್ಯಾಗಾರವೊಂದರಲ್ಲಿ ಭಾಗವಹಿಸುತ್ತಾ ಇದ್ದೆ. ಬ್ಯಾಂಕಾಕಿನ ಸಹೋದ್ಯೋಗಿಯಿಂದ ಮೊಬೈಲ್ ಕರೆ ಬಂತು; ಉತ್ತರಿಸಲಾಗಲಿಲ್ಲ. ಇನ್ನೆರಡು ನಿಮಿಷಕ್ಕೆ ಸಂದೇಶ ಬಂತು - ’ಥೈಲ್ಯಾಂಡಿನಲ್ಲಿ ತುರ್ತುಪರಿಸ್ಥಿತಿ ಹೇರಿದ್ದಾರೆ; ನಿನ್ನ ಹೆಂಡತಿ ಹಾಗೂ ಮಗಳಿಗೆ ತೀರಾ ಅಗತ್ಯದ ಹೊರತಾಗಿ ವಸತಿ ಸಮುಚ್ಚಯದಿಂದ ಹೊರಹೋಗದಂತೆ ತಿಳಿಸು. ಅಗತ್ಯವಿದ್ದರೆ ನಮ್ಮನ್ನು ಸಂಪರ್ಕಿಸಲು ಹೇಳು. ನಿನಗೆ ಇಲ್ಲಿನ ಪರಿಸ್ಥಿತಿಯ ಬಗ್ಗೆ ಮಾಹಿತಿ ಕಳುಹಿಸುತ್ತಿರುತ್ತೇವೆ’ ಅಂತ. ಭಾರತದ ತುರ್ತುಪರಿಸ್ಥಿತಿಯ ಕಥೆಗಳನ್ನು ಕೇಳಿತಿಳಿದಿದ್ದ ನನಗೆ ಆತಂಕವಾಯಿತು. ಅಷ್ಟರಲ್ಲಿ ಮನೆಯಿಂದ ಬಂದ ’ನಾವು ಸುರಕ್ಷಿತವಾಗಿದ್ದೇವೆ, ಚಿಂತಿಸಬೇಕಾಗಿಲ್ಲ’ ಎಂಬ ಸಂದೇಶ ಮನಸ್ಸಿಗೆ ಸಮಾಧಾನ ತಂದಿತು. ಕಾರ್ಯಾಗಾರ ಮುಗಿಸಿ ಮೇ ೨೪ ರ ಬೆಳಗ್ಗೆ ಪ್ಯಾರಿಸ್ ನಿಂದ ಬ್ಯಾಂಕಾಕಿಗೆ ಬಂದಿಳಿದ ನನಗೆ ಎಲ್ಲೂ ವಿಶೇಷ ಬದಲಾವಣೆಗಳು ಕಾಣಲಿಲ್ಲ. ತಿಂಗಳಿಗೆ ಎರಡು ಮೂರು ಬಾರಿ ಬ್ಯಾಂಕಾಕಿನ ಸುವರ್ಣಭೂಮಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಓಡಾಡುವ ನನಗೆ ಎಲ್ಲೂ ಮಾಮೂಲಿಗಿಂತ ಹೆಚ್ಚಿನ ಪೋಲಿಸರಾಗಲೀ, ಸೈನಿಕರಾಗಲೀ ಕಾಣಲಿಲ್ಲ! ರಸ್ತೆಯಲ್ಲಿ, ಮುಖ್ಯವಾಗಿ ಕೆಲ ಜಂಕ್ಷನ್ ಗಳಲ್ಲಿ ಸ್ವಲ್ಪ ಹೆಚ್ಚು ಸುರಕ್ಷತೆ ಕಂಡುಬಂತೇ ವಿನಃ ಬೇರೇನೂ ಬದಲಾವಣೆ ಕಾಣಲಿಲ್ಲ. ವಾಹನ ದಟ್ಟಣೆ ಮಾಮೂಲಿನಂತೆಯೇ ಇತ್ತು. ನನ್ನ ಕಛೇರಿ ಬ್ಯಾಂಕಾಕಿನ ಮುಖ್ಯ ರಸ್ತೆ ’ಬಿಸಿನೆಸ್ ಸ್ಟ್ರೀಟ್’ ಎಂದೇ ಕರೆಯ್ಪಡುವ ಸಿಲೊಮ್ ರಸ್ತೆಯಲ್ಲಿದೆ. ಸೇನಾಡಳಿತ ಆರಂಭವಾದ ದಿನದಿಂದ ಇಂದಿನವರೆಗೂ ನಮ್ಮ ಕಛೇರಿ ಕೆಲಸಗಳು ನಿರಾತಂಕವಾಗಿ ಸಾಗಿವೆ. ಸಾಮಾನ್ಯ ಜನರ ಬದುಕು ಆತಂಕದಿಂದ ಕೂಡಿಲ್ಲ! ಮುಖ್ಯವಾಗಿ ಮಧ್ಯಮವರ್ಗದವರಲ್ಲಿ ಒಂದು ಹೊಸ ಬೆಳಕು ಕಾಣುವ ಆಕಾಂಕ್ಷೆ ಮೂಡಿದೆ!

