Wednesday, September 16, 2015

ಥೈಲ್ಯಾಂಡ್ ಪ್ರವಾಸೋದ್ಯಮದ ಮೇಲೆ ಪ್ರಹಾರವೇ?




 
ಆಗೊಸ್ಟ್ 17ರ ಸಂಜೆ ಬ್ಯಾಂಕಾಕಿನ ಎರವಾನ್ ದೇವಾಲಯಲ್ಲಿ ನಡೆದ ಬಾಂಬ್ ಸ್ಫೋಟ ಬ್ಯಾಂಕಾಕ್ ಜನತೆಯನ್ನು ಬೆಚ್ಚಿ ಬೀಳಿಸಿದೆ. ಬ್ಯಾಂಕಾಕಿನಲ್ಲಿ ಇಂತಹ ಘಟನೆ ಈ ಮೊದಲು ಸಂಭವಿಸಿರಲಿಲ್ಲ. ಹಿಂದೆ ಬಾಂಬ್ ಸ್ಫೋಟಗಳು ನಡೆದಾಗ ಅವು ಒಂದು ನಿರ್ದಿಷ್ಟ ಗುಂಪನ್ನು ಗುರಿಯಾಗಿಸಿಕೊಂಡು ನಡೆದಿತ್ತು. ಅಷ್ಟೇ ಅಲ್ಲ ಈ ತೀವ್ರತೆಯಲ್ಲಿ ಇಷ್ಟೊಂದು ಜನರನ್ನು ಬಲಿ ತೆಗೆದುಕೊಂಡ ದೊಡ್ಡ ಮಟ್ಟಿನ ಸ್ಫೋಟ ನಡೆದಿರಲಿಲ್ಲ.

ಸಾಮಾನ್ಯವಾಗಿ ದಕ್ಷಿಣ ಏಷ್ಯಾ ದೇಶಗಳ ಪೈಕಿ ಥೈಲ್ಯಾಂಡ್ ಒಂದು ಸುರಕ್ಷಿತ ರಾಷ್ಟ್ರವೆಂದು ಪರಿಗಣಿಸಲ್ಪಡುತ್ತದೆ. ದಕ್ಷಿಣದ ಗಡಿಪ್ರದೇಶವನ್ನು ಹೊರತುಪಡಿಸಿದರೆ ಬಹುತೇಕ ಎಲ್ಲಾ ಪ್ರಾಂತ್ಯಗಳಲ್ಲೂ ಶಾಂತಿ ಇದೆ. ಸುರಕ್ಷತೆ, ನೈಸರ್ಗಿಕ ಸೌಂದರ್ಯ, ಎಲ್ಲಾ ಆರ್ಥಿಕ ವರ್ಗದ ಜನರಿಗೂ ಕೈಗೆಟಕುವ ಸವಲತ್ತುಗಳು, ಸುಲಭ ಜೀವನ, ಸುಲಭವಾಗಿ ಸಿಗುವ ವೀಸಾ ಮುಂತಾದುವುಗಳಿಂದ ಥೈಲ್ಯಾಂಡ್ ಆಕರ್ಷಣೀಯವಾಗುತ್ತದೆ. ಸಾಮಾನ್ಯವಾಗಿ ಪ್ರವಾಸಿಗರ ಸ್ವರ್ಗ ಎಂದು ಪ್ರಸಿದ್ಧವಾಗಿದ್ದರೂ ಉದ್ಯೋಗಕ್ಕಾಗಿ, ಉದ್ಯಮಕ್ಕಾಗಿ ಇಲ್ಲಿ ಬಂದು ನೆಲೆಸಿದವರು ಬಹಳಷ್ಟು ಜನರಿದ್ದಾರೆ. ಹೆಚ್ಚೇಕೆ ನಿವೃತ್ತ ಜೀವನ ಮಾಡುವುದಕ್ಕಾಗಿ ಥೈಲ್ಯಾಂಡಿಗೆ ಬಂದು ನೆಲೆಸುವವರೂ ಇದ್ದಾರೆ; ಅದಕ್ಕಾಗಿಯೇ ನಿವೃತ್ತಿ ವೀಸಾ ಕೂಡಾ ಲಭ್ಯವಿದೆ. ಇಲ್ಲಿ ಬಂದು ನೆಲೆಸಿದವನ್ನು ಕಾರಣ ಕೇಳಿದರೆ ಸಾಮಾನ್ಯವಾಗಿ ಸಿಗುವ ಉತ್ತರ - ಇಲ್ಲಿ ಜೀವನ ಸುಲಭ, ಆರಾಮದಾಯಕ, ಸುರಕ್ಷಿತ ಹಾಗೂ ಥಾಯ್ ಜನರು ನಿರುಪದ್ರವಿಗಳು ಎಂಬ ಉತ್ತರ. ಇದು ಕೇವಲ ಭಾರತದಿಂದ ಬಂದು ನೆಲೆಸಿದವರ ಅಭಿಪ್ರಾಯವಲ್ಲ ಯುರೋಪ್ ಅಮೆರಿಕಾ ಮುಂತಾದ ಮುಂದುವರಿದ ದೇಶಗಳಿಂದ ಇಲ್ಲಿಗೆ ಜನ ಬಂದು ನೆಲೆಸುವುದೂ ಇದೇ ಕಾರಣಕ್ಕೆ.

ಈ ದೃಷ್ಟಿಯಿಂದ ಸ್ಫೋಟವನ್ನು ಹಲವು ಆಯಾಮಗಳಿಂದ ನೋಡಬೇಕಾಗುತ್ತದೆ. ಥೈಲ್ಯಾಂಡಿನಲ್ಲಿ ಗಮನಾರ್ಹವಾಗಿ ಕಾಣಸಿಗುವ ಸಂಘರ್ಷಗಳು ರಾಜಕೀಯ ಸಂಘರ್ಷಗಳು ಮಾತ್ರ. ಅಷ್ಟೇ ಅಲ್ಲ ಇಲ್ಲಿನ ಸಂಘರ್ಷಗಳಲ್ಲಿ, ದಂಗೆಗಳಲ್ಲಿ ಗುಂಡಿನ ಚಕಮಕಿ ರಕ್ತಕ್ರಾಂತಿ ಆದ ನಿದರ್ಶನಗಳು ತೀರಾ ವಿರಳ.

