Saturday, November 7, 2020

ಎಂತಹ ಅದ್ಭುತ ಆಟ!

 ಕ್ರಿಕೆಟ್ ಮೈದಾನದಲ್ಲಿ ಮೊದಲ ಬ್ಯಾಟಿಂಗ್ ಅಥವಾ ಬೌಲಿಂಗಿಗಾಗಿ ಕಿತ್ತಾಡದ ಹುಡುಗರು ಭಾರತದಲ್ಲಿ ಬಹಳ ವಿರಳ! ಅಂಥವರಲ್ಲಿ ನಾನೂ ಒಬ್ಬ. ಶಾಲಾದಿನಗಳಲ್ಲಿ ಸಾಮಾನ್ಯವಾಗಿ ನನಗೆ ಸಿಗುತ್ತಿದ್ದುದು ಅಂಪೈರ್ ಕೆಲಸ. ಒಂದೆರಡು ಓವರ್ ಬೌಲಿಂಗ್. ಫೀಲ್ಡಿಂಗಿಗಿಂತ ನನಗೆ ಅಂಪೈರ್ ಕೆಲಸವೇ ಇಷ್ಟವಾಗುತ್ತಿತ್ತು. ಹೈಸ್ಕೂಲಿನ ನಂತರ ಕ್ರಿಕೆಟ್ ಆಡಿದ್ದೇ ನೆನಪಿಲ್ಲ! 

ಕ್ರಿಕೆಟ್ ಆಡುವ ಹುಚ್ಚೇ ಹಚ್ಚಿಕೊಳ್ಳದ ನಾನು ನೋಡುವ ಅಭ್ಯಾಸವನ್ನೂ ಬೆಳೆಸಿಕೊಳ್ಳಲಿಲ್ಲ. ಯಾವತ್ತೋ ಹೈಸ್ಕೂಲು ದಿನಗಳಲ್ಲಿ ಕೆಲವೊಂದು ಬಾರಿ ಲೈವ್ ಮ್ಯಾಚ್ ನೋಡಿದ್ದಿದೆ. ಈಗಂತೂ ಯಾವ ಮ್ಯಾಚ್, ಯಾವ ಸೀರೀಸ್ ನಡೆಯುತ್ತಿದೆ ಎಂಬುದರ ತಲೆ ಬುಡ ನನಗೆ ತಿಳಿದಿರುವುದಿಲ್ಲ. ’ಸ್ಕೋರ್ ಎಷ್ಟೋ?’ ಅಂತ ಯಾರಾದರೂ ಕೇಳಿದರೆ ’ಯಾವ ಸ್ಕೋರ್?’ ಎಂಬುದು ನನ್ನ ಸಿದ್ಧ ಉತ್ತರ. 

ಇಂತಿಪ್ಪ ನಾನೂ ನನ್ನ ಕ್ರಿಕೆಟ್ ಪ್ರೇಮಿ ಗೆಳೆಯ ಮನೋಜನೂ ಮೀಟಿಂಗ್ ಮುಗಿಸಿ ಸ್ವಲ್ಪ ಬೇಗನೇ ಏರ್ಪೋರ್ಟ್ ತಲುಪಿದೆವು. ಸಾಕಷ್ಟು ಸಮಯವಿದ್ದ ಕಾರಣ ಕಾಫಿ ತೆಗೊಂಡು ಕುಳಿತೆವು. ಎದುರಿಗಿದ್ದ ಸ್ಕ್ರೀನಿನಲ್ಲಿ ಕ್ರಿಕೆಟ್ ಪ್ರಸಾರವಾಗುತ್ತಿತ್ತು. ’ಮ್ಯಾಚ್ ನಡಿಯುತ್ತಿದೆಯೇನೋ?’ ಅಂತ ಕೇಳಿದೆ. ನನ್ನ ಕ್ರಿಕೆಟ್ ಪ್ರೀತಿ ಎಷ್ಟೆಂದು ಗೊತ್ತಿದ್ದ ಆತ ’ಹೌದು’ ಎಂದಷ್ಟೇ ಹೇಳಿ ಸ್ಕ್ರೀನಿನೊಳಗೆ ಮುಳುಗಿದ, ನಾನೂ ನೋಡತೊಡಗಿದೆ. ನಾಲ್ಕೈದು ಎಸೆತಗಳಿಗೆ ಸತತವಾಗಿ ಬೌಂಡರಿ, ಸಿಕ್ಸರ್ ಬಂತು. ನನಗೋ ಆಶ್ಚರ್ಯ. ’ಅರೆ, ಅದ್ಭುತ ಆಟ, ಹೀಗೆ ಆಡಿದರೆ ನಾವು ಗೆಲ್ಲೋದು ಗ್ಯಾರಂಟಿ ಅಂದೆ’. ಅದಕ್ಕಾತ ’ಇದು ಹೈಲೈಟ್ಸ್ ಕಣೋ, ನಾವು ಆಗಲೇ ಮ್ಯಾಚ್ ಸೋತಾಗಿದೆ’ ಅಂದಲ್ಲಿಗೆ ನನ್ನ ಕಮೆಂಟರಿ ನಿಂತು ಗಪ್ ಚುಪ್. ಆತನಿಗೆ ನಗುವೋ ನಗು.