ಜೂನ್ ೧೫ರಂದು ಪ್ರಜಾವಾಣಿಯಲ್ಲಿ ಪ್ರಕಟವಾದ ಥಾಮಸ್ ಫ಼ುಲ್ಲರ್ ಅವರ ಲೇಖನವನ್ನೋದಿದರೆ ಥೈಲ್ಯಾಂಡಿನ ಜನ ನಿತ್ಯ ಭಯದಿಂದ ಏಳುತ್ತಾರೇನೋ ಎಂದೆನಿಸಬೇಕು! ಕುತೂಹಲದಿಂದ ಅವನ ಇನ್ನೂ ಕೆಲವು ಲೇಖನಗಳನ್ನು ಓದಿದೆ. ಥೈಲ್ಯಾಂಡಿನ ರಾಜಕೀಯ ಬಿಕ್ಕಟ್ಟಿಗೆ ಅಗತ್ಯಕ್ಕಿಂತ ಹೆಚ್ಚೇ ಬಣ್ಣ ಲೇಪಿಸಿದ್ದು ಕಂಡುಬಂತು. ’ಜನರೆಲ್ಲಾ ಭಯಭೀತರಾಗಿ ಓಡಾಡುತ್ತಿದ್ದಾರೆ, ನಾಗರಿಕರಲ್ಲಿ ಮನೆಮಾಡಿರುವ ಭಯವನ್ನು ಹೋಗಲಾಡಿಸಲು ಅರೆಬರೆ ಬಟ್ಟೆತೊಟ್ಟ ಹುಡುಗಿಯರಿಂದ ರಸ್ತೆಗಳಲ್ಲಿ ಮನರಂಜನಾ ಕಾರ್ಯಕ್ರಮವನ್ನು ಸೇನೆಯವರು ಆಯೋಜಿಸಿದ್ದಾರೆ’ ಎಂದು ಥಾಮಸ್ ಬರೆದಿರುವುದು ಸತ್ಯಕ್ಕೆ ದೂರವಾದ ಮಾತು! ನಾನು ಮೊದಲೇ ಹೇಳಿದಂತೆ ಜನ ಈಗ ಹೆಚ್ಚು ಸಮಾಧಾನದಿಂದಿದ್ದಾರೆ. ಒಳ್ಳೆಯ ಸ್ಥಿರ ಪ್ರಜಾತಂತ್ರ ಆಡಳಿತ ಬೇಗನೇ ಬರಲಿದೆ ಎಂಬ ಆಶಯದಿಂದಿದ್ದಾರೆ. ಇನ್ನು ರಸ್ತೆಯಬದಿಯ ಅರೆಬಟ್ಟೆಯ ನೃತ್ಯ ಶುದ್ಧ ಸುಳ್ಳು! ಥೈಲ್ಯಾಂಡಿನಲ್ಲಿ ಸೆಕ್ಸ್ ಟೂರಿಸಮ್ ಇದೆ, ಸ್ಟ್ರಿಪ್ ಬಾರ್ ಗಳು, ಡ್ಯಾನ್ಸ್ ಬಾರ್ ಗಳು ಇತ್ಯಾದಿ ಇವೆ ನಿಜ; ಆದರೆ ಇವು ನಡೆಯುವ ನಿರ್ದಿಷ್ಟ ಜಾಗಗಳಿವೆ, ನಿರ್ದಿಷ್ಟ ರಸ್ತೆಗಳಿವೆ! ಅಂತಹ ಜಾಗಗಳಲ್ಲಿ ಅಲ್ಲಿನ ಕಾರ್ಯಕ್ರಮಗಳು ದಿನನಿತ್ಯವೂ ಸಾಗುತ್ತಿರುತ್ತವೆ! ಅಷ್ಟೇ ಅಲ್ಲ ಅಂತಹ ಸ್ಥಳಗಳು ವಿದೇಶೀ ಪ್ರವಾಸಿಗರಿಂದಲೇ ತುಂಬಿರುತ್ತವೆ ಎಂಬುದೂ ಅಷ್ಟೇ ಸತ್ಯ! ಸೇನಾಡಳಿತ ಬಂದು ಕರ್ಫ್ಯೂ ಹೇರಲ್ಪಟ್ಟಾಗ ಈ ವ್ಯವಹಾರಗಳು ಕೆಲ ದಿನಗಳ ಕಾಲ ನಿಂತವು. ಕರ್ಫ್ಯೂ ಸಡಿಲವಾಗುತ್ತಿದ್ದಂತೆ ವಿದೇಶೀ ಪ್ರವಾಸಿಗರ ಮನರಂಜನೆ ಮತ್ತೆ ಪ್ರಾರಂಭವಾಗಿದೆ! ಥಾಯ್ ಜನರ ಭಯ ಹೋಗಿಸುವುದಕ್ಕೆ ಅಗತ್ಯವಿರುವುದು ಇಂತಹ ನೃತ್ಯಗಳಲ್ಲ, ಅವರಿಗೆ ಬೇಕಿರುವುದು ಭ್ರಷ್ಟಾಚಾರ ರಹಿತ ಆಡಳಿತ!

ಈ ವರ್ಷದ ಪ್ರಾರಂಭದಲ್ಲಿ ಥೈಲ್ಯಾಂಡಿನಲ್ಲಿ ಆಡಳಿತವಿರೋಧಿ ಪ್ರತಿಭಟನೆ ಪ್ರಾರಂಭವಾದಾಗಿನಿಂದ ಅಂತರರಾಷ್ಟ್ರೀಯ ಸುದ್ದಿ ಮಾಧ್ಯಮಗಳು ಥೈಲ್ಯಾಂಡಿನ ಪರಿಸ್ಥಿತಿಯ ಬಗ್ಗೆ ಸ್ವಲ್ಪ ರಂಗು ಹಚ್ಚಿ ವರದಿ ಮಾಡುವುದನ್ನು ಗಮನಿಸಿದ್ದೇನೆ. ಮಾಧ್ಯಮ ದಿಗ್ಗಜರೆನಿಕೊಂಡಿರುವ ಬಿ.ಬಿ.ಸಿ ಹಾಗೂ ಸಿ.ಎನ್.ಎನ್. ಇದನ್ನೇ ಮಾಡುತ್ತಾ ಬಂದಿವೆ. ಅಂತರರಾಷ್ಟ್ರೀಯ ಸುದ್ದಿ ವಾಹಿನಿಗಳು ಎಲ್ಲೋ ಒಂದು ಸರಕಾರಿ ಕಛೇರಿಯ ಮುಂದೆ ನಡೆದ ಕಲ್ಲು ತೂರಾಟವನ್ನು ದಿನವಿಡೀ ತೋರಿಸುತ್ತಾ ಇಡೀ ಬ್ಯಾಂಕಾಕೇ ಪ್ರತಿಭಟನೆಯಿಂದ ಮುಚ್ಚಿಹೋಯಿತೆಂದು ಭಾಸವಾಗುವಂತೆ ತೋರುತ್ತಿದ್ದರೆ ಅದೇ ಬ್ಯಾಂಕಾಕಿನ ಮುಖ್ಯರಸ್ತೆಗಳಲ್ಲಿ (ಪ್ರತಿಭಟನೆಯ ಆರು ಸ್ಥಳಗಳನ್ನು ಹೊರತುಪಡಿಸಿ) ವಾಹನಗಳ ಓಡಾಟ ವ್ಯವಹಾರಗಳು ಎಂದಿನಂತೆ ಸಾಗಿತ್ತು. ಪ್ರತಿಭಟನಾ ಸ್ಥಳಗಳಲ್ಲಿ ವಾಹನ ಸಂಚಾರ ನಿಂತಿತೇ ಹೊರತು ಮೆಟ್ರೋ, ಮೋನೋ ರೈಲು ಓಡಾಟ ನಿಲ್ಲಲಿಲ್ಲ. ಅಂತರರಾಷ್ಟ್ರೀಯ ಮಾಧ್ಯಮಗಳು, ಅಂತರರಾಷ್ಟ್ರೀಯ ಬುದ್ಧಿಜೀವಿಗಳು ಅಮೆರಿಕನ್ ಯಾ ಯುರೋಪಿಯನ್ ದೃಷ್ಟಿಕೋನದಿಂದಲೇ ಇಡೀ ವಿಶ್ವನ್ನು ನೋಡುವುದು, ಅಮೆರಿಕನ್/ಯುರೋಪಿಯನ್ ಸಹಭಾಗಿತ್ವದಿಂದಲೇ ಎಲ್ಲಾ ದೇಶಗಳ ಬಿಕ್ಕಟ್ಟನ್ನು ಸರಿಪಡಿಸುತ್ತೇವೆಂಬ ಭಾವನೆ ಹೊಂದಿರುವುದು ವಿಪರ್ಯಾಸ. ಇವರು ನೆಲದ ಜನರ ಮನಸ್ಸು, ಹಿನ್ನೆಲೆ, ಸಂಸ್ಕೃತಿಯನ್ನೂ ಕೊಂಚ ಅರ್ಥೈಸಿಕೊಳ್ಳಬೇಕು.