ಇದಕ್ಕೆ ಕಾರಣ ಅರಿತುಕೊಳ್ಳಲು ನಾವು ಥಾಯ್ ಚರಿತ್ರೆಯನ್ನು ಕೊಂಚ ನೋಡಬೇಕಾಗುತ್ತದೆ. ದಕ್ಷಿಣ ಏಷ್ಯಾ ದೇಶಗಳ ಪೈಕಿ ವಸಾಹತು ಆಡಳಿತಕ್ಕೆ ಒಳಪಡದೆ ಸ್ವತಂತ್ರವಾಗಿ ಉಳಿದ ಏಕೈಕ ದೇಶ ಥೈಲ್ಯಾಂಡ್. ಹೀಗೆ ಥೈಲ್ಯಾಂಡನ್ನು ಯುರೋಪಿಯನ್ ವಸಾಹತುಶಾಹಿಗಳಿಂದ ರಕ್ಷಿಸಿದ ಹಿರಿಮೆ 1851 ರಿಂದ 1910 ರವರೆಗೆ ಆಡಳಿತ ನಡೆಸಿದ ರಾಜ ಮೊಂಕುಟ್ (ರಾಮ ೪) ಮತ್ತು ಆತನ ಮಗ ರಾಜ ಚುಲಾಲೊಂಕಾರ್ನ್ (ರಾಮ ೫) ಇವರಿಗೆ ಸಲ್ಲುತ್ತದೆ. ಇವರೀರ್ವರೂ ಆಧುನಿಕ ವಿಜ್ಞಾನ, ಶಿಕ್ಷಣ ವ್ಯವಸ್ಥೆ, ರಸ್ತೆ, ರೈಲು, ಮುದ್ರಣ ತಂತ್ರಜ್ಞಾನ, ಆಡಳಿತ ಸೇವೆಯ ಮೂಲಕ ಹೊಸ ಆಡಳಿತ ವ್ಯವಸ್ಥೆ ಇವುಗಳನ್ನು ಥೈಲ್ಯಾಂಡಿಗೆ ಪರಿಚಯಿಸಿದರು. ಹಾಗಿದ್ದೂ ಆಡಳಿತಾತ್ಮಕವಾಗಿ ಥೈಲ್ಯಾಂಡ್ ಸಂಪೂರ್ಣ ರಾಜಪ್ರಭುತ್ವದ ಅಡಿಯಲ್ಲೇ ಇತ್ತು. ರಾಜನ ಕುರಿತು ಅಪಾರ ಗೌರವ ಮತ್ತು ರಾಜನನ್ನು ದೇವರಂತೆ ಪೂಜಿಸುವ ಸಂಸ್ಕೃತಿ ಥಾಯ್ ಸಮಾಜದಲ್ಲಿತ್ತು ಎಂಬುದನ್ನು ಇತಿಹಾಸಕಾರರು ದಾಖಲಿಸಿದ್ದಾರೆ. ಹಾಗಾಗಿ ಸ್ವಾತಂತ್ರ್ಯ ಸಂಗ್ರಾಮ, ಪರಕೀಯ ಆಡಳಿತದ ವಿರುದ್ಧ ಹೋರಾಟದಂತಹ ಸಂಘರ್ಷಗಳು ಥಾಯ್ ಚರಿತ್ರೆಯಲ್ಲಿಯೇ ಇಲ್ಲ. 

೧೯೩೨ರಲ್ಲಿ ನಡೆದ ಸೇನೆ ಮತ್ತು ಆಡಳಿತ ಸೇವಾಧಿಕಾರಿಗಳು ನಡೆಸಿದ ದಂಗೆಯಿಂದ ಥೈಲ್ಯಾಂಡ್ ಸಾವಿಂಧಾನಿಕ ರಾಜಪ್ರಭುತ್ವವನ್ನು ಅಳವಡಿಸಿಕೊಂಡು ಪ್ರಜಾತಂತ್ರ ದೇಶವಾಯಿತು. ಈ ದಂಗೆ ಆಧಿನಿಕ ಥೈಲ್ಯಾಂಡ್‍ನ ಸುಮಾರು ೭೦೦ ವರುಷಗಳ ಇತಿಹಾಸದಲ್ಲಿ ದಾಖಲಾಗಿರುವ ಮೊದಲ ಆಂತರಿಕ ಸಂಘರ್ಷ. ಈ ದಂಗೆಯ ಮೂಲಕಾರಣದ ಬಗ್ಗೆ ವಿಭಿನ್ನ ಅಭಿಪ್ರಾಯಗಳಿವೆ. ಪಾಶ್ಚಾತ್ಯ ಸಿದ್ಧಾಂತಗಳು ಹಾಗೂ ತತ್ವಗಳ ಪ್ರಭಾವ, ಚುಲಾಲೊಂಕಾರ್ನ್‍ ಉತ್ತರಾಧಿಕಾರಿಗಳು ಆತನಷ್ಟು ಶಕ್ತರಲ್ಲದೆ ಇದ್ದುದು ಇತ್ಯಾದಿ. ಗಮನಿಸಬೇಕಾದ ಅಂಶವೆಂದರೆ ಪ್ರಜಾತಂತ್ರ ವ್ಯವಸ್ಥೆ ಇದ್ದಾಗ್ಯೂ ರಾಜನ ಕುರಿತಾದ ಗೌರವ ಕುಂದಿಲ್ಲ. ಸಂವಿಧಾನದಲ್ಲಿ ರಾಜನಿಗೆ ಬಹಳ ಗೌರವಯುತವಾದ ಸ್ಥಾನ ಇದೆ ಮತ್ತು ಕೆಲ ವಿಶೇಷ ಅಧಿಕಾರಗಳಿವೆ. ಇನ್ನೊಂದು ಮುಖ್ಯ ಅಂಶ ಈ ದಂಗೆಯೂ ರಕ್ತಕ್ರಾಂತಿಯ ದಂಗೆಯಾಗಿರಲಿಲ್ಲ.

