Saturday, September 1, 2018

ಯಕ್ಷಗಾನ ಪ್ರದರ್ಶನಗಳು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಲು ಯಾಕೆ ಸೋಲುತ್ತವೆ?


ಕೆಲ ದಿನಗಳ ಹಿಂದೆ ಸಿರಿಕಲಾ ಮೇಳದ ವಿಜಯ ವಸುಂಧರ ಎಂಬ ಯಕ್ಷಗಾನ ಪ್ರದರ್ಶನ ನೋಡಿದೆ. ಬಹುತೇಕ ಹವ್ಯಾಸಿ ಕಲಾವಿದರು ಮತ್ತು ಈಗಷ್ಟೇ ಯಕ್ಷಗಾನ ಕಲಿಯುತ್ತಿರುವವರು ಇರುವ ತಂಡದ ಒಟ್ಟು ಪ್ರಸಂಗ ಪ್ರಸ್ತುತಿ ಚೆನ್ನಾಗಿಯೇ ಇತ್ತು.
ಪ್ರಸಂಗ ಪ್ರಾರಂಭವಾಗುವುದಕ್ಕೆ ಮೊದಲು ಇನ್ನೂ ನಾಟ್ಯ ಕಲಿಯುತ್ತಿರುವ ಮಕ್ಕಳಿಂದ ಕೋಡಂಗಿ ಕುಣಿತ, ಬಾಲಗೋಪಾಲ, ನಿತ್ಯ ಸ್ತ್ರೀ ವೇಷ ಮತ್ತು ಒಡ್ಡೋಲಗದ ನಾಟ್ಯಗಳ ಪ್ರದರ್ಶನ ಇತ್ತು. ಇದನ್ನು ನಿರ್ದೇಶಿಸಿದವರು ಹಿರಿಯ ಕಲಾವಿದರಾದ ಶ್ರೀ .ಪಿ.ಪಾಠಕ್ ಮತ್ತು ಕುಮಾರಿ ಅರ್ಪಿತಾ ಹೆಗಡೆಯವರು (ಇವರು ತಂಡದ ನೃತ್ಯ ಶಿಕ್ಷಕಿ ಮತ್ತು ನಿರ್ದೇಶಕಿ ಕೂಡಾ). ಯಕ್ಷಗಾನದಲ್ಲಿ ಸಂಪೂರ್ಣವಾಗಿ ಕಡೆಗಣಿಸಲ್ಪಟ್ಟಿರುವ ಪ್ರಾಕಾರಗಳನ್ನು ಮತ್ತೆ ಪ್ರದರ್ಶಿಸಿದ್ದು ಶ್ಲಾಘನೀಯ. ನಾಟ್ಯವನ್ನು ಕಲಿಯುತ್ತಿರುವ ಹೊಸಬರಿಂದ ಸಭಾಲಕ್ಷಣ ಮಾಡಿಸುವುದು ಅತ್ಯಾವಶ್ಯಕ. ರಂಗದ ನಡೆಗಳನ್ನು ಕಲಿಯುವುದಕ್ಕೆ, ಹಿಮ್ಮೇಳದೊಂದಿಗೆ ಹೆಜ್ಜೆ ಹಾಕುವುದನ್ನು ಅಭ್ಯಾಸ ಮಾಡುವುದಕ್ಕೆ, ಸಭಾಕಂಪನ ಹೋಗಲಾಡಿಸುವುದಕ್ಕೆಲ್ಲಾ ಇದು ತುಂಬಾ ಸಹಕಾರಿ. ಅಷ್ಟೇ ಅಲ್ಲದೆ ಸಭಾಲಕ್ಷಣದ ಪದ್ಯರಚನೆ ಹೇಗಿದೆಯೆಂದರೆ ಪ್ರತೀ ತಾಳದ ಎಲ್ಲಾ ಹೆಜ್ಜೆಗಳನ್ನು ರಂಗದ ಮೇಲೆ ಅಭ್ಯಾಸ ಮಾಡುವುದಕ್ಕೆ ಇದು ಅನುವು ಮಾಡಿಕೊಡುತ್ತದೆ. ಸಿರಿಕಲಾ ಮೇಳದ ನಡೆ ಇತರೇ ತಂಡಗಳೂ ಅನುಸರಿಸಬೇಕಾದ ವಿಷಯ