ಜನವರಿ ೧೩, ೨೦೧೪ ರಂದು ಸುತೇಪ್ ತೌಗ್ಸುಬಾನ್ ನೇತ್ರತ್ವದಲ್ಲಿ ಬ್ಯಾಂಕಾಕಿನಲ್ಲಿ ಆಡಳಿತ ವಿರೋಧಿ ಪ್ರತಿಭಟನೆ ಆರಂಭವಾದಾಗಲೂ ಜನರ ದೈನಂದಿನ ಬದುಕಿನಲ್ಲಿ ಬದಲಾವಣೆಯ ಅವಶ್ಯಕತೆ ಬರಲಿಲ್ಲ. ಅದು ಶಾಂತಿಯುತ ಪ್ರತಿಭಟನೆಯಾಗಿತ್ತು. ಜನವರಿ ೧೩ರಿಂದ ಎಪ್ರಿಲ್ ೧೦ವರೆ ಬ್ಯಾಂಕಾಕಿನ ಆರು ಪ್ರಮುಖ ಸ್ಥಳಗಳಲ್ಲಿ ನಿರಂತರವಾಗಿ ಹಗಲು ರಾತ್ರಿ ನಡೆದ ಪ್ರತಿಭಟನೆಯಲ್ಲಿ ಕೇವಲ ಒಂದೆರಡು ಹೇಳಬಹುದಾದ ಹಿಂಸೆಯ ಘಟನೆಗಳು ಕಂಡುಬಂದವು. ಆ ಹಿಂಸೆಯೂ ಪ್ರತಿಭಟನಾಕಾರರಿಂದ ನಡೆದಿದ್ದಲ್ಲ, ಸರಕಾರದ ಬೆಂಬೆಲಿಗರಿಂದ ನಡೆದದ್ದು. ಪ್ರತಿಭಟನೆಯ ಸ್ವರೂಪ ಆಕರ್ಷಕವಾಗಿತ್ತು; ಅಲ್ಲೊಂದು ಜಾತ್ರೆಯ ವಾತಾವರಣವಿತ್ತು! ಪ್ರತಿಭಟನಾಕಾರರು ಹಾಕಿದ ವೇದಿಕೆಯ ಮೇಲೆ ಭಾಷಣಗಳಷ್ಟೇ ಅಲ್ಲ ಸಂಗೀತ ನೃತ್ಯಗಳು ನಡೆಯುತ್ತಿದ್ದವು. ಅದರ ಸುತ್ತಲೂ ಹಲವಾರು ಅಂಗಡಿಗಳು. ಅಲ್ಲಿ ಪ್ರತಿಭಟನಾಕಾರರಿಗೆ ಅಗತ್ಯದ ಆಹಾರದ ಮಾರಾಟ, ಹಣ್ಣುಗಳ ಮಾರಾಟ, ಥಾಯ್ ಧ್ವಜದ ಚಿತ್ರವಿರುವ ಹಲವಾರು ನಿತ್ಯ ಉಪಯೋಗದ ವಸ್ತುಗಳು ಮತ್ತು ಆಟಿಕೆಗಳ ಮಾರಾಟ ನಡೆಯುತ್ತಿದ್ದವು. ಪ್ರಮುಖ ಭಾಷಣಗಳ ಸಮಯದಲ್ಲಿ ಪ್ರತಿಭಟನಾಕಾರರಿಗೆ ತಮ್ಮ ಬೆಂಬಲವನ್ನು ಸೂಚಿಸಲು ಸುತ್ತಮುತ್ತಲ ಕಛೇರಿಗಳಿಂದ ಉದ್ಯೋಗಿಗಳು, ಶಾಲಾಕಾಲೇಜುಗಳಿಂದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು, ವರ್ತಕರು ಒಂದೆರಡು ಗಂಟೆಗಳ ಕಾಲ ಪ್ರತಿಭಟನೆಯ ಸ್ಥಳಕ್ಕೆ ಹೋಗಿ ಭಾಗವಹಿಸುತ್ತಿದ್ದರು. ಸೊಂಕ್ರಾನ್ ಹಬ್ಬ (ಥಾಯ್ ಹೊಸವರ್ಷ) ಪ್ರಾರಂಭವಾದಂದಿನಿಂದ ಕಳೆದ ತಿಂಗಳು ಸೇನಾಡಳಿತ ಬರುವವರೆಗೆ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದ ಕಾರಣಕ್ಕೆ ಪ್ರತಿಭಟನೆಯನ್ನು ಲುಂಪಿನಿ ಉದ್ಯಾನವನಕ್ಕೆ ಸ್ಥಳಾಂತರಿಸಲಾಯಿತು!

