Thursday, August 20, 2015

ಥೈಲ್ಯಾಂಡ್ ಪ್ರವಾಸೋದ್ಯಮದ ಮೇಲೆ ಪ್ರಹಾರವೇ?

ಆಗೊಸ್ಟ್ 17ರ ಸಂಜೆ ಬ್ಯಾಂಕಾಕಿನ ಎರವಾನ್ ದೇವಾಲಯಲ್ಲಿ ನಡೆದ ಬಾಂಬ್ ಸ್ಫೋಟ ಬ್ಯಾಂಕಾಕ್ ಜನತೆಯನ್ನು ಬೆಚ್ಚಿ ಬೀಳಿಸಿದೆ. ಬ್ಯಾಂಕಾಕಿನಲ್ಲಿ ಇಂತಹ ಘಟನೆ ಈ ಮೊದಲು ಸಂಭವಿಸಿರಲಿಲ್ಲ. ಹಿಂದೆ ಬಾಂಬ್ ಸ್ಫೋಟಗಳು ನಡೆದಾಗ ಅವು ಒಂದು ನಿರ್ದಿಷ್ಟ ಗುಂಪನ್ನು ಗುರಿಯಾಗಿಸಿಕೊಂಡು ನಡೆದಿತ್ತು. ಅಷ್ಟೇ ಅಲ್ಲ ಈ ತೀವ್ರತೆಯಲ್ಲಿ ಇಷ್ಟೊಂದು ಜನರನ್ನು ಬಲಿ ತೆಗೆದುಕೊಂಡ ದೊಡ್ಡ ಮಟ್ಟಿನ ಸ್ಫೋಟ ನಡೆದಿರಲಿಲ್ಲ.

ಸಾಮಾನ್ಯವಾಗಿ ದಕ್ಷಿಣ ಏಷ್ಯಾ ದೇಶಗಳ ಪೈಕಿ ಥೈಲ್ಯಾಂಡ್ ಒಂದು ಸುರಕ್ಷಿತ ರಾಷ್ಟ್ರವೆಂದು ಪರಿಗಣಿಸಲ್ಪಡುತ್ತದೆ. ದಕ್ಷಿಣದ ಗಡಿಪ್ರದೇಶವನ್ನು ಹೊರತುಪಡಿಸಿದರೆ ಬಹುತೇಕ ಎಲ್ಲಾ ಪ್ರಾಂತ್ಯಗಳಲ್ಲೂ ಶಾಂತಿ ಇದೆ. ಸುರಕ್ಷತೆ, ನೈಸರ್ಗಿಕ ಸೌಂದರ್ಯ, ಎಲ್ಲಾ ಆರ್ಥಿಕ ವರ್ಗದ ಜನರಿಗೂ ಕೈಗೆಟಕುವ ಸವಲತ್ತುಗಳು, ಸುಲಭ ಜೀವನ, ಸುಲಭವಾಗಿ ಸಿಗುವ ವೀಸಾ ಮುಂತಾದುವುಗಳಿಂದ ಥೈಲ್ಯಾಂಡ್ ಆಕರ್ಷಣೀಯವಾಗುತ್ತದೆ. ಸಾಮಾನ್ಯವಾಗಿ ಪ್ರವಾಸಿಗರ ಸ್ವರ್ಗ ಎಂದು ಪ್ರಸಿದ್ಧವಾಗಿದ್ದರೂ ಉದ್ಯೋಗಕ್ಕಾಗಿ, ಉದ್ಯಮಕ್ಕಾಗಿ ಇಲ್ಲಿ ಬಂದು ನೆಲೆಸಿದವರು ಬಹಳಷ್ಟು ಜನರಿದ್ದಾರೆ. ಹೆಚ್ಚೇಕೆ ನಿವೃತ್ತ ಜೀವನ ಮಾಡುವುದಕ್ಕಾಗಿ ಥೈಲ್ಯಾಂಡಿಗೆ ಬಂದು ನೆಲೆಸುವವರೂ ಇದ್ದಾರೆ; ಅದಕ್ಕಾಗಿಯೇ ನಿವೃತ್ತಿ ವೀಸಾ ಕೂಡಾ ಲಭ್ಯವಿದೆ. ಇಲ್ಲಿ ಬಂದು ನೆಲೆಸಿದವನ್ನು ಕಾರಣ ಕೇಳಿದರೆ ಸಾಮಾನ್ಯವಾಗಿ ಸಿಗುವ ಉತ್ತರ - ಇಲ್ಲಿ ಜೀವನ ಸುಲಭ, ಆರಾಮದಾಯಕ, ಸುರಕ್ಷಿತ ಹಾಗೂ ಥಾಯ್ ಜನರು ನಿರುಪದ್ರವಿಗಳು ಎಂಬ ಉತ್ತರ. ಇದು ಕೇವಲ ಭಾರತದಿಂದ ಬಂದು ನೆಲೆಸಿದವರ ಅಭಿಪ್ರಾಯವಲ್ಲ ಯುರೋಪ್ ಅಮೆರಿಕಾ ಮುಂತಾದ ಮುಂದುವರಿದ ದೇಶಗಳಿಂದ ಇಲ್ಲಿಗೆ ಜನ ಬಂದು ನೆಲೆಸುವುದೂ ಇದೇ ಕಾರಣಕ್ಕೆ.

ಈ ದೃಷ್ಟಿಯಿಂದ ಸ್ಫೋಟವನ್ನು ಹಲವು ಆಯಾಮಗಳಿಂದ ನೋಡಬೇಕಾಗುತ್ತದೆ. ಥೈಲ್ಯಾಂಡಿನಲ್ಲಿ ಗಮನಾರ್ಹವಾಗಿ ಕಾಣಸಿಗುವ ಸಂಘರ್ಷಗಳು ರಾಜಕೀಯ ಸಂಘರ್ಷಗಳು ಮಾತ್ರ. ಅಷ್ಟೇ ಅಲ್ಲ ಇಲ್ಲಿನ ಸಂಘರ್ಷಗಳಲ್ಲಿ, ದಂಗೆಗಳಲ್ಲಿ ಗುಂಡಿನ ಚಕಮಕಿ ರಕ್ತಕ್ರಾಂತಿ ಆದ ನಿದರ್ಶನಗಳು ತೀರಾ ವಿರಳ.