ವಿಜಯ ವಸುಂಧರ ಪ್ರಸಂಗ ವಿಜಯನಗರ ಸಾಮ್ರಾಜ್ಯದ ಕೃಷ್ಣದೇವರಾಯನ ಜೀವನವನ್ನಾಧರಿಸಿದ ಕಥೆ. ಸಾಮಾನ್ಯವಾಗಿ ಐತಿಹಾಸಿಕ ಕಥೆಗಳನ್ನು ಯಕ್ಷಗಾನಕ್ಕೆ ಅಳವಡಿಸುವುದು ಸುಲಭದ ಕೆಲಸವಲ್ಲ. ಅದನ್ನೂ ನಿರ್ದೇಶಕರು ಚೆನ್ನಾಗಿಯೇ ಮಾಡಿದ್ದಾರೆ. ಹವ್ಯಾಸಿಗಳು ನಿರ್ದೇಶನದ ಚೌಕಟ್ಟಿನಲ್ಲಿ ಕೆಲಸ ಮಾಡಿದ್ದರಿಂದ ಒಟ್ಟು ಪ್ರದರ್ಶನ ಚೆನ್ನಾಗಿಯೇ ಮೂಡಿ ಬಂತು. ತಿಮ್ಮರಾಯ, ಕೃಷ್ಣದೇವರಾಯ ಮತ್ತು ಚಿನ್ನಾದೇವಿ ಮೂರು ಪಾತ್ರಗಳ ಪ್ರಸ್ತುತಿಯಲ್ಲಿ ಪಕ್ವತೆ ಇತ್ತು. ಇಷ್ಟಿದ್ದೂ ಪ್ರದರ್ಶನದ ಪ್ರಾರಂಭದಲ್ಲಿ ಸುಮಾರು ಮುನ್ನೂರಕ್ಕಿಂತಲೂ ಹೆಚ್ಚಿದ್ದ ಪ್ರೇಕ್ಷಕರ ಸಂಖ್ಯೆ ಪ್ರಸಂಗದ ಕೊನೆಗೆ ಕೇವಲ ಮೂವತ್ತರ ಹತ್ತಿರ ಇಳಿದಿತ್ತು! ಕಾಲಮಿತಿಯ ಮತ್ತು ನಿರ್ದೇಶನದ ಚೌಕಟ್ಟಿನಲ್ಲಿ ನಡೆಯುವ ಯಕ್ಷಗಾನ ಪ್ರದರ್ಶನಗಳು ಕೂಡಾ ಪ್ರೇಕ್ಷಕರನ್ನು ಯಾಕೆ ಹಿಡಿದಿಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ ಎಂಬುದನ್ನು ಅವಲೋಕಿಸಬೇಕು

ಯಾವ ವಿಷಯಗಳು ಪ್ರೇಕ್ಷಕರನ್ನು ಪ್ರದರ್ಶನದಿಂದ ವಿಮುಖಗೊಳಿಸುತ್ತವೆ ಎಂದು ವಿಶ್ಲೇಷಿಸಿದಾಗ ನನಗನಿಸಿದ ಅಂಶಗಳನ್ನು ಮುಂದಿಡುತ್ತಿದ್ದೇನೆ.
ಪ್ರಸಂಗ ಪ್ರಸ್ತುತಿಯಲ್ಲಿ ಯಾವುದೋ ಒಂದು ರಸದ ಪ್ರಸ್ತುತಿ ಅಗತ್ಯಕ್ಕಿಂತ ಹೆಚ್ಚಾದಾಗ ಪ್ರದರ್ಶನ ನೀರಸ ಅನಿಸುತ್ತದೆ. ಪ್ರದರ್ಶನದಲ್ಲಿ ಕೃಷ್ಣದೇವರಾಯ ಮತ್ತು ಚಿನ್ನಾದೇವಿಯ ಶೃಂಗಾರದ ಪ್ರಸ್ತುತಿ ಅತಿಯಾಯಿತು. ಮೂರುವರೆ ಗಂಟೆಯ ಪ್ರದರ್ಶನದಲ್ಲಿ ಸುಮಾರು ಒಂದು ಗಂಟೆ ಶೃಂಗಾರದಲ್ಲಿಯೇ ಹೋಯಿತು. ಶೃಂಗಾರಕ್ಕೆ ಬೇಕಾದಷ್ಟು ವಿಷಯವಿದ್ದರೆ ಒಪ್ಪಬಹುದು. ಆದರೆ ಅನಗತ್ಯ ಎಳೆದೂ ಎಳೆದೂ ಶೃಂಗಾರ ತೋರಿಸಲು ಪ್ರಾರಂಭಿಸಿದ ತಕ್ಷಣ ಪ್ರೇಕ್ಷಕರು ಎದ್ದು ಹೋಗಲು ಆರಂಭಿಸಿದರು
ಇನ್ನು ವೃತ್ತಿಕಲಾವಿದರಲ್ಲಿ ಒಂದು ಚಾಳಿಯಾಗಿ ಬೆಳೆದಿರುವ ಅನಗತ್ಯ ಕಸರತ್ತಿನ ಪ್ರದರ್ಶನವನ್ನು ಹವ್ಯಾಸಿಗಳು ಎರವಲು ಪಡೆದದ್ದು ಸರಿಕಾಣಲಿಲ್ಲ. ಯಕ್ಷಗಾನಕ್ಕೆ ಕಸರತ್ತಿನ ಅವಶ್ಯಕತೆ ಇಲ್ಲ. ಪಾತ್ರಕ್ಕೆ ಮತ್ತು ಸಂದರ್ಭಕ್ಕೆ ತಕ್ಕುದಾದ ಭಾವಾಭಿವ್ಯಕ್ತಿ ಮುಖ್ಯ. ಧಡ ಧಡ ಧಡ ಕುಣಿದರೆ ವೇಷ ಚಂದ ಆಯಿತು ಎಂದು ನಮ್ಮ ಹಲವು ಕಲಾವಿದರು ತಿಳಿದುಕೊಂಡಂತಿದೆ (ವೃತ್ತಿಕಲಾವಿದರನ್ನೂ ಸೇರಿಸಿ). ಹಾಗಾಗಿ ನಯ ನಾಜೂಕು ವೈಯ್ಯಾರ ಮುಂತಾದ ನಡೆಗಳನ್ನೆಲ್ಲಾ ಅದು ತಿಂದುಹಾಕಿದೆ. ಇಲ್ಲೂ ಕೃಷ್ಣದೇವರಾಯ ಮತ್ತು ಚಿನ್ನಾದೇವಿಯ ಶೃಂಗಾರ ಪದ್ಯಗಳಲ್ಲಿ ಅನಗತ್ಯ ಕಸರತ್ತುಗಳನ್ನು ಅಳವಡಿಸಿ ಚಂದಕೆಟ್ಟಿತು. ಇದು ಕಥೆಯ ವೇಗಕ್ಕೂ ತಡೆಯೊಡ್ಡಿತು