ಪ್ರತಿಭಟನೆಗಳು ಶಾಂತಿಯುತವಾಗಿ ನಡೆದರೂ ಅವರ ಬೇಡಿಕೆ ರಾಜತಾಂತ್ರಿಕವಾಗಿ ಒಂದು ದೊಡ್ಡ ಬಿಕ್ಕಟ್ಟಾಯಿತು. ಅವರ ಬೇಡಿಕೆ ಪ್ರಜಾತಾಂತ್ರಿಕ ಪರಿಹಾರವಾಗಿರಲಿಲ್ಲ. ಪ್ರಧಾನಿ ಇಂಗ್ಲಕ್ ಹಾಗೂ ಪ್ರತಿಭಟನೆಯ ನಾಯಕನಾಗಿದ್ದ ಸುತೇಪ್ ನಡುವೆ ಮುಕ್ತ ಚರ್ಚೆ ನಡೆಯಲಿಲ್ಲ. ಹಾಗೆ ನೋಡಿದರೆ ಸೇನಾಡಳಿತವನ್ನು ಜನವರಿಯಲ್ಲೇ ಹೇರಬಹುದಿತ್ತು. ಆದರೆ ಸೇನಾನಾಯಕ ಪ್ರಯುತ್ ರಾಜಕೀಯ ಬಿಕ್ಕಟ್ಟು ಪ್ರಬಲವಾದಾಗಿನಿಂದಲೂ ’ಮಾತುಕತೆಯ ಮೂಲಕ ದೇಶದ ಹಿತಕ್ಕೆ ಧಕ್ಕೆಯಾಗದಂತಹ ಒಂದು ಪರಿಹಾರ ಹುಡುಕಿ’ ಎಂದು ಹೇಳುತ್ತಲೇ ಬಂದಿದ್ದಾನೆ. ’ಯಾವುದೇ ಸಂದರ್ಭದಲ್ಲಿಯೂ ಸೇನೆಯು ಜನರ ಹಿತ ಕಾಪಾಡಲು ಆದ್ಯತೆ ಕೊಡುತ್ತದೆ’ ಇದು ಪ್ರಯುತ್ ನಿರಂತರವಾಗಿ ಹೇಳಿಕೊಂಡು ಬಂದಿರುವ ಮಾತು. ಥೈಲ್ಯಾಂಡಿನ ಸರ್ವೋಚ್ಛ ನ್ಯಾಯಾಲಯ ಅಧಿಕಾರದಿಂದ ಕೆಳಗಿಳಿಯುವಂತೆ ಆದೇಶ ನೀಡಿದ ನಂತರವೂ ಇಂಗ್ಲಕ್ ಅಧಟುತನ ತೋರಿದಾಗ ಸೇನಾಡಳಿತ ಹೇರಲ್ಪಟ್ಟಿತು ಎಂಬುದನ್ನು ಮರೆಯಬಾರದು. ಇಂಗ್ಲಕ್ ಅಥವಾ ಅವಳ ಅಣ್ಣ ಉಚ್ಛಾಟಿತ ಮಾಜಿ ಪ್ರಧಾನಿ ತಕ್ಸಿನ್ ಸರಕಾರಕ್ಕೆ ರೈತರ ದೊಡ್ಡ ಬೆಂಬಲ ಇದ್ದುದು ನಿಜ. ಆದರೆ ಇಂದು ಅದು ಕಡಿಮೆಯಾಗುತ್ತಾ ಇದೆ. ರೈತರು ಸರಕಾರದಿಂದ ಬಾಕಿ ಹಣ ಬರದೆ ಬಸವಳಿದಿದ್ದಾರೆ, ಮಧ್ಯಮ ವರ್ಗ ಹಾಗೂ ಶ್ರೀಮಂತ ವರ್ಗ ಅಣ್ಣ-ತಂಗಿಯರ ಭ್ರಷ್ಟ ಆಡಳಿತ ನೋಡಿ ಸುಸ್ತಾಗಿದ್ದಾರೆ. ಹಾಗೆಂದು ಇಂಗ್ಲಕ್ ಚಿನವತ್ರಾಗೆ ಬೆಂಬಲಿಗರೇ ಇಲ್ಲವೆಂದು ನಾನು ಹೇಳುತ್ತಿಲ್ಲ. ಸರಕಾರದ ಪ್ರಮುಖರ ಬಂಧನವಾಗಿದೆ, ಪಲಾಯನಗೈದವರ ಮೇಲೆ ನಿರ್ಬಂಧ ಹೇರಲ್ಪಟ್ಟಿದೆ. ಆದರೆ ಜನರ ಸಂಪೂರ್ಣ ಸ್ವಾತಂತ್ರ್ಯ ಕಳೆದುಹೋಗಿದೆ ಎಂದು ಹೇಳಲಾಗದು. ಇವತ್ತಿಗೂ ಬ್ಯಾಂಕಾಕ್ ಪೋಸ್ಟ್ (ಥೈಲ್ಯಾಂಡಿನ ಪ್ರಮುಖ ಪತ್ರಿಕೆ) ಪತ್ರಿಕೆಯಲ್ಲಿ ಪರ / ವಿರೋಧ ಅಭಿಪ್ರಾಯಗಳೆರಡೂ ಓದಸಿಗುತ್ತದೆ! ಆದಷ್ಟು ಬೇಗ ಪ್ರಜಾತಂತ್ರ ಪುನರ್ ಸ್ಥಾಪಿಸವುದಾಗಿ ಸೇನಾಧ್ಯಕ್ಷ ಹೇಳುತ್ತಿದ್ದಾನೆ. ನಿವೃತ್ತಿಯ ಅಂಚಿನಲ್ಲಿರುವ ಸೇನಾಧ್ಯಕ್ಷನೇ ಥೈಲ್ಯಾಂಡಿನ ಮುಂದಿನ ಪ್ರಧಾನಿಯಾಗಿ ಸ್ವಚ್ಛ ಆಡಳಿತದೊಂದಿಗೆ ದೇಶಕ್ಕೆ ಹೊಸ ಬೆಳಕು ನೀಡಬಹುದೆಂಬ ಆಶಯವೂ ನನ್ನ ಕೆಲ ಥಾಯ್ ಮಿತ್ರರಲ್ಲಿದೆ!

ಸಮೀರ ಸಿ. ದಾಮ್ಲೆ

ಬ್ಯಾಂಕಾಕ್

ಮೋದಿ ಸರ್ಕಾರ್ - ಆಕಾಂಕ್ಷೆಗಳು ಮತ್ತು ಆತಂಕಗಳು

http://www.prajavani.net/article/%E0%B2%AE%E0%B3%8B%E0%B2%A6%E0%B2%BF-%E0%B2%B8%E0%B2%B0%E0%B3%8D%E0%B2%95%E0%B2%BE%E0%B2%B0%E0%B3%8D-%E0%B2%86%E0%B2%95%E0%B2%BE%E0%B2%82%E0%B2%95%E0%B3%8D%E0%B2%B7%E0%B3%86%E0%B2%97%E0%B2%B3%E0%B3%81-%E0%B2%AE%E0%B2%A4%E0%B3%8D%E0%B2%A4%E0%B3%81-%E0%B2%86%E0%B2%A4%E0%B2%82%E0%B2%95%E0%B2%97%E0%B2%B3%E0%B3%81

ಮೇ ೨೨ರಂದು ಪ್ರಜಾವಾಣಿಯಲ್ಲಿ ಪ್ರಕಟವಾದ ಈ ಲೇಖನದ ಮೂಲಪ್ರತಿ ಇಲ್ಲಿದೆ.