ಪ್ರಸ್ತುತ ರಾಜ ಭೂಮಿಬೋಲ್ ಅದುಲ್ಯತೇಜ (ರಾಮ೯) ದೇಶದ ಪ್ರಗತಿಗೆ ತನ್ನದೇ ಕೊಡುಗೆ ಕೊಟ್ಟು ತನ್ನ ಸ್ಥಾನದ ಗೌರವವನ್ನು ಹೆಚ್ಚಿಸಿರುವ ಕಾರಣದಿಂದ ರಾಜನ ಬಗ್ಗೆ ಜನರಲ್ಲಿ ಇಂದಿಗೂ ಅಪಾರ ಗೌರವವಿದೆ. ಇದರ ದ್ಯೋತಕವಾಗಿಯೇ ಥಾಯ್‍ಲ್ಯಾಂಡಿನ ಪ್ರತಿ ಕಡೆಯೂ ರಾಜನ ಭಾವಚಿತ್ರ ಕಂಗೊಳಿಸುತ್ತಿರುತ್ತದೆ. ರಾಜನನ್ನು ದೇವರೆಂಬಂತೆ ಆರಾಧಿಸುವವರೂ ಬಹಳಷ್ಟು ಮಂದಿ ಇದ್ದಾರೆ. ಶೈಕ್ಷಣಿಕ ಸಂಸ್ಥೆಗಳು, ಸಂಶೋಧನಾ ಕೇಂದ್ರಗಳು, ಮೂಲಸೌಕರ್ಯಗಳ ಅಭಿವೃದ್ಧಿ, ಸಮಾಜಿಕ ಆರೋಗ್ಯ ಹೀಗೆ ಹವಾರು ವಿಷಯಗಳ ಅಭಿವೃದ್ಧಿಗೆ ಸರಕಾರೇತವಾಗಿ ರಾಜನ ವೈಯಕ್ತಿಕ ಯೋಜನೆಗಳು ಚಾಲ್ತಿಯಲ್ಲಿವೆ. ಇದುತನಕ ಥೈಲ್ಯಾಂಡಿನಲ್ಲಿ ನಡೆದ ಹತ್ತಕ್ಕೂ ಅಧಿಕ ಸೇನಾ ದಂಗೆ ಹಾಗೂ ಮಿಲಿಟರಿ ಆಡಳಿತ ಹೇರಿಕೆಯ ಸಂದರ್ಭದಲ್ಲಿ ರಾಜಕೀಯ ಪರಿಸ್ಥಿತಿಯನ್ನು ತಿಳಿಗೊಳಿಸುವಲ್ಲಿ ಮತ್ತು ಸುಸ್ಥಿರಗೊಳಿಸುವಲ್ಲಿ ರಾಜ ಮಹತ್ತರ ಪಾತ್ರವಹಿಸಿದ್ದಾನೆ ಎನ್ನಲಾಗುತ್ತದೆ.

ಥೈಲ್ಯಾಂಡಿನ ಪ್ರಸಕ್ತ ರಾಜಕೀಯ ಬಿಕ್ಕಟ್ಟಿನ ಮೂಲ ಹಿಂದಿನ ಪ್ರಧಾನಿ ತಕ್ಸಿನ್ ಚಿನವಾತ್ರನ ಆಡಳಿತಾವಧಿಯಲ್ಲಿ ಪ್ರಾರಂಭವಾಗುತ್ತದೆ. ೨೦೦೧ರಲ್ಲಿ ದೊಡ್ಡ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ತಕ್ಸಿನ್ ಹಲವಾರು ಜನಪ್ರಿಯ ಯೋಜನೆಗಳಿಂದ ಜನರ ಮೆಚ್ಚುಗೆ ಗಳಿಸುತ್ತಾನೆ. ಥೈಲ್ಯಾಂಡ್ ಚರಿತ್ರೆಯಲ್ಲೇ ಪೂರ್ಣಾವಧಿ ಅಧಿಕಾರದಲ್ಲಿದ್ದ ಮೊದಲ ರಾಜಕಾರಣಿ ಎಂಬ ಹೆಗ್ಗಳಿಕೆ ತಕ್ಸಿನ್‍ನದ್ದು. ತಕ್ಸಿನ್ ಅಧಿಕಾರಾವಧಿಯಲ್ಲಿ ಥಾಯ್ ಆರ್ಥಿಕತೆಯಲ್ಲಿ ತುಂಬಾ ಚೇತರಿಕೆ ಆಗುತ್ತದೆ. ೨೦೦೫ರ ಮರುಚುನಾವಣೆಯಲ್ಲಿ ಥೈಲ್ಯಾಂಡ್ ಚರಿತ್ರೆಯಲ್ಲೇ ಅತೀ ಹೆಚ್ಚು ಜನ ಮತ ಚಲಾಯಿಸಿ ತಕ್ಸಿನ್‍ನನ್ನು ಮತ್ತೆ ಅಧಿಕಾರಕ್ಕೆ ತರುತ್ತಾರೆ. ಆದರೆ ಖ್ಯಾತಿಯ ಜೊತೆಜೊತೆಗೆ ತಕ್ಸಿನ್ ಮೇಲೆ ಭ್ರಷ್ಟಾಚಾರ ಹಾಗೂ ರಾಜನಿಗೆ ಅವಮಾನ ಮಾಡಿದ ಆರೋಪ ಕೂಡಾ ಕೇಳಿಬರುತ್ತದೆ. ತಕ್ಸಿನ್ ವಿರೋಧಿಗಳ ಪ್ರತಿಭಟನೆ ಹೆಚ್ಚಿದಂತೆ ೨೦೦೬ ಸೆಪ್ಟಂಬರ್‌ನಲ್ಲಿ ಸೇನಾ ದಂಗೆಯ ಮೂಲಕ ಮಿಲಿಟರಿ ಆಡಳಿತ ಹೇರಲಾಗುತ್ತದೆ. ಮುಂದಿನ ವರುಷಗಳಲ್ಲಿ ನಡೆದ ಹಲವಾರು ರಾಜಕೀಯ ಬೆಳವಣಿಗೆಗಳ ಮಧ್ಯೆ ತಕ್ಸಿನ್ ಥೈಲ್ಯಾಂಡಿನಿಂದ ಪಲಾಯನಮಾಡುತ್ತಾನೆ. ೨೦೧೧ರ ಚುನಾವಣೆಯಲ್ಲಿ ತಕ್ಸಿನ್ ಬೆಂಬಲವಿದ್ದ ಫಿಯು ಥಾಯ್ ಪಾರ್ಟಿ ಬಹುಮತಗಳಿಸಿ ತಕ್ಸಿನ್ ಸಹೋದರಿ ಇಂಗ್ಲಕ್ ಥೈಲ್ಯಾಂಡಿನ ಮೊದಲ ಮಹಿಳಾ ಪ್ರಧಾನಮಂತ್ರಿಯಾಗುತ್ತಾಳೆ. ದೇಶದ ಹೊರಗಿದ್ದುಕೊಂಡು ತಂಗಿಯನ್ನು ನಿಯಂತ್ರಿಸುತ್ತಾ ಥಾಯ್ ರಾಜಕೀಯವನ್ನು ತಕ್ಸಿನ್ ನಿಯಂತ್ರಿಸುತ್ತಿದ್ದಾನೆ ಎಂಬ ಆರೋಪ ಕೇಳಿಬರುತ್ತದೆ. ೨೦೧೪ ಮೇ ತಿಂಗಳಲ್ಲಿ ಇಂಗ್ಲಕ್‍ಳನ್ನು ಅಧಿಕಾರ ದುರುಪಯೋಗ ಮತ್ತು ಭ್ರಷ್ಟಾಚಾರದ ಆರೋಪದಡಿ ಅಧಿಕಾರದಿಂದಿಳಿಸಿ ಸೇನಾನಾಯಕ ಪ್ರಯುತ್ ಮಿಲಿಟರಿ ಆಡಳಿತ ಹೇರುತ್ತಾನೆ.