ಚಿನ್ನಾದೇವಿಯ ಪ್ರವೇಶ ಹಂಪಿಯ ವಿರೂಪಾಕ್ಷನ ಸ್ತುತಿಯಿಂದ ಆರಂಭವಾಗುತ್ತದೆ. ಅದು ಭಕ್ತಿ ರಸ ಆಧಾರಿತವಾದ ಪದ್ಯ. ಆದರೆ ಪದ್ಯದ ಅಭಿನಯದಲ್ಲಿ ಭಕ್ತಿ, ಶೃಂಗಾರ, ವೀರ ಮತ್ತು ರೌದ್ರ ರಸಗಳನ್ನೆಲ್ಲಾ ತುರುಕಿಸಿ ಒಟ್ಟು ಕಲಸುಮೇಲೊಗರ ಆಯಿತುಕಲಾವಿದರು ಪ್ರಸಂಗದ ನಡೆ ಮತ್ತು ಪದ್ಯದ ಭಾವಾರ್ಥವನ್ನು ಅಭಿನಯಿಸುವ ಬದಲು ಪ್ರತಿ ಶಬ್ದಾರ್ಥಕ್ಕೂ ಅಭಿನಯ ಮಾಡಲು ಹೊರಟದ್ದೇ ಇದಕ್ಕೆ ಕಾರಣ. ಭಕ್ತಿ ರಸದಲ್ಲೇ ಅಭಿನಯ ಮಾಡಿದ್ದರೆ ಚೆನ್ನಾಗಿರುತ್ತಿತ್ತು. ಸಮಸ್ಯೆ ಹವ್ಯಾಸಿಗಳಲ್ಲಷ್ಟೇ ಅಲ್ಲ ವೃತ್ತಿಪರರಲ್ಲೂ ಇದೆ. ಅಭಿನಯದ ಉದ್ದೇಶ ಪದ್ಯದ ಒಟ್ಟು ಅರ್ಥವನ್ನು ಪ್ರಸ್ತುತಪಡಿಸುವುದು ಮತ್ತು ಕಥೆಯನ್ನು ತಿಳಿಯಪಡಿಸುವುದೇ ಹೊರತು ಪ್ರತಿ ಶಬ್ದಕ್ಕೂ ಅಭಿನಯ ತನಗೆ ಗೊತ್ತೆಂದು ತೋರಿಸುವುದಲ್ಲವಲ್ಲಾ
ಉದಾಹರಣೆಗೆ ಕೃಷ್ಣದೇವರಾಯ ಚಿನ್ನಾದೇವಿಯಲ್ಲಿ ಮದುವೆಯ ಪ್ರಸ್ತಾಪ ಇಡುವ ಪದ್ಯದಲ್ಲಿ "ನನ್ನ ಬಾಳಿನ ಹಣತೆಯಾಗುವೆಯಾ" ಎಂಬ ಸಾಲಿದೆ. ಅದಕ್ಕೆ ಹಣತೆಯ ಅಭಿನಯವನ್ನು ನಾಲ್ಕೈದು ರೀತಿಯಲ್ಲಿ ಮಾಡಿ ತೋರಿಸಿದರು. ಅಲ್ಲಿನ ಭಾವಾರ್ಥಕ್ಕೂ ಹಣತೆಯ ಅಭಿನಯಕ್ಕೂ ಎಲ್ಲಿಯ ಸಂಬಂಧ. ಇದು ವೃತ್ತಿಕಲಾವಿದರ ಅನುಕರಣೆಯಿಂದಾಗುವ ತೊಂದರೆ