ಇದಕ್ಕೆ ಕಾರಣ ಅರಿತುಕೊಳ್ಳಲು ನಾವು ಥಾಯ್ ಚರಿತ್ರೆಯನ್ನು ಕೊಂಚ ನೋಡಬೇಕಾಗುತ್ತದೆ. ದಕ್ಷಿಣ ಏಷ್ಯಾ ದೇಶಗಳ ಪೈಕಿ ವಸಾಹತು ಆಡಳಿತಕ್ಕೆ ಒಳಪಡದೆ ಸ್ವತಂತ್ರವಾಗಿ ಉಳಿದ ಏಕೈಕ ದೇಶ ಥೈಲ್ಯಾಂಡ್. ಹೀಗೆ ಥೈಲ್ಯಾಂಡನ್ನು ಯುರೋಪಿಯನ್ ವಸಾಹತುಶಾಹಿಗಳಿಂದ ರಕ್ಷಿಸಿದ ಹಿರಿಮೆ 1851 ರಿಂದ 1910 ರವರೆಗೆ ಆಡಳಿತ ನಡೆಸಿದ ರಾಜ ಮೊಂಕುಟ್ (ರಾಮ ೪) ಮತ್ತು ಆತನ ಮಗ ರಾಜ ಚುಲಾಲೊಂಕಾರ್ನ್ (ರಾಮ ೫) ಇವರಿಗೆ ಸಲ್ಲುತ್ತದೆ. ಇವರೀರ್ವರೂ ಆಧುನಿಕ ವಿಜ್ಞಾನ, ಶಿಕ್ಷಣ ವ್ಯವಸ್ಥೆ, ರಸ್ತೆ, ರೈಲು, ಮುದ್ರಣ ತಂತ್ರಜ್ಞಾನ, ಆಡಳಿತ ಸೇವೆಯ ಮೂಲಕ ಹೊಸ ಆಡಳಿತ ವ್ಯವಸ್ಥೆ ಇವುಗಳನ್ನು ಥೈಲ್ಯಾಂಡಿಗೆ ಪರಿಚಯಿಸಿದರು. ಹಾಗಿದ್ದೂ ಆಡಳಿತಾತ್ಮಕವಾಗಿ ಥೈಲ್ಯಾಂಡ್ ಸಂಪೂರ್ಣ ರಾಜಪ್ರಭುತ್ವದ ಅಡಿಯಲ್ಲೇ ಇತ್ತು. ರಾಜನ ಕುರಿತು ಅಪಾರ ಗೌರವ ಮತ್ತು ರಾಜನನ್ನು ದೇವರಂತೆ ಪೂಜಿಸುವ ಸಂಸ್ಕೃತಿ ಥಾಯ್ ಸಮಾಜದಲ್ಲಿತ್ತು ಎಂಬುದನ್ನು ಇತಿಹಾಸಕಾರರು ದಾಖಲಿಸಿದ್ದಾರೆ. ಹಾಗಾಗಿ ಸ್ವಾತಂತ್ರ್ಯ ಸಂಗ್ರಾಮ, ಪರಕೀಯ ಆಡಳಿತದ ವಿರುದ್ಧ ಹೋರಾಟದಂತಹ ಸಂಘರ್ಷಗಳು ಥಾಯ್ ಚರಿತ್ರೆಯಲ್ಲಿಯೇ ಇಲ್ಲ. 

೧೯೩೨ರಲ್ಲಿ ನಡೆದ ಸೇನೆ ಮತ್ತು ಆಡಳಿತ ಸೇವಾಧಿಕಾರಿಗಳು ನಡೆಸಿದ ದಂಗೆಯಿಂದ ಥೈಲ್ಯಾಂಡ್ ಸಾವಿಂಧಾನಿಕ ರಾಜಪ್ರಭುತ್ವವನ್ನು ಅಳವಡಿಸಿಕೊಂಡು ಪ್ರಜಾತಂತ್ರ ದೇಶವಾಯಿತು. ಈ ದಂಗೆ ಆಧಿನಿಕ ಥೈಲ್ಯಾಂಡ್‍ನ ಸುಮಾರು ೭೦೦ ವರುಷಗಳ ಇತಿಹಾಸದಲ್ಲಿ ದಾಖಲಾಗಿರುವ ಮೊದಲ ಆಂತರಿಕ ಸಂಘರ್ಷ. ಈ ದಂಗೆಯ ಮೂಲಕಾರಣದ ಬಗ್ಗೆ ವಿಭಿನ್ನ ಅಭಿಪ್ರಾಯಗಳಿವೆ. ಪಾಶ್ಚಾತ್ಯ ಸಿದ್ಧಾಂತಗಳು ಹಾಗೂ ತತ್ವಗಳ ಪ್ರಭಾವ, ಚುಲಾಲೊಂಕಾರ್ನ್‍ ಉತ್ತರಾಧಿಕಾರಿಗಳು ಆತನಷ್ಟು ಶಕ್ತರಲ್ಲದೆ ಇದ್ದುದು ಇತ್ಯಾದಿ. ಗಮನಿಸಬೇಕಾದ ಅಂಶವೆಂದರೆ ಪ್ರಜಾತಂತ್ರ ವ್ಯವಸ್ಥೆ ಇದ್ದಾಗ್ಯೂ ರಾಜನ ಕುರಿತಾದ ಗೌರವ ಕುಂದಿಲ್ಲ. ಸಂವಿಧಾನದಲ್ಲಿ ರಾಜನಿಗೆ ಬಹಳ ಗೌರವಯುತವಾದ ಸ್ಥಾನ ಇದೆ ಮತ್ತು ಕೆಲ ವಿಶೇಷ ಅಧಿಕಾರಗಳಿವೆ. ಇನ್ನೊಂದು ಮುಖ್ಯ ಅಂಶ ಈ ದಂಗೆಯೂ ರಕ್ತಕ್ರಾಂತಿಯ ದಂಗೆಯಾಗಿರಲಿಲ್ಲ.