ದೇಶದ ಆಡಳಿತ ವ್ಯವಸ್ಥೆಯನ್ನು ಭ್ರಷ್ಟಾಚಾರ ಮುಕ್ತಗೊಳಿಸಿ ಮತ್ತೆ ಚುನಾವಣೆಗೆ ಅನುವು ಮಾಡಿಕೊಡುತ್ತೇನೆ ಎಂಬುದು ಪ್ರಯುತ್‍ನ ವಾಗ್ದಾನ. ಭ್ರಷ್ಟಾಚಾರದ ವಿರೋಧಿ ಕಾನೂನನ್ನು ಬಲಗೊಳಿಸಿದ್ದಲ್ಲದೆ ಹಲವಾರು ಹೊಸ ಸುಧಾರಣಾ ನಿಯಮಗಳನ್ನು ಪ್ರಯುತ್ ಆಡಳಿತ ಅನುಷ್ಠಾನಕ್ಕೆ ತರುತ್ತಿದೆ ಎಂಬುದು ಸಾಮಾನ್ಯ ಜನರಲ್ಲಿ ಬಹುತೇಕರ ಅಭಿಪ್ರಾಯ. ಆಡಳಿತದಲ್ಲಿ ಸುಧಾರಣೆಯಾಗಿದೆ, ಭ್ರಷ್ಟಾಚಾರ ಕಡಿಮೆಯಾಗಿದೆ, ಸರಕಾರಿ ಕಛೇರಿಗಳಲ್ಲಿ ಕೆಲಸ ಸುಗಮವಾಗಿ ಸಾಗುತ್ತಿದೆ ಎಂಬುದು ವ್ಯಾವಹಾರಿಕ ವಲಯದಲ್ಲಿ ಜನರಾಡಿಕೊಳ್ಳುತ್ತಿರುವ ಮಾತುಗಳು. ಈ ದೃಷ್ಟಿಯಿಂದ ಹಲವರಲ್ಲಿ ಪ್ರಯುತ್ ಆಡಳಿತದ ಬಗ್ಗೆ ಸಮಾಧಾನ ಇದೆ. ಆದರೆ ಪ್ರಜಾತಾಂತ್ರಿಕ ವ್ಯವಸ್ಥೆಯನ್ನು ಆದಷ್ಟು ಬೇಗ ಜಾರಿ ಮಾಡಬೇಕು ಎಂಬ ಬೇಡಿಕೆ ಕೂಡಾ ಕೆಲವೆಡೆ ಕೇಳಿ ಬರುತ್ತಿದೆ. ವ್ಯವಸ್ಥೆಯಲ್ಲಿ ತುಂಬಿರುವ ಭ್ರಷ್ಟತೆಯನ್ನು ಹೋಗಲಾಡಿಸಿ ಆಡಳಿತ ವ್ಯವಸ್ಥೆಯನ್ನು ಪೂರ್ಣ ಸುಧಾರಣೆ ಮಾಡಲು ಇನ್ನೂ ಬಹಳ ಕಾಲಾವಕಾಶ ಬೇಕು, ಅಲ್ಲಿಯತನಕ ಕಾಯುವುದೇ ಲೇಸು ಎಂಬುದು ಪ್ರಯುತ್ ಬೆಂಬಲಿಗರ ವಾದ. ಒಬ್ಬ ಸಾಮಾನ್ಯ ಪ್ರಜೆಯ ದೃಷ್ಟಿಯಿಂದ ಹೇಳುವುದಾದರೆ ಮಿಲಿಟರಿ ಆಡಳಿತವಿರುವ ಸೇನಾ ನಿಯಂತ್ರಿತ ಉಸಿರುಗಟ್ಟಿಸುವ ವಾತಾವರಣ ಎಲ್ಲೂ ಕಾಣಿಸುವುದಿಲ್ಲ. ಸಾಮಾನ್ಯರ ಜನಜೀವನದಲ್ಲಿ ಏನೂ ತೊಂದರೆ ಆಗಿಲ್ಲ.

