Saturday, November 10, 2018

ನಾನೂ "ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು" ಚಲನಚಿತ್ರ ನೋಡಿದೆ...

ನಾನೂ "ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು" ಚಲನಚಿತ್ರ ನೋಡಿದೆ.
ಗಡಿನಾಡಿನಲ್ಲಿ ಕನ್ನಡ ಶಾಲೆಗಳನ್ನು ಉಳಿಸುವ ಉದ್ದೇಶದಿಂದ ಮಾಡಿದ ಚಿತ್ರ, ಕನ್ನಡ ಶಾಲೆಗಳ ರಕ್ಷಣೆಯ ಕುರಿತಾದ ಚಿತ್ರ, ಹೊಸಬಗೆಯ ವಿಶಿಷ್ಟ ಚಿತ್ರ, ಅದೆಷ್ಟೋ ವೀಕ್ಷಕರನ್ನು ಜನರನ್ನು ಹಲವಾರು ವರ್ಷಗಳ ನಂತರ ಚಿತ್ರಮಂದಿರಕ್ಕೆ ಕರೆತಂದ ಚಿತ್ರ ಮುಂತಾದ ಹೆಗ್ಗಳಿಕೆಯನ್ನು ಪಡೆದ ಈ ಸಿನಿಮಾ ನನಗಂತೂ ನಿರಾಶೆಯನ್ನು ಮಾಡಿತು!
"ಕನ್ನಡ ಶಾಲೆಗಳನ್ನು ಉಳಿಸುವ ಉದ್ದೇಶ" ಎಂಬ ಕನ್ನಡಕವನ್ನು ತೆಗೆದು ಕೇವಲ ಮನರಂಜನೆಯ ದೃಷ್ಟಿಯಿಂದ ನೋಡಿದರೆ ಇದನ್ನು ಒಳ್ಳೆಯ ಚಲನಚಿತ್ರ ಎನ್ನಬಹುದು.
ನಿರ್ದೇಶಕರು ಸುಮಾರು ಇಪ್ಪತ್ತು ~ ಮೂವತ್ತು ವರ್ಷಗಳ ಹಿಂದಿನ ಅವಿಭಜಿತ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಯ ಜನಜೀವನವನ್ನು ಬಹಳ ಮನೋಜ್ಞವಾಗಿ ಕಟ್ಟಿಕೊಟ್ಟಿದ್ದಾರೆ. ಆಗಿನ ಪರಿಸರ, ಸಾಮಾಜಿಕ ಸ್ಥಿತಿಗತಿ ಮತ್ತು ದೈನಂದಿನ ಬದುಕನ್ನು ಚಿತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾಸರಗೋಡಿನ ಕನ್ನಡಿಗರು ಅನುಭವಿಸಿದ / ಅನುಭವಿಸುತ್ತಿರುವ ತೊಂದರೆಗಳು, ಅವರ ಆತಂಕಗಳು ಮತ್ತು ಸಮಸ್ಯೆಗಳನ್ನು ತಕ್ಕಮಟ್ಟಿಗೆ ಪ್ರಸ್ತುತಪಡಿಸಲಾಗಿದೆ.
ಆದರೆ ಕನ್ನಡ ಶಾಲೆಗಳನ್ನು ನಡೆಸುವ (ಅಥವಾ ಶಾಲೆಗಳನ್ನು ನಡೆಸುವ) ಸಮಸ್ಯೆಯನ್ನು ನಿರ್ದೇಶಕರು ಅರ್ಥಮಾಡಿಕೊಂಡಂತೆ ಕಾಣುವುದಿಲ್ಲ. ಅದರ ಕುರಿತು ಅಧ್ಯಯನ ಮಾಡಿದಂತೆಯೂ ಕಾಣುವುದಿಲ್ಲ. ಆ ಕುರಿತಾದ ತಯಾರಿ ಏನೂ ಸಾಲದು.

ತುಂಬಾ ಆಳವಾದ ಶಿಕ್ಷಣದ ಸಮಸ್ಯೆಯನ್ನು ತುಂಬಾ ಸಣ್ಣ ಸಮಸ್ಯೆಯಂತೆ ತೋರಿಸಲಾಗಿದೆ. ಗಹನವಾದ ಸಮಸ್ಯೆಯನ್ನು ತುಂಬಾ ಹಗುರವಾಗಿ ಪ್ರದರ್ಶಿಸಿರುವುದು ಮಾತ್ರವಲ್ಲದೆ ಹಾಸ್ಯಮಯ ರೀತಿಯಲ್ಲಿ ಪರಿಹರಿಸಲು ಹೋಗಿ ಒಟ್ಟು ಸಮಸ್ಯೆಯನ್ನು ಲಘುವಾಗಿಸಿದ್ದಾರೆ.
ಇಷ್ಟೇ ವಿಷಯವನ್ನು ಚಿತ್ರಿಸಲು ಎರಡೂವರೆ ಗಂಟೆಗಳ ಅಗತ್ಯವೂ ಇರಲಿಲ್ಲವೆನ್ನಿಸಿತು; ಇನ್ನೂ ಚುಟುಕಾಗಿ ಚಿತ್ರಿಸಬಹುದಿತ್ತು. ಮೊದಲಾರ್ಧದ ನಂತರ ಸಿನಿಮಾ ನಿಧಾನಗತಿಯಲ್ಲಿ ಸಾಗಿತು.
ಭಾವನಾತ್ಮಕ ವಿಷಯವನ್ನು ಉಪಯೋಗಿಸಿಕೊಂಡು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯಲು ಯಶಸ್ವಿಯಾಗಿರಬಹುದು ಆದರೆ ಶಿಕ್ಷಣದ ಸಮಸ್ಯೆಗೆ ಈ ಚಿತ್ರ ಖಂಡಿತವಾಗಿಯೂ ನ್ಯಾಯ ಒದಗಿಸಲಿಲ್ಲ!
From pure entertainment perspective it's a good movie. But the movie hasn't done justice to #kannada #education by showing a deep issue of education as a shallow issue.