ಮಹಾಭಾರತದ ಮಹಾಸಮರ ಎಂದೇ ಬಿಂಬಿಸಲಾದ ಸಾರ್ವತ್ರಿಕ ಚುನಾವಣೆ ಮುಗಿದಿದೆ. ಭಾ.ಜ.ಪ. ಪೂರ್ಣ ಬಹುಮತ ಪಡೆದಿದೆ. ಆದರೆ ಭಾಜಪದ ನಾಯಕರೆನಿಸಿಕೊಂಡವರು ಮರೆಯಬಾರದ ವಿಷಯ - ಇದು ಭಾಜಪದ ಸಾಮೂಹಿಕ ಗೆಲುವಲ್ಲ! ಮೋದಿ ಮಾಡಿದ ಮೋಡಿಯ ಗೆಲುವು ಹಾಗೂ ಕಳೆದ ಹತ್ತು ವರುಷಗಳಲ್ಲಿ ದೇಶ ಕಂಡ ಭ್ರಷ್ಟಾಚಾರ, ಹಗರಣಗಳು ಹಾಗೂ ಬೆಲೆಯೇರಿಕೆಗಳ ಸೋಲು. ರಾಜ್ ದೀಪ್ ಸರ್ದೇಸಾಯ್ ಮಾಡಿದ ಸಂದರ್ಶನದಲ್ಲಿ ರಾಜ್ ಠಾಕ್ರೆ ಹೇಳಿದಂತೆ ಭಾಜಪ ಸೇರಿ ಎಲ್ಲರೂ ಬಯಸಿದ್ದು ಮೋದಿ ಸರಕಾರವನ್ನು, ಕಮಲದ್ದಲ್ಲ. ಈಗ ಮೋದಿಯವರ ಬೆಂಬಲಿಗರು ತಮ್ಮ ಕನಸಿನ ಭಾರತದ ನಿರ್ಮಾಣ ಪ್ರಾರಂಭವಾಯಿತು ಎಂಬ ವಿಜಯೋತ್ಸಾಹದಲ್ಲಿದ್ದರೆ ವಿರೋಧಿಗಳಲ್ಲಿ ಹಲವು ಆತಂಕಗಳು ಮನೆಮಾಡಿವೆ. ಪತ್ರಿಕೆಗಳಲ್ಲಿ, ಸುದ್ದಿವಾಹಿನಿಗಳಲ್ಲಿ, ಸಾಮಾಜಿಕ ಜಾಲ ತಾಣಗಳಲ್ಲಿ ಜನರ ಆಕಾಂಕ್ಷೆಗಳ, ಆಸೆಗಳ, ಕನಸುಗಳ ಹಾಗೆಯೇ ಆತಂಕಗಳ, ಚಿಂತೆಗಳ ಚರ್ಚೆಗಳು ಭರದಿಂದ ಸಾಗಿವೆ. ’ಪ್ರಬಲ ನಾಯಕನ ಸುತ್ತ ಆಸೆಗಳು ಮತ್ತು ಭಯಗಳು’ ಎಂಬ ಲೇಖನದಲ್ಲಿ (೧೭ ಮೇ, ಪ್ರಜಾವಾಣಿ) ಹಿರಿಯ ಪತ್ರಕರ್ತ ವಿನೋದ್ ಮೆಹ್ತಾ ಭಯಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಿದರು. ಅಚ್ಚರಿಯೆಂದರೆ ಆಸೆ ಆಕಾಂಕ್ಷೆಗಳ ಬಗ್ಗೆ ಚರ್ಚಿಸಲೇ ಇಲ್ಲ!

ಮೋದಿಯವರ ಗೆಲುವಿಗೆ ಪ್ರಮುಖ ಕಾರಣ ಅವರು ಜನತೆಯಲ್ಲಿ ಬಿತ್ತಿದ ಅಭಿವೃದ್ಧಿಯ ಕನಸುಗಳು; ಎಲ್ಲರನ್ನೊಳಗೊಂಡ ಆಡಳಿತ, ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ (’ಇಂಕ್ಲೂಸಿವ್ ಗವರ್ನೆನ್ಸ್’, ’ಮಿನಿಮಮ್ ಗವರ್ನ್ಮೆಂಟ್ ಮಾಕ್ಸಿಮಮ್ ಗವರ್ನೆನ್ಸ್’) ಮುಂತಾದ ಹೊಸ ಕಲ್ಪನೆಗಳು ತನ್ಮೂಲಕವಾಗಿ ಜನರಲ್ಲಿ ಹುಟ್ಟಿಕೊಂಡ ಹೊಸ ಆಸೆಗಳು, ಆಕಾಂಕ್ಷೆಗಳು. ಹಾಗಾಗಿ ಈಗ ಜನತೆಯಲ್ಲಿರುವ ಕೆಲವು ಮುಖ್ಯ ನಿರೀಕ್ಷೆಗಳು - ಭ್ರಷ್ಟಾಚಾರ ನಿರ್ಮೂಲನೆ ಮತ್ತು ಆರ್ಥಿಕ ಸಬಲೀಕರಣ. ಇದಕ್ಕೆ ಮೋದಿಯವರು ಇತ್ತೀಚಿನ ಸಂದರ್ಶನಗಳಲ್ಲಿ ಹೇಳಿದ ಐಡಿಯಾಗಳನ್ನು ಜಾರಿಗೊಳಿಸುತ್ತಾರೆಂಬ ಆಕಾಂಕ್ಷೆ.

