Friday, March 20, 2020

ರೋಗಿ ಸಂಖ್ಯೆ 31

ರೋಗಿ ಸಂಖ್ಯೆ 31

ದಕ್ಷಿಣ ಕೊರಿಯಾದಲ್ಲಿ ಮೊದಲ ಕೊರೊನಾ ಪ್ರಕರಣ ದಾಖಲಾದದ್ದು ಜನವರಿ 20ರಂದು. ಚೀನಾದ ಜೊತೆ ಗಡಿ ಹಂಚಿಕೊಂಡಿರುವ ಕೊರಿಯಾದ ಸರಕಾರ ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಸಾಕಷ್ಟು ತಯಾರಿ ಮಾಡಿಕೊಂಡಿತ್ತು. ಜನವರಿ 20ರಿಂದ ಫೆಬ್ರವರಿ ಮಧ್ಯದವರೆಗೆ ಸುಮಾರು ನಾಲ್ಕು ವಾರಗಳಲ್ಲಿ ರೋಗ ಹರಡುವಿಕೆ ಹತೋಟಿಯಲ್ಲೇ ಇತ್ತು, ರೋಗಿಗಳ ಸಂಖ್ಯೆ 30 ದಾಟಲಿಲ್ಲ. ಆದರೆ ಮುಂದಿನ ಮೂರು ವಾರಗಳಲ್ಲಿ ಕೊರೊನಾ ಪೀಡಿತರ ಸಂಖ್ಯೆ 30ರಿಂದ 5000ದಾಟಿತ್ತು! ಮತ್ತೆ ಕೆಲವೇ ದಿನಗಳಲ್ಲಿ ರೋಗಿಗಳ ಸಂಖ್ಯೆ ಏಕಾಏಕಿ ಏರಿ ಸಾವಿರದಿಂದ ಎಂಟು ಸಾವಿರ ತಲುಪಿತು. 

ಇದಕ್ಕೆಲ್ಲಾ ಕಾರಣ ಶಿನ್ ಚೆನ್ ಜಿ (shincheonji) ಎಂಬ ಒಂದು ಪಂಥಕ್ಕೆ ಸೇರಿದ ಒಬ್ಬ ವ್ಯಕ್ತಿ! Shincheonji Church of Jesus ಎಂಬುದು 1984ರಲ್ಲಿ ದಕ್ಷಿಣ ಕೊರಿಯಾದಲ್ಲಿ ಹುಟ್ಟಿಕೊಂಡ ಒಂದು ಪಂಥ. ಲೀ ಮನ್ ಹಿ ಈ ಪಂಥದ ಸ್ಥಾಪಕ ಮತ್ತು ಮುಖ್ಯಸ್ಥ. ಈ ಪಂಥದವರು ಈಗ ಜಗತ್ತಿನ ಹಲವಾರು ದೇಶಗಳಲ್ಲಿ ಇದ್ದಾರೆ. ಇವರ ವಿಶೇಷತೆ ಏನೆಂದರೆ ಅವರು ಈ ಪಂಥಕ್ಕೆ ಸೇರಿದ್ದಾರೆ ಎಂಬುದನ್ನು ಗೌಪ್ಯವಾಗಿ ಇಡುತ್ತಾರಂತೆ. ಗಂಡ ಹೆಂಡಿರು ಈ ಪಂಥವನ್ನು ಅನುಸರಿಸುತ್ತಿದ್ದರೂ ಒಬ್ಬರಿಗೊಬ್ಬರು ತಿಳಿಸುವುದಿಲ್ಲವಂತೆ. ಪಂಥದಲ್ಲಿ ನಡೆಯುವ ಎಲ್ಲಾ ಚಟುವಟಿಕೆಗಳನ್ನು ಗೌಪ್ಯವಾಗಿ ಇಡಲಾಗುತ್ತದಂತೆ. ಇನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡುವುದನ್ನು ಈ ಪಂಥ ಬೆಂಬಲಿಸುವುದಿಲ್ಲವಂತೆ. 
ಇಂತಹ ಒಂದು ವಿಶಿಷ್ಟ ಪಂಥಕ್ಕೆ ಸೇರಿದ ವ್ಯಕ್ತಿಯೇ ಕೊರಿಯಾದ 31ನೆ ಕೊರೊನಾ ರೋಗಿ; *ರೋಗಿ 31* ಯಾ *Patient 31*. 