ಪ್ರಸ್ತುತ ರಾಜ ಭೂಮಿಬೋಲ್ ಅದುಲ್ಯತೇಜ (ರಾಮ೯) ದೇಶದ ಪ್ರಗತಿಗೆ ತನ್ನದೇ ಕೊಡುಗೆ ಕೊಟ್ಟು ತನ್ನ ಸ್ಥಾನದ ಗೌರವವನ್ನು ಹೆಚ್ಚಿಸಿರುವ ಕಾರಣದಿಂದ ರಾಜನ ಬಗ್ಗೆ ಜನರಲ್ಲಿ ಇಂದಿಗೂ ಅಪಾರ ಗೌರವವಿದೆ. ಇದರ ದ್ಯೋತಕವಾಗಿಯೇ ಥಾಯ್‍ಲ್ಯಾಂಡಿನ ಪ್ರತಿ ಕಡೆಯೂ ರಾಜನ ಭಾವಚಿತ್ರ ಕಂಗೊಳಿಸುತ್ತಿರುತ್ತದೆ. ರಾಜನನ್ನು ದೇವರೆಂಬಂತೆ ಆರಾಧಿಸುವವರೂ ಬಹಳಷ್ಟು ಮಂದಿ ಇದ್ದಾರೆ. ಶೈಕ್ಷಣಿಕ ಸಂಸ್ಥೆಗಳು, ಸಂಶೋಧನಾ ಕೇಂದ್ರಗಳು, ಮೂಲಸೌಕರ್ಯಗಳ ಅಭಿವೃದ್ಧಿ, ಸಮಾಜಿಕ ಆರೋಗ್ಯ ಹೀಗೆ ಹವಾರು ವಿಷಯಗಳ ಅಭಿವೃದ್ಧಿಗೆ ಸರಕಾರೇತವಾಗಿ ರಾಜನ ವೈಯಕ್ತಿಕ ಯೋಜನೆಗಳು ಚಾಲ್ತಿಯಲ್ಲಿವೆ. ಇದುತನಕ ಥೈಲ್ಯಾಂಡಿನಲ್ಲಿ ನಡೆದ ಹತ್ತಕ್ಕೂ ಅಧಿಕ ಸೇನಾ ದಂಗೆ ಹಾಗೂ ಮಿಲಿಟರಿ ಆಡಳಿತ ಹೇರಿಕೆಯ ಸಂದರ್ಭದಲ್ಲಿ ರಾಜಕೀಯ ಪರಿಸ್ಥಿತಿಯನ್ನು ತಿಳಿಗೊಳಿಸುವಲ್ಲಿ ಮತ್ತು ಸುಸ್ಥಿರಗೊಳಿಸುವಲ್ಲಿ ರಾಜ ಮಹತ್ತರ ಪಾತ್ರವಹಿಸಿದ್ದಾನೆ ಎನ್ನಲಾಗುತ್ತದೆ.

ಥೈಲ್ಯಾಂಡಿನ ಪ್ರಸಕ್ತ ರಾಜಕೀಯ ಬಿಕ್ಕಟ್ಟಿನ ಮೂಲ ಹಿಂದಿನ ಪ್ರಧಾನಿ ತಕ್ಸಿನ್ ಚಿನವಾತ್ರನ ಆಡಳಿತಾವಧಿಯಲ್ಲಿ ಪ್ರಾರಂಭವಾಗುತ್ತದೆ. ೨೦೦೧ರಲ್ಲಿ ದೊಡ್ಡ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ತಕ್ಸಿನ್ ಹಲವಾರು ಜನಪ್ರಿಯ ಯೋಜನೆಗಳಿಂದ ಜನರ ಮೆಚ್ಚುಗೆ ಗಳಿಸುತ್ತಾನೆ. ಥೈಲ್ಯಾಂಡ್ ಚರಿತ್ರೆಯಲ್ಲೇ ಪೂರ್ಣಾವಧಿ ಅಧಿಕಾರದಲ್ಲಿದ್ದ ಮೊದಲ ರಾಜಕಾರಣಿ ಎಂಬ ಹೆಗ್ಗಳಿಕೆ ತಕ್ಸಿನ್‍ನದ್ದು. ತಕ್ಸಿನ್ ಅಧಿಕಾರಾವಧಿಯಲ್ಲಿ ಥಾಯ್ ಆರ್ಥಿಕತೆಯಲ್ಲಿ ತುಂಬಾ ಚೇತರಿಕೆ ಆಗುತ್ತದೆ. ೨೦೦೫ರ ಮರುಚುನಾವಣೆಯಲ್ಲಿ ಥೈಲ್ಯಾಂಡ್ ಚರಿತ್ರೆಯಲ್ಲೇ ಅತೀ ಹೆಚ್ಚು ಜನ ಮತ ಚಲಾಯಿಸಿ ತಕ್ಸಿನ್‍ನನ್ನು ಮತ್ತೆ ಅಧಿಕಾರಕ್ಕೆ ತರುತ್ತಾರೆ. ಆದರೆ ಖ್ಯಾತಿಯ ಜೊತೆಜೊತೆಗೆ ತಕ್ಸಿನ್ ಮೇಲೆ ಭ್ರಷ್ಟಾಚಾರ ಹಾಗೂ ರಾಜನಿಗೆ ಅವಮಾನ ಮಾಡಿದ ಆರೋಪ ಕೂಡಾ ಕೇಳಿಬರುತ್ತದೆ. ತಕ್ಸಿನ್ ವಿರೋಧಿಗಳ ಪ್ರತಿಭಟನೆ ಹೆಚ್ಚಿದಂತೆ ೨೦೦೬ ಸೆಪ್ಟಂಬರ್‌ನಲ್ಲಿ ಸೇನಾ ದಂಗೆಯ ಮೂಲಕ ಮಿಲಿಟರಿ ಆಡಳಿತ ಹೇರಲಾಗುತ್ತದೆ. ಮುಂದಿನ ವರುಷಗಳಲ್ಲಿ ನಡೆದ ಹಲವಾರು ರಾಜಕೀಯ ಬೆಳವಣಿಗೆಗಳ ಮಧ್ಯೆ ತಕ್ಸಿನ್ ಥೈಲ್ಯಾಂಡಿನಿಂದ ಪಲಾಯನಮಾಡುತ್ತಾನೆ. ೨೦೧೧ರ ಚುನಾವಣೆಯಲ್ಲಿ ತಕ್ಸಿನ್ ಬೆಂಬಲವಿದ್ದ ಫಿಯು ಥಾಯ್ ಪಾರ್ಟಿ ಬಹುಮತಗಳಿಸಿ ತಕ್ಸಿನ್ ಸಹೋದರಿ ಇಂಗ್ಲಕ್ ಥೈಲ್ಯಾಂಡಿನ ಮೊದಲ ಮಹಿಳಾ ಪ್ರಧಾನಮಂತ್ರಿಯಾಗುತ್ತಾಳೆ. ದೇಶದ ಹೊರಗಿದ್ದುಕೊಂಡು ತಂಗಿಯನ್ನು ನಿಯಂತ್ರಿಸುತ್ತಾ ಥಾಯ್ ರಾಜಕೀಯವನ್ನು ತಕ್ಸಿನ್ ನಿಯಂತ್ರಿಸುತ್ತಿದ್ದಾನೆ ಎಂಬ ಆರೋಪ ಕೇಳಿಬರುತ್ತದೆ. ೨೦೧೪ ಮೇ ತಿಂಗಳಲ್ಲಿ ಇಂಗ್ಲಕ್‍ಳನ್ನು ಅಧಿಕಾರ ದುರುಪಯೋಗ ಮತ್ತು ಭ್ರಷ್ಟಾಚಾರದ ಆರೋಪದಡಿ ಅಧಿಕಾರದಿಂದಿಳಿಸಿ ಸೇನಾನಾಯಕ ಪ್ರಯುತ್ ಮಿಲಿಟರಿ ಆಡಳಿತ ಹೇರುತ್ತಾನೆ.