ಇನ್ನು ಥೈಲ್ಯಾಂಡಿನ ದಕ್ಷಿಣ ಭಾಗದಲ್ಲಿ ಹಲವು ವರುಷಗಳಿಂದ ನಡೆಯುತ್ತಿರುವ ಇನ್ನೊಂದು ಸಂಘರ್ಷ ಮುಸ್ಲಿಮ್ ಪ್ರತ್ಯೇಕವಾದಿಗಳ ಕೂಗು. ಥೈಲ್ಯಾಂಡಿನಲ್ಲಿ ೯೫% ಬೌದ್ಧಮತ ಅನುಯಾಯಿಗಳಿದ್ದಾರೆ. ದಕ್ಷಿಣದ ಮಲೇಷ್ಯಾ ಗಡಿಪ್ರದೇಶದಲ್ಲಿನ ಮೂರು ಪ್ರಾಂತ್ಯಗಳಲ್ಲಿ ಮಾತ್ರ ಮುಸ್ಲಿಮ್ ಜನಸಂಖ್ಯೆ ಹೆಚ್ಚಿದೆ. ಈ ಭಾಗದಲ್ಲಿ ಪ್ರತ್ಯೇಕತೆಯ ಕೂಗು ಹಲವಾರು ವರ್ಷಗಳಿಂದ ಕೇಳಿಬರುತ್ತಿದೆ. ರಾಜಾಡಳಿತವಿದ್ದಾಗ ಈ ಪ್ರಾತ್ಯಂಗಳ ಆಡಳಿತವನ್ನು ಸ್ಥಳೀಯ ಮುಸ್ಲಿಮ್ ನಾಯಕರು ನೋಡಿಕೊಳ್ಳುತ್ತಿದ್ದರು. ಸಾಂವಿಧಾನಿಕ ಆಡಳಿತ ಪ್ರಾರಂಭವಾದ ಮೇಲೆ ಸ್ಥಳೀಯ ಜಾವಿ ಭಾಷೆಯ ಬದಲು ಥಾಯ್ ಭಾಷೆಯನ್ನು ಹೇರಲಾಗುತ್ತಿದೆ, ಸ್ಥಳೀಯ ಸಂಸ್ಕೃತಿಯ ಬದಲು ಬೌದ್ಧ ಸಂಸ್ಕೃತಿಯನ್ನು ಹೇರಲಾಗುತ್ತಿದೆ ಎಂಬ ಕೂಗು ಪ್ರಾರಂಭವಾಯಿತು. ಅಂದಿನಿಂದ ಇಂದಿನವರೆಗೂ ಸ್ವಾಯತ್ತತೆಗಾಗೆ ಬಂಡಾಯ ಪ್ರತಿಭಟನೆಗಳು ನಡೆಯುತ್ತಿವೆ. ನಿರಂತರವಾಗಿ ವರುಷಗಳಿಂದ ನಡೆಯುತ್ತಿರುವ ಈ ಪ್ರತಿಭಟನೆಗಳಲ್ಲಿ ಸಾವಿರಕ್ಕೂ ಹೆಚ್ಚು ಜನ ಪ್ರಾಣ ಕಳಕೊಂಡಿದ್ದಾರೆ. ಆದರೆ ಆ ಪ್ರತಿಭಟನೆಗಳು ದಕ್ಷಿಣ ಪ್ರಾಂತ್ಯಗಳಲ್ಲಿ ನಡೆದಿವೇ ಹೊರತು ಬ್ಯಾಂಕಾಕ್‍ನಲ್ಲಿ ನಡೆದಿಲ್ಲ.

ಇತ್ತೀಚೆಗೆ ಹೊಗೆಯಾಡಿದ ಇನ್ನೊಂದು ಸಮಸ್ಯೆ ಉಯ್ಗುರ್ ನಿರಾಶ್ರಿತರದ್ದು. ಹಲವಾರು ಅಂತಾರಾಷ್ಟ್ರೀಯ ಒತ್ತಡಗಳ ಹೊರತಾಗಿಯೂ ಥಾಯ್ ಸರಕಾರ ಸುಮಾರು ನೂರಕ್ಕೂ ಹೆಚ್ಚು ಉಯ್ಗುರ್ ನಿರಾಶ್ರಿತರನ್ನು ಚೀನಾಕ್ಕೆ ತಿರುಗಿ ಕಳುಹಿಸಿತು. ಥಾಯ್ ಆಡಳಿತ ಚೇನಾ ಹಾಗೂ ಟರ್ಕಿಯ ಜೊತೆ ಮಾತುಕತೆ ನಡೆಸಿರುವುದಾಗಿಯೂ ಆ ಮಾತುಕತೆಗಳ ಹಿನ್ನೆಲೆಯಲ್ಲೇ ಅವರನ್ನು ಚೀನಾಕ್ಕೆ ತಿರುಗಿ ಕಳುಹಿಸಿದ್ದೆಂದು ತನ್ನ ನಿಲುವನ್ನು ಸಮರ್ಥಿಸಿಕೊಂಡಿದೆ. ಆದರೆ ಇದನ್ನು ಟರ್ಕಿಯಲ್ಲಿನ ಉಯ್ಗುರ್ ಹೋರಾಟಗಾರರು ಹಾಗೂ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಗಳು ಖಂಡಿಸಿವೆ. ಇತ್ತೀಚೆಗೆ ಇಸ್ತಾಂಬುಲ್‍ನಲ್ಲಿ ಥಾಯ್ ರಾಯಭಾರಿ ಕಛೇರಿಯ ಮೇಲೆ ಇದೇ ವಿಷಯದಲ್ಲಿ ಧಾಳಿಯೂ ನಡೆಯಿತು. ಉಯ್ಗುರ್ ನಿರಾಶ್ರಿತರ ವಿಷಯದಲ್ಲಿ ಥಾಯ್ ಆಡಳಿತ ನಡಕೊಂಡ ರೀತಿಯ ಕುರಿತು ಹೊರದೇಶಗಳಲ್ಲಿ ಅಸಮಧಾನದ ಹೊಗೆಯಾಡಿತು.