ಇನ್ನು ಕಲಾವಿದರು ಸೂಕ್ಷ್ಮಗಳಿಗೆ ಗಮನಕೊಡಬೇಕು. ಕುಸುರಿ ಕೆಲಸದಿಂದಲೇ ಮೂರ್ತಿಯ ಸೌಂದರ್ಯ ಹೆಚ್ಚಿದಂತೆ ಸೂಕ್ಷ್ಮ ಮತ್ತು ನಾಜೂಕಿನ ಅಭಿನಯದಿಂದಷ್ಟೇ ಪ್ರದರ್ಶನದ ಸೊಗಡು ಹೆಚ್ಚಲು ಸಾಧ್ಯ. ಪಾತ್ರ ಪ್ರೇಕ್ಷಕನ ಹೃದಯವನ್ನು ಮುಟ್ಟಲು ಇದು ಅತ್ಯಾವಶ್ಯಕ. ಚಿನ್ನಾದೇವಿಯನ್ನು ಕಳ್ಳರಿಬ್ಬರಿಂದ ಕೃಷ್ಣದೇವರಾಯ ರಕ್ಷಿಸಿದ ಸಂದರ್ಭದ ಚಿತ್ರಣವನ್ನು ಉದಾಹರಣೆಯಾಗಿ ಗಮನಿಸಿದರೆ, ಅದು ಆಕೆಗೆ ಅವನ ಮೊದಲ ಭೇಟಿ. ಅಪರಿಚಿತನೊಬ್ಬ ತನ್ನನ್ನು ರಕ್ಷಿಸಿದಾಗ ಕೃತಜ್ಞತೆ ಹೇಳಲು ಕೈಜೋಡಿಸಿ ನಮಸ್ಕರಿಸುವುದು ಮನುಷ್ಯ ಸಹಜವಾದ ನಡೆ. ಅದನ್ನು ಮಾಡದೇ, ಧನ್ಯವಾದ ಹೇಳದೆ ಪ್ರಥಮ ನೋಟದ ಪ್ರೇಮಕ್ಕೆ ಹಾರಿದ್ದು ಸ್ವಲ್ಪ ಆಭಾಸ ಅನಿಸಿತು. ಇಂತಹ ಸೂಕ್ಷ್ಮಗಳಿಗೆ ಗಮನ ಹರಿಸಿ ಪ್ರದರ್ಶನದ ಗುಣಮಟ್ಟವನ್ನು ಇನ್ನೂ ಹೆಚ್ಚಿಸಬಹುದಿತ್ತು