ದೇಶದ ಆಡಳಿತ ವ್ಯವಸ್ಥೆಯನ್ನು ಭ್ರಷ್ಟಾಚಾರ ಮುಕ್ತಗೊಳಿಸಿ ಮತ್ತೆ ಚುನಾವಣೆಗೆ ಅನುವು ಮಾಡಿಕೊಡುತ್ತೇನೆ ಎಂಬುದು ಪ್ರಯುತ್‍ನ ವಾಗ್ದಾನ. ಭ್ರಷ್ಟಾಚಾರದ ವಿರೋಧಿ ಕಾನೂನನ್ನು ಬಲಗೊಳಿಸಿದ್ದಲ್ಲದೆ ಹಲವಾರು ಹೊಸ ಸುಧಾರಣಾ ನಿಯಮಗಳನ್ನು ಪ್ರಯುತ್ ಆಡಳಿತ ಅನುಷ್ಠಾನಕ್ಕೆ ತರುತ್ತಿದೆ ಎಂಬುದು ಸಾಮಾನ್ಯ ಜನರಲ್ಲಿ ಬಹುತೇಕರ ಅಭಿಪ್ರಾಯ. ಆಡಳಿತದಲ್ಲಿ ಸುಧಾರಣೆಯಾಗಿದೆ, ಭ್ರಷ್ಟಾಚಾರ ಕಡಿಮೆಯಾಗಿದೆ, ಸರಕಾರಿ ಕಛೇರಿಗಳಲ್ಲಿ ಕೆಲಸ ಸುಗಮವಾಗಿ ಸಾಗುತ್ತಿದೆ ಎಂಬುದು ವ್ಯಾವಹಾರಿಕ ವಲಯದಲ್ಲಿ ಜನರಾಡಿಕೊಳ್ಳುತ್ತಿರುವ ಮಾತುಗಳು. ಈ ದೃಷ್ಟಿಯಿಂದ ಹಲವರಲ್ಲಿ ಪ್ರಯುತ್ ಆಡಳಿತದ ಬಗ್ಗೆ ಸಮಾಧಾನ ಇದೆ. ಆದರೆ ಪ್ರಜಾತಾಂತ್ರಿಕ ವ್ಯವಸ್ಥೆಯನ್ನು ಆದಷ್ಟು ಬೇಗ ಜಾರಿ ಮಾಡಬೇಕು ಎಂಬ ಬೇಡಿಕೆ ಕೂಡಾ ಕೆಲವೆಡೆ ಕೇಳಿ ಬರುತ್ತಿದೆ. ವ್ಯವಸ್ಥೆಯಲ್ಲಿ ತುಂಬಿರುವ ಭ್ರಷ್ಟತೆಯನ್ನು ಹೋಗಲಾಡಿಸಿ ಆಡಳಿತ ವ್ಯವಸ್ಥೆಯನ್ನು ಪೂರ್ಣ ಸುಧಾರಣೆ ಮಾಡಲು ಇನ್ನೂ ಬಹಳ ಕಾಲಾವಕಾಶ ಬೇಕು, ಅಲ್ಲಿಯತನಕ ಕಾಯುವುದೇ ಲೇಸು ಎಂಬುದು ಪ್ರಯುತ್ ಬೆಂಬಲಿಗರ ವಾದ. ಒಬ್ಬ ಸಾಮಾನ್ಯ ಪ್ರಜೆಯ ದೃಷ್ಟಿಯಿಂದ ಹೇಳುವುದಾದರೆ ಮಿಲಿಟರಿ ಆಡಳಿತವಿರುವ ಸೇನಾ ನಿಯಂತ್ರಿತ ಉಸಿರುಗಟ್ಟಿಸುವ ವಾತಾವರಣ ಎಲ್ಲೂ ಕಾಣಿಸುವುದಿಲ್ಲ. ಸಾಮಾನ್ಯರ ಜನಜೀವನದಲ್ಲಿ ಏನೂ ತೊಂದರೆ ಆಗಿಲ್ಲ.

ಇನ್ನು ಥೈಲ್ಯಾಂಡಿನ ದಕ್ಷಿಣ ಭಾಗದಲ್ಲಿ ಹಲವು ವರುಷಗಳಿಂದ ನಡೆಯುತ್ತಿರುವ ಇನ್ನೊಂದು ಸಂಘರ್ಷ ಮುಸ್ಲಿಮ್ ಪ್ರತ್ಯೇಕವಾದಿಗಳ ಕೂಗು. ಥೈಲ್ಯಾಂಡಿನಲ್ಲಿ ೯೫% ಬೌದ್ಧಮತ ಅನುಯಾಯಿಗಳಿದ್ದಾರೆ. ದಕ್ಷಿಣದ ಮಲೇಷ್ಯಾ ಗಡಿಪ್ರದೇಶದಲ್ಲಿನ ಮೂರು ಪ್ರಾಂತ್ಯಗಳಲ್ಲಿ ಮಾತ್ರ ಮುಸ್ಲಿಮ್ ಜನಸಂಖ್ಯೆ ಹೆಚ್ಚಿದೆ. ಈ ಭಾಗದಲ್ಲಿ ಪ್ರತ್ಯೇಕತೆಯ ಕೂಗು ಹಲವಾರು ವರ್ಷಗಳಿಂದ ಕೇಳಿಬರುತ್ತಿದೆ. ರಾಜಾಡಳಿತವಿದ್ದಾಗ ಈ ಪ್ರಾತ್ಯಂಗಳ ಆಡಳಿತವನ್ನು ಸ್ಥಳೀಯ ಮುಸ್ಲಿಮ್ ನಾಯಕರು ನೋಡಿಕೊಳ್ಳುತ್ತಿದ್ದರು. ಸಾಂವಿಧಾನಿಕ ಆಡಳಿತ ಪ್ರಾರಂಭವಾದ ಮೇಲೆ ಸ್ಥಳೀಯ ಜಾವಿ ಭಾಷೆಯ ಬದಲು ಥಾಯ್ ಭಾಷೆಯನ್ನು ಹೇರಲಾಗುತ್ತಿದೆ, ಸ್ಥಳೀಯ ಸಂಸ್ಕೃತಿಯ ಬದಲು ಬೌದ್ಧ ಸಂಸ್ಕೃತಿಯನ್ನು ಹೇರಲಾಗುತ್ತಿದೆ ಎಂಬ ಕೂಗು ಪ್ರಾರಂಭವಾಯಿತು. ಅಂದಿನಿಂದ ಇಂದಿನವರೆಗೂ ಸ್ವಾಯತ್ತತೆಗಾಗೆ ಬಂಡಾಯ ಪ್ರತಿಭಟನೆಗಳು ನಡೆಯುತ್ತಿವೆ. ನಿರಂತರವಾಗಿ ವರುಷಗಳಿಂದ ನಡೆಯುತ್ತಿರುವ ಈ ಪ್ರತಿಭಟನೆಗಳಲ್ಲಿ ಸಾವಿರಕ್ಕೂ ಹೆಚ್ಚು ಜನ ಪ್ರಾಣ ಕಳಕೊಂಡಿದ್ದಾರೆ. ಆದರೆ ಆ ಪ್ರತಿಭಟನೆಗಳು ದಕ್ಷಿಣ ಪ್ರಾಂತ್ಯಗಳಲ್ಲಿ ನಡೆದಿವೇ ಹೊರತು ಬ್ಯಾಂಕಾಕ್‍ನಲ್ಲಿ ನಡೆದಿಲ್ಲ.