ಭ್ರಷ್ಟಾಚಾರ ನಿರ್ಮೂಲನೆ: ಯಾವುದೇ ಒಳ್ಳೆಯ ಕೆಲಸ ಮನೆಯಿಂದ ಪ್ರಾರಂಭವಾಗಬೇಕೆಂಬ ಮಾತಿದೆ. ಹಾಗಾಗಿ ಮೋದಿಯವರು ಮೊದಲು ಮಾಡಬೇಕಾದದ್ದು: ೧. ಕಳಂಕಿತರಿಗೆ ಸಂಪುಟದಲ್ಲಿ ಸ್ಥಾನ ಕೊಡದಿರುವುದು, ೨. ಅರ್ಣಬ್ ಜೊತೆಗಿನ ಸಂದರ್ಶನದಲ್ಲಿ ಹೇಳಿದಂತೆ ಮೊದಲಿಗೆ ಚುನಾಯಿತ ಸಂಸದೀಯರ ವಿರುದ್ಧವಿರುವ ಪ್ರಕರಣಗಳ ತ್ವರಿತಗತಿಯ ವಿಚಾರಣೆಗೆ ಪ್ರತ್ಯೇಕ ನ್ಯಾಯಪೀಠ ಸ್ಥಾಪನೆ. ಹೀಗೆ ಮಾಡಿದಾಗ ಶಿಕ್ಷೆಯಾದವರು ಸಂಸತ್ತಿನಿಂದ ಹೊರಹೋಗಲೇ ಬೇಕಾಗುತ್ತದೆ. ಇದು ಇಡೀ ದೇಶಕ್ಕೆ ಒಂದು ಬಹುದೊಡ್ಡ ಸಂದೇಶವಾಗುತ್ತದೆ. ಮುಖ್ಯವಾಗಿ ಈ ನಡೆಯಿಂದ ಭ್ರಷ್ಟ ಅಧಿಕಾರಶಾಹಿ ವರ್ಗಕ್ಕೆ ಮರ್ಮಾಘಾತವಾಗುತ್ತದೆ.
ಅವರು ಹೇಳಿದ ಇನ್ನೊಂದು ವಿಷಯ - ಅಧಿಕಾರಿವರ್ಗದವರನ್ನು ದುಡಿಸಿಕೊಳ್ಳುವುದು. ನಮ್ಮ ಕಾರ್ಪೊರೇಟ್ ಕಂಪನಿಗಳಲ್ಲಿ ಅನುಸರಿಸುವ ಗುರಿ/ಸಾಮರ್ಥ್ಯ ಆಧಾರಿತ ಮೌಲ್ಯಮಾಪನ (ಟಾರ್ಗೆಟ್/ಪರ್ಫಾರ್ಮೆನ್ಸ್ ಓರಿಯೆಂಟೆಡ್ ಎವಾಲ್ಯುವೇಶನ್) ಅಧಿಕಾರಿ ವರ್ಗಕ್ಕೂ ತರಬೇಕು. ನೇಮಕಾತಿಯಲ್ಲಿ ಬೇಕಾದರೆ ಮೀಸಲಾತಿ ಇರಲಿ ಆದರೆ ಭಡ್ತಿಗೆ ಸಾಮರ್ಥ್ಯ ಮಾನದಂಡವಾಗಲಿ! ಎಮ್.ಎನ್.ಸಿ ಗಳಲ್ಲಿ ಕೆಲಸ ಮಾಡುವ ಯುವಕರನ್ನು ನೋಡಿ ’ಈ ಪ್ರಾಯಕ್ಕೇ ಸಾವಿರಗಳಲ್ಲಿ ಲಕ್ಷಗಳಲ್ಲಿ ದುಡಿಯುತ್ತೀರಿ’ ಎಂದು ಭುಸುಗುಡುವ (ಮತ್ತು ಅದನ್ನೇ ಲಂಚ ಕೇಳಲು ನೆಪವಾಗಿಸುವ) ಅಧಿಕಾರಶಾಹಿಗಳು ಸಮಯಕ್ಕೆ ಸರಿಯಾಗಿ ಕೆಲಸ ಪೂರೈಸುವ ಅಗತ್ಯತೆಯನ್ನು ಹಾಗೂ ಮಹತ್ವವನ್ನು ಅರಿತುಕೊಳ್ಳಬೇಕಾಗಿದೆ.
ಇನ್ನೊಂದು ಪ್ರಾಮುಖ್ಯ ಅಂಶ, ಅಸ್ಪಷ್ಟವಾಗಿರುವ ನೀತಿ ನಿಯಮಗಳನ್ನು ಸ್ಪಷ್ಟ ಪಡಿಸುವುಸು. ನಿಯಮಗಳು ಸ್ಪಷ್ಟವಾದಾಗ ಲಂಚಕ್ಕೆ ಅವಕಾಶಗಳು ತಾನಾಗಿಯೇ ಕಡಿಮೆಯಾಗುತ್ತದೆ.
ಭ್ರಷ್ಟಾಚಾರದ ವಿಚಾರದಲ್ಲಿ ನಮ್ಮ ದೇಶದ ಒಂದಷ್ಟು ಜನ (ಮಧ್ಯಮವರ್ಗದವರೂ ಸೇರಿ) ಪ್ರವಾಸಕ್ಕೆ ಹೋಗಿ ನೋಡಿ ಮೆಚ್ಚಿದ ಥಾಯ್ ಲ್ಯಾಂಡನ್ನು ಉದಾಹರಣೆಯಾಗಿ ಕೊಡಬಯಸುತ್ತೇನೆ. ಥಾಯ್ ಲ್ಯಾಂಡಿನಲ್ಲಿ ಸರಕಾರದಿಂದ ಬಿಡುಗಡೆಯಾದ ಹಣದಲ್ಲಿ ಸುಮಾರು ೪೦%
ಭ್ರಷ್ಟಾಚಾರದಿಂದಾಗಿ ಜನತೆಗೆ ತಲುಪುತ್ತಿಲ್ಲವೆಂದು ಅಂದಾಜಿಸಲಾಗಿದೆ. ಅಷ್ಟಾಗಿಯೂ ಇಲ್ಲಿನ ಮೂಲಭೂತ ಸೌಕರ್ಯ ನಮಗಿಂತ ಎಷ್ಟೋ ಮುಂದಿದೆ. ನಮ್ಮಲ್ಲಿ ಭ್ರಷ್ಟಾಚಾರ ೫೦% ರಷ್ಟು ಕಡಿಮೆಯಾದರೂ ನಾವು ಎಲ್ಲಿ ತಲುಪಬಹುದೆಂದು ಊಹಿಸಿ! ಹಾಗಾಗಿ ಭ್ರಷ್ಟಾಚಾರ ನಿರ್ಮೂಲನೆಯ ಒಳ್ಳೆಯ ಕೆಲಸ ಮೇಲ್ಮನೆಯಿಂದಲೇ ಪ್ರಾರಂಭವಾಗಲಿ.