ಪ್ರಸಿದ್ಧ ಪ್ರವಾಸಿ ಸ್ಥಳದಲ್ಲಿ ನಡೆದ ಬಾಂಬ್ ಧಾಳಿಯನ್ನು ಥಾಯ್ ಆಡಳಿತ ಆರ್ಥಿಕತೆಗೆ ಮತ್ತು ಪ್ರವಾಸೋದ್ಯಮಕ್ಕೆ ಧಕ್ಕೆ ತರಲು ಮಾಡಿದ ಹೀನ ಕೃತ್ಯ ಎಂದು ಹೇಳಿದೆ. ಥಾಯ್ ಜಿಡಿಪಿಯಲ್ಲಿ ಪ್ರವಾಸೋದ್ಯಮದ ದೊಡ್ಡ ಕೊಡುಗೆಯಿದೆ. ಪ್ರವಾಸೋದ್ಯಮ ನೇರವಾಗಿ ೯% ಮತ್ತು ಒಟ್ಟಾರೆಯಾಗಿ ಸುಮಾರು ೨೦% ಜಿಡಿಪಿಗೆ ಕೊಡುಗೆ ನೀಡುತ್ತದೆ. ಬಾಂಬ್ ಧಾಳಿಯ ಹಿನ್ನೆಲೆಯಲ್ಲಿ ಹಲವಾರು ದೇಶಗಳು ತಮ್ಮ ಪ್ರಜೆಗಳಿಗೆ ಥೈಲ್ಯಾಂಡ್ ಪ್ರವಾಸದ ಬಗ್ಗೆ ಎಚ್ಚರಿಕೆಯಿಂದಿರುವಂತೆ ಕರೆ ನೀಡಿದೆ. ಪ್ರವಾಸಿಗರನ್ನು ಗುರಿಯಾಗಿಸಿ ಸ್ಫೋಟ ನಡೆಸಿದ್ದನ್ನು ಗಮನಿಸಿದರೆ ಪ್ರವಾಸೋದ್ಯಮ ತನ್ಮೂಲಕ ಥೈಲ್ಯಾಂಡ್ ಆರ್ಥಿಕತೆಯೇ ಈ ಧಾಳಿಯ ನೇರ ಗುರಿ ಎಂಬಂತೆ ತೋರುತ್ತದೆ.

ಮೆಚ್ಚಬೇಕಾದ ಅಂಶವೆಂದರೆ ಸ್ಫೋಟದ ನಂತರ ಸ್ಥಳದಲ್ಲಿ ಸ್ವಯಂಸೇವಕರು ತುಂಬಿದರು. ಕೆಲ ಟ್ಯಾಕ್ಸಿಗಳು ಘಟನಾ ಸ್ಥಳದಿಂದ ತೆರಳುವವರಿಗೆ ಉಚಿತ ಸೇವೆ ಒದಗಿಸಿದವು. ರಕ್ತದಾನ ಮಾಡಲು ದಾನಿಗಳು ಸರತಿ ಸಾಲು ನಿಂತರು. ಒಂದೇ ದಿನದಲ್ಲಿ ಘಟನಾ ಸ್ಥಳವನ್ನು ಸ್ವಚ್ಚವಾಗಿಸಿದರು. ಸಾರ್ವಜನಿಕ ಹಾಗೂ ಪ್ರವಾಸಿ ಸ್ಥಳಗಳಲ್ಲಿ ಭದ್ರತೆ ಹೆಚ್ಚಿದೆ. ಎರವಾನ್ ದೇವಾಲಯ ಪ್ರವಾಸಿಗರಿಗೆ ಮತ್ತೆ ತೆರೆದುಕೊಂಡಿದೆ!

ಸಮೀರ ದಾಮ್ಲೆ

ಕೋಡಂಗಿ ಕುಣಿತಕ್ಕೆ ಬದಲಾವಣೆ ತಂದರೆಂತು?



ಮಿತ್ರ ರಂಗನಾಥ ರಾಯರು ಯೂಟ್ಯೂಬ್‍ನಲ್ಲಿ ವೃತ್ತಿಮೇಳವೊಂದರ ಶ್ರೀ ದೇವಿ ಮಹಾತ್ಮೆ ಯಕ್ಷಗಾನದ ವೀಡಿಯೋ ಹಂಚಿಕೊಂಡರು. ಅದರಲ್ಲಿ ಪ್ರಸ್ತುತಪಡಿಸಿದ ಕೋಡಂಗಿ ಕುಣಿತವನ್ನು ನೋಡಿದಾಗ ಮನಸ್ಸಿಗೆ ಬಂದ ಒಂದಷ್ಟು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದೇನೆ.