ಇತ್ತೀಚೆಗೆ ಹೊಗೆಯಾಡಿದ ಇನ್ನೊಂದು ಸಮಸ್ಯೆ ಉಯ್ಗುರ್ ನಿರಾಶ್ರಿತರದ್ದು. ಹಲವಾರು ಅಂತಾರಾಷ್ಟ್ರೀಯ ಒತ್ತಡಗಳ ಹೊರತಾಗಿಯೂ ಥಾಯ್ ಸರಕಾರ ಸುಮಾರು ನೂರಕ್ಕೂ ಹೆಚ್ಚು ಉಯ್ಗುರ್ ನಿರಾಶ್ರಿತರನ್ನು ಚೀನಾಕ್ಕೆ ತಿರುಗಿ ಕಳುಹಿಸಿತು. ಥಾಯ್ ಆಡಳಿತ ಚೇನಾ ಹಾಗೂ ಟರ್ಕಿಯ ಜೊತೆ ಮಾತುಕತೆ ನಡೆಸಿರುವುದಾಗಿಯೂ ಆ ಮಾತುಕತೆಗಳ ಹಿನ್ನೆಲೆಯಲ್ಲೇ ಅವರನ್ನು ಚೀನಾಕ್ಕೆ ತಿರುಗಿ ಕಳುಹಿಸಿದ್ದೆಂದು ತನ್ನ ನಿಲುವನ್ನು ಸಮರ್ಥಿಸಿಕೊಂಡಿದೆ. ಆದರೆ ಇದನ್ನು ಟರ್ಕಿಯಲ್ಲಿನ ಉಯ್ಗುರ್ ಹೋರಾಟಗಾರರು ಹಾಗೂ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಗಳು ಖಂಡಿಸಿವೆ. ಇತ್ತೀಚೆಗೆ ಇಸ್ತಾಂಬುಲ್‍ನಲ್ಲಿ ಥಾಯ್ ರಾಯಭಾರಿ ಕಛೇರಿಯ ಮೇಲೆ ಇದೇ ವಿಷಯದಲ್ಲಿ ಧಾಳಿಯೂ ನಡೆಯಿತು. ಉಯ್ಗುರ್ ನಿರಾಶ್ರಿತರ ವಿಷಯದಲ್ಲಿ ಥಾಯ್ ಆಡಳಿತ ನಡಕೊಂಡ ರೀತಿಯ ಕುರಿತು ಹೊರದೇಶಗಳಲ್ಲಿ ಅಸಮಧಾನದ ಹೊಗೆಯಾಡಿತು.

ಪ್ರಸಿದ್ಧ ಪ್ರವಾಸಿ ಸ್ಥಳದಲ್ಲಿ ನಡೆದ ಬಾಂಬ್ ಧಾಳಿಯನ್ನು ಥಾಯ್ ಆಡಳಿತ ಆರ್ಥಿಕತೆಗೆ ಮತ್ತು ಪ್ರವಾಸೋದ್ಯಮಕ್ಕೆ ಧಕ್ಕೆ ತರಲು ಮಾಡಿದ ಹೀನ ಕೃತ್ಯ ಎಂದು ಹೇಳಿದೆ. ಥಾಯ್ ಜಿಡಿಪಿಯಲ್ಲಿ ಪ್ರವಾಸೋದ್ಯಮದ ದೊಡ್ಡ ಕೊಡುಗೆಯಿದೆ. ಪ್ರವಾಸೋದ್ಯಮ ನೇರವಾಗಿ ೯% ಮತ್ತು ಒಟ್ಟಾರೆಯಾಗಿ ಸುಮಾರು ೨೦% ಜಿಡಿಪಿಗೆ ಕೊಡುಗೆ ನೀಡುತ್ತದೆ. ಬಾಂಬ್ ಧಾಳಿಯ ಹಿನ್ನೆಲೆಯಲ್ಲಿ ಹಲವಾರು ದೇಶಗಳು ತಮ್ಮ ಪ್ರಜೆಗಳಿಗೆ ಥೈಲ್ಯಾಂಡ್ ಪ್ರವಾಸದ ಬಗ್ಗೆ ಎಚ್ಚರಿಕೆಯಿಂದಿರುವಂತೆ ಕರೆ ನೀಡಿದೆ. ಪ್ರವಾಸಿಗರನ್ನು ಗುರಿಯಾಗಿಸಿ ಸ್ಫೋಟ ನಡೆಸಿದ್ದನ್ನು ಗಮನಿಸಿದರೆ ಪ್ರವಾಸೋದ್ಯಮ ತನ್ಮೂಲಕ ಥೈಲ್ಯಾಂಡ್ ಆರ್ಥಿಕತೆಯೇ ಈ ಧಾಳಿಯ ನೇರ ಗುರಿ ಎಂಬಂತೆ ತೋರುತ್ತದೆ.