ಕೊನೆಯದಾಗಿ ಸಮಯಪಾಲನೆ ತುಂಬಾ ಮುಖ್ಯ. ಪ್ರಕಟಿಸಿದ ಸಮಯಕ್ಕೆ ಸರಿಯಾಗಿ ಪ್ರದರ್ಶನ ಆರಂಭಿಸಬೇಕು. ಸಭೆ ತುಂಬಲು ಕಾಯಬಾರದು. ಸಭಾಲಕ್ಷಣದ ಕಲಾವಿದರು ಇನ್ನೂ ಕಲಿಯುತ್ತಿರುವವರು ಮತ್ತು ಅವರ ಮುಖ್ಯ ಉದ್ದೇಶ ಕಲಿಕೆ. ಹಾಗಾಗಿ ಸಭೆ ತುಂಬಿರದಿದ್ದರೂ ಪ್ರದರ್ಶನ ಪ್ರಾರಂಭಿಸಲು ಅಡ್ಡಿ ಇಲ್ಲ. ಸಮಯಕ್ಕೆ ಸರಿಯಾಗಿ ಬಾರದಿದ್ದರೆ ಒಂದಷ್ಟು ಭಾಗ ಕಳಕೊಳ್ಳುತ್ತೇವೆ ಅಂತ ಒಂದೆರಡು ಸಲ ಅನುಭವ ಆದ ಮೇಲೆ ಪ್ರೇಕ್ಷಕರೂ ಸಮಯಕ್ಕೆ ಬರಲು ಪ್ರಾರಂಭಿಸುತ್ತಾರೆ. ಹಾಗೆಯೇ ಸಮಯಕ್ಕೆ ಸರಿಯಾಗಿಮುಗಿಸುವುದೂ ಅಗತ್ಯ. ಅನಗತ್ಯ ವಿಷಯಗಳಿಗೆ ಕತ್ತರಿ ಹಾಕಿದರೆ ಇದು ಸಾಧ್ಯ. ನಿರ್ದೇಶಕ ಸಮರ್ಥನಾಗಿದ್ದರೆ ದೊಡ್ಡ ಪ್ರಸಂಗಗಳನ್ನೂ ಕೂಡಾ ಅರ್ಧ ಗಂಟೆಗೆ ಅಳವಡಿಸಲು ಸಾಧ್ಯವಿದೆ. (ಅಂತಹ ಒಂದು ಪ್ರದರ್ಶನದಲ್ಲಿ ವೇಷ ಮಾಡಿದ ಅನುಭವದಲ್ಲಿ ಹೇಳುತ್ತಿದ್ದೇನೆ). ಹಾಗಾಗಿ ಮೂರು ಗಂಟೆಯ ಕಾಲಮಿತಿಯಲ್ಲಿ ಪ್ರದರ್ಶನ ಮಾಡುವುದು ಒಂದು ಸಮಸ್ಯೆ ಅಲ್ಲ

ನನ್ನ ದೃಷ್ಟಿಯಲ್ಲಿ ಗುಣಮಟ್ಟದ ಯಕ್ಷಗಾನವನ್ನು ಉಳಿಸುವ ಸಾಮರ್ಥ್ಯ ಇರುವುದು ಹವ್ಯಾಸಿಗಳಿಗೆ. ಯಾಕೆಂದರೆ ವೃತ್ತಿಕಲಾವಿದರು ನಿರ್ದೇಶನದ ಚೌಕಟ್ಟಿನಲ್ಲಿ ಕೆಲಸ ಮಾಡುವುದಿಲ್ಲ ಮತ್ತು ಪ್ರತಿಯೊಬ್ಬರೂ ತನ್ನ ಪಾತ್ರವನ್ನು ಮೆರೆಸಲು ಹೋಗುತ್ತಾರೆ. ಹೀಗಾಗಿ ಅಲ್ಲಿ ಎಲ್ಲವೂ ಅತಿಯಾಗುತ್ತದೆ ಮತ್ತು ಕಾಲಮಿತಿಯಲ್ಲಿ ಪ್ರದರ್ಶನ ಮುಗಿಯುವುದಿಲ್ಲ.

ಹವ್ಯಾಸಿ ತಂಡಗಳಿಂದ ನಿರ್ದೇಶನದ ಚೌಕಟ್ಟಿನಲ್ಲಿ ಪ್ರದರ್ಶನ ಮಾಡಿಸಲು ಸಾಧ್ಯ; ಇದಕ್ಕೆ ನಿರ್ದೇಶಕರು ತುಂಬಾ ನಿಗಾವಹಿಸಿ ಕೆಲಸ ಮಾಡಬೇಕು. ಪ್ರತಿ ಪಾತ್ರಕ್ಕೂ ಅದರ ಔಚಿತ್ಯಕ್ಕೆ ತಕ್ಕ ಅವಕಾಶ ನೀಡಿ, ಯಾವುದೇ ಪಾತ್ರವನ್ನು ಅಗತ್ಯಕ್ಕಿಂತ ಹೆಚ್ಚು ಮೆರೆಸದೆ, ಯಾವ ರಸದ ಪ್ರಸ್ತುತಿಯೂ ಅತಿಯಾಗದಂತೆ ನೋಡಿಕೊಂಡು, ಕಥೆಯ ಹರಿವಿಗೆ ತಡೆಯಾಗದಂತೆ, ಸಂದರ್ಭಕ್ಕೆ ತಕ್ಕಂತೆ ಸಹಜ ಅಭಿನಯ ನೀಡುವುದರ ಜೊತೆಗೆ ಸಮಯಪಾಲನೆ ಮಾಡುವುದರಿಂದ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯ.

ಸಮೀರ ಸಿ ದಾಮ್ಲೆ