ಆರ್ಥಿಕ ಸಬಲೀಕರಣ: ಇದಕ್ಕೆ ಮೋದಿಯವರು ಕೊಟ್ಟ ಭರವಸೆಗಳು ಮೂಲ ಸೌಕರ್ಯ ವರ್ಧನೆ, ಕೈಗಾರಿಕೋದ್ಯಮಕ್ಕೆ ಉತ್ತೇಜನ. ಇದು ಆದಾಗ ಸಹಜವಾಗಿಯೇ ನಿರುದ್ಯೋಗ ಕಡಿಮೆಯಾಗುತ್ತದೆ, ಪೋಷಕ ವ್ಯವಹಾರಗಳು, ಸಣ್ಣ ವ್ಯಾಪಾರಗಳು ಹೆಚ್ಚುತ್ತವೆ. ರಫ್ತು ಹೆಚ್ಚಾಗುತ್ತದೆ, ರೂಪಾಯಿ ಬಲವಾಗುತ್ತದೆ, ಬ್ಯಾಂಕುಗಳಿಗೆ ಸಾಲ ಮರುಪಾವತಿಯಾಗಿ ಬ್ಯಾಂಕುಗಳ ಆದಾಯ ವೃದ್ಧಿಯಾಗುತ್ತದೆ. ಹಣದುಬ್ಬರ ಸಹಜವಾಗಿಯೇ ಹತೋಟಿಗೆ ಬರುತ್ತದೆ. ಹಾಗಾಗಿ ಮೋದಿಯವರು ಈ ಆಶ್ವಾಸನೆಯನ್ನು ನಿಜಗೊಳಿಸಲೇಬೇಕು.

ಇನ್ನು ಕೆಲ ವಿಷಯಗಳ ಬಗ್ಗೆ ಮೋದಿಯವರು ಮಾತನಾಡಿದ್ದು ಬಹಳ ಕಡಿಮೆ. ಆದರೆ ಸಮಷ್ಠಿಯ ಅಭಿವೃದ್ಧಿಗೆ ಇವು ಅತ್ಯವಶ್ಯಕ. ಅವುಗಳಲ್ಲಿ ಮುಖ್ಯವಾದವು ಶಿಕ್ಷಣ ಮತ್ತು ಆರೋಗ್ಯ.

ಶಿಕ್ಷಣ: ಮೋದಿಯವರು 'ಸ್ಕಿಲ್ ಡೆವಲಪ್ ಮೆಂಟ್ ಬಗ್ಗೆ ಮಾತನಾಡಿದ್ದಾರಾದರೂ ಯಾವ ರೀತಿ ಶಿಕ್ಷಣದ ಸಮಸ್ಯೆಯನ್ನು ನಿಭಾಯಿಸುತ್ತಾರೆಂಬುದು ಸ್ಪಷ್ಟವಾಗಿಲ್ಲ. ಸ್ಕಿಲ್ ಡೆವಲಪ್ ಮೆಂಟ್ ಶಿಕ್ಷಣ ವ್ಯವಸ್ಥೆಯೊಳಗಿನ ಒಂದು ಸಮಸ್ಯೆಯಾದರೆ, ಶಿಕ್ಷಣ ವ್ಯವಸ್ಥೆಯಲ್ಲೇ ಅನೇಕ ಸಮಸ್ಯೆಗಳಿವೆ. ಒಂದೆಡೆ ಯುನೆಸ್ಕೊ ಹೇಳುತ್ತೆ - ಭಾರತದ ಪಠ್ಯಕ್ರಮ ಅತೀ ಮಹತ್ವಾಕಾಂಕ್ಷೆಯಿಂದ ಕೂಡಿದೆ (ಟೂ ಆಂಬೀಷಿಯಸ್) ಅಂತ. ಇನ್ನೊಂದೆಡೆ ಶಿಕ್ಷಕರ ಗುಣಮಟ್ಟದಲ್ಲಿ ಕೊರತೆಯಿದೆ. ಮಕ್ಕಳಿಗೆ ಪ್ರೋತ್ಸಾಹ ಕೊಡುವ ಹೆಸರಲ್ಲಿ ನಮ್ಮ ಮೌಲ್ಯಮಾಪನ ತನ್ನ ಮೌಲ್ಯವನ್ನೇ ಕಳಕೊಂಡಿದೆ. ಇದಲ್ಲದೆ ಜೀವನಮೌಲ್ಯಗಳ ಶಿಕ್ಷಣ ಶಾಲಾ ಪಠ್ಯಕ್ರಮದಿಂದ ದೂರವೇ ಉಳಿದು ’ನಿರ್ಭಯಾ’ ಪ್ರಕರಣದಂತಹ ಭಯಾನಕ ಕೃತ್ಯಗಳು ನಡೆಯುತ್ತಲೇ ಇವೆ. ಇವೆಲ್ಲದರ ಹೊರತಾಗಿ ರಾಜ್ಯಭಾಷೆಯ ಅಥವಾ ಪರಿಸರದ ಭಾಷೆಯ ಶಿಕ್ಷಣಕ್ಕೆ ಸರಕಾರದ ಬೆಂಬಲದ ಅಗತ್ಯವಿದೆ. ರಘುರಾಮ ರಾಜನ್ ವರದಿಯಂತೆ ಗುಜರಾತ್ ರಾಜ್ಯ ಶಿಕ್ಷಣದ ವಿಚಾರದಲ್ಲಿ ಹಿಂದಿರುವುದರಿಂದ, ಈ ವಿಷಯಗಳ ಬಗ್ಗೆ ’ಮೋದಿ ಸರ್ಕಾರ್’ ಯಾವ ರೀತಿಯ ನಿಲುವು ತಳೆಯುತ್ತದೆಯೆಂಬ ಆತಂಕ ಬಹುಜನರಲ್ಲಿದೆ.  ಮೋದಿ ಹಾಕಬಯಸಿರುವ ನವಭಾರತದ ಅಡಿಪಾಯನ್ನು ಗಟ್ಟಿಗೊಳಿಸುವಲ್ಲಿ, ಮುಂದಕ್ಕೆ ಭಾರತವನ್ನು ಎತ್ತರಕ್ಕೇರಿಸುವಲ್ಲಿ ಶಿಕ್ಷಣ ವ್ಯವಸ್ಥೆ ಮಹತ್ತರ ಪಾತ್ರವಹಿಸುತ್ತದೆನ್ನುವುದನ್ನು ಅವರು ಗಮನದಲ್ಲಿಟ್ಟುಕ್ಕೊಳ್ಳಬೇಕು.