ಮೆಚ್ಚಬೇಕಾದ ಅಂಶವೆಂದರೆ ಸ್ಫೋಟದ ನಂತರ ಸ್ಥಳದಲ್ಲಿ ಸ್ವಯಂಸೇವಕರು ತುಂಬಿದರು. ಕೆಲ ಟ್ಯಾಕ್ಸಿಗಳು ಘಟನಾ ಸ್ಥಳದಿಂದ ತೆರಳುವವರಿಗೆ ಉಚಿತ ಸೇವೆ ಒದಗಿಸಿದವು. ರಕ್ತದಾನ ಮಾಡಲು ದಾನಿಗಳು ಸರತಿ ಸಾಲು ನಿಂತರು. ಒಂದೇ ದಿನದಲ್ಲಿ ಘಟನಾ ಸ್ಥಳವನ್ನು ಸ್ವಚ್ಚವಾಗಿಸಿದರು. ಸಾರ್ವಜನಿಕ ಹಾಗೂ ಪ್ರವಾಸಿ ಸ್ಥಳಗಳಲ್ಲಿ ಭದ್ರತೆ ಹೆಚ್ಚಿದೆ. ಎರವಾನ್ ದೇವಾಲಯ ಪ್ರವಾಸಿಗರಿಗೆ ಮತ್ತೆ ತೆರೆದುಕೊಂಡಿದೆ!

Thanks to Prajavani for publishing this article on 20th Aug 2015

Tuesday, August 18, 2015

ಲೇಖನಿಗೆ ಮಸಿ ತುಂಬುವ ಪಾಠ ಮಾಡುತ್ತಾ...



ಮಾಧ್ಯಮದ ಲೇಖನಿಗೆ ಮಸಿ ಕೊರತೆ ಬಿದ್ದಿದೆಯೇ?’ ಎಂಬ ಲೇಖನದಲ್ಲಿ (ಪ್ರಜಾವಾಣಿ ೧೬ ಆಗೋಸ್ಟ್) ಪದ್ಮರಾಜ ದಂಡಾವತಿಯವರು ಮಾಧ್ಯಮ ಶಿಕ್ಷಣದಲ್ಲಿರುವ ಕೊರತೆಗಳನ್ನು ಎತ್ತಿ ತೋರಿಸಿದ್ದಾರೆ. ಈ ಸಮಸ್ಯೆ ಕೇವಲ ಮಾಧ್ಯಮ ಶಿಕ್ಷಣಕ್ಕೆ ಮಾತ್ರ ಸೀಮಿತವಾಗಿಲ್ಲ ಎಂಬುದನ್ನು ನಾವು ಗಮನಿಸಬೇಕು. ಇದು ನಮ್ಮ ಸಂಪೂರ್ಣ ಶಿಕ್ಷಣ ವ್ಯವಸ್ಥೆಯ ಸಮಸ್ಯೆಯಾಗಿದೆ. ಉನ್ನತ ಶಿಕ್ಷಣಕ್ಕೆ ಮಾತ್ರ ಸೀಮಿತವಾಗಿಲ್ಲ. ವೃತ್ತಿ ಶಿಕ್ಷಣ, ಮಾಧ್ಯಮಿಕ ಶಿಕ್ಷಣ ಹಾಗೂ ಪ್ರಾಥಮಿಕ ಶಿಕ್ಷಣಕ್ಕೂ ಇದೇ ಕ್ಯಾನ್ಸರ್ ಹರಡಿದೆ.

ನಮ್ಮಲ್ಲಿರುವ ಮೊದಲ ಸಮಸ್ಯೆ - ನಮ್ಮ ಶಿಕ್ಷಣ ವ್ಯವಸ್ಥೆ ಇನ್ನೂ ಲೇಖನಿಗೆ ಮಸಿ ತುಂಬುವುದನ್ನೇ ಹೇಳಿ ಕೊಡುತ್ತಿದೆ! ಲೇಖನಿಗೆ ಮಸಿ ತುಂಬುವ ಕಾಲ ಹೋಗಿ ಅದೆಷ್ಟೋ ವರ್ಷಗಳಾಯಿತು. ಹೆಚ್ಚೇಕೆ ಮಾರುಕಟ್ಟೆಯಲ್ಲಿ ಮಸಿ ತುಂಬಬಹುದಾದ ಲೇಖನಿ ಹಾಗೂ ತುಂಬಲು ಮಸಿ ಎರಡೂ ಸಿಗುವುದೇ ಇಲ್ಲ. ಅವುಗಳ ತಯಾರಿ ನಿಂತು ದಶಕವೇ ಕಳೆಯಿತು. ಮಾರುಕಟ್ಟೆ ತುಂಬಾ ಹೊಸ ನಮೂನೆಯ, ಹೊಸ ಮಾದರಿಯ ಹೊಸ ತಂತ್ರಜ್ಞಾನದ ಲೇಖನಿಗಳು ತುಂಬಿವೆ. ಆದರೆ ನಮ್ಮ ಪಠ್ಯಕ್ರಮ ಇನ್ನೂ ಮಸಿ ತುಂಬುವುದನ್ನು ಹೇಳಿಕೊಡುತ್ತಿದೆ! ಇಂದಿನ ಮಾಹಿತಿ ಕ್ರಾಂತಿಯ ಯುಗದಲ್ಲಿ ಈ ಮಸಿಯ ಬಗ್ಗೆ ತಲೆಯೆಲ್ಲಾ ಮಸಿಮಾಡಿಕೊಳ್ಳುವುದು ಅನಗತ್ಯ ಎಂದು ಪ್ರಾಥಮಿಕ ಶಾಲೆಯ ಮಕ್ಕಳಿಗೂ ಗೊತ್ತು. ಆದರೂ ನಮ್ಮ ಪಠ್ಯಕ್ರಮ ಅದನ್ನೇ ಹೇಳಿಕೊಡುತ್ತಿದೆ. ಶಿಕ್ಷಕರಿಗೆ ಸುಲಭವಾಯಿತು - ಹೊಸ ನೋಟ್ಸ್ ಮಾಡಬೇಕೆಂದಿಲ್ಲ! ನಮ್ಮ ಪಠ್ಯಕ್ರಮದಲ್ಲಿ ಹೊಸ ಲೇಖನಿಗಳ ಬಗೆಗೆ ಪಾಠ ತಯಾರಾಗುವಾಗ ಪುಸ್ತಕ ಹಾಗೂ ಲೇಖನಿಯನ್ನು ಉಪಯೋಗಿಸಿ ಬರೆಯುವ ಪರಿಪಾಠವೇ ಮುಗಿದು ಸ್ಮಾರ್ಟ್ ಸಾಧನಗಳಲ್ಲಿ ಬರೆಯುವ ಕಾಲ ಬಂದಿರುತ್ತದೆ. ಇಂತಹ ಕಾರಣದಿಂದಲೇ ನಮ್ಮ ವಿದ್ಯಾರ್ಥಿಗಳು ವಿದೇಶದ ವಿದ್ಯಾಲಯಗಳತ್ತ ಮುಖ ಮಾಡುತ್ತಿರುವುದು.