ಕೋಡಂಗಿ ಕುಣಿತ ಪ್ರಸ್ತುತಪಡಿಸಿದ ಕಲಾವಿದರು ತಾಳ ಲಯ ಬಿಟ್ಟು ಕೋಡಗಗಳಂತೆಯೇ ಕುಣಿದಿದ್ದಾರೆ. ಸೂಕ್ಷ್ಮವಾಗಿ ಗಮನಿಸಿದಾಗ ಇವರು ತಾಳ ಲಯದ ಜ್ಞಾನವಿದ್ದ ನಾಟ್ಯ ಕಲಿತಿದ್ದ ಕಲಾವಿದರು ಎಂಬುದು ಸ್ಪಷ್ಟ. ತಪ್ಪಾಗಿ ಕುಣಿಯುವುದಕ್ಕೆ ಸ್ವಲ್ಪ ಕಷ್ಟಪಟ್ಟಂತೆಯೂ ಕಂಡುಬಂತು. ಉದಾಹರಣೆಗೆ ಘಾತಪೆಟ್ಟಿಗೆ ಸಹಜವಾಗಿಯೇ ಅವರ ಕಾಲು ಸ್ಪಂದಿಸುತ್ತಿತ್ತು. ನನ್ನಲ್ಲಿ ಮೂಡಿದ ಪ್ರಶ್ನೆ - ಯಾಕೆ ಹೀಗೆ ಕೆಟ್ಟದ್ದಾಗಿ ಕುಣಿಯಬೇಕು?
ಆ ನಾಟ್ಯವನ್ನು ’ಕೋಡಂಗಿ ಕುಣಿತ’ ಎಂದು ಕರೆಯುವ ಕಾರಣದಿಂದಲೇ? ಹಾಗಿದ್ದರೆ ಆ ಹೆಸರು ಯಾಕೆ ಬಂತೆಂದು ವಿಮರ್ಶೆ ಮಾಡಬೇಕಾಗುತ್ತದೆ. ನನ್ನ ದೃಷ್ಟಿಯಲ್ಲಿ ಹಿಂದಿನ  ಕಾಲದಲ್ಲಿ ಯಕ್ಷಗಾನ ಕೇಂದ್ರಗಳು ಇಲ್ಲದ ಸಂದರ್ಭಗಳಲ್ಲಿ ಮೇಳಕ್ಕೆ ಸೇರಿಕೊಂಡು ಅಲ್ಲೇ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಹಿರಿಯರಿಂದ ನಾಟ್ಯಾಭ್ಯಾಸ ಮಾಡುವ ಪರಿಪಾಠ ಇದ್ದಿರಬಹುದು. ಹೀಗೆ ಕಲಿಯುವ ವಿದ್ಯಾರ್ಥಿಗಳಿಂದ, ಅಭ್ಯಾಸದ ಸಲುವಾಗಿ ಪ್ರಾರಂಭದ ಪೂರ್ವರಂಗದ ಹಾಡುಗಳಿಗೆ ನಾಟ್ಯ ಮಾಡಿಸುತ್ತಿದ್ದಿರಬಹುದು. ಇನ್ನೂ ನಾಟ್ಯಶಿಕ್ಷಣ ಪೂರ್ತಿಯಾಗದ, ಸರಿಯಾಗಿ ನಾಟ್ಯ ಬಾರದ ಹುಡುಗರು ಹಾಕುವ ಹೆಜ್ಜೆಗಳು ಎಷ್ಟೋ ಬಾರಿ ತಪ್ಪಾಗಿರುತ್ತಿದ್ದ ಕಾರಣ ಪೂರ್ವರಂಗದ ಪೂರ್ವಭಾಗಕ್ಕೆ ಕೋಡಂಗಿ ಕುಣಿತ ಎಂಬ ಹೆಸರು ಬಂದಿರಬೇಕು. ಅಲ್ಲಿ ಹಾಡುವ ಪದ್ಯಗಳೆಲ್ಲವೂ ದೇವರ ಸ್ತುತಿ ಹಾಗೂ ಆರಾಧನಾ ಕೃತಿಗಳಾಗಿರುವಾಗ ’ಕೋಡಂಗಿ ಕುಣಿತ’ ಎಂಬ ಹೆಸರು ಬರಲು ಬೇರೆ ಕಾರಣ ತೋಚುವುದಿಲ್ಲ. ಹಿಂದೆ ನಾಟ್ಯ ಬಾರದವರು ಕೋಡಗನ ಹಾಗೆ ಕುಣಿಯುತ್ತಿದ್ದರು ಎಂಬ ಕಾರಣಕ್ಕೆ ನಾಟ್ಯ ಬರುವವರೂ ತಪ್ಪು ತಪ್ಪಾಗಿ ಕುಣಿಯುವುದು ಸರಿಯೆಂದು ನನಗನ್ನಿಸುವುದಿಲ್ಲ.
ಕೋಡಂಗಿ ಕುಣಿತ ನಿಜಾರ್ಥದಲ್ಲಿ ಕೋಡಗನ ಕುಣಿತವೇ ಆಗಬೇಕು ಅದನ್ನು ಸರಿಯಾಗಿ ಕುಣಿಯಬಾರದು ಎಂಬ ವಾದವಿದ್ದರೆ ಸಂಗೀತಗಾರ ಕೂಡಾ ತಪ್ಪು ತಪ್ಪಾಗಿ ಪದ್ಯ ಹೇಳಬೇಕು ಹಾಗೂ ಒತ್ತು ಮದ್ದಳೆಗಾರ ತಾಳಕ್ಕೆ ಸರಿಯಾಗಿ ಮದ್ದಳೆ ನುಡಿಸಬಾರದು ಎಂದು ವಾದಿಸಬಹುದು. ಇದು ಮೊಂಡು ವಾದವಾಗುತ್ತದೆಯೇ ಹೊರತು ಏನನ್ನೂ ಸಾಧಿಸಿದಂತಾಗುವುದಿಲ್ಲ.

ಇನ್ನು ಅವರ ಮುಖವರ್ಣಿಕೆಯೂ ಅಭ್ಯಾಸದ ಮೊದಲ ದಿನಗಳ ಮುಖವರ್ಣಿಕೆಯಾಗಿದ್ದುದರಿಂದ ಕೊಂಚ ಹೊಲಸಾಗಿ ಇರುತ್ತಿದ್ದಿರಬಹುದು. ಹಿಂದೆ ಹಾಗೆ ಇತ್ತು ಎಂದು ಇವತ್ತು ಮುಖವರ್ಣಿಕೆ ಗೊತ್ತಿದ್ದವರೂ ಯಾಕೆ ಹೊಲಸು ಮುಖವರ್ಣಿಕೆ ಮಾಡಬೇಕು?