ಆರೋಗ್ಯ: ಮೂಲಭೂತ ಸೌಕರ್ಯಗಳಲ್ಲಿ ಆಸ್ಪತ್ರೆಗಳು ಸೇರುತ್ತವಾದರೂ ಆರೋಗ್ಯ ಸಮಸ್ಯೆ ಕೇವಲ ಆಸ್ಪತ್ರೆಗಳಿಗೆ ಸೀಮಿತವಾಗಿಲ್ಲ. ವರ್ಲ್ಡ್ ಬ್ಯಾಂಕ್ ನ ಸಮೀಕ್ಷೆಯ ಪ್ರಕಾರ ನಮ್ಮ ದೇಶದಲ್ಲಿ ೫ ವರ್ಷದೊಳಗಿನ ೭೫%  ಮಕ್ಕಳು ಹಾಗೂ ೫೧% ಮಹಿಳೆಯರು ಅನೀಮಿಯ ಹೊಂದಿದ್ದಾರೆ! ಇದು ಪೌಷ್ಠಿಕ ಆಹಾರದ ಕೊರತೆಯನ್ನು ಎತ್ತಿ ತೋರಿಸುತ್ತದೆ. ಶುದ್ಧ ನೀರು, ಸಾಮಾಜಿಕ ನೈರ್ಮಲ್ಯ, ಶೌಚಾಲಯಗಳು ಮುಂತಾದವು ಆರೋಗ್ಯ ಸಮಸ್ಯೆಯಲ್ಲಿ ಅಡಕವಾಗಿದೆ. ಇದರ ಬಗ್ಗೆಯೂ ಮೋದಿಯವರು ಪ್ರಸ್ತಾಪ ಮಾಡಿದ್ದು ಕಡಿಮೆ. ಇದನ್ನು ಯಾವ ರೀತಿ ನಿಭಾಯಿಸುತ್ತಾರೆಂದು ಕಾದು ನೋಡಬೇಕಿದೆ.

ಮೋದಿಯವರಲ್ಲಿ ಭಾರತದ ಬಗ್ಗೆ ಒಂದು ಕನಸಿದೆ; ಹಾಗೆಯೇ ನಮ್ಮೆಲ್ಲರಲ್ಲೂ ಒಂದು ಕನಸಿದೆ, ದೇಶದ ಬಗ್ಗೆ ಹಲವಾರು ಕಲ್ಪನೆಗಳಿವೆ. ಎಲ್ಲರೂ ದೇಶದ ಪ್ರಗತಿಯನ್ನು ಬಯಸುತ್ತೇವೆ. ಒಂದಷ್ಟು ಜನ ಮೋದಿಯವರ ಕನಸಿನಲ್ಲೂ ತಮ್ಮ ಕನಸಿನಲ್ಲೂ ಸಾಮ್ಯತೆ ಕಂಡು ಬೆಂಬಲ ನೀಡಿದ್ದಾರೆ. ಇನ್ನು ಕೆಲವರು ತಮ್ಮ ಕನಸನ್ನು ಸಾಕಾರಗೊಳಿಸಲು ’ಮೋದಿ ಸರ್ಕಾರ್’ ಬೇಕೆಂದು ನಂಬಿ ಬೆಂಬಲಿಸಿದ್ದಾರೆ. ಇನ್ನು ಕೆಲವರು ಬದಲಾವಣೆಗಾಗಿ ಮತ ಚಲಾಯಿಸಿದ್ದಾರೆ. ಆದರೆ ನಾವೆಲ್ಲ ನೆನಪಿನಲ್ಲಿಡಬೇಕಾದ ಒಂದು ಮುಖ್ಯ ಅಂಶ ಅಂದರೆ ಬದಲಾವಣೆ ಇಂದಿನಿಂದ ನಾಳೆಗೆ ಆಗುವುದಿಲ್ಲ. ಅದು ಮೋದಿಯವರೇ ಇರಲಿ ಅಥವಾ ಬೇರೆ ಯಾರೇ ಇರಲಿ. ಒಂದು ವ್ಯವಸ್ಥೆಯಲ್ಲಿ ಬದಲಾವಣೆ ತರುವುದಕ್ಕೆ ವ್ಯವಸ್ಥೆಯ ಭಾಗವಾದವರೆಲ್ಲರಲ್ಲೂ ಬದಲಾವಣೆಯ ಅಗತ್ಯತೆಯ ಅರಿವುಮೂಡಿಸಬೇಕು. ಅಷ್ಟೇ ಅಲ್ಲ  ಭಾರತದಂತಹ ವೈವಿಧ್ಯಮಯ ದೇಶವನ್ನು ಒಂದು ಸೂತ್ರದಲ್ಲಿ ಕಟ್ಟುವುದು ಸಾಧ್ಯವಿಲ್ಲ. ಪ್ರಾದೇಶಿಕ ಆವಶ್ಯಕತೆಗಳಿಗೆ ಸರಿಯಾಗಿ ಸೂತ್ರಗಳೂ ಬದಲಾಗಬೇಕು. ನಮ್ಮ ಮನಸ್ಸಿನಲ್ಲಿರಬೇಕಾದ ಇನ್ನೊಂದು ವಿಚಾರ - ಸರಕಾರದ ಕೆಲಸ ಒಬ್ಬೊಬ್ಬರ ವೈಯಕ್ತಿಕ ಕನಸುಗಳನ್ನು ಪೂರ್ಣಗೊಳಿಸುವುದಲ್ಲ; ನಮ್ಮ ನಮ್ಮ ಕನಸಿನ ಸೌಧವನ್ನು ಕಟ್ಟುವುದು ನಮ್ಮ ಕೆಲಸ. ದೇಶದ ಅಭಿವೃದ್ಧಿ, ಸಬಲೀಕರಣ, ಸಾಮಾಜಿಕ ಸ್ವಾಸ್ಥ್ಯ, ಸೌಹಾರ್ದತೆ, ಸರ್ವಾಂಗೀಣ ಅಭಿವೃದ್ಧಿ ತನ್ಮೂಲಕ ಪ್ರಜೆಗಳ ಕನಸುಗಳನ್ನು ಸಾಕಾರಗೊಳಿಸಲು ಪೂರಕ ವಾತಾವರಣ ನಿರ್ಮಾಣ ಮಾಡುವುದು ಸರಕಾರದ ಕೆಲಸ.

ಸಮೀರ ಸಿ ದಾಮ್ಲೆ
ಬ್ಯಾಂಕಾಕ್