ನಮ್ಮಲ್ಲಿ ಅತಿ ಬೇಡಿಕೆಯಲ್ಲಿರುವ ತಾಂತ್ರಿಕ ಶಿಕ್ಷಣವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳೋಣ. ತಾಂತ್ರಿಕ ಶಿಕ್ಷಣ ಮುಗಿಸಿದ ನಮ್ಮ ಇಂಜಿನಿಯರ್‌ಗಳಲ್ಲಿ ಕೇವಲ ೧೮% ಪದವೀಧರರು ಉದ್ಯೋಗಾರ್ಹರು ಎಂದು ಈ ವಿಷಯದಲ್ಲಿ ಕಳೆದ ಕೆಲ ವರ್ಷಗಳಿಂದ ಸಮೀಕ್ಷೆ ನಡೆಸುತ್ತಿರುವ Aspiring Minds (http://www.aspiringminds.com) ಸಂಸ್ಥೆಯ ವರದಿಗಳು ಹೇಳುತ್ತವೆ.  ಇನ್ನು ನಾಲ್ಕು ವರ್ಷಗಳ ತಾಂತ್ರಿಕ ಪದವಿ ಮುಗಿಸಿಕೊಂಡು ಬಂದವರು ಕೆಲಸ ಸಿಗುವುದಕ್ಕೋಸ್ಕರ ಆರು ತಿಂಗಳು - ಒಂದು ವರ್ಷದ ಕೋರ್ಸ್‍ಗಳನ್ನು ಮಾಡುವುದು ಸರ್ವೇಸಾಮಾನ್ಯವಾಗಿದೆ.

ವಿಜ್ಞಾನ ಕ್ಷೇತ್ರದಲ್ಲಿ ಬಹು ಬೇಗ ಬದಲಾವಣೆಗಳು ಆಗುತ್ತವೆ ಮತ್ತು ಅವೆಲ್ಲವನ್ನೂ ಶಿಕ್ಷಣದಲ್ಲಿ ಅಳವಡಿಸುವುದು ಸಾಧ್ಯವಾಗದು; ಈಗಿರುವ ನಮ್ಮ ಶಿಕ್ಷಣಪದ್ಧತಿಯಲ್ಲಿ ಅಳವಡಿಸಿಕೊಳ್ಳುವುದು ಇನ್ನೂ ಕಷ್ಟ ಎಂಬುದು ಸ್ಪಷ್ಟ. ಹಾಗೆಂದು ಲೇಖನಿಗೆ ಮಸಿ ತುಂಬುವುದನ್ನೇ ಹೇಳಿಕೊಡುವುದಕ್ಕಾಗುತ್ತದೆಯೇ? ನಮ್ಮ ಶಿಕ್ಷಣ ಪದ್ಧತಿಯಲ್ಲಿ ಬದಲಾವಣೆ ತರಬೇಕು. ಉದ್ಯಮ ಮತ್ತು ಶಿಕ್ಷಣ ಕ್ಷೇತ್ರಗಳ ನಡುವೆ ಒಂದು ಸದೃಢ ಸೇತುವೆಯ ನಿರ್ಮಾಣವಾಗಬೇಕು. ಕೆಲವೊಂದು ಖಾಸಗೀ ಶಿಕ್ಷಣ ಸಂಸ್ಥೆಗಳು ಈ ದಿಸೆಯಲ್ಲಿ ಕೆಲಸ ಮಾಡುತ್ತಿವೆ ಮತ್ತು ಅದರ ನೇರ ಪರಿಣಾಮ ವಿದ್ಯಾರ್ಥಿಗಳ ಗುಣಮಟ್ಟದಲ್ಲಿ ಕಂಡುಬರುತ್ತದೆ.

ಎರಡನೆಯ ಸಮಸ್ಯೆ - ಶಿಕ್ಷಣದಲ್ಲಿ ಪ್ರಯೋಗಾತ್ಮಕ ಅಂಶಗಳು ಕಡಿಮೆಯಿರುವುದು. ನಮ್ಮ ಪಠ್ಯಗಳಲ್ಲಿ ಸಿದ್ಧಾಂತಗಳೇ ತುಂಬಿವೆ. ಶಿಕ್ಷಣ ಹೆಚ್ಚು ಪ್ರಾಯೋಗಿಕವಾಗಬೇಕು. ಪ್ರತಿ ಸಿದ್ಧಾಂತದ ಜೊತೆಗೂ ಅದರ ಪ್ರಯೋಗಾತ್ಮಕ ಅನ್ವಯಿಸುವಿಕೆಯನ್ನು ತಿಳಿಸಬೇಕು. ಆಗಲೇ ಅದು ಅರ್ಥ ಆಗುವುದು ಹಾಗೂ ಅದರ ಬೆಲೆ ತಿಳಿಯುವುದು. ಇದರಿಂದ ಶಿಕ್ಷಣ ಆಕರ್ಷಣೀಯವೂ ಆಗುತ್ತದೆ. ಅಂತರಾಷ್ಟ್ರೀಯ ಶಿಕ್ಷಣಸಂಸ್ಥೆಯೊಂದರಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿರುವ ಮಿತ್ರರೊಬ್ಬರು ಭಾರತೀಯ ಶಿಕ್ಷಣಕ್ಕೂ ಹೊರದೇಶದ ಶಿಕ್ಷಣಕ್ಕೂ ಇರುವ ವ್ಯತ್ಯಾಸವನ್ನು ವಿವರಿಸುತ್ತಾ "ನಮ್ಮ ದೇಶದಲ್ಲಿ ಅರ್ಥಶಾಸ್ತ್ರದಲ್ಲಿ ಉನ್ನತ ಶಿಕ್ಷಣದಲ್ಲೂ ಸಿದ್ಧಾಂತಗಳ ಪ್ರಾಯೋಗಿಕ ಉಪಯೋಗ ಕಲಿಸುವುದಿಲ್ಲ. ಹಾಗಾಗಿ ಅದೆಷ್ಟೋ ಪದವೀಧರರಿಗೆ ಅವುಗಳ ಉಪಯೋಗವೇ ತಿಳಿದಿರುವುದಿಲ್ಲ. ಹಾಗಾಗಿಯೇ ಅವರು ಅರ್ಥಶಾಸ್ತ್ರದ ಶಿಕ್ಷಕರಾಗುತ್ತಾರೆಯೇ ಹೊರತು ಅರ್ಥಶಾಸ್ತ್ರಜ್ಞರಾಗುವುದಿಲ್ಲ. ವಿದೇಶದಲ್ಲಿ ಪಾಠಮಾಡಲು ಬಂದಾಗ ನಾನು ಅನುಭವಿಸಿದ ಮೊದಲ ಸಮಸ್ಯೆಯೇ ಪ್ರಾಯೋಗಿಕತೆಯನ್ನು ಅರ್ಥಮಾಡಿಕೊಂಡು ಪಾಠಮಾಡುವುದು ಮತ್ತು ಪ್ರಾಯೋಗಿಕ ಉಪಯೋಗಗಳನ್ನು ತಿಳಿಹೇಳುವುದು" ಎನ್ನುತ್ತಾರೆ.