ಮೊದಲ ಬಾರಿ ಅಸ್ವಸ್ಥತಳಾಗಿ ಆಸ್ಪತ್ರೆ ಸೇರಿದಾಗ ಕೊರೊನಾದ ಲಕ್ಷಣಗಳು ಕಂಡುಬಂದರೂ ಪರೀಕ್ಷೆ ಮಾಡಿಸಿಕೊಳ್ಳಲಿಲ್ಲ. ಮಾತ್ರವಲ್ಲ ಸ್ವಲ್ಪ ಗುಣವಾಗುತ್ತಲೇ ಬೇಕಾಬಿಟ್ಟಿ ತಿರುಗಾಟವನ್ನೂ ನಡೆಸಿದ್ದಾಳೆ. ತನ್ನ ಪಂಥದವರ ಭೇಟಿ ಮಾತ್ರವಲ್ಲದೆ ಹೊಟೇಲು, ರೆಸ್ಟೋರೆಂಟ್, ಯಾರದ್ದೋ ಅಂತ್ಯಕ್ರಿಯೆ ಹೀಗೆ ಊರಿಂದೂರಿಗೆ ತಿರುಗಿದ್ದಾಳೆ. ಮತ್ತೆ ಅಸ್ವಸ್ಥತಳಾದಾಗ ಒತ್ತಾಯದ ಮೇರೆಗೆ ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದಾಳೆ. ಆವಾಗ ಕೊರೊನಾ ಇರುವುದು ಖಚಿತವಾಗಿದೆ. ಆದರೆ ಅಷ್ಟರೊಳಗೆ ಕೊರೊನಾವನ್ನು ಹಲವಾರು ಜನರಿಗೆ ಉಡುಗೊರೆಯಾಗಿ ಕೊಟ್ಟು ಆಗಿತ್ತು. 

ಈ ಮಧ್ಯೆ ಆಕೆ ಯಾರನ್ನೆಲ್ಲಾ ಭೇಟಿ ಮಾಡಿದ್ದಾಳೆ ಎಂದು ಶಿನ್ ಚೆನ್ ಜಿ ಪಂಥದ ಮುಖ್ಯಸ್ಥನನ್ನು ಅಧಿಕಾರಿಗಳು ಕೇಳಿದ್ದಾರೆ. ಎಲ್ಲವನ್ನೂ ಗೌಪ್ಯವಾಗಿ ಇಡುವವರು ಇದನ್ನು ಹೇಳಿಯಾರೇ? ಆತ ಒತ್ತಡಕ್ಕೆ ಮಣಿದು ಕೆಲವರ ಹೆಸರು ಹೇಳಿದರೆ ಇನ್ನು ಕೆಲವರ ಹೆಸರು ಹೇಳಲಿಲ್ಲ. ಇದರಿಂದಾಗಿ ಸಕಾಲದಲ್ಲಿ ಎಲ್ಲರನ್ನೂ ಪರೀಕ್ಷೆಗೊಳಪಡಿಸಲು ಆಗಲಿಲ್ಲ. ಪರಿಣಾಮ ಕೇವಲ ಹದಿನೈದು ದಿನಗಳಲ್ಲಿ ಫೆಬ್ರವರಿ ಹದಿನೈದರಿಂದ ಮಾರ್ಚ್ ಒಂದರೊಳಗೆ 30 ಇದ್ದ ಕೊರೊನಾ ರೋಗಿಗಳ ಸಂಖ್ಯೆ  4000 ದಾಟಿತು.

ಶಿನ್ ಚೆನ್ ಜಿ ಪಂಥದ ಮೇಲೆ ಕೊರಿಯನ್ನರು ಆಕ್ರೋಶಗೊಂಡಿದ್ದಾರೆ. ಕೊರಿಯಾ ಸರಕಾರ ಶಿನ್ ಚೆನ್ ಜಿ ಪಂಥದ ಮುಖ್ಯಸ್ಥನ ಮೇಲೆ ಸಾವಿರಾರು ಜನರ ಸಾವಿನ ಆಪಾದನೆ ಹಾಕಿದೆ. ಲೀ ಮನ್ ಹಿ ಸಾರ್ವಜನಿಕವಾಗಿ ಕ್ಷಮೆ ಕೇಳಿದ್ದಾಯಿತು. ಕೊನೆಗೂ ಕೊರಿಯಾ ಕೊರೊನಾದ ಹಿಡಿತದಿಂದ ನಿಧಾನವಾಗಿ ಚೇತರಿಸಿಕೊಳ್ಳತೊಡಗಿದೆ ಎನ್ನುತ್ತವೆ ವರದಿಗಳು. 

ಕೊರಿಯಾದ ಕೊರೊನಾ ಕಥೆ ನಮಗೆ ಕೇವಲ ಕಥೆಯಾಗದೆ ಪಾಠವಾಗಬೇಕು. ಮೋದಿಯವರು ಹೇಳಿದಂತೆ ಸಂಕಲ್ಪ ಮತ್ತು ಸಂಯಮದಿಂದ ಮುಂದಿನ ಕೆಲ ವಾರಗಳನ್ನು ಕಳೆಯುವುದು ಮುಖ್ಯ.


No comments:

Post a Comment