ಇವತ್ತು ಪರಂಪರೆಯನ್ನು ಉಳಿಸುವ ಧಾವಂತದಲ್ಲಿ ಪೂರ್ವರಂಗದ ಪ್ರಯೋಗಗಳು ಪ್ರಾತ್ಯಕ್ಷಿಕೆಗಳು ಎಲ್ಲೆಲ್ಲೂ ನಡೆಯುತ್ತಿವೆ. ಹಿಂದೆ ಪೂರ್ವರಂಗ ಒಂದು ಸ್ವರೂಪದಲ್ಲಿತ್ತು ಮತ್ತು ಅದಕ್ಕೆ ಅದರದ್ದೇ ಆದ ಕಾರಣಗಳಿತ್ತು. ಹೊಸದಾಗಿ ನಾಟ್ಯ ಕಲಿಯುವುದಕ್ಕೋಸ್ಕರ ಮೇಳಕ್ಕೆ ಸೇರಿದವರು ಕೋಡಂಗಿ ಕುಣಿತ ಮಾಡಿದರೆ ಅವರಿಗಿಂತ ಕೊಂಚ ಹೆಚ್ಚು ಅಭ್ಯಾಸ ಆದವರು ಬಾಲಗೋಪಾಲ ನಾಟ್ಯ ಮಾಡುತ್ತಾ ನಾಟ್ಯ ಹಾಗೂ ಅಭಿನಯವನ್ನು ಜೊತೆಯಾಗಿ ಮಾಡುವ ಅಭ್ಯಾಸ ಮಾಡುತ್ತಿದ್ದರು. ಹೀಗೆ ಹಂತ ಹಂತವಾಗಿ ಕಲಾವಿದ ಬೆಳೆದುಕೊಂಡು ಹೋಗುತ್ತಿದ್ದ ಪರಂಪರೆ ಇತ್ತು.

ಹಿಂದಿನ ಕಾಲದಲ್ಲಿದ್ದ ಪೂರ್ವರಂಗಕ್ಕಿದ್ದ ಅಗತ್ಯತೆಗಳು ಹಾಗೂ ಅದರ ಪ್ರತಿಫಲಗಳು ಇಂದಿಗೂ ಪ್ರಸ್ತುತವಲ್ಲ. ಬದಲಾದ ಸನ್ನಿವೇಶದಲ್ಲಿ, ಪೂರ್ವರಂಗವನ್ನು ಹೇಗೆ ಉಪಯುಕ್ತವಾಗಿ ಬಳಸಿಕೊಳ್ಳಬಹುದು ಎಂದು ನಾವು ಯೋಚಿಸಬೇಕು.
ಈ ದೃಷ್ಟಿಯಿಂದ ಕೋಡಂಗಿ ಕುಣಿತವನ್ನು ಯಾಕೆ ತಾಳಬದ್ಧವಾಗಿ ಲಯಬದ್ಧವಾಗಿ ಪ್ರಸ್ತುತಪಡಿಸಬಾರದು? ಅಲ್ಲಿರುವ ಪದ್ಯಗಳೆಲ್ಲವೂ ಏಕತಾಳದಲ್ಲಿದೆ. ’ಧೀಂಕಿಟ ಕಿಟತಕ’ ದಿಂದ ಪ್ರಾರಂಭಿಸಿ ಏಕತಾಳದಲ್ಲಿರುವ ಹಲವಾರು ಹೆಜ್ಜೆಗಳನ್ನು ಒಂದೊಂದಾಗಿ (ಕಲಸು ಮೇಲೊಗರ ಮಾಡದೆ) ಪ್ರಸ್ತುತಪಡಿಸಿದರೆ ಯಕ್ಷಗಾನ ಕಲಿಯುತ್ತಿರುವ ಹೊಸಬರು ತಾಳಬದ್ಧವಾದ ಹೆಜ್ಜೆಗಾರಿಕೆಯ ಪ್ರಯೋಗವನ್ನು (ಪದ್ಯಕ್ಕೆ ಕುಣಿಯುವುದನ್ನು) ನೋಡಿ ಕಲಿಯಬಹುದು. ಇನ್ನು ಬಾಲಗೋಪಾಲ ನೃತ್ಯವನ್ನು ಪ್ರಸ್ತುತಪಡಿಸುವವರು ನೃತ್ಯದ ಜೊತೆಗೆ ಹಸ್ತಾಭಿನಯ, ನಾಟ್ಯದಲ್ಲಿ ವೈವಿಧ್ಯತೆಯ ಸಾಧ್ಯತೆಗಳನ್ನು ತೋರಿಸಬಹುದು.

ಈ ರೀತಿಯ ಬದಲಾವಣೆಯಿಂದ ಕೋಡಂಗಿ ಕುಣಿತಕ್ಕೆ ಒಂದು ಪ್ರಯೋಜನವಾದರೂ ಬರುತ್ತದೆ. ಕೇವಲ ಆರಾಧನೆಯ ದೃಷ್ಟಿಯಿಂದ ನೋಡಿದರೂ ಚಂದದಿಂದ ಆರಾಧನೆ ಮಾಡಿದ ಸಮಾಧಾನ ಸಿಗುತ್ತದೆ. ಪರಂಪರೆಯಲ್ಲಿರುವ ಒಳಿತನ್ನು ಉಳಿಸಬೇಕು; ಹಾಗೆಂದು ಮಂಗಗಳೇ ಬುದ್ಧಿವಂತಿಕೆ ತೋರಿಸುತ್ತಿರುವ ಈ ಕಾಲದಲ್ಲಿ, ಪರಂಪರೆಯ ಹೆಸರಿನಲ್ಲಿ ಅಸಹ್ಯವಾಗಿ ಕಾಣುವ ಮಂಗನ ಕುಣಿತ ಮಾಡುವುದರಿಂದ ಸಮಯ ವ್ಯರ್ಥವಲ್ಲದೆ ಬೇರೇನಾದರೂ ಸಾಧನೆಯಿದೆಯೇ?

ಸಮೀರ ದಾಮ್ಲೆ
ಬ್ಯಾಂಕಾಕ್