ಒಂದು ದೇಶದ ಉತ್ಪಾದನಾ ಸಾಮರ್ಥ್ಯ ದೇಶದ ಆರ್ಥಿಕತೆಯನ್ನು ನಿರ್ಧರಿಸುತ್ತದೆ. ಇಲ್ಲಿ ಉತ್ಪಾದನೆ ಅಂದರೆ ಕೇವಲ ಸರಕುಗಳ ಉತ್ಪಾದನೆಯಲ್ಲ; ಅದು ಭೌತಿಕ ಉತ್ಪನ್ನಗಳಿರಬಹುದು, ತಂತ್ರಾಂಶಗಳ ಉತ್ಪಾದನೆ ಇರಬಹುದು, ಜ್ಞಾನದ ಉತ್ಪಾದನೆ ಇರಬಹುದು, ವಿಜ್ಞಾನದ ಆವಿಷ್ಕಾರಗಳಿರಬಹುದು ಅಥವಾ ವೈದ್ಯಕೀಯ ಸಂಶೋಧನೆ ಇರಬಹುದು, ಸಮಾಜವಿಜ್ಞಾನ ಕ್ಷೇತ್ರದಲ್ಲಿ ಕೊಡುಗೆಯಿರಬಹುದು. ಉತ್ಪಾದನೆಯ ಮೌಲ್ಯ ವೃಧಿಯಾದಂತೆ ಆರ್ಥಿಕತೆ ಬಲವಾಗುತ್ತದೆ. ಆರ್ಥಿಕತೆ ಬಲವಾದಂತೆ ಜೀವನಮಟ್ಟ ಸುಧಾರಣೆಯಾಗುತ್ತದೆ, ಜನರ ಕೊಳ್ಳುವ ಸಾಮರ್ಥ್ಯ ಹೆಚ್ಚುತ್ತದೆ, ಹೆಚ್ಚು ಹಣವನ್ನು ಒಳ್ಳೆಯ ಶಿಕ್ಷಣಕ್ಕೋಸ್ಕರ ಮೀಸಲಿಡಬಹುದು. ಒಳ್ಳೆಯ ಶಿಕ್ಷಣದಿಂದ ಉತ್ಪಾದನಾ ಮೌಲ್ಯ ಹೆಚ್ಚಿಸಬಹುದು. ಇದು ಒಂದು ವರ್ತುಲ. ನಮ್ಮಲ್ಲಿ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆಯೆಂಬ ಕೂಗು ಎಲ್ಲಾ ಕ್ಷೇತ್ರಗಳಲ್ಲೂ ಕೇಳಿಬರುತ್ತಿದೆ. ಇದು ನಮ್ಮ ಉತ್ಪಾದನಾ ಸಾಮರ್ಥ್ಯವನ್ನು ಕಡಿಮೆಮಾಡುತ್ತದೆ, ಆರ್ಥಿಕತೆ ದುರ್ಬಲವಾಗುತ್ತದೆ. ಶಿಕ್ಷಣವನ್ನು ದುರ್ಬಲಗೊಳಿಸುವುದು ಆರ್ಥಿಕತೆಯನ್ನು ದುರ್ಬಲಗೊಳಿಸುವ ಮೊದಲ ಹೆಜ್ಜೆ ಎಂಬುದನ್ನು ನಮ್ಮ ಸರಕಾರ, ಶಿಕ್ಷಣ ಇಲಾಖೆ ಅರ್ಥಮಾಡಿಕೊಂಡಂತಿಲ್ಲ.

ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣ ಖಾಸಗೀ ಕ್ಷೇತ್ರವನ್ನಾಗಿಸಿ ಮಾನ್ಯತೆ ಕೊಡುವ ಅಧಿಕಾರವನ್ನು ಮಾತ್ರ ತನ್ನ ಕೈಯಲ್ಲಿ ಉಳಿಸಿಕೊಂಡು ಗುಣಮಟ್ಟದ ಬಗ್ಗೆ ಚಿಂತಿಸದೆ ಮಾನ್ಯತೆಯ ಹೆಸರಿನಲ್ಲಿ ಹಣ ಮಾಡುವ ಹುನ್ನಾರದಲ್ಲಿರುವಂತೆ ತೋರುತ್ತದೆ. ಪ್ರಾಥಮಿಕ ಹಂತದಿಂದ ವಿಶ್ವವಿದ್ಯಾಲಯಗಳವರೆಗೆ ಸರಿಯಾದ ನೇಮಕಾತಿ ಮಾಡದೆ ಸರಕಾರಿ ಶಿಕ್ಷಣ ಸಂಸ್ಥೆಗಳು ತನ್ನಿಂತಾನೆ ಸಾಯುವಂತೆ ಮಾಡುವ ಯೋಜನೆಯೂ ಇದ್ದಂತಿದೆ. ಒಳ್ಳೆಯ ಸಂಭಾವನೆಯಿಲ್ಲದೆ ಶಿಕ್ಷಕ ವೃತ್ತಿಯೇ ಆಕರ್ಷಕವಾಗಿಲ್ಲದ ಮೇಲೆ ಪ್ರತಿಭಾವಂತರು ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವುದಾದರೂ ಹೇಗೆ. ಬೇರೆಲ್ಲೂ ಸಲ್ಲದವರು ಶಿಕ್ಷಕರಾದರೆ ಉದ್ಯೋಗಕ್ಕೆ ಯೋಗ್ಯ ಪದವೀಧರರು ಬರುವುದೆಂತು? ಉತ್ಪಾದನೆ ಬೆಳೆಯುವುದೆಂತು? ಆರ್ಥಿಕತೆ ಸದೃಢವಾಗುವುದೆಂತು?

ಸಮೀರ ದಾಮ್ಲೆ

Thanks to Prajavani for publishing this article on 